ನವದೆಹಲಿ : ದೇಶದಲ್ಲಿ ಮತ್ತೆರಡು ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಮುಂಬರುವ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ 2021 ಅನ್ನು ಮಂಡಿಸಲಿದೆ.
ಇದೇ 29ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಮಂಡಿಸಲು ನಿರ್ಧರಿಸಲಾಗಿರುವ 26 ಮಸೂದೆಗಳ ಪೈಕಿ ಇದೂ ಒಂದು ಎಂದು ಹೇಳಲಾಗಿದೆ. ಹಲವು ಪ್ರಮುಖ ಮಸೂದೆಗಳು ಚರ್ಚೆಗೆ ಬರುವ ಹಿನ್ನೆಲೆಯಲ್ಲಿ ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ಲಕ್ಷಣ ಗೋಚರಿಸಿದೆ.
ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು
–ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮಸೂದೆ 2021
-ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021
-ಮಾದಕ ವಸ್ತುಗಳು ತಡೆ (ತಿದ್ದುಪಡಿ) ಮಸೂದೆ 2021
-ಕೇಂದ್ರೀಯ ಜಾಗೃತ ದಳ ಆಯೋಗ (ತಿದ್ದುಪಡಿ) ಮಸೂದೆ 2021
-ದೆಹಲಿ ವಿಶೇಷ ಪೊಲೀಸ್ ಕಾಯ್ದೆ (ತಿದ್ದುಪಡಿ) ಮಸೂದೆ 2021
-ಬ್ಯಾಂಕಿಂಗ್ ಕಾಯ್ದೆಗಳು (ತಿದ್ದುಪಡಿ) ಮಸೂದೆ 2021
2021-22ರ ಬಜೆಟ್ ಮಂಡನೆ ವೇಳೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರಕಾರದ ಬಂಡವಾಳ ಹಿಂಪಡೆಯುವಿಕೆ ಅಭಿಯಾನದ ಭಾಗವಾಗಿ 2 ಸರಕಾರಿ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಿಸಿದ್ದರು. ಅದರಂತೆ, ಖಾಸಗೀಕರಣ ಪ್ರಕ್ರಿಯೆ ಆರಂಭಿಸಲು ಬ್ಯಾಂಕಿಂಗ್ ಕಂಪೆನೀಸ್ ಕಾಯ್ದೆಗಳು 1970 ಮತ್ತು 1980 ಹಾಗೂ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಇದಲ್ಲದೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆಯನ್ನೂ ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಸರಕಾರ ಸಜ್ಜಾಗಿದೆ. ಈ ಮಸೂದೆಯಂತೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ ಅನ್ನು ಪ್ರತ್ಯೇಕವಾಗಿಸುವುದು ಸರಕಾರದ ಉದ್ದೇಶವಾಗಿದೆ.
ಸರಕಾರ ಈಗಾಗಲೇ ಸಾರ್ವಜನಿಕ ವಲಯದ ಸಂಸ್ಥೆಗಳು ಖಾಸಗೀಕರಣ ಮಾಡುತ್ತಿದೆ. ರೈಲ್ವೆ, ವಿಮಾನ, ದೂರ ಸಂಪರ್ಕ, ಬ್ಯಾಂಕ್ ಹೀಗೆ ಸಾಲು ಸಾಲು ಖಾಸಗೀಕರಣ ಪ್ರಕ್ರಿಯಿಗೆ ಮುಂದಾಗುತ್ತಿದೆ. ಇದರಿಂದ ಯುವಜನರು ಇನ್ನಷ್ಟು ನಿರುದ್ಯೋಗಿಗಳಾಗುವ ಸಾಧ್ಯತೆ ಇದೆ. ಇದರಿಂದ ದೇಶಕ್ಕೇನೂ ಹಿತವಾಗುವುದಿಲ್ಲ, ಮೋದಿ ಗೆಳೆಯರಿಗೆ ಮಾತ್ರ ಲಾಭವಾಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.