ಬೆಂಗಳೂರು : ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ನಡೆಸುತ್ತಿರುವ ಹೋರಾಟ ರಾಜ್ಯದ್ಯಾದ್ಯಂತ ತೀವ್ರಗೊಂಡಿದ್ದು, ನಾನಾ ಕಡೆ ಬಿಸಿಯೂಟ ನೌಕರರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ಜವಾಬ್ದಾರಿಗೆ ಸಂಪೂರ್ಣವಾಗಿ ತಂದು ಇವರ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ ಎಂದು ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ಹಲವು ಬೇಡಿಕೆಯನ್ನಿಟ್ಟು ತಾಲ್ಲೂಕು ಪಂಚಾಯತಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಕಾರ್ಯ ನಿರ್ವಹಣಾಧಿಕಾರಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಜನಶಕ್ತಿ ಮೀಡಿಯ ಜೊತೆ ದೂರವಾಣಿ ಮೂಲಕ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಿ ತಡೆಗಟ್ಟಲು, ಅಪೌಷ್ಟಿಕತೆ ತಡೆಗಟ್ಟಲು, ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1 ಲಕ್ಷ 17 ಸಾವಿರ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. 58 ಲಕ್ಷ 39 ಸಾವಿರ ಮಕ್ಕಳಿಗೆ ನಿತ್ಯ ಊಟ ನೀಡುತ್ತಿದ್ದಾರೆ. ಬಡ, ರೈತ, ಕೃಷಿಕೂಲಿಕಾರರ, ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತತನದ ಪರಿಶ್ರಮವಿದೆ. ದಿನಕ್ಕೆ ಸುಮಾರು 6 ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಇವರ ಪರಿಶ್ರಮ ಗುರುತಿಸಿ ಕನಿಷ್ಟ ಕೂಲಿ 21 ಸಾವಿರ ನೀಡಬೇಕು ಎಂದರು.
ಇದನ್ನೂ ಓದಿ:12 ಸಾವಿರ ಬಿಸಿಯೂಟ ನೌಕರರ ವಜಾ ವಿರೋಧಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ
ಹೆಚ್ಚುವರಿ ಹಣ ಬಿಡುಗಡೆ : 2023 ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಘೋಷಣೆಯಾದ ಗೌರವಧನದ ಬಿಡುಗಡೆ ಆದೇಶ ಇನ್ನು ನೀಡಿಲ್ಲ, ಕೂಡಲೇ ಆದೇಶ ಮಾಡಿ, ಹಣ ಬಿಡುಗಡೆ ಮಾಡಬೇಕು. ಬೆಲೆ ಏರಿಕೆಯ ಆಧಾರದಲ್ಲಿ ವೇತನ ಹೆಚ್ಚಳ 12 ಸಾವಿರ ನೀಡಬೇಕು. ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ 4 ಗಂಟೆ ಕೆಲಸ ಮಾತ್ರವಿದೆ. ಆದರೆ ದಿನ ನಿತ್ಯ 6 ಗಂಟೆಗಳ ಕೆಲಸ ಮಾಡುತ್ತಾರೆ. ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ 6 ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು ಎಂದು ಮಾಲಿನಿ ತಿಳಿಸಿದ್ದಾರೆ.
ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರಿಗೆ ಇಡಿಗಂಟು ಜಾರಿಯ ಬಗ್ಗೆ : ರಾಜ್ಯದಲ್ಲಿ 60 ವರ್ಷ ವಯಸ್ಸಾಗಿದೆ ಎಂದು ನಿವೃತ್ತಿಯ ಹೆಸರಿನಲ್ಲಿ ಏನು ಪರಿಹಾರ ಕೊಡದೇ ಸುಮಾರು 6000 ನೌಕರರನ್ನು ಕೆಲಸದಿಂದ ಕೈ ಬಿಟ್ಟಿದ್ದಾರೆ. ಈ ಹಿಂದೆ ಇಲಾಖೆಯ ಜೊತೆ ಹಲವಾರು ಬಾರಿ ಮಾತುಕತೆ ನಡೆದಿದೆ. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ಈ ನೌಕರರಿಗೆ 1 ಲಕ್ಷ ಪರಿಹಾರ ನೀಡಲು ಆದೇಶಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಮುಖ್ಯ ಅಡುಗೆಯವರಿಗೆ ನೀಡುವ ಕುರಿತು : ಯೋಜನೆಯ ಪ್ರಾರಂಭದಿಂದಲೂ ಸಾದಿಲ್ವಾರು ಜವಾಬ್ದಾರಿಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರು ನಿರ್ವಹಿಸಿಕೊಂಡು ಬಂದಿರುತ್ತಾರೆ. ಈ ಇಲಾಖೆಯ ಜವಾಬ್ದಾರಿಯ ಕೆಲಸವಾಗಿ ಯೋಜನೆಯ ಒಂದು ಭಾಗವಾಗಿ ಮುಖ್ಯ ಅಡುಗೆಯವರು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಈ ಜವಾಬ್ದಾರಿಯನ್ನು ಮುಖ್ಯ ಅಡುಗೆಯವರಿಂದ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷರಿಗೆ ವರ್ಗಾವಣೆ ಮಾಡಿ ಮುಖ್ಯ ಅಡುಗೆ ನೌಕರರಿಗೆ ಇರುವ ಹಕ್ಕನ್ನು ಕಿತ್ತುಕೊಂಡಿದೆ. ಹಿಂದೆ ಇರುವ ಹಾಗೆ ಕರ್ತವ್ಯ ನಿರ್ವಹಿಸಲು ಈ ಅವಕಾಶ ಮಾಡಿಕೊಂಡಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಗಂಗಾವತಿ ತಿಳಿಸಿದ್ದಾರೆ.
ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು : ಹಲವಾರು ವರ್ಷಗಳಿಂದ ಈ ಯೋಜನೆಯ ಶ್ರೇಯಸ್ಸಿಗಾಗಿ ಈ ಮಹಿಳೆಯರು ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ ದುಡಿಯುತ್ತಿದ್ದಾರೆ. ಇಂತಹ ಮಹಿಳೆಯರು ಆಕಸ್ಮಿಕವಾಗಿ ಮರಣ ಹೊಂದಿದ್ದರೆ ಅವರ ಕುಟುಂಬದಲ್ಲಿರುವವರಿಗೆ ಈ ಕೆಲಸ ನೀಡಲು ಆದೇಶ ನೀಡಬೇಕು ಎಂದು ಪ್ರತಿಭಟನೆಕಾರರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ:ಬೇಡಿಕೆ ಈಡೇರಿಕೆಗೆ 15 ದಿನ ಸಮಯ ಕೇಳಿದ ಸರಕಾರ : ಧರಣಿ ವಾಪಸ್ ಪಡೆದ ಬಿಸಿಯೂಟ ನೌಕರರು
ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡುವ ಬಗ್ಗೆ: ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಏಪ್ರೀಲ್-ಮೇ ತಿಂಗಳ ವೇತನ ನೀಡಲಾಗುತ್ತದೆ, ಆದರೆ ಇದೇ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಈ ಮಹಿಳೆಯರಿಗೆ ಏಪ್ರೀಲ್-ಮೇ ತಿಂಗಳ ವೇತನ ನೀಡುವುದಿಲ್ಲ. ದಸರಾ ರಜಾ(ಅಕ್ಟೋಬರ್) ತಿಂಗಳ ವೇತನ ಸಹ ನೀಡುವುದಿಲ್ಲ. ಈ ವೇತನ ನೀಡಬೇಕು ಎಂಬುದು ಪ್ರತಿಭಟನೆಕಾರರ ಆಗ್ರಹವಾಗಿದೆ.
ಬಿಸಿಯೂಟ ಯೋಜನೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು : ಈ ಯೋಜನೆಯ ಯಾವುದೇ ಸ್ವರೂಪದ ಜವಾಬ್ದಾರಿಯನ್ನು ಖಾಸಗಿ ಸಂಘ-ಸಂಸ್ಥೆಗಳಗೆ ನೀಡದೇ ಸರ್ಕಾರದ ಆಧೀನದಲ್ಲಿಯೇ ನಿರ್ವಹಿಸಬೇಕು. ಈಗಾಗಲೇ ಖಾಸಗಿ, ಎನ್‌ಜಿಓಗಳಿಗೆ ನೀಡಿದ ಶಾಲೆಗಳ ಬಿಸಿಯೂಟ ವಾಪಸ್ಸು ಪಡೆದು ಸರ್ಕಾರವೇ ಊಟ ನೀಡುವಂತಾಗಬೇಕು ಎಂದು ಹಾಸನದ ಬಿಸಿಯೂಟ ನೌಕರರ ಸಂಘಟನೆಯ ಸೌಮ್ಯ ಬಿಎಂ ಆಗ್ರಹಿಸಿದ್ದಾರೆ.
ಒಂದು ಶಾಲೆಯಲ್ಲಿ ಅಡುಗೆ ಕೆಲಸ ನಿರ್ವಹಿಸಬೇಕಾದರೆ, ಎಲ್ಲಾ ಕೆಲಸವನ್ನು ಒಬ್ಬರೇ ನಿರ್ವಹಿಸುವುದು ಕಷ್ಟಕರ ಅನಾರೋಗ್ಯ ಅಥವಾ ಅನಿವಾರ್ಯತೆ ಇದ್ದಾಗ ಕೆಲಸ ನಿರ್ವಹಿಸಲು ಕಷ್ಟಕರ ಆದ್ದರಿಂದ ಪ್ರತಿ ಶಾಲೆಯಲ್ಲಿ 2. ಜನ ಅಡುಗೆಯವರು ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಸೌಮ್ಯ ತಿಳಿಸಿದ್ದಾರೆ.
ಈಗಾಗಲೇ ಶಾಲೆಯಲ್ಲಿ ಅಡುಗೆ ಕೆಲಸದ ಜೊತೆ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು, ಇನ್ನಿತರ ಕೆಲಸ ಚಾಚು ತಪ್ಪದೇ ಮಾಡುತ್ತಾರೆ. ಶಾಲೆಯಲ್ಲಿ ಈ ಕೆಲಸವನ್ನು ಇವರೇ ಮಾಡುವುದರಿಂದ ಈ ನೌಕರರನ್ನು ‘ಡಿ’ ಗ್ರೂಪ್ ನೌಕರರಾಗಿ ಪರಿಗಣಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.