ಬೆಂಗಳೂರು : ಬಿಸಿಯೂಟ ನೌಕರರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ. ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಬಿಸಿಯೂಟ ಅಡುಗೆದಾರರು ಪ್ರೀಡಂಪಾರ್ಕ್‌ನಲ್ಲಿ ಹೋರಾಟವನ್ನು ನಡೆಸುತ್ತಿದ್ದಾರೆ.
ಸರ್ಕಾರಗಳು ಪದೆ ಪದೇ ವಂಚಿಸುವ ಕೆಲಸ ಮಾಡ್ತಿವೆ ಹಾಗಾಗಿ ನಮಗೆ ಅನಿರ್ದಿಷ್ಟಾವಧಿ ಮುಷ್ಕರ ಬಿಟ್ಟು ಬೇರೆ ದಾರಿ ಇಲ್ಲ ಎಂದು ಸರ್ಕಾರದ ವಿರುದ್ದ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಮಾತನಾಡಿ, ಶಿಕ್ಷಣ ಇಲಾಖೆಯ ಮತ್ತು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1,19,000 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. 55,80,000ಬಡ ರೈತ, ಕೃಷಿ ಕೂಲಿಕಾರರ, ದಲಿತ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಚತೆ ಮಾಡುವ ಮೂಲಕ ಶಾಲೆಯ ಶೈಕ್ಷಣಿಕ ವಾತಾವರಣ ಕಾಪಾಡುವಲ್ಲಿ ಮಹಿಳೆಯರ ತಾಯ್ತನದ ಪರಿಶ್ರಮವಿದೆ. ದಿನಕ್ಕೆ ಸುಮಾರು 6 ಗಂಟೆ ಗಳಿಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಇವರ ಪರಿಶ್ರಮ ಗುರುತಿಸಿ ಕನಿಷ್ಟ ಕೂಲಿ ನೀಡುತ್ತಿಲ್ಲ ಎಂದು ಆರೋಪಿಸಿದರು.
2023 ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಘೋಷಣೆಯಾದ ಗೌರವಧನದ ಬಿಡುಗಡೆ ಆದೇಶ ಇನ್ನು ನೀಡಿಲ್ಲ, ಕೂಡಲೇ ಆದೇಶ ಮಾಡಿ, ಹಣ ಬಿಡುಗಡೆ ಮಾಡಬೇಕು. ಬೆಲೆ ಏರಿಕೆಯ ಆಧಾರದಲ್ಲಿ ವೇತನ ಹೆಚ್ಚಳ 12 ಸಾವಿರ ನೀಡಬೇಕು. ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ 4 ಗಂಟೆ ಕೆಲಸ ಮಾತ್ರವಿದೆ. ಆದರೆ ದಿನ ನಿತ್ಯ 6 ಗಂಟೆಗಳ ಕೆಲಸ ಮಾಡುತ್ತಾರೆ. ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ 6 ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ನಾವು ಧರಣಿಯನ್ನು ಮುಂದುವರೆಸುತ್ತೇವೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ತಿಳಿಸಿದ್ದಾರೆ.
ಇದನ್ನೂ ಓದಿ : ಬಿಸಿಯೂಟ | ಡಬಲ್ ಸಾಲ್ಟ್ & ಜೇನು ತುಪ್ಪ ಸಾಧ್ಯವಿಲ್ಲವೆಂದ ರಾಜ್ಯ ಸರ್ಕಾರ ; ತಜ್ಞರ ಅಭಿಪ್ರಾವೇನು?
ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಮಾತನಾಡಿ, ಕನಿಷ್ಠ ವೇತನ ಕಾಯ್ದೆಯ ಪ್ರಕಾರ ‘ಅಡುಗೆ ತಯಾರಿಕೆ’ ಒಂದು ಉತ್ಪಾದನಾ ಚಟುವಟಿಕೆ. ರಾಜ್ಯದಲ್ಲಿ ಹೋಟೆಲ್, ಹಾಸ್ಟೆಲ್‌ಗಳಲ್ಲಿ ಮತ್ತು ಮನೆಗೆಲಸಗಾರರು ಅಡುಗೆ ತಯಾರಿಕೆಗೆ ಕನಿಷ್ಠ 375 ರೂ ರಿಂದ 455 ರೂ. ದಿನದ ಕೂಲಿಯಲ್ಲಿ ಮೂಲವೇತನವಾಗಿ ಪಡೆಯುತ್ತಿದ್ದಾರೆ. ಬಿಸಿಯೂಟ ನೌಕರರು ಬೆಳಿಗ್ಗೆ 9-೦೦ ರಿಂದ 3-30 ರವರೆಗೆ ಕೆಲಸ ಮಾಡುತ್ತಾರೆ. ದಿನಕ್ಕೆ 6 ರಿಂದ 6.30 ಗಂಟೆ ಕೆಲಸ ಮಾಡಿದರೂ ಕೂಡಾ ಎಮ್. ಡಿ. ಎಮ್ ಕೈಪಿಡಿಯಲ್ಲಿ 4 ಗಂಟೆ ಎಂದೂ ನಮೂದಿಸಲಾಗಿದೆ. ಇದರಿಂದಾಗಿ ಇವರು ವೇತನ ಹೆಚ್ಚಳದಿಂದ ವಂಚಿತರಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಕೆಲಸದ ಅವಧಿಯ ಬದಲಾವಣೆ ಮಾಡಲು ಒತ್ತಾಯ ಮಾಡಬೇಕು. ಇದೊಂದು ಕೇಂದ್ರ ಸರ್ಕಾರಿ ಯೋಜನೆ ಎಂದು ಬದುಕುಳಿಯುವ ವೇತನದಿಂದಲೂ ಈ ಮಹಿಳೆಯರನ್ನ ವಂಚಿಸಿ ದುಡಿಸಲಾಗುತ್ತಿದೆ. ದುಬಾರಿ ಬೆಲೆಯೇರಿಕೆಯ ದಿನಗಳಲ್ಲಿ ಇವರು ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದಾರೆ. 20 ವರ್ಷಗಳಿಂದ ದುಡಿದ ಮಹಿಳೆಯರನ್ನು 60 ವರ್ಷ ದಾಟಿದೆ ಎಂದು ಅಮಾನವೀಯವಾಗಿ ಒಂದು ಬಿಡಿಗಾಸನ್ನು ಕೊಡದೇ ಕೆಲಸದಿಂದ ಸುಮಾರು 6500 ಕ್ಕೂ ಹೆಚ್ಚಿನ ಮಹಿಳೆಯರನ್ನು ಹೊರದಬ್ಬಲಾಗಿದೆ. ಈ ಹಿಂದೆ ಇಲಾಖೆಯ ಜೊತೆ ಹಲವಾರು ಬಾರಿ ಮಾತುಕತೆ ನಡೆದಿದೆ. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ಈ ನೌಕರರಿಗೆ 1 ಲಕ್ಷ ಪರಿಹಾರ ನೀಡಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಸಂಘಟನೆಯ ನಾಯಕರಾದ ಲಲಿತಾ, ಅನ್ನಪೂರ್ಣ, ಗಂಗಮ್ಮ, ಈರಮ್ಮ, ರವೀಂದ್ರ, ಅನುಸೂಯ, ಜಯಶ್ರೀ ಸೇರಿದಂತೆ ಸಾವಿರಾರು ಮಂದಿ ಇದ್ದರು.
ಬಿಸಿಯೂಟ ನೌಕರರ ಬೇಡಿಕೆಗಳು ಈ ಕೆಳಗಿನಂತಿವೆ.
1] ಅಕ್ಷರ ದಾಸೋಹ ಯೋಜನೆಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿ ನಡೆಯಬೇಕು
2] ಸಾದಿಲ್ವಾರು ಜಂಟಿಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ಬದಲಿಸಬೇಕು
3] ಎಸ್‌ಡಿಎಮ್‌ಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸಾಗಿ, ಖಾತೆ ಮೊದಲಿನಂತೆಯೇ ಬದಲಾಯಿಸಬೇಕು
4] ಕೆಲಸದಿಂದ ತೆಗೆದಿರುವ ಎಲ್ಲರಿಗೂ 1 ಲಕ್ಷ ಇಡಗಂಟು ಕೊಡಬೇಕು
5] ಇಡಿಗಂಟು ಕೊಡುವ ಬಗ್ಗೆ ಹಣಕಾಸು ಇಲಾಖೆಯಿಂದ ಒಪ್ಪಿಸಿ ಜಾರಿ ಮಾಡಬೇಕು
6] ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು
7] ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆ ಬದಲಿಸಬೇಕು.
8] ಬಜೆಟ್ ನಲ್ಲಿ ಹೇಳಿದ ಹತ್ತು ಸಾವಿರ ವೇತನ ಜನವರಿ 2023 ರಿಂದ ಅನ್ವಯ ಆಗುವಂತೆ ಜಾರಿ ಮಾಡಬೇಕು
9] ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ಕೂಡಲೇ ನಿಲ್ಲಬೇಕು
10] ಬಿಸಿಯೂಟ ಯೋಜನೆಯನ್ನು ಇಡೀ ರಾಜ್ಯದಲ್ಲಿ ಖಾಯಂ ಮಾಡಬೇಕು
11] 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕಾರ್ಮಿಕರೆಂದು ಗುರುತಿಸಬೇಕು
12] ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಬಾರದು
14] ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು
15] ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು
16] ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು
17] ಶಾಲಾ ಅವಧಿಯ ನಂತರ ನರೆಗಾ ಯೋಜನೆ ಅಡಿ ಶಾಲಾ ಕೈತೋಟದ ಕೆಲಸ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು
18] ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು
19] ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು
20] ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಲೇಬೇಕು
ಈ ವಿಡಿಯೋ ನೋಡಿ : ವಿಧಾನಸೌಧದತ್ತ ಹೊರಟ ಬಿಸಿಯೂಟ ನೌಕರರ ಮೇಲೆ ಪೊಲೀಸ್ ದೌರ್ಜನ್ಯ