ಬೆಂಗಳೂರು: ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ‘ಬಯೋಕಾನ್ ಹೆಬ್ಬಗೋಡಿ’ ಎಂದು ಹೆಸರಿಡುವ ಪ್ರಸ್ತಾಪದ ಕುರಿತು ಸ್ಥಳೀಯರ ವಿರೋಧದ ನಡುವೆಯು, ನಿಲ್ದಾಣದ ಜೊತೆಗಿರುವ ‘ಬಯೋಕಾನ್’ ಎಂಬ ಹೆಸರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಂಗಳವಾರ ಹೇಳಿದೆ. ಪ್ರಸ್ತಾವಿತ ‘ಬಯೋಕಾನ್ ಹೆಬ್ಬಗೋಡಿ’ ಎಂಬ ಹೆಸರು ಸ್ಥಳೀಯ ಜನರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2020 ರಲ್ಲಿ ಬಯೋಕಾನ್ ಮತ್ತು ಸಿಂಜೆನ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪೆನಿಗಳು BMRCL ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿ, ಹೊಸೂರು ರಸ್ತೆಯ ಹೆಬ್ಬಗೋಡಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ 65 ಕೋಟಿ ಕೊಡುಗೆ ನೀಡಲು ಒಪ್ಪಿಕೊಂಡಿದ್ದವು. ಅಲ್ಲದೆ, ಮೆಟ್ರೋ ಯೋಜನೆಗಾಗಿ 30 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಸಹ ಬಯೋಕಾನ್ ಒದಗಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಸಾರಿಗೆ ಕಚೇರಿಯೊಳಗೆ 40 ಉದ್ಯೋಗಿಗಳು ಇದ್ದಾಗಲೇ ಬೀಗ ಜಡಿದ ನಗರ ಸಭೆ!
ವಿವಾದದ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿರುವ BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, “ಬಿಎಂಆರ್‌ಸಿಎಲ್‌ನ ನೀತಿಯ ಭಾಗವಾಗಿ, ಮೆಟ್ರೋ ಯೋಜನೆಯ ಕಾಮಗಾರಿಗಳನ್ನು ಹೆಚ್ಚಿಸಲು ನಾವು ಸಾಧ್ಯವಿರುವಲ್ಲೆಲ್ಲಾ ಖಾಸಗಿ ಮಧ್ಯಸ್ಥಗಾರರೊಂದಿಗೆ ಸಹಕರಿಸುತ್ತೇವೆ. ಈ ಕಂಪನಿಗಳು BMRCL ನೊಂದಿಗೆ ಪಾಲುದಾರಿಕೆ ಮಾಡಲು ಮತ್ತು ಯೋಜನೆಗೆ ಹಣವನ್ನು ಕ್ರೋಢೀಕರಿಸಲು ಮುಂದೆ ಬರಲು ಬಯಸಿದರೆ, ಅದನ್ನು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.
“ಅವರ ಸಹಕಾರಕ್ಕೆ ಪ್ರತಿಯಾಗಿ, ಸ್ಥಳೀಯ ಹೆಸರನ್ನು ಉಳಿಸಿಕೊಂಡು ಕಂಪನಿಯ ಹೆಸರನ್ನು ಅದಕ್ಕೆ ಜೋಡಿಸುವ ಮೂಲಕ ಅವರ ಸಹಯೋಗವನ್ನು ನಾವು ಗೌರವಿಸುತ್ತೇವೆ. ಅಲ್ಲದೆ, ಮೆಟ್ರೋ ನಿಲ್ದಾಣಗಳಿಗೆ ತಮ್ಮ ಕೆಲಸದ ಸ್ಥಳದಿಂದ ಪ್ರತ್ಯೇಕ ಪ್ರವೇಶ ದ್ವಾರವನ್ನೂ ಸಹ ಒದಗಿಸುತ್ತೇವೆ. ನಾವು ಮೆಟ್ರೋ ನಿಲ್ದಾಣದಿಂದ ಬಯೋಕಾನ್ ಹೆಸರನ್ನು ತೆಗೆದುಹಾಕುವುದಿಲ್ಲ. ದೇಶದ ಎಲ್ಲಾ ಮೆಟ್ರೋ ಯೋಜನೆಗಳಲ್ಲಿ ಇದು ಪ್ರಮಾಣಿತ ಮಾದರಿಯಾಗಿದೆ” ಎಂದು BMRCL ಹೇಳಿದೆ.
ಇದನ್ನೂ ಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂಕೋರ್ಟ್!
“ಈ ವಿಚಾರದಲ್ಲಿ ಬಯೋಕಾನ್‌ಗೆ ಯಾವುದೇ ವಿಶೇಷ ಆಸಕ್ತಿ ತೋರಿಸುತ್ತಿಲ್ಲ. ಇನ್ಫೋಸಿಸ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ಕೂಡ ಮುಂದೆ ಈ ಬಗ್ಗೆ ಮುಂದೆ ಬಂದಿವೆ. ಹೊರ ವರ್ತುಲ ರಸ್ತೆಯಲ್ಲಿ ಮುಂಬರುವ ಮೆಟ್ರೋ ಯೋಜನೆಗಳಲ್ಲಿ ಹೆಚ್ಚಿನ ಖಾಸಗಿ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂತಿಮವಾಗಿ, ಇಂತಹ ಬೆಳವಣಿಗೆಗಳ ಫಲಾನುಭವಿಗಳು ಬೆಂಗಳೂರಿನ ಜನರೇ ಆಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ (ರೀಚ್ 5) ವರೆಗಿನ 18.82 ಕಿ.ಮೀ ಹೊಸ ಮೆಟ್ರೋ ಮಾರ್ಗದಲ್ಲಿ ಬರುವ ಹೆಬ್ಬಗೋಡಿ ಮೆಟ್ರೋ ನಿಲ್ದಾಣವು 5,744 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಎರಡನೇ ಹಂತದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಯೋಜನೆಯಾಗಿದೆ. ಈ ಮೆಟ್ರೋ ವಿಸ್ತರಣೆಯು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಟಿ ಹಬ್‌ಗೆ ಸಂಪರ್ಕವನ್ನು ಹೆಚ್ಚಿಸಲು ಮತ್ತು ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ವಿಡಿಯೊ ನೋಡಿ: ಹೆಂಚುಗಳು ನಿರ್ಮಾಣವಾಗುವುದು ಹೇಗೆ? ಅದರ ಹಿಂದಿರುವ ಕಾರ್ಮಿಕರ ಶ್ರಮ ಎಂತದ್ದು? ಈ ವಿಡಿಯೋ ನೋಡಿ Janashakthi Media