ಮಧ್ಯಾಹ್ನದ ಬಿಸಿಯೂಟ- ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕತೆ

ಅವಕಾಶವಂಚಿತ ಮಕ್ಕಳನ್ನು ಶಿಕ್ಷಣ ಮತ್ತು ಕಲಿಕೆಗೆ ಒಳಪಡಿಸುವ ಹಾದಿಯಲ್ಲಿ ನಾನಾ ಕೊರತೆಗಳಿವೆ

ನಾ ದಿವಾಕರ

ಜಾತಿ ವ್ಯವಸ್ಥೆಯ ಮತ್ತೊಂದು ಕ್ರೌರ್ಯ ಅಸ್ಪೃಶ್ಯತೆಯೂ ಸಹ ಬಿಸಿಯೂಟದ ಯೋಜನೆಯಲ್ಲಿ ಅಲ್ಲಲ್ಲಿ ತಲೆದೋರುತ್ತಿದೆ. ಉತ್ತರಖಂಡದ ಸರ್ಕಾರಿ ಶಾಲೆಯಲ್ಲಿನ 9 ಮೇಲ್ಜಾತಿಯ ಮಕ್ಕಳು ದಲಿತ ಮಹಿಳೆ ಮಾಡಿದ ಅಡುಗೆಯನ್ನು ಸೇವಿಸಲು ನಿರಾಕರಿಸಿದ ಘಟನೆ ಕಳೆದ ಮೇ ತಿಂಗಳಲ್ಲಿ ನಡೆದಿತ್ತು. ಈ ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿ ಮಾಡಿ ವರ್ಗಾವಣೆ ಮಾಡಲಾಗಿತ್ತು. ರಾಜಸ್ಥಾನದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ದಲಿತ ಬಾಲಕಿಯರು ಊಟ ಬಡಿಸಿದ ಕಾರಣಕ್ಕೆ ಊಟವನ್ನು ಬಿಸಾಡುವಂತೆ ಅಡುಗೆಯವರು ಒತ್ತಾಯಿಸಿದ್ದು ವರದಿಯಾಗಿತ್ತು. ಅಡುಗೆಯವರ ಮಾತಿನಂತೆ ಮಕ್ಕಳು ಊಟ ಮಾಡದೆ ಬಿಸಾಡಿದ್ದರು. ಆಹಾರ ರಾಜಕಾರಣವು ಮಾಂಸಾಹಾರ ಮತ್ತು ಸಸ್ಯಾಹಾರದ ವಿವಾದವನ್ನು ಸೃಷ್ಟಿಸಿ, ಸಮಾಜದಲ್ಲಿ ಉಂಟು ಮಾಡಿರುವ ಬಿರುಕುಗಳು ಎಳೆ ಮಕ್ಕಳಲ್ಲೂ ಕಾಣುತ್ತಿರುವುದು ಆಘಾತಕಾರಿಯಾದರೂ ವಾಸ್ತವ. ಅಸ್ಪೃಶ್ಯತೆಗೂ, ಆಹಾರ ಪದ್ಧತಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನೂ ಈ ಪ್ರಸಂಗಗಳು ಮತ್ತೆ ಮತ್ತೆ ನೆನಪಿಸುತ್ತವೆ. ಇಂತಹ ಘಟನೆಗಳು ಎಲ್ಲೋ ಒಂದೆಡೆ ಸಂಭವಿಸುತ್ತವೆ ಎಂದು ನಿರ್ಲಕ್ಷಿಸುವುದಕ್ಕೂ ಮುನ್ನ, ನಮ್ಮ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಮತ್ತು ಮೇಲು-ಕೀಳಿನ ಜಾತಿ ತಾರತಮ್ಯಗಳು ಜೀವಂತವಾಗಿವೆ ಎಂಬ ದುರಂತ ವಾಸ್ತವವನ್ನು ಮನಗಂಡರೆ ಸುಧಾರಣೆ ಸಾಧ್ಯ.

ಭಾರತದಲ್ಲಿ ಕೋಟ್ಯಂತರ ಮಕ್ಕಳು ಇಂದಿಗೂ ಸಹ ಔಪಚಾರಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದೆ ಇರುವುದು ಸುಡು ವಾಸ್ತವ. ಭೌಗೋಳಿಕ ಕಾರಣಗಳಷ್ಟೇ ಅಲ್ಲದೆ ಹಲವು ರೀತಿಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕಾರಣಗಳಿಂದಲೂ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ಸ್ವತಂತ್ರ ಭಾರತ 75 ವಸಂತಗಳನ್ನು ಪೂರೈಸಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಮುನ್ನಡೆದಿದ್ದರೂ, ಈ ಹೊತ್ತಿನವರೆಗೂ ದೇಶದ ಕಟ್ಟಕಡೆಯ ಪ್ರಜೆಯನ್ನು ಶಿಕ್ಷಣ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇಶದ 80 ಕೋಟಿ ಜನತೆಗೆ ಮಾಸಿಕ ಐದು ಕಿಲೋ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸುವ ಕೇಂದ್ರ ಸರ್ಕಾರದ ಸ್ತುತ್ಯಾರ್ಹ ಯೋಜನೆ ಇನ್ನೂ ಮೂರು ತಿಂಗಳ ಕಾಲ ವಿಸ್ತರಣೆಯಾಗಿರುವುದು ಸ್ವಾಗತಾರ್ಹವೇ ಆದರೂ, ಶೇ 60ಕ್ಕೂ ಹೆಚ್ಚು ಜನಸಂಖ್ಯೆಗೆ ಈ ʼ ಉಚಿತ ಪಡಿತರ ʼ ಅವಶ್ಯಕತೆ ಇದೆ ಎನ್ನುವುದೇ ಯೋಚಿಸಬೇಕಾದ ವಿಚಾರ. ಸಮೃದ್ಧ, ಸುಭಿಕ್ಷ ಭಾರತದಲ್ಲಿ ಬಡತನ, ಹಸಿವು ಮತ್ತು ದಾರಿದ್ರ್ಯ ಇಂದಿಗೂ ಕಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಸ್ವತಂತ್ರ ಭಾರತದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವುದಾದರೂ, ಸರ್ಕಾರಗಳು ಪರಿಭಾವಿಸುವ ಸಾಕ್ಷರತೆಯ ಕಲ್ಪನೆಗೂ, ಅಕ್ಷರ ಕಲಿಕೆ ಮತ್ತು ವಿದ್ಯಾಭ್ಯಾಸಕ್ಕೂ ಸಾಕಷ್ಟು ಅಂತರ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶಿಕ್ಷಣ ಮೂಲತಃ ವ್ಯಕ್ತಿಯಲ್ಲಿ ಸಾಮಾಜಿಕ ಅರಿವು ಮತ್ತು ಜ್ಞಾನವನ್ನು ಮೂಡಿಸುವ ಪರಿಕರವಾಗಬೇಕು. ಓದು-ಬರಹ ಈ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ ಮಾತ್ರ. ಈ ಅರಿವು ಪಡೆಯಲು ಸಾಮಾನ್ಯ ಜನತೆಗೆ ಔಪಚಾರಿಕ ಶಿಕ್ಷಣ ಅತ್ಯವಶ್ಯವಾಗಿರುತ್ತದೆ. ಈ ದೃಷ್ಟಿಯಿಂದಲೇ ಭಾರತದ ಸಂವಿಧಾನವು 14 ವರ್ಷದವರೆಗೂ ಎಲ್ಲ ಮಕ್ಕಳಿಗೂ ಉಚಿತ, ಸಾರ್ವತ್ರಿಕ ಶಿಕ್ಷಣವನ್ನು ಒದಗಿಸಲು ಅಪೇಕ್ಷಿಸುತ್ತದೆ. ಇದು ಸಾಕಾರಗೊಂಡಿಲ್ಲ ಎನ್ನುವ ವಿಷಾದದೊಂದಿಗೇ ಗಮನಿಸಬೇಕಾದ ಅಂಶವೆಂದರೆ ನವ ಉದಾರವಾದ ಮತ್ತು ಜಾಗತೀಕರಣದ ಯುಗದಲ್ಲಿ ಶಿಕ್ಷಣವೂ ವಾಣಿಜ್ಯೀಕರಣಕ್ಕೊಳಗಾಗಿ ಕಾರ್ಪೋರೇಟ್‌ ಮಾರುಕಟ್ಟೆಯ ಕಚ್ಚಾವಸ್ತುಗಳಲ್ಲೊಂದಾಗಿದೆ.

ಶಾಲಾ ಶಿಕ್ಷಣದ ಪ್ರವೇಶಾತಿ ಮತ್ತು ಉನ್ನತ ಶಿಕ್ಷಣದ ಪೂರೈಕೆ , ಈ ಎರಡು ಸ್ತರಗಳ ನಡುವೆ ಕಾಣಬಹುದಾದ ಅಸಮಾನತೆಯ ಕಂದರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ಷರ ಕಲಿಕೆಯು ಒಂದು ಹಂತದಲ್ಲಿ ಜಡಗಟ್ಟುವ ಪರಿಸ್ಥಿತಿಯನ್ನು ಕಾಣುತ್ತೇವೆ. ಈ ವಿದ್ಯಮಾನಕ್ಕೆ ನಾನಾ ಕಾರಣಗಳನ್ನು ಗುರುತಿಸಬಹುದು. ತಮ್ಮ ಬದುಕಿಗೆ ನೆರವಾಗುವಷ್ಟೇ ಶಿಕ್ಷಣ ಪಡೆಯುವ ಅಥವಾ ನೆರವಾಗದಿದ್ದರೆ ಶಿಕ್ಷಣವನ್ನೇ ತೊರೆಯುವ ಒಂದು ಬೃಹತ್‌ ಜನ ಸಮೂಹ ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಆರ್ಥಿಕ ಬಡತನ, ಸಾಮಾಜಿಕ ಅರಿವಿನ ಕೊರತೆ ಮತ್ತು ನಿತ್ಯಜೀವನದ ಬವಣೆ ಅಸಂಖ್ಯಾತ ಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಲೇ ಇದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸಮಾಜದ ಕಟ್ಟಕಡೆಯ ಮಗುವನ್ನೂ ಶಾಲೆಗೆ ಕರೆತರುವ ಪ್ರಯತ್ನಗಳು ಸರ್ಕಾರಗಳಿಂದ ನಡೆಯುತ್ತಲೇ ಇದೆ. ವಾಜಪೇಯಿ ಸರ್ಕಾರದ ಸರ್ವಶಿಕ್ಷಣ ಅಭಿಯಾನ ಇಂತಹ ಸಪ್ರಯತ್ನಗಳಲ್ಲಿ ಒಂದು. ನರೇಂದ್ರ ಮೋದಿ ಸರ್ಕಾರದ ಬೇಟಿ ಪಢಾವೋ ಬೇಟಿ ಬಚಾವೋ ಯೋಜನೆಯೂ ಇವುಗಳಲ್ಲೊಂದು. ಈ ಯೋಜನೆಗಳ ಸಾಫಲ್ಯ ವೈಫಲ್ಯಗಳೇನೇ ಇದ್ದರೂ, ಉದ್ದೇಶಗಳು ಸಕಾರಾತ್ಮಕವಾಗಿರುವುದರಿಂದ, ಇನ್ನೂ ಹೆಚ್ಚಿನ ಸಾಧನೆಗಾಗಿ ಶ್ರಮಿಸಬೇಕಿದೆ.

ಆದರೆ ಭಾರತದಲ್ಲಿ, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಮತ್ತು ನಗರ ಪ್ರದೇಶಗಳ ಕೆಳಸ್ತರದ ಶ್ರಮಜೀವಿಗಳ ನಡುವೆ, ವಲಸೆ ಕಾರ್ಮಿಕರ ನಡುವೆ  ಮಕ್ಕಳನ್ನು ಶಾಲೆಗೆ ಕರೆತರುವುದೇ ಒಂದು ಸವಾಲಿನ ಪ್ರಶ್ನೆಯಾಗಿರುವುದೂ ವಾಸ್ತವ. ಪ್ರತಿಯೊಂದು ಮಗುವನ್ನೂ ತಮ್ಮ ಜೀವನ ನಿರ್ವಹಣೆಗೆ ಪೂರಕವಾಗುವ ದುಡಿಮೆಯ ಸಾಧನ ಎಂದು ಪರಿಭಾವಿಸುವ ಜನಸಂಖ್ಯೆ ನಮ್ಮಲ್ಲಿ ಇಂದಿಗೂ ಹೆಚ್ಚಾಗಿಯೇ ಇದೆ. ಏಕೆಂದರೆ ಜನಕಲ್ಯಾಣ ಅಥವಾ ಯೋಗಕ್ಷೇಮದ ಪ್ರಭುತ್ವ ನೀತಿಗಳಿಂದ ವಿಮುಖವಾಗಿರುವ ಸರ್ಕಾರಗಳು ಸಮಾಜವಾದಿ ಚಿಂತನೆಗಳಿಂದ ಬಹುದೂರ ಸರಿದಿದ್ದು, ಉಳ್ಳವರಿಗೆ ಮಾತ್ರವೇ ಶಿಕ್ಷಣ ಲಭಿಸುವಂತಹ ಸನ್ನಿವೇಶವನ್ನು ನಿರ್ಮಿಸುತ್ತಿವೆ. ಬಡ ಕುಟುಂಬಗಳು ತಮ್ಮ ಬದುಕು ಕಟ್ಟಿಕೊಳ್ಳಲು ಶ್ರಮವನ್ನೇ ಅವಂಬಿಸುವುದರಿಂದ, ಪ್ರತಿಯೊಂದು ಮಗುವಿನ ಶ್ರಮವೂ ಸಹ ಮುಖ್ಯವಾಗುತ್ತದೆ. ಮಕ್ಕಳು ಸಹಜವಾಗಿಯೇ ಶ್ರಮ ಮಾರುಕಟ್ಟೆಗೆ ಭೌತಿಕ ಸರಕುಗಳಾಗಿ ಬಳಕೆಯಾಗುತ್ತಾರೆ. ಈ ಕೊರತೆಯ ಹಿನ್ನೆಲೆಯಲ್ಲೇ ಮಕ್ಕಳನ್ನು ಶಾಲೆಗೆ ಕರೆತರುವ ಒಂದು ಸಾಧನವಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆ ಇಂದು ತನ್ನದೇ ಆದ ಪ್ರಾಶಸ್ತ್ಯ ಪಡೆದಿದೆ. ಅವಕಾಶವಂಚಿತ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರವೇಶ ಮತ್ತು ಅವಕಾಶ ಒದಗಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ ಒಂದು ಅದ್ಭುತ ಯೋಜನೆಯಾಗಿ ರೂಪುಗೊಂಡಿದೆ.

ಮಧ್ಯಾಹ್ನದ ಬಿಸಿಯೂಟ ಚರಿತ್ರೆ ಮತ್ತು ಹಾದಿ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಕಲ್ಪನೆಗೆ ದೀರ್ಘ ಇತಿಹಾಸವೇ ಇದೆ. 1925ರಲ್ಲಿ ತಮಿಳುನಾಡಿನಲ್ಲಿ ಆರಂಭವಾದ ಈ ಯೋಜನೆಗೆ ಸ್ವತಂತ್ರ ಭಾರತದಲ್ಲಿ ಒಂದು ಅಧಿಕೃತ ಸ್ವರೂಪ ಮತ್ತು ಕಾಯಕಲ್ಪ ಒದಗಿಸಿದ ಕೀರ್ತಿ ಕೆ ಕಾಮರಾಜ್‌ ಅವರಿಗೆ ಸಲ್ಲುತ್ತದೆ. 19662-63ರಲ್ಲಿ ತಮಿಳುನಾಡು ಸರ್ಕಾರ ಕಾಮರಾಜ್‌ ಅವರ ಪ್ರೇರಣೆಯಿಂದ ಆರಂಭಿಸಿದ ಬಿಸಿಯೂಟದ ಯೋಜನೆ ಕ್ರಮೇಣ ಎಲ್ಲ ರಾಜ್ಯಗಳಲ್ಲೂ ವ್ಯಾಪಿಸಿದ್ದು ಈಗ ಇತಿಹಾಸ. 1990-91ರ ವೇಳೆಗೆ ಹನ್ನೆರಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗಿತ್ತು. 1995ರ ಕೇಂದ್ರ ಸರ್ಕಾರದ ಯೋಜನೆಯ ಹೊರತಾಗಿಯೂ ಸಂವಿಧಾನದ ಪರಿಚ್ಚೇದ 21ರ ಅನ್ವಯ ಜೀವನದ ಹಕ್ಕು ಇರುವಂತೆಹೇ ಆಹಾರದ ಹಕ್ಕು ಸಹ ಪ್ರಜೆಗಳ ಮೂಲಭೂತ ಹಕ್ಕು ಎಂದೇ ಪರಿಗಣಿಸಬೇಕು ಎಂದು ವಾದಿಸಿ ಪಿಯುಸಿಎಲ್‌ ಸಂಘಟನೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಫಲವಾಗಿ ಸುಪ್ರೀಂಕೋರ್ಟ್‌ 2001ರಲ್ಲಿ ಎಲ್ಲ ರಾಜ್ಯಗಳಲ್ಲೂ ಕಡ್ಡಾಯವಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವಂತೆ ಆದೇಶಿಸಿತ್ತು.

1999ರ ರಾಷ್ಟ್ರೀಯ ಸ್ಯಾಂಪಲ್‌ ಸಮೀಕ್ಷೆಯ ಅನುಸಾರ 6 ರಿಂದ 10 ವರ್ಷದೊಳಗಿನ ಶೇ 6ರಷ್ಟು ಹೆಣ್ಣುಮಕ್ಕಳು ಮಾತ್ರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುತ್ತಿದ್ದರು. ಆದರೆ 2001ರ ಸುಪ್ರೀಕೋರ್ಟ್‌ ಆದೇಶದ ನಂತರ ಈ ಯೋಜನೆಯ ವಿಸ್ತರಣೆಯಿಂದ 2004ರ ವೇಳೆಗೆ ಶೇ 32ರಷ್ಟು ಹೆಣ್ಣುಮಕ್ಕಳು, 2011ರ ವೇಳೆಗೆ ಶೇ 46ರಷ್ಟು ಹೆಣ್ಣುಮಕ್ಕಳು ಬಿಸಿಯೂಟದ ಫಲಾನುಭವಿಗಳಾಗಿದ್ದರು. 1990ರ ದಶಕದಲ್ಲೇ ಈ ಯೋಜನೆಯನ್ನು ಜಾರಿಗೊಳಿಸಿದ 14 ರಾಜ್ಯಗಳಲ್ಲಿ ಸಾಕಷ್ಟು ಸುಧಾರಣೆಯೂ ಕಂಡುಬಂದಿತ್ತು. ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಮತ್ತು ಕುಂಠಿತ ಬೆಳವಣಿಗೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಗಮನಾರ್ಹ ಸಾಧನೆ ಮಾಡಿದೆ. ಶಿಕ್ಷಣ ವಂಚಿತ ಮಕ್ಕಳ ಪೈಕಿ ಹೆಣ್ಣುಮಕ್ಕಳೇ ಅಧಿಕ ಸಂಖ್ಯೆಯಲ್ಲಿರುವುದರಿಂದ, ಈ ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರುವುದು ಮತ್ತು ಅವರಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವಂತಹ ಆಹಾರವನ್ನು ಒದಗಿಸುವುದು ಅನಿವಾರ್ಯವೂ ಆಗಿರುವುದರಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿವೆ. ಒಂದು ಅಧ್ಯಯನದ ಪ್ರಕಾರ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಧ್ಯಾಹ್ನದ ಬಿಸಿಯೂಟ ಪಡೆಯುತ್ತಿರುವ ಮಕ್ಕಳ ಬೆಳವಣಿಗೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

ಈ ಯೋಜನೆಯಲ್ಲಿ ಭಾಗವಹಿಸಲು, ಆಹಾರವನ್ನು ಪೂರೈಸಲು ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸಲು ಸಾರ್ವಜನಿಕ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ಮತ್ತು ಇತರ ಸಂಘ ಸಂಸ್ಥೆಗಳಿಗೂ ಅವಕಾಶ ಇರುವುದರಿಂದ, ಶಾಲೆಗಳ ಆಡಳಿತ ಮಂಡಲಿಗಳು, ಈ ಸಂಸ್ಥೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳುವುದರ ಮೂಲಕ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ. ಶಾಲಾ ಶಿಕ್ಷಣದ ಹಂತದಲ್ಲಿ ಹಸಿವು ನಿವಾರಿಸುವುದು, ಶಾಲಾ ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸುವುದು, ಶಾಲಾ ಹಾಜರಾತಿಯನ್ನು ಹೆಚ್ಚಿಸುವುದು, ಸಾಮಾಜೀಕರಣ ಪ್ರಕ್ರಿಯೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಬಿಸಿಯೂಟ ಯೋಜನೆಯ ಮೂಲಕ ಜಾತಿ ಭೇದಗಳ ತಾರತಮ್ಯಗಳನ್ನು ಹೋಗಲಾಡಿಸುವುದು, ಅಪೌಷ್ಟಿಕತೆಯನ್ನು ತೊಡೆದುಹಾಕುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮಹಿಳೆಯರ ಸಬಲೀಕರಣವನ್ನು ಸಾಕಾರಗೊಳಿಸುವುದು ಇವೆಲ್ಲವೂ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲ ಧ್ಯೇಯೋದ್ದೇಶಗಳಾಗಿವೆ. ಇಂತಹ ಒಂದು ಜನೋಪಯೋಗಿ ಯೋಜನೆಯನ್ನು ಸಾರ್ವತ್ರಿಕಗೊಳಿಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ.

ಬಿಸಿಯೂಟದ ಕಹಿ ಅನುಭವಗಳು

ಆದರೆ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಇದರೊಳಗಿನ ಅಪಸವ್ಯಗಳು ಮಕ್ಕಳಿಗೆ ಆಹಾರ ಒದಗಿಸುವ ಬಿಸಿಯೂಟದ ಯೋಜನೆಯಲ್ಲೂ ಕ್ರಿಯಾಶೀಲವಾಗಿರುವುದು ವರ್ತಮಾನದ ದುರಂತ. ಕರ್ನಾಟಕದಲ್ಲೇ ಸರ್ಕಾರವು ನವಂಬರ್‌ 2021ರಲ್ಲಿ ಬಿಸಿಯೂಟದೊಡನೆ ಮೊಟ್ಟೆ ನೀಡಲು ನಿರ್ಧರಿಸಿದಾಗ ಮೇಲ್ಜಾತಿಯ ಮಠಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. 2007ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವೂ ಸಹ ಶಾಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಯೂಟದೊಡನೆ ಮೊಟ್ಟೆ ನೀಡುವ ನಿರ್ಧಾರ ಪ್ರಕಟಿಸಿದಾಗ ಜೈನ ಗುರುಗಳು, ಲಿಂಗಾಯತ ಮಠಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಯೋಜನೆಯನ್ನೇ ಕೈಬಿಡಬೇಕಾಯಿತು. ಈ ಸಂದರ್ಭದಲ್ಲಿ ನಡೆಸಿದ ಒಂದು ಸಮೀಕ್ಷೆಯ ಅನುಸಾರ ಶೇ 80ಕ್ಕೂ ಹೆಚ್ಚು ಮಕ್ಕಳು ಮೊಟ್ಟೆಯೊಂದಿಗೆ ಬಿಸಿಯೂಟವನ್ನು ಬಯಸಿದ್ದರು. ರಾಜ್ಯ ಸರ್ಕಾರವು ನವಂಬರ್‌ 2021ರಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶ ಕಡಿಮೆ ಇರುವ ಏಳು ಜಿಲ್ಲೆಗಳನ್ನು ಗುರುತಿಸಿ, ಈ ಜಿಲ್ಲೆಗಳಲ್ಲಿ ಬಿಸಿಯೂಟದೊಡನೆ ಮೊಟ್ಟೆ ನೀಡುವಂತೆ ಆದೇಶ ಹೊರಡಿಸಿತ್ತು. ಆಗಲೂ ಕೆಲವು ಲಿಂಗಾಯತ ಮಠಗಳು ಇದನ್ನು ವಿರೋಧಿಸಿದ್ದವು. 2018ರಲ್ಲಿ ಬಿಸಿಯೂಟ ಒದಗಿಸುವ ಗುತ್ತಿಗೆ ಪಡೆದಿರುವ ಅಕ್ಷಯಪಾತ್ರ ಫೌಂಡೇಷನ್‌ ಊಟದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಸಲು ನಿರಾಕರಿಸಿ ವಿವಾದವನ್ನು ಸೃಷ್ಟಿಸಿತ್ತು.

ಈ ಎಲ್ಲ ಜಾತಿ ಅಪಸವ್ಯಗಳ ಹೊರತಾಗಿಯೂ ರಾಜ್ಯ ಸರ್ಕಾರವು ಬಿಸಿಯೂಟ ಯೋಜನೆಯನ್ನು  ಯಶಸ್ವಿಯಾಗಿ ಮುನ್ನಡೆಸಿದೆ. ಶಾಲೆಗಳಿಗೆ ಆಹಾರ ಪೂರೈಸುವ ಸರ್ಕಾರೇತರ ಸಂಸ್ಥೆಗಳು ತಮ್ಮದೇ ಆದ ಆಹಾರದ ಆಯ್ಕೆಯನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನಗಳೂ ನಡೆದಿದ್ದರಿಂದ, ಇಲ್ಲಿ ಜಾತಿ ಪ್ರೇರಿತ ಆಹಾರ ತಾರತಮ್ಯಗಳೂ ಢಾಳಾಗಿ ಗೋಚರಿಸಲಾರಂಭಿಸಿದ್ದವು. ಹಾಗಾಗಿಯೇ ರಾಜ್ಯ ಸರ್ಕಾರವು ಬಿಸಿಯೂಟ ಯೋಜನೆಗೆ ಒಂದು ಸಮಾನ ಆಹಾರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಈರುಳ್ಳಿಯನ್ನು ಆಹಾರದ ಭಾಗವಾಗಿ, ಬೆಳ್ಳುಳ್ಳಿಯನ್ನು ಮಸಾಲೆ ಪದಾರ್ಥವಾಗಿ ಸೇರ್ಪಡಿಸಲಾಗಿದೆ. ಇಷ್ಟಕ್ಕೂ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ/ಅರೆ ಅನುದಾನಿತ ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ಬಿಸಿಯೂಟ ಯೋಜನೆಯ ಫಲಾನುಭವಿಗಳು ಹೆಚ್ಚಿನ ಪ್ರಮಾಣದಲ್ಲಿ ತಳಸಮುದಾಯಗಳೇ ಇದ್ದು, ಈ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ಬಹುಮಟ್ಟಿಗೆ ದಲಿತ, ಆದಿವಾಸಿ, ಒಬಿಸಿ ಜಾತಿಗಳಿಗೆ ಸೇರಿದವರೇ ಆಗಿರುತ್ತಾರೆ.

ಜಾತಿ ವ್ಯವಸ್ಥೆಯ ಮತ್ತೊಂದು ಕ್ರೌರ್ಯ ಅಸ್ಪೃಶ್ಯತೆಯೂ ಸಹ ಬಿಸಿಯೂಟದ ಯೋಜನೆಯಲ್ಲಿ ಅಲ್ಲಲ್ಲಿ ತಲೆದೋರುತ್ತಿದೆ. ಉತ್ತರಖಂಡದ ಸರ್ಕಾರಿ ಶಾಲೆಯಲ್ಲಿನ 9 ಮೇಲ್ಜಾತಿಯ ಮಕ್ಕಳು ದಲಿತ ಮಹಿಳೆ ಮಾಡಿದ ಅಡುಗೆಯನ್ನು ಸೇವಿಸಲು ನಿರಾಕರಿಸಿದ ಘಟನೆ ಕಳೆದ ಮೇ ತಿಂಗಳಲ್ಲಿ ನಡೆದಿತ್ತು. ಈ ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿ ಮಾಡಿ ವರ್ಗಾವಣೆ ಮಾಡಲಾಗಿತ್ತು. ರಾಜಸ್ಥಾನದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ದಲಿತ ಬಾಲಕಿಯರು ಊಟ ಬಡಿಸಿದ ಕಾರಣಕ್ಕೆ ಊಟವನ್ನು ಬಿಸಾಡುವಂತೆ ಅಡುಗೆಯವರು ಒತ್ತಾಯಿಸಿದ್ದು ವರದಿಯಾಗಿತ್ತು. ಅಡುಗೆಯವರ ಮಾತಿನಂತೆ ಮಕ್ಕಳು ಊಟ ಮಾಡದೆ ಬಿಸಾಡಿದ್ದರು. ಆಹಾರ ರಾಜಕಾರಣವು ಮಾಂಸಾಹಾರ ಮತ್ತು ಸಸ್ಯಾಹಾರದ ವಿವಾದವನ್ನು ಸೃಷ್ಟಿಸಿ, ಸಮಾಜದಲ್ಲಿ ಉಂಟು ಮಾಡಿರುವ ಬಿರುಕುಗಳು ಎಳೆ ಮಕ್ಕಳಲ್ಲೂ ಕಾಣುತ್ತಿರುವುದು ಆಘಾತಕಾರಿಯಾದರೂ ವಾಸ್ತವ. ಅಸ್ಪೃಶ್ಯತೆಗೂ, ಆಹಾರ ಪದ್ಧತಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನೂ ಈ ಪ್ರಸಂಗಗಳು ಮತ್ತೆ ಮತ್ತೆ ನೆನಪಿಸುತ್ತವೆ. ಇಂತಹ ಘಟನೆಗಳು ಎಲ್ಲೋ ಒಂದೆಡೆ ಸಂಭವಿಸುತ್ತವೆ ಎಂದು ನಿರ್ಲಕ್ಷಿಸುವುದಕ್ಕೂ ಮುನ್ನ, ನಮ್ಮ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಮತ್ತು ಮೇಲು-ಕೀಳಿನ ಜಾತಿ ತಾರತಮ್ಯಗಳು ಜೀವಂತವಾಗಿವೆ ಎಂಬ ದುರಂತ ವಾಸ್ತವವನ್ನು ಮನಗಂಡರೆ ಸುಧಾರಣೆ ಸಾಧ್ಯ.

ಈ ಜಾತಿ ತಾರತಮ್ಯಗಳ ನಡುವೆಯೇ ಬಿಸಿಯೂಟದಲ್ಲಿ ವಿಷಪೂರಿತ ಆಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ಮಕ್ಕಳು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಕಯ್ಯಾಂಕುಲಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ಮಕ್ಕಳು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದರು. ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ನಾಂದ್ಯಾಲ್‌ ಮತ್ತು  ಅನಂತಪುರ ಜಿಲ್ಲೆಯ ಕಕ್ಕಲಪಲ್ಲಿಯಲ್ಲಿ 85 ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವಿಸಿದ್ದರಿಂದ ವಾಂತಿ ಬೇಧಿ, ಉದರಬೇನೆಯಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮುಂಬೈನ  ಜೋಗೇಶ್ವರಿಯಲ್ಲಿರುವ ಬಾಲವಿಕಾಸ್‌ ವಿದ್ಯಾ ಮಂದಿರ ಶಾಲೆಯಲ್ಲಿ ಸಫಾಯಿ ಮಹಿಳಾ ಸಂಸ್ಥೆ ಎಂಬ ಎನ್‌ಜಿಒ ಒದಗಿಸಿದ ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥರಾಗಿದ್ದರು. ತಮಿಳುನಾಡಿನ ಕುಡಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 25 ಮಕ್ಕಳು ವಿಷಪೂರಿತ ಆಹಾರ ಸೇವನೆಯಿಂದ ಚಿಕಿತ್ಸೆ ಪಡೆಯುವಂತಾಗಿತ್ತು. ಉತ್ತರ ಪ್ರದೇಶದ ಬುದೌನ್‌ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 28 ಮಕ್ಕಳು ಇದೇ ಅವ್ಯವಸ್ಥೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು.

ಈ ಘಟನೆಗಳು ಏನನ್ನು ಸೂಚಿಸುತ್ತವೆ ? ಅಲ್ಲಲ್ಲಿ ನಡೆದ ಘಟನೆಗಳೇ ಆದರೂ ಬಿಸಿಯೂಟವನ್ನು ಪೂರೈಸುವ ಸಂಘ ಸಂಸ್ಥೆಗಳು ಮತ್ತು ಶಾಲೆಯಲ್ಲೇ ಆಹಾರ ತಯಾರಿಸುವ ಸಿಬ್ಬಂದಿ ತಮ್ಮ ನೈತಿಕ-ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದಲ್ಲವೇ ? ಬಿಸಿಯೂಟದಲ್ಲಿ ಹಲ್ಲಿ, ಜಿರಲೆ, ಚೇಳು ಕೆಲವೊಮ್ಮೆ ಹಾವುಗಳೂ ಕಂಡಿರುವುದನ್ನು ಗಮನಿಸಿದಾಗ, ಈ ಯೋಜನೆಯನ್ನು ನಿರ್ವಹಿಸುವಲ್ಲಿ ಸರ್ಕಾರಗಳು ಸೂಕ್ತ ನಿಗಾ ವಹಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಒಂದೆಡೆ ಜಾತಿ ತಾರತಮ್ಯಗಳು, ಮತ್ತೊಂದೆಡೆ ಅಸ್ಪೃಶ್ಯತೆಯಂತಹ ಕ್ರೌರ್ಯ ಮತ್ತು ಈ ರೀತಿಯ ವಿಷಪೂರಿತ ಆಹಾರ ಸೇವನೆ ಇವೆಲ್ಲವೂ, ನಮ್ಮ ಸಮಾಜ ಹಾಗೂ ಸರ್ಕಾರ ತಳಮಟ್ಟದ ಜನಸಮುದಾಯಗಳ ಬಗ್ಗೆ, ಬಡಜನತೆಯ ಬಗ್ಗೆ ಇಂದಿಗೂ ಸಂವೇದನಾಶೀಲತೆಯನ್ನು ಬೆಳೆಸಿಕೊಂಡಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳ ನಡುವೆ ಆಹಾರ ನಿಷೇಧದ ವಿಕೃತ ಸಂಸ್ಕೃತಿಯನ್ನು ಬೆಳೆಸುವುದು, ಈಗಾಗಲೇ ಹದಗೆಡುತ್ತಿರುವ ಸಾಮಾಜಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುವ ಒಂದು ಪ್ರಕ್ರಿಯೆಯಾಗುತ್ತದೆ.

ಅಂತಿಮವಾಗಿ

ಬಡಮಕ್ಕಳು ಊಟಕ್ಕಾಗಿ ಶಾಲೆಗೆ ಬರುವುದಿಲ್ಲ. ಆದರೆ ಮಧ್ಯಾಹ್ನದ ಬಿಸಿಯೂಟ ಇದೆ ಎಂದರೆ ದುಡಿಯುವ ಕೈಗಳನ್ನೂ ಅಕ್ಷರ ಕಲಿಕೆಗೆ ತರಬಹುದಾದ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಕ್ಷರ ಕಲಿಕೆಯಿಂದ, ಶಿಕ್ಷಣದಿಂದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ವಂಚಿತರಾಗುವ ಅಸಂಖ್ಯಾತ ಮಕ್ಕಳನ್ನು ಶಾಲೆಗೆ ಕರೆತಂದು, ಶಿಕ್ಷಣ ಒದಗಿಸುವುದರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ತನ್ನದೇ ಆದ ಭವ್ಯ ಚರಿತ್ರೆಯನ್ನು ದಾಖಲಿಸಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದೇ ಅಲ್ಲದೆ, ಬಾಹ್ಯ ಸಮಾಜದ ಜಾತಿ ತಾರತಮ್ಯಗಳು ಎಳೆ ಮಕ್ಕಳಿಗೆ ಸೋಂಕದಂತೆ ಎಚ್ಚರ ವಹಿಸುವ ಸಾಮಾಜಿಕ ಜವಾಬ್ದಾರಿಯೂ ಸರ್ಕಾರ ಮತ್ತು ನಾಗರಿಕರ ಮೇಲಿದೆ. ಹಾಗೆಯೇ ಮಕ್ಕಳಿಗೆ ಅವಶ್ಯವಾದ ಪೌಷ್ಟಿಕ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಆಹಾರ ನಿಷೇಧದ ರಾಜಕಾರಣದಿಂದ ಹೊರತುಪಡಿಸುವುದೂ ಅತ್ಯವಶ್ಯ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಮತ್ತು ಸರ್ಕಾರಗಳು ಹೆಚ್ಚಿನ ಎಚ್ಚರಿಕೆ ವಹಿಸಿ, ಕ್ರಿಯಾಶೀಲವಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *