ಹಿರಿಯ ಪತ್ರಿಕಾ ಸಂಪಾದಕರು ಮತ್ತು ಪತ್ರಕರ್ತರುಗಳ ಮೇಲೆ ಅವರು ರೈತರ ಟ್ರಾಕ್ಟರ್ ರ್ಯಾಲಿಯ ಬಗ್ಗೆ ವರದಿ ಮಾಡಿದ್ದಕ್ಕಾಗಿ ರಾಜದ್ರೋಹದ ಎಫ್.ಐ.ಆರ್. ಗಳನ್ನು ಹಾಕಿರುವುದನ್ನು ಮಾದ್ಯಮಗಳನ್ನು ಮಣಿಸುವ, ಬೆದರಿಸುವ ಪ್ರಯತ್ನ ಎಂದು ಹಲವು ಪತ್ರಕರ್ತರ ಸಂಘಟನೆಗಳು ಬಲವಾಗಿ ಖಂಡಿಸಿವೆ.
ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಹರ್ಯಾಣ ದಲ್ಲಿ ‘ಇಂಡಿಯ ಟುಡೆ’ಯ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಿರಿಯ ಸಮಾಲೋಚನಾ ಸಂಪಾದಕಿ ಮೃಣಾಲ್ ಪಾಂಡೆ, ‘ಕೌಮಿ ಆವಾಝ್’ನ ಸಂಪಾದಕ ಝಫರ್ ಆಘ, ‘ಕಾರವಾನ್ ‘ ಮ್ಯಾಗಝೀನ್ ನ ವ್ಯವಸ್ಥಾಪಕ ಸಂಪಾದಕ ಮತ್ತು ಸಂಸ್ಥಾಪಕ ಪರೇಶ್ ನಾಥ್, ಸಂಪಾದಕ ಅನಂತನಾಥ್ , ಕಾರ್ಯಕಾರಿ ಸಂಪಾದಕ ವಿನೋದ ಕೆ ಜೋಸ್ ಮತ್ತು ಕಾಂಗ್ರೆಸ್ ಸಂಸದ್ ಸದಸ್ಯ ಶಶಿ ಥರೂರ್ ಹಾಗೂ ಇನ್ನೊಬ್ಬ ಹೆಸರಿಸದ ವ್ಯಕ್ತಿಯ ಮೇಲೆ ರಾಜದ್ರೋಹದ ಮೊಕದ್ದಮೆಗಳನ್ನು ಹಾಕಲಾಗಿದೆ. ರೈತರ ಟ್ರಾಕ್ಟರ್ ರ್ಯಾಲಿಯ ವೇಳೆಯಲ್ಲಿ ‘ದೃಢಪಡಿಸದ’ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಎಂಬುದು ಇವರುಗಳ ಮೇಲಿನ ದೂರು.
ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು
ಪ್ರತಿಭಟನಾಕಾರರಲ್ಲಿ ಒಬ್ಬರ ಸಾವಿನ ಬಗ್ಗೆ ತಮ್ಮ ವೈಯಕ್ತಿಕ ಮತ್ತು ಅವರ ಸಂಸ್ಥೆಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಹಂಚಿಕೊಂಡದ್ದಕ್ಕಾಗಿ ನಿರ್ದಿಷ್ಟವಾಗಿ ಇವರುಗಳ ಮೇಲೆ ಗುರಿಯಿಡಲಾಗಿದೆ ಎಂದು ಪತ್ರಕರ್ತರ ಸಂಘಟನೆಗಳು ಖಂಡಿಸಿವೆ.
ಇವನ್ನು ‘ದುರುದ್ದೇಶಪೂರಿತ ವರದಿಗಾರಿಕೆ’ ಎಂದು ಹೇಳುವುದು ಕ್ರಿಮಿನಲ್ ಕ್ರಮ ಆಗುತ್ತದೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡಿಸಿದೆ. ಸಮುದಾಯಗಳ ನಡುವೆ ವೈಷಮ್ಯವನ್ನು ಉಂಟು ಮಾಡಲು, ಸಿಖ್ ಸಮುದಾಯದ ಹೆಸರುಗೆಡಿಸಲು, ಒಂದು ಗಡಿರಾಜ್ಯದಲ್ಲಿ ಗೊಂದಲ ಉಂಟುಮಾಡಲು, ಇದರಿಂದ ವಸ್ತುತಃ ದೇಶದ ಶತ್ರುಗಳಿಗೆ ನೆರವಾಗಲು ಈ ವ್ಯಕ್ತಿಗಳು ಪಿತೂರಿ ನಡೆಸಿದ್ದಾರೆ ಎನ್ನುವುದು ಹಾಸ್ಯಾಸ್ಪದ , ಈ ಎಫ್.ಐ.ಆರ್ ಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಈ ರಾಜ್ಯ ಸರಕಾರಗಳನ್ನು ಹಾಗೂ ಕೇಂದ್ರ ಗೃಹಮಂತ್ರಾಲಯ ಈ ಕುರಿತು ಈ ಎರಡು ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಬೇಕು ಎಂದು ಅದು ಆಗ್ರಹಿಸಿದೆ.
ದೇಶದ ಪತ್ರಿಕಾ ಸಂಪಾದಕರುಗಳ ಸಂಸ್ಥೆಯಾದ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯ’ ಕೂಡ ಇದನ್ನು ಖಂಡಿಸುತ್ತ ಇದು ಪತ್ರಕರ್ತರಿಗೆ ಕಿರುಕುಳ ಕೊಡುವ, ಅವರನ್ನು ಬೆದರಿಸುವ, ಮಣಿಸುವ ಮತ್ತು ಬಾಯಿ ಮುಚ್ಚಿಸುವ ಪ್ರಯತ್ನ ಎಂದು ಹೇಳಿದೆ. ರಾಜದ್ರೋಹ, ಸಮುದಾಯಗಳ ನಡುವೆ ವೈಷಮ್ಯ ತರುವುದು, ಧಾರ್ಮಿಕ ನಂಬಿಕೆಗಳನ್ನು ಅವಮಾನ ಮಾಡುವುದು ಮುಂತಾದ 10 ವಿಭಿನ್ನ ಅಂಶಗಳ ಅಡಿಯಲ್ಲಿ ಆರೋಪಗಳನ್ನು ಮಾಡಿರುವುದು ಇನ್ನೂ ಆತಂಕಕಾರಿ ಸಂಗತಿ ಎಂದು ಅದು ಹೇಳಿದೆ.
ದೆಹಲಿ ರೈತ ಹೋರಾಟಕ್ಕೆ ಹೆಚ್ಚುತ್ತಿದೆ ಜನ ಬೆಂಬಲ
ಉನ್ನತ ನ್ಯಾಯಾಂಗ ರಾಜದ್ರೋಹ ಮುಂತಾದ ಕಾನೂನಿನ ಅಂಶಗಳನ್ನು ವಾಕ್ ಸ್ವಾತಂತ್ರ್ಯದ ಹರಣಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ತನ್ನ ಆಗ್ರಹವನ್ನು ಸಂಪಾದಕರ ಗಿಲ್ಡ್ ಪುನರುಚ್ಚರಿಸಿದೆ.
ಭಾರತೀಯ ಮಹಿಳಾ ಪತ್ರಿಕಾ ದಳ(ಐ.ಡಬ್ಲ್ಯು,ಪಿ.ಸಿ.) ಇದು ಸನ್ನಿವೇಶವನ್ನು ತಪ್ಪಾಗಿ ಬಿಂಬಿಸುವ ಉದ್ದೇಶಪೂರ್ವಕವಾದ ಪ್ರಯತ್ನ ಎಂದು ಖಂಡಿಸುತ್ತ , ಮಾಧ್ಯಮಗಳು ಹೇಳಿದಂತೆ ಕೇಳಬೇಕೆಂದು ಬೆದರಿಸುವ ಪ್ರಯತ್ನ ಎಂದು ಹೇಳಿದೆ. ಮೃಣಾಲ್ ಪಾಂಡೆ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆಯಾಗಿದ್ದು ದೇಶದ ಹಲವು ಪ್ರಮುಖ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸಮಾಡಿರುವ ಪ್ರತಿಷ್ಠಿತ ಪತ್ರಕರ್ತರು.
ಪತ್ರಕರ್ತರ ವಿರುದ್ಧದ ಕೇಸುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತ ದಿಲ್ಲಿ ಪತ್ರಕರ್ತರ ಸಂಘ(ಡಿಯುಜೆ) ಈ ರೀತಿಯಲ್ಲಿ ತಮ್ಮ ವೃತ್ತಿಯನ್ನು ಅನುಸರಿಸದಂತೆ ತಡೆಯಲು ಮನಬಂದಂತೆ ಆರೋಪಗಳನ್ನು ಹಾಕುವುದು, ಬಂಧಿಸುವುದು, ವಿಚಾರಣೆಗೆ ಒಳಪಡಿಸುವುದು ಇತ್ಯಾದಿಗಳಿಂದ ಮಾಧ್ಯಮ ವ್ಯಕ್ತಿಗಳನ್ನು ರಕ್ಷಿಸಲು ಒಂದು ವಿಶೇಷ ಕಾಯ್ದೆ ಇರಬೇಕು, ರಾಜದ್ರೋಹ ಮತ್ತಿತರ ಕರಾಳ ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬ ತನ್ನ ಬೇಡಿಕೆಗಳನ್ನು ಪುನರುಚ್ಚರಿಸಿದೆ. ಪತ್ರಕರ್ತೆ ನೇಹಾ ದೀಕ್ಷಿತ್ ಅವರ ಮನೆಗೆ ನುಗ್ಗಲು ಪ್ರಯತ್ನಿಸಿದ ಅಪರಾಧಿಗಳನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದೂ ಡಿಯುಜೆ ಆಗ್ರಹಿಸಿದೆ.