ಕರ್ನಾಟಕಕ್ಕೆ ಅಕ್ಕಿ ನಿರಾಕರಿಸುವ ಆಹಾರ ನಿಗಮದ ವಿಲಕ್ಷಣ ತರ್ಕ

ಪ್ರೊ.ಪ್ರಭಾತ್ ಪಟ್ನಾಯಕ್

ಅನು:ಕೆ.ಎಂ.ನಾಗರಾಜ್

ಆಹಾರ ನಿಗಮದಿಂದ ಕರ್ನಾಟಕ ಸರಕಾರದ ‘ಅನ್ನಭಾಗ್ಯ’ ಯೋಜನೆಗೆ ಅಕ್ಕಿ ಖರೀದಿಗೆ ಸಂಬಧಿಸಿ ನಡೆಯುತ್ತಿರುವ ತಿಕ್ಕಾಟವನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮತ್ತು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳ ನಡುವಿನ ಕೇವಲ ಒಂದು ಅಪರೂಪದ ಘರ್ಷಣೆ ಎನ್ನುವಂತಿಲ್ಲ. ಈ ತಿಕ್ಕಾಟವು, ವಿರೋಧ ಪಕ್ಷಗಳ ಸರ್ಕಾರಗಳ ಜನಪರ ಯೋಜನೆಗಳನ್ನು ತಡೆಯುವ ಏಕೈಕ ಉದ್ದೇಶದಿಂದ ಮತ್ತು, ಆ ಸರ್ಕಾರಗಳು ಹೆಚ್ಚು ಜನಪ್ರಿಯತೆ ಗಳಿಸದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಇದು ನಂಬಲಾಗದ ಮಟ್ಟದ ವಿಪರೀತ ಕೇಂದ್ರೀಕರಣದ ಪ್ರತೀಕವಾಗಿದೆ. ಹಿಂದೆ ಕಾಂಗ್ರೆಸ್ ಕೇಂದ್ರ ಸರಕಾರವೂ ಇದನ್ನು ಮಾಡಿತ್ತು. ಆದರೆ ಮೋದಿ ಸರ್ಕಾರ ಈ ಅನವಶ್ಯಕ ಕೇಂದ್ರೀಕರಣವನ್ನು ಒಂದು ಅಭೂತಪೂರ್ವ ಮಟ್ಟಕ್ಕೆ ಕೊಂಡೊಯ್ದಿದೆ.

ಕರ್ನಾಟಕ ರಾಜ್ಯ ಸರ್ಕಾರವು ಜುಲೈ 1 ರಂದು ಆರಂಭಿಸಲು ಆಯೋಜಿಸಿದ್ದ, ಬಡತನ ರೇಖೆಯ ಕೆಳಗಿರುವ ಪ್ರತಿ ಕುಟುಂಬಕ್ಕೂ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ “ಅನ್ನ ಭಾಗ್ಯ” ಯೋಜನೆಗೆ ಹಿನ್ನೆಡೆಯಾಗಿದೆ. ಕರ್ನಾಟಕ ರಾಜ್ಯಕ್ಕೆ ಅಕ್ಕಿಯನ್ನು ಮಾರುವುದಾಗಿ ಒಪ್ಪಿಗೆ ಸೂಚಿಸಿದ್ದ ಮರು ದಿನವೇ ಭಾರತ ಆಹಾರ ನಿಗಮವು(ಎಫ್‌ಸಿಐ) ತನ್ನ ನಿರ್ಧಾರವನ್ನು ಬದಲಿಸಿದೆ. ಕೇಂದ್ರ ಸರ್ಕಾರವು ಪ್ರತಿ ಬಿಪಿಎಲ್ ಕುಟುಂಬಕ್ಕೂ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.

ಅದರ ಜೊತೆಗೆ, ಕರ್ನಾಟಕ ಸರ್ಕಾರವು ಅಧಿಕವಾಗಿ ತಿಂಗಳಿಗೆ 5 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಸುಮಾರು 1.19 ಕೋಟಿ ಜನರಿಗೆ ಉಚಿತವಾಗಿ ಒದಗಿಸುವ ಯೋಜನೆಯನ್ನು ಘೋಷಣೆ ಮಾಡಿತ್ತು. ಆದರೆ, ಕೊರೊನಾ ಸಂದರ್ಭದಲ್ಲಿ ಉದ್ಭವವಾಗಿದ್ದ ದುರ್ಬಲ ಪರಿಸ್ಥಿತಿಗೆ ಸ್ಪಂದನೆಯಾಗಿ ತಾನು ಜಾರಿಗೊಳಿಸಿದ್ದ ಉಚಿತ 5 ಕೆಜಿ ಅಕ್ಕಿ ಯೋಜನೆಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರವು ಬಹಳ ದಿನಗಳಿಂದಲೂ ಯೋಚಿಸುತ್ತಿತ್ತು. ಈ ಸನ್ನಿವೇಶದಲ್ಲಿ, ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ ಸರ್ಕಾರದ ಚುನಾವಣಾ ಭರವಸೆಯ ಭಾಗವಾಗಿದ್ದ ಕರ್ನಾಟಕದ “ಅನ್ನ ಭಾಗ್ಯ” ಯೋಜನೆಯ ಪ್ರಸ್ತಾಪವು ಸದರಿ ಯೋಜನೆಯನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿತ್ತು.

ಕೇಂದ್ರ ಸರ್ಕಾರದ ಇತರ ಸಂಸ್ಥೆಗಳಿಂದ ಮತ್ತು ಬೇರೆ ರಾಜ್ಯ ಸರ್ಕಾರಗಳಿಂದ ಅಕ್ಕಿಯನ್ನು ಕೊಳ್ಳಲು ಕರ್ನಾಟಕ ಸರ್ಕಾರವು ಪ್ರಯತ್ನಿಸುತ್ತಿದೆ. ಇತರ ರಾಜ್ಯ ಸರ್ಕಾರಗಳು ಸದ್ಯದಲ್ಲಿ ಸಾಕಷ್ಟು ದಾಸ್ತಾನು ಹೊಂದಿಲ್ಲ ಮತ್ತು ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನು ಮಾರಾಟ ಮಾಡದಂತೆ ಕೇಂದ್ರ ಸರ್ಕಾರವು ಭಾರತ ಆಹಾರ ನಿಗಮವನ್ನು ತಡೆದಿರಬಹುದು. ಅಷ್ಟೇ ಅಲ್ಲದೆ, ಈ ಮೂಲಗಳಿಂದ ಖರೀದಿಸುವ ಕ್ರಮವು ಯೋಜನೆಯ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಹಾಗಾಗಿ, ರಾಜ್ಯದ ಬಜೆಟ್‌ನಿಂದ ಹಣ ಒದಗಿಸುವುದು ಹೆಚ್ಚು ಕಷ್ಟಕರವಾಗುತ್ತದೆ. ಈ ಸಂಬಂಧವಾಗಿ ನಡೆಯುತ್ತಿರುವ ತಿಕ್ಕಾಟವನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮತ್ತು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳ ನಡುವಿನ ಕೇವಲ ಒಂದು ಅಪರೂಪದ ಘರ್ಷಣೆ ಎನ್ನುವಂತಿಲ್ಲ. ಈ ತಿಕ್ಕಾಟವು, ವಿರೋಧ ಪಕ್ಷಗಳ ಸರ್ಕಾರಗಳ ಜನಪರ ಯೋಜನೆಗಳನ್ನು ತಡೆಯುವ ಏಕೈಕ ಉದ್ದೇಶದಿಂದ ಮತ್ತು ಅದೂ ಕೂಡ ಪೂರ್ಣವಾಗಿ ರಾಜಕೀಯ ಕಾರಣಗಳಿಗಾಗಿ, ಅಂದರೆ ವಿರೋಧ ಪಕ್ಷಗಳು ನಡೆಸುವ ಸರ್ಕಾರಗಳು ಹೆಚ್ಚು ಜನಪ್ರಿಯತೆ ಗಳಿಸದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಇದು ನಂಬಲಾಗದ ಮಟ್ಟದ ಕೇಂದ್ರೀಕರಣದ ಪ್ರತೀಕವಾಗಿದೆ. ವಿಪರ್ಯಾಸವೆಂದರೆ, ಕರ್ನಾಟಕದ ಹೊಸ ಸರ್ಕಾರವು ತನ್ನ ಚುನಾವಣಾ ಭರವಸೆಯನ್ನು ಈಡೇರಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಅಡ್ಡಿಪಡಿಸುತ್ತಿರುವ ಸಮಯದಲ್ಲೇ, ಹೊಸ ಸರ್ಕಾರವು ತನ್ನ ಎಲ್ಲಾ ಚುನಾವಣಾ ಭರವಸೆಗಳನ್ನು ಈಡೇರಿಸಬೇಕು ಎಂದು ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯೇ ಒತ್ತಾಯಿಸುತ್ತಿದೆ.

ಬಡವರ ಹೊಟ್ಟೆಗೆ ಹೊಡೆಯುವ ರಾಜಕೀಯ

ಖಚಿತವಾಗಿ ಹೇಳುವುದಾದರೆ, ರಾಜ್ಯ ಸರ್ಕಾರಗಳು ಹಮ್ಮಿಕೊಳ್ಳುವ ಕಲ್ಯಾಣ ಯೋಜನೆಗಳಿಗೆ ವ್ಯಕ್ತಗೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರೋಧ ಹೊಸದೇನಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವ್ಯಾಪ್ತಿಯನ್ನು ಕುಗ್ಗಿಸಿದಾಗ ಮತ್ತು ಸಬ್ಸಿಡಿ ಆಹಾರ ಧಾನ್ಯಗಳನ್ನು ಬಡತನ ರೇಖೆಯ ಕೆಳಗಿರುವ ಜನರಿಗೆ (ಬಿಪಿಎಲ್) ಮಾತ್ರ ಸೀಮಿತಗೊಳಿಸಿದಾಗ, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು(ಪಿಡಿಎಸ್) ಹೊಂದಿದ್ದ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್) ಸರ್ಕಾರವು ತನ್ನ ಅಗ್ಗದ ಸಾರ್ವತ್ರಿಕ ವಿತರಣಾ ವ್ಯವಸ್ಥೆಯನ್ನು ಮುಂದುವರಿಸುವ ಸಲುವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಪ್ರಯತ್ನಿಸಿತು. ಈ ಉದ್ದೇಶಕ್ಕಾಗಿ ಅದು ರಾಜ್ಯದೊಳಗೇ ಲಭ್ಯವಿದ್ದಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನೂ ಸಂಗ್ರಹಿಸಿತ್ತು.

ಆದರೆ, ಭಾರತ ಆಹಾರ ನಿಗಮವು, ಕೇರಳದಿಂದ ಯಾವುದೇ ಧಾನ್ಯಗಳನ್ನು ನೇರವಾಗಿ ಸಂಗ್ರಹಿಸದಿದ್ದರೂ ಮತ್ತು ಕೇರಳವನ್ನು ಕೊರತೆಯ ರಾಜ್ಯವೆಂದು ಗುರುತಿಸಿದ್ದರೂ, ಸಾರ್ವಜನಿಕ ವಿತರಣಾ ವ್ಯವಸ್ಥೆಗಾಗಿ ಆ ರಾಜ್ಯಕ್ಕೆ ಒದಗಿಸುವ ತನ್ನ ಪೂರೈಕೆಯಲ್ಲಿ ನಿಖರವಾಗಿ ಅಷ್ಟೇ ಪ್ರಮಾಣದ ಆಹಾರ ಧಾನ್ಯಗಳನ್ನು ಕಡಿಮೆ ಮಾಡಿತು! ಆದ್ದರಿಂದ, ಅನವಶ್ಯಕ ಕೇಂದ್ರೀಕರಣದ ಈ ವಿದ್ಯಮಾನವು ಹೊಸದೇನಲ್ಲ. ಆದರೆ, ನಿಗದಿಪಡಿಸಿದ ಬೆಲೆಯನ್ನು ತೆರಲು ಸಿದ್ಧವಾಗಿರುವ ಕರ್ನಾಟಕದ ಸರ್ಕಾರಕ್ಕೆ ಮುಕ್ತ ಮಾರುಕಟ್ಟೆ ಮಾರಾಟವನ್ನು ನಿರಾಕರಿಸುವ ಮೂಲಕ ಬಿಜೆಪಿ ಸರ್ಕಾರವು ಈ ಅನವಶ್ಯಕ ಕೇಂದ್ರೀಕರಣವನ್ನು ಒಂದು ಅಭೂತಪೂರ್ವ ಮಟ್ಟಕ್ಕೆ ಕೊಂಡೊಯ್ದಿದೆ. ರಾಜ್ಯ ಸರ್ಕಾರದ ವಿರುದ್ಧ ತೋರಿಸಿದ ಈ ರಾಜಕೀಯ ತಾರತಮ್ಯವು ಸಾರಭೂತವಾಗಿ ಬಡವರ ಹೊಟ್ಟೆಯ ಮೇಲೆ ಹೊಡೆದ ಹೊಡೆತವೇ ಸರಿ. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರವು ಹೊಂದಿರುವ ಬದ್ಧದ್ವೇಷದ ಫಲವನ್ನು ಕರ್ನಾಟಕದ ಬಡಜನರು ಉಣ್ಣುವಂತಾಗಿದೆ.

ಅಮರ್ಥನೀಯ ನೆಪಗಳು

ಭಾರತ ಆಹಾರ ನಿಗಮವು ಧಾನ್ಯಗಳನ್ನು ಕರ್ನಾಟಕಕ್ಕೆ ಮಾರಲು ನಿರಾಕರಿಸಿರುವ ಕ್ರಮವು ರಾಜಕೀಯ ಪ್ರೇರಿತವಲ್ಲ ಎಂದು ಬಿಜೆಪಿ ಸರ್ಕಾರ ನಾಟಕವಾಡುತ್ತಿದೆ. ಆದರೆ ಮಾರಾಟ ಮಾಡದಿರಲು ಅವರು ಹೇಳುವ ನೆಪಗಳು ಅಸಮರ್ಥನೀಯವಾಗಿವೆ. ಸರ್ಕಾರದ ಬಳಿ ಸಾಕಷ್ಟು ಸ್ಟಾಕ್ ಇಲ್ಲ ಎಂಬುದು ಮೊದಲನೆಯ ನೆಪ. ಅದು ಒಂದು ವೇಳೆ ನಿಜವೇ ಆಗಿದ್ದರೆ, ಮುಂಬರುವ ವಾರಗಳಲ್ಲಿ 5 ಲಕ್ಷ ಟನ್ ಅಕ್ಕಿಯನ್ನು (4 ಲಕ್ಷ ಟನ್ ಗೋಧಿ ಹೊರತುಪಡಿಸಿ) ಮಾರುವುದಾಗಿ ಹೇಳಿದ್ದ ಯೋಜನೆಯನ್ನು ಕೈಗೊಳ್ಳಬಾರದು. ವಾಸ್ತವವಾಗಿ, ಕರ್ನಾಟಕ ಸರ್ಕಾರವು ಭಾರತ ಆಹಾರ ನಿಗಮದಿಂದ 2.46 ಲಕ್ಷ ಟನ್ ಧಾನ್ಯಗಳನ್ನು ಖರೀದಿಸಲು ಬಯಸಿತ್ತು. ಅದರ ಬದಲಿಗೆ, ಆಹಾರ ನಿಗಮವು ಧಾನ್ಯಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಲು ಯೋಜಿಸುತ್ತಿದೆ. ಧಾನ್ಯಗಳನ್ನು ವ್ಯಾಪಾರಿಗಳಿಗೆ ಮಾರುವ ಕ್ರಮವು ಹಣದುಬ್ಬರವನ್ನು ನಿಯಂತ್ರಿಸುವ ಸಾಧನವಾಗಿದೆ ಎಂಬುದು ಎರಡನೆಯ ನೆಪ. ಈ ಅಂಶವನ್ನು ಭಾರತ ಆಹಾರ ನಿಗಮದ ಅಧ್ಯಕ್ಷರು ಮಾಧ್ಯಮಗಳಿಗೆ ಸ್ವತಃ ತಿಳಿಸಿದ್ದಾರೆ.

ಅಂದರೆ, ಧಾನ್ಯಗಳ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯು ಹಣದುಬ್ಬರ ವಿರೋಧಿ ಕ್ರಮವಾಗಿದೆ ಮತ್ತು ಅದು ಆಹಾರ ಧಾನ್ಯಗಳ ಚಿಲ್ಲರೆ ಬೆಲೆಗಳ ಹಣದುಬ್ಬರವನ್ನು ಇಳಿಕೆ ಮಾಡುತ್ತದೆ. ಇದೊಂದು ವಿಲಕ್ಷಣ ತರ್ಕವೇ ಸರಿ. ಹೆಚ್ಚಿನ ಬೇಡಿಕೆಯೇ ಒಂದು ವೇಳೆ ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಾರಣವಾಗಿದ್ದರೆ, ಮತ್ತು ಅಂಥಹ ಬೆಲೆ ಏರಿಕೆಯನ್ನು ನಿಗ್ರಹಿಸಬೇಕಾದರೆ ಅದನ್ನು ಸಾಧಿಸುವ ಹೆಚ್ಚು ಪರಿಣಾಮಕಾರಿ ಮಾರ್ಗವೆಂದರೆ ಮುಕ್ತ ಮಾರುಕಟ್ಟೆ ವ್ಯಾಪಾರದ ಬದಲು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸರ್ಕಾರಿ ದಾಸ್ತಾನುಗಳನ್ನು ಬಿಡುಗಡೆ ಮಾಡುವ ಕ್ರಮವೇ.

ಏಕೆಂದರೆ, ಮುಕ್ತ ಮಾರುಕಟ್ಟೆ ವ್ಯಾಪಾರದ ಸಂದರ್ಭದಲ್ಲಿ ಸರ್ಕಾರವು ಧಾನ್ಯದ ಅಂತಿಮ ಬಳಕೆಯ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ. ಆದ್ದರಿಂದ ಬೆಲೆಗಳು ಇಳಿಯುವುದಿಲ್ಲ.  ಹಾಗಾಗಿ, ಹಣದುಬ್ಬರವನ್ನು ನಿಯಂತ್ರಿಸುವ ಹೆಚ್ಚು ಪರಿಣಾಮಕಾರಿ ಮಾರ್ಗವೆಂದರೆ, ಈ ಧಾನ್ಯಗಳನ್ನು ಹೆಚ್ಚಿನ ಲಾಭಕ್ಕಾಗಿ ತಮ್ಮಲ್ಲೇ ಇಟ್ಟುಕೊಳ್ಳುವ ವ್ಯಾಪಾರಿಗಳಿಗಿಂತ ಹೆಚ್ಚಾಗಿ ಅವುಗಳನ್ನು ಜನರ ಬಳಕೆಗಾಗಿ ವಿತರಿಸುವ ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡುವ ಕ್ರಮವೇ.

ಹಳೆಯ ತಪ್ಪಿನ ಪುನರಾವರ್ತನೆ

ವಾಸ್ತವವಾಗಿ, ಈ ಅನುಭವ 1972 ರಿಂದಲೂ ಭಾರತದಲ್ಲಿದೆ. ಫಸಲು ನಾಶದ ನಿರೀಕ್ಷೆಯಲ್ಲಿ ಆಹಾರ ಧಾನ್ಯಗಳ ಬೆಲೆಗಳು 1972ರಲ್ಲಿ ಏರಲು ಪ್ರಾರಂಭಿಸಿದಾಗ, ಆಹಾರ ಧಾನ್ಯಗಳ ಸಾಕಷ್ಟು ದಾಸ್ತಾನು ಹೊಂದಿದ್ದ ಇಂದಿರಾ ಗಾಂಧಿ ಸರ್ಕಾರವು ಬೆಲೆಗಳು ಇಳಿಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಧಾನ್ಯಗಳ ದಾಸ್ತಾನನ್ನು ಮುಕ್ತ ಮಾರುಕಟ್ಟೆಯಿಂದ ಗ್ರಾಹಕರನ್ನು ದೂರವಿರಿಸುವ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಬಿಡುಗಡೆ ಮಾಡುವುದರ ಬದಲು ಮುಕ್ತ ಮಾರುಕಟ್ಟೆಯಲ್ಲಿ ಮಾರಿತು.

ಸರ್ಕಾರ ಮಾರುತ್ತಿದ್ದ ಧಾನ್ಯಗಳನ್ನು ವ್ಯಾಪಾರಿಗಳು ಬಲು ಹಿಗ್ಗಿನಿಂದ ಖರೀದಿಸಿದರು ಮತ್ತು ಅವುಗಳನ್ನು ತಮ್ಮ ಗೊದಾಮುಗಳಲ್ಲಿ ಭದ್ರವಾಗಿ ಸಂಗ್ರಹಿಸಿಟ್ಟುಕೊಂಡರು. ಈ ಉದ್ದೇಶಗೇಡಿ ಕ್ರಮದ ಪರಿಣಾಮವಾಗಿ ಸರ್ಕಾರದ ಆಹಾರ ಧಾನ್ಯಗಳ ದಾಸ್ತಾನು ಕ್ಷೀಣಿಸಿತು ಮತ್ತು ಹಣದುಬ್ಬರವು ಮೊದಲಿನಂತೆಯೇ ಮುಂದುವರಿಯಿತು.

ಅರ್ಧ ಶತಮಾನ ಕಾಲಾವಧಿಯ ಅನುಭವದ ನಂತರವೂ, ಬಿಜೆಪಿ ಸರ್ಕಾರವು ಮತ್ತೊಮ್ಮೆ ಅದೇ ತಪ್ಪನ್ನು ಈಗ ಪುನರಾವರ್ತಿಸುತ್ತಿದೆ. ಅಂದರೆ, ಹಣದುಬ್ಬರವನ್ನು ಎದುರಿಸುವ ಸಾಧನವಾಗಿ ಆಹಾರ ಧಾನ್ಯಗಳ ದಾಸ್ತಾನನ್ನು ರಾಜ್ಯ ಸರ್ಕಾರಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಗ್ರಾಹಕರಿಗೆ ಬಿಡುಗಡೆ ಮಾಡುವುದರ ಬದಲು ವ್ಯಾಪಾರಿಗಳಿಗೆ ಬಿಡುಗಡೆ ಮಾಡುತ್ತಿದೆ.

ಕರ್ನಾಟಕ ಸರ್ಕಾರದ ಯೋಜನೆಯು ಬಡತನ ರೇಖೆಯ ಕೆಳಗಿರುವ ಜನರನ್ನು ಮುಕ್ತ ಮಾರುಕಟ್ಟೆಯಿಂದ ದೂರ ಇಡುವುದರ ಬದಲು ಅವರ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು. ಅಂದರೆ, ಯೋಜನೆಯ ಫಲಾನುಭವಿಗಳು ಹೆಚ್ಚು ಧಾನ್ಯಗಳನ್ನು ಸೇವಿಸುತ್ತಾರೆ. ಈ ಧಾನ್ಯಗಳನ್ನು ಅವರು ಮಾರುಕಟ್ಟೆಯಲ್ಲಿ ಖರೀದಿಸುವುದು ಸಾಧ್ಯವಿರಲಿಲ್ಲ. ಅದನ್ನು ಸರ್ಕಾರವು ಈಗ ಒದಗಿಸುವುದರಿಂದ ಮುಕ್ತ ಮಾರುಕಟ್ಟೆಯ ಹೆಚ್ಚುವರಿ ಬೇಡಿಕೆಯಲ್ಲಿ ಯಾವುದೇ ಕಡಿತವಾಗುವುದಿಲ್ಲ. ಆದ್ದರಿಂದ ಹಣದುಬ್ಬರ ಇಳಿಯುವುದಿಲ್ಲ.

ಎರಡು ಕಾರಣಗಳಿಂದಾಗಿ ಈ ವಾದವು ತಪ್ಪಾಗಿದೆ: ಮೊದಲನೆಯದು, ಈ ಊಹೆಯೇ ತಪ್ಪು. ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳ ಸಂಖ್ಯೆಯು 4.42 ಕೋಟಿ ಎಂದು ಭಾವಿಸಲಾಗಿದೆ. ಅವರೆಲ್ಲರೂ ಹೊಸ ಸರ್ಕಾರವು ಒದಗಿಸಿದ ಹೆಚ್ಚುವರಿ ಹಣದಿಂದ ತಮ್ಮ ಬಳಕೆಯಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳದೆ ತಮ್ಮ ಬಳಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಮುಕ್ತ ಮಾರುಕಟ್ಟೆ ಖರೀದಿಗಳಲ್ಲಿ ತೊಡಗುತ್ತಾರೆ ಎಂದು ಕಲ್ಪಿಸಿಕೊಳ್ಳುವುದು ತೀರಾ ಅವಾಸ್ತವಿಕವಾಗಿ ತೋರುತ್ತದೆ. ಆದ್ದರಿಂದ, ಕರ್ನಾಟಕದ ಯೋಜನೆಯು ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆಯ ಮೇಲಿನ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡುತ್ತದೆ ಮತ್ತು ಅದರಿಂದಗಿ ಹಣದುಬ್ಬರವನ್ನೂ ಸ್ವಲ್ಪ ಮಟ್ಟಿಗೆ ಇಳಿಸುತ್ತದೆ.

ಎರಡನೆಯದು, ಹಣದುಬ್ಬರದ ಕಾಳಜಿಗೆ ಸಂಬಂಧಿಸುತ್ತದೆ. ಹಣದುಬ್ಬರದ ಬಗ್ಗೆ ಚಿಂತಿಸಲೇ ಬೇಕಾಗುತ್ತದೆ. ಏಕೆಂದರೆ, ಮೊತ್ತಮೊದಲಿಗೆ ಅದು ದುಡಿಯುವ ಬಡಜನರ ಬಳಕೆಯನ್ನು ಮೊಟಕುಗೊಳಿಸುತ್ತದೆ ಮತ್ತು ಆ ಮೂಲಕ ಅವರಿಗೆ ಹಾನಿ ಉಂಟುಮಾಡುತ್ತದೆ. ಅವರ ಬಳಕೆಯನ್ನು ಒಂದು ವೇಳೆ ನೇರವಾಗಿ ಹೆಚ್ಚಿಸಿದ್ದೇ ಆದರೆ, ಹಣದುಬ್ಬರವು ಇಳಿಯುತ್ತದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುವುದಿಲ್ಲ. ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತವು 100ಕ್ಕಿಂತಲೂ ಕೆಳಗಿನ ಶ್ರೇಯಾಂಕದಲ್ಲಿ ಮುಂದುವರೆಯುತ್ತಲೇ ಇರುವ ಸನ್ನಿವೇಶದಲ್ಲಿ, ಆಹಾರ ಧಾನ್ಯಗಳಲ್ಲಿ ಹಣದುಬ್ಬರ ನಿಯಂತ್ರಣವನ್ನು ಸಾಧಿಸುವುದು, ಆದ್ಯತೆಗಳು ತಪ್ಪಾಗಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂಓದಿ:ಅನ್ನಭಾಗ್ಯ : ಕೇಂದ್ರ ಸರ್ಕಾರದ ನಿರಾಕರಣೆ ವಿರುದ್ದ ಸಿಪಿಐಎಂ ಪ್ರತಿಭಟನೆ

ಬಿಜೆಪಿ ಸರಕಾರದ ಅಕ್ಷಮ್ಯ ಕ್ರಮ

ಬಿಜೆಪಿ ಸರ್ಕಾರದ ಕ್ರಮವನ್ನು ಯಾವ ರೀತಿಯಲ್ಲಿ ನೋಡಿದರೂ ಅದು ಅಕ್ಷಮ್ಯವೆಂದೇ ತೋರುತ್ತದೆ. ಹಣದುಬ್ಬರದ ಬಗೆಗಿನ ಅದರ ಎಲ್ಲಾ ಮಾತುಗಳೂ ದಾರಿ ತಪ್ಪಿಸುವ ಉದ್ದೇಶ ಹೊಂದಿವೆ. ಕರ್ನಾಟಕ ಸರ್ಕಾರಕ್ಕೆ ಧಾನ್ಯಗಳನ್ನು ಕೇಂದ್ರವು ಮಾರಾಟ ಮಾಡದಿರುವ ಕ್ರಮವು ಒಂದು ವೇಳೆ ರಾಜಕೀಯ ಪ್ರೇರಿತ ತಾರತಮ್ಯದ ಕೃತ್ಯವಾಗಿದ್ದರೆ, ಅದು ಅಕ್ಷಮ್ಯವೇ ಸರಿ. ಏಕೆಂದರೆ, ಅದು ಬಡವರಿಗೆ ನಷ್ಟವನ್ನು ಉಂಟುಮಾಡುವ ರಾಜಕೀಯ ಆಟವಾಗುತ್ತದೆ. ಮತ್ತೊಂದೆಡೆಯಲ್ಲಿ, ಕರ್ನಾಟಕ ಸರ್ಕಾರಕ್ಕೆ ಅಕ್ಕಿಯನ್ನು ಒಂದು ವೇಳೆ ಮಾರಾಟ ಮಾಡಿದರೆ ಹಣದುಬ್ಬರವನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ನಿಜಕ್ಕೂ ಪೇಚಾಡುತ್ತಿದ್ದರೆ, ಅದು ಹಣದುಬ್ಬರದ ಬಗ್ಗೆ ಕೇಂದ್ರ ಸರ್ಕಾರವು ಹೊಂದಿರುವ ತಪ್ಪು ತಿಳುವಳಿಕೆಯನ್ನು ಮತ್ತು ಅದು ಹೊಂದಿರುವ ಮನೋಭಾವವನ್ನು ಸಂಪೂರ್ಣವಾಗಿ ಜಾಹೀರುಪಡಿಸಿಕೊಳ್ಳುತ್ತದೆ.

ಅದೂ ಸಹ ಅಕ್ಷಮ್ಯವೇ. ಆಹಾರ ಆಡಳಿತದ ಈ ರೀತಿಯ ಕೇಂದ್ರೀಕರಣವು ದೇಶದ ಆಹಾರ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಕೇಂದ್ರಾಪಗಾಮಿ(ಛಿ ಅಂದರೆ, ಒಂದು ಕೇಂದ್ರದಿಂದ ವಿವಿಧ ದಿಕ್ಕಿನಲ್ಲಿ ಚಲಿಸುವ) ಪ್ರವೃತ್ತಿಗಳನ್ನು ಸೃಷ್ಟಿಸುವ ಅಪಾಯವಿದೆ. ಉದಾಹರಣೆಗೆ, ಈ ರೀತಿಯ ತಾರತಮ್ಯಕ್ಕೆ ಒಳಗಾದ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು, ಭಾರತ ಆಹಾರ ನಿಗಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮಾರ್ಗ ಹಿಡಿದರೆ, ರಾಷ್ಟ್ರೀಯ ಆಡಳಿತದ ಇಡೀ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಕುಂಠಿತಗೊಳ್ಳುತ್ತದೆ.

ಜನರ ಅಗತ್ಯಗಳ ಬಗ್ಗೆ ಬಿಜೆಪಿಯ ತಿಳುವಳಿಕೆ ಮತ್ತು ಕಾಳಜಿ ಅಲ್ಪವೇ ಆಗಿದ್ದು, ಅದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕ್ರಮೇಣ ಮುಚ್ಚಲು ಬಯಸುತ್ತದೆ. ಅದರಿಂದಾಗುವ ನಷ್ಟವನ್ನು ದೇಶದ ಜನರು ಅನುಭವಿಸಬೇಕಾಗುತ್ತದೆ. ರೈತರ ಜಗ್ಗದ ಹೊರಾಟದ ಹಿನ್ನೆಲೆಯಲ್ಲಿ ಹಿಂತೆಗೆದುಕೊಂಡ ಸರ್ಕಾರದ ಮೂರು ಕೃಷಿ ಕಾನೂನುಗಳು ನಿಜಕ್ಕೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಇಂತಹ ಅಂತ್ಯವನ್ನು ಸಾಧಿಸುತ್ತಿದ್ದವು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *