ಮಂಗಳೂರು: ಮಂಗಳೂರಿನ ಬೋಳಾರುವಿನ ನಿವಾಸಿಯಾದ ತೃತೀಯ ಲಿಂಗಿಯೊಬ್ಬರು ದಾಖಲೆಗಳಲ್ಲಿ ಹೆಸರು ಬದಲಾವಣೆಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಜನನ ಮತ್ತು ಮರಣ ಕಾಯಿದೆ ಮತ್ತು ಅದರ ಸಂಬಂಧಿತ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡುವವರೆಗೆ , ತೃತೀಯ ಲಿಂಗಿಗಳ ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿಕೊಡುವುದು ಜನನ ಮತ್ತು ಮರಣ ನೋಂದಣಿ ರಿಜಿಸ್ಟ್ರಾರ್ ಕರ್ತವ್ಯವಾಗಿದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
“ಜನನ ಮತ್ತು ಮರಣ ಕಾಯಿದೆ 1969 ಮತ್ತು ಸಂಬಂಧಿತ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡುವವರೆಗೆ ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ 2019ರ ಸೆಕ್ಷನ್ 6 ಅಥವಾ 7ರ ಅಡಿ ನೀಡಲಾಗುವ ಪ್ರಮಾಣಪತ್ರ ಒಳಗೊಂಡು ತೃತೀಯ ಲಿಂಗಿ ಸಲ್ಲಿಸುವ ಅರ್ಜಿಯನ್ನು ಒಪ್ಪಿಕೊಂಡು, ಜನನ ಮತ್ತು ಮರಣ ನೋಂದಣಿಯಲ್ಲಿ ಅದನ್ನು ನಮೂದಿಸಿ, ಹಿಂದಿನ ಮತ್ತು ಹಾಲಿ ಹೆಸರು ಹಾಗೂ ವಿವರಣೆ ಸೇರ್ಪಡೆ ಮಾಡಿ ಪರಿಷ್ಕೃತ ಜನನ ಅಥವಾ ಮರಣ ಪ್ರಮಾಣಪತ್ರ ನೀಡುವುದು ಜನನ ಮತ್ತು ಮರಣ ರಿಜಿಸ್ಟ್ರಾರ್ ಕರ್ತವ್ಯವಾಗಿದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಮುಂದುವರೆದು, “ರಾಜ್ಯ ಕಾನೂನು ಆಯೋಗವು ತೃತೀಯ ಲಿಂಗಿ ಕಾಯಿದೆ ಅಧ್ಯಯನ ಮಾಡಿ ಜನನ ಮತ್ತು ಮರಣ ಕಾಯಿದೆ 1969 ಮತ್ತು ಅದರ ಸಂಬಂಧಿತ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಆದಷ್ಟು ಬೇಗ ತೃತೀಯ ಲಿಂಗಿ ಕಾಯಿದೆಯಡಿ ಅದರ ಅನುಷ್ಠಾನಕ್ಕೆ ಸಲಹೆ ನೀಡಬೇಕು. ಹೀಗಾಗಿ, ಆದೇಶದ ಪ್ರತಿಯನ್ನು ರಿಜಿಸ್ಟ್ರಾರ್ ಜನರಲ್ ಅವರು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಿಗೆ ಕಳುಹಿಸಿಕೊಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಇದನ್ನೂ ಓದಿ : ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅವಹೇಳನಕಾರಿ ಹೇಳಿಕೆ; ಜನವರಿ 6ರಂದು ಕೊಪ್ಪಳ ಬಂದ್ ಗೆ ಕರೆ
“ತೃತೀಯ ಲಿಂಗಿಗಳ ಲಿಂಗತ್ವದಲ್ಲಿ ಬದಲಾವಣೆಯಾದರೆ ಅವರ ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡಿಕೊಡಲು ಸದ್ಯ ಯಾವುದೇ ನಿಯಮಗಳು ಇಲ್ಲ. ಹೀಗಾಗಿ, ಸಂಬಂಧಿತ ಪ್ರಾಧಿಕಾರವು ಜನನ ಮತ್ತು ಮರಣ ಕಾಯಿದೆ 1969 ಆಚೆಗೆ ವರ್ತಿಸಲಾಗದು. ಈ ಲೋಪವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದು ಅಗತ್ಯವಾಗಿದೆ. ಹೀಗಾಗಿ, ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಿದೆ. ತೃತೀಯ ಲಿಂಗಿ ಕಾಯಿದೆಯು ವಿಶೇಷ ಶಾಸನವಾಗಿದ್ದು, ಜನನ ಮತ್ತು ಮರಣ ಕಾಯಿದೆ 1969ರಂತೆ ಇದನ್ನು ಅನುಪಾಲಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರೆಯನ್ನು ಪ್ರತಿನಿಧಿಸಿದ್ದ ವಕೀಲೆ ಅಪರ್ಣಾ ಮೆಹ್ರೋತ್ರಾ ಅವರು “ತೃತೀಯ ಲಿಂಗಿ ಕಾಯಿದೆ ಜಾರಿಗೆ ಬಂದ ಮೇಲೆ ಜನನ ಮತ್ತು ಮರಣ ಕಾಯಿದೆ 1969ರಲ್ಲಿ ಬದಲಾವಣೆಯಾಗಬೇಕಿತ್ತು. ಆದರೆ, ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ತೃತೀಯ ಲಿಂಗಿ ಕಾಯಿದೆಯಲ್ಲಿ ತೃತೀಯ ಲಿಂಗಿಗಳಿಗೆ ಕಲ್ಪಿಸಲಾಗಿರುವ ಹಕ್ಕುಗಳನ್ನು ಜನನ ಮತ್ತು ಮರಣ ಕಾಯಿದೆ ಒಳಗೊಂಡಿಲ್ಲ. ಈ ಕಾರಣಕ್ಕೆ, ನ್ಯಾಯಾಲಯ ಅರ್ಜಿದಾರೆಯ ನೆರವಿಗೆ ಧಾವಿಸಬೇಕು” ಎಂದು ಮನವಿ ಮಾಡಿದ್ದರು.
ಹೆಚ್ಚುವರಿ ಸರ್ಕಾರಿ ವಕೀಲ ಮಹಾಂತೇಶ್ ಶೆಟ್ಟರ್ ಅವರು “ಅರ್ಜಿದಾರರ ಕೋರಿಕೆಗೆ ಜನನ ಮತ್ತು ಮರಣ ಕಾಯಿದೆಯಲ್ಲಿ ಅವಕಾಶವಿಲ್ಲ. ದೋಷಗಳಿದ್ದರೆ ಸರಿಪಡಿಸಬಹುದು” ಎಂದಿದ್ದರು.
ಹಾಲಿ ಪ್ರಕರಣದಲ್ಲಿ ಅರ್ಜಿದಾರರು ತೃತೀಯ ಲಿಂಗಿಯಲ್ಲಿ ಮಹಿಳೆಯಾಗಿದ್ದಾರೆ. ಲಿಂಗ ಪರಿವರ್ತನೆ ವಿಧಾನದ ಬಳಿಕ ಪುರುಷನಾಗಿದ್ದ ವ್ಯಕ್ತಿ ಮಹಿಳೆಯಾಗಿ ಬದಲಾಗಿದ್ದಾರೆ. 06.04.1983ರಂದು ಪುರುಷನಾಗಿ ಜನ್ಮಿಸಿದ್ದ ಅರ್ಜಿದಾರರ ಜನನ ನೋಂದಣಿಯು 20.04.1983ರಂದಾಗಿತ್ತು. 16.07.2007ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮನೋವಿಜ್ಞಾನಿ ತಪಾಸಣೆಯ ಸಂದರ್ಭದಲ್ಲಿ ಪುರುಷನ ದೇಹದಲ್ಲಿ ಮಹಿಳೆ ಭಾವನೆ ವ್ಯಕ್ತವಾಗಿದ್ದು, ಲಿಂಗತ್ವ ಇರುಸುಮುರುಸಿನಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಸಂಬಂಧಿತ ವೈದ್ಯರು ಮತ್ತು ಪ್ರಾಧಿಕಾರವು ಮರು ಮೌಲ್ಯಮಾಪನ ನಡೆಸಿದ ಬಳಿಕ ಅರ್ಜಿದಾರರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಆಕೆ ಹೆಸರು ಬದಲಿಸಿಕೊಂಡಿದ್ದು, ಆಧಾರ್, ಚಾಲನಾ ಪರವಾನಗಿ ಮತ್ತು ಪಾಸ್‌ಪೋರ್ಟ್ ಇತ್ಯಾದಿ ದಾಖಲೆಗಳಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರೆಯು ಮಂಗಳೂರು ನಗರ ಪಾಲಿಕೆಯ ಜನನ ಮತ್ತು ಮರಣ ಸರ್ಟಿಫಿಕೇಟ್ ನೀಡುವ ರಿಜಿಸ್ಟ್ರಾರ್/ ಆರೋಗ್ಯಾಧಿಕಾರಿಗೆ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆ ಮಾಡುವಂತೆ ಕೋರಿದ್ದರು. ಆಗ ಆರೋಗ್ಯಾಧಿಕಾರಿಯು ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷನ್ 15ರ ಅಡಿ ಈಗಾಗಲೇ ನೀಡಿರುವ ಸರ್ಟಿಫಿಕೇಟ್‌ನಲ್ಲಿ ದೋಷಗಳಿದ್ದರೆ ಸರಿಪಡಿಸಬಹುದೇ ವಿನಾ ಅರ್ಜಿದಾರರು ಕೋರುವ ಬದಲಾವಣೆ ಮಾಡಲಾಗದು ಎಂದು ಹೇಳಿದ್ದರು. ಹೀಗಾಗಿ, ಅರ್ಜಿದಾರೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ನೋಡಿ : ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆಕ್ಷೇಪಾರ್ಹ ಪದಬಳಸಿದ ಸಿಟಿ ರವಿ Janashakthi Media