ರಾಯಚೂರು: ಹಕ್ಕಿ ಜ್ವರದ ಭೀತಿಯಿಂದ ರಾಯಚೂರಿನಲ್ಲಿ ಬಹುತೇಕ ಜನ ಈಗಾಗಲೇ ಚಿಕನ್ ತಿನ್ನೋದನ್ನ ಬಿಟ್ಟಿದ್ದಾರೆ. ಇದರ ಪರಿಣಾಮ ಮೀನು ಮಾರಾಟ ಜೋರಾಗಿದೆ. ಭಾನುವಾರ ಮಾತ್ರವಲ್ಲದೇ ಪ್ರತೀ ದಿನ ಮೀನಿನ ಅಂಗಡಿಗಳಲ್ಲಿ ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಚಿಕನ್ ಮಾರಾಟಗಾರರಿಗೆ ನಷ್ಟವನ್ನ ತಂದುಕೊಟ್ಟರೆ ಮೀನು ಮಾರಾಟಗಾರರಿಗೆ ಲಾಭ ತಂದುಕೊಡುತ್ತಿದೆ. ಜಿಲ್ಲೆಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಾಣಿಸಿಕೊಳ್ಳದಿದ್ದರೂ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ.ಅಲ್ಲದೆ ಆಂಧ್ರಪ್ರದೇಶ ,ತೆಲಂಗಾಣ ಗಡಿಯಿರುವುದರಿಂದ ಬಿಸಿಲನಾಡಿನ ಜನ ಸದ್ಯ ಚಿಕನ್ ಸಹವಾಸವೇ ಬೇಡ ಅಂತ ಬಹುತೇಕರು ಚಿಕನ್ ತಿನ್ನುವುದನ್ನೇ ಬಿಟ್ಟಿದ್ದಾರೆ. ಚಿಕನ್ ಬದಲಾಗಿ ಕೆಲವರು ಮಟನ್ ಕಡೆ ವಾಲಿದರೆ, ಬಹಳಷ್ಟು ಜನ ಮೀನಿನ ಊಟಕ್ಕೆ ಮನಸೋತಿದ್ದಾರೆ. ಮೀನು ಅಂಗಡಿಗಳಲ್ಲಿ ಪ್ರತಿ ನಿತ್ಯ ಭರ್ಜರಿ ವ್ಯಾಪಾರ ನಡೆಯುತ್ತಿದೆ.ಕೃಷ್ಣಾನದಿ ಹಾಗೂ ಸಮುದ್ರಗಳಿಂದ ಬರುವ ಮೀನುಗಳಿಗೆ ಭರ್ಜರಿ ಬೇಡಿಕೆಯಿದೆ.
ಇದನ್ನು ಓದಿ :-ಸರ್ಕಾರ ಭ್ರಷ್ಟ ಕೆಪಿಎಸ್ಸಿ ಜೊತೆ ಶಾಮೀಲಾಗಿದೆಯೇ? ಟಿ.ಎ.ನಾರಾಯಣ ಗೌಡ ಪ್ರಶ್ನೆ
ಹಕ್ಕಿಜ್ವರ ಭೀತಿಯಿಂದ ಚಿಕನ್ ಬಿಟ್ಟ ಜನ ಮಟನ್ ಕಡೆ ವಾಲಿದ್ದರೂ ಮಟನ್ ಬೆಲೆ ದುಬಾರಿಯಿರುವುದರಿಂದ ಮೀನುಗಳನ್ನ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಸದ್ಯ ಮೀನಿನ ಬೆಲೆಯಲ್ಲಿ ಅಂತಹ ಏರಿಕೆ ಇಲ್ಲದಿರುವುದರಿಂದ ವ್ಯಾಪಾರ ಜೋರಾಗಿದೆ. ರಾಯಚೂರಿನಲ್ಲಿ ತಿಲಾಪಿ,
ರಹು,ಕಟ್ಲಾ, ಫಂಕಸ್, ಮರಿನ್ ಸೇರಿ ವಿವಿಧ ಜಾತಿ ಮೀನುಗಳು ಮಾರಾಟವಾಗುತ್ತಿದ್ದು ಕೆ.ಜಿ.ಗೆ 100 ರಿಂದ 150 ರೂಪಾಯಿವರೆಗೆ ವ್ಯಾಪಾರಿಗಳು ಮಾರುತ್ತಿದ್ದಾರೆ. ಮೀನು ವ್ಯಾಪಾರ ಜೋರಾಗಿರುವುದರಿಂದ ಮೀನು ವ್ಯಾಪಾರಿಗಳು ಖುಷಿಯಾಗಿದ್ದಾರೆ.
ಹಕ್ಕಿಜ್ವರದ ಆತಂಕಕ್ಕೆ ಜನ ಚಿಕನ್ ನಿಂದ ದೂರವಾಗಿರುವುದರಿಂದ ನದಿ ಹಾಗೂ ಸಮುದ್ರ ಮೀನುಗಳು ಮೊದಲಿಗಿಂತ ಈಗ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಚಿಕನ್ ಪ್ರೀಯರು ಸಹ ಈಗ ಚಿಕನ್ ಸಹವಾಸ ಬೇಡ ಅಂತ ಮೀನು ಖರೀದಿಸುತ್ತಿದ್ದಾರೆ.