ನವದೆಹಲಿ : ಸಾಮೂಹಿಕ ಅತ್ಯಾಚಾರ ಎಸಗಿದ ತಪ್ಪಿತಸ್ಥರಿಗೆ ಕ್ಷಮಾದಾನವನ್ನು ನೀಡುವಾಗ ಸರಕಾರ ಸರಿಯಾಗಿ ಯೋಚನೆ ಮಾಡಿದೆಯೇ ಎಂಬುದೇ ಪ್ರಶ್ನೆ, ಅದು ಯಾವ ಸಂಗತಿಗಳ ಆಧಾರದಲ್ಲಿ ಈ ನಿರ್ಧಾರ ಕೈಗೊಂಡಿತು?- ಇದು 2002ರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರ ಕಗ್ಗೊಲೆಯ ಪ್ರಕರಣದಲ್ಲಿ ಶಿಕ್ಷೆಗೊಳಗಾದವರಿಗೆ ಕ್ಷಮಾದಾನ ನೀಡಿದ್ದನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ನ್ಯಾಯಪೀಠ ಕೇಳಿದ ಪ್ರಶ್ನೆ.
“ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಮತ್ತು ಹಲವಾರು ಜನರನ್ನು ಕೊಂದರು. ನೀವು ಈ ಪ್ರಕರಣವನ್ನು ಸಾಮಾನ್ಯ ಸೆಕ್ಷನ್ 302 (ಕೊಲೆ) ಪ್ರಕರಣಗಳೊಂದಿಗೆ ಹೋಲಿಸಲಾಗುವುದಿಲ್ಲ. ಸೇಬನ್ನು ಕಿತ್ತಳೆ ಹಣ್ಣಿನೊಂದಿಗೆ ಹೋಲಿಸಲಾಗುವುದಿಲ್ಲ, ಅದೇ ರೀತಿಯಲ್ಲಿ ಹತ್ಯಾಕಾಂಡವನ್ನು ಒಂದು ಕೊಲೆಯೊಂದಿಗೆ ಹೋಲಿಸಲಾಗುವುದಿಲ್ಲ. ಅಪರಾಧಗಳನ್ನು ಸಾಮಾನ್ಯವಾಗಿ ಸಮಾಜ ಮತ್ತು ಸಮುದಾಯದ ವಿರುದ್ಧ ಎಸಗಲಾಗುತ್ತದೆ. ಅಸಮಾನವಾದುದನ್ನು ಸಮಾನವಾಗಿ ಪರಿಗಣಿಸಲಾಗುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ಪೀಠವು ಟಿಪ್ಪಣಿ ಮಾಡಿತು ಎಂದು ವರದಿಯಾಗಿದೆ.
ಈ ಮೊದಲು ಮಾರ್ಚ್ 27ರಂದು ವಿಚಾರಣೆಯಲ್ಲಿ ನ್ಯಾಯಪೀಠ ಈ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಕುರಿತು ಮೂಲ ಕಡತಗಳೊಂದಿಗೆ ಸಿದ್ಧರಾಗಿರಬೇಕು ಎಂದು ಕೇಂದ್ರ ಸರಕಾರ ಮತ್ತು ಗುಜರಾತ್ ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಾವುಗಳು ಮನವಿ ಸಲ್ಲಿಸಬಹುದು ಎಂದು ಕೇಂದ್ರ ಮತ್ತು ಗುಜರಾತ್ ಸರ್ಕಾರ ಪ್ರಸಕ್ತ ವಿಚಾರಣೆಯ ವೇಳೆಯಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.
ಇದನ್ನೂ ಓದಿ : ಬಿಲ್ಕಿಸ್ ಬಾನೊ ಪ್ರಕರಣ: ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಪರಿಗಣನೆ
ಇತರ ಕೊಲೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ಷಮಾದಾನ ನೀಡಲು ಅನುಸರಿಸುವ ಮಾನದಂಡಗಳನ್ನು ಅನ್ವಯಿಸಲಾಗಿತ್ತೇ ಎಂದು ಹಿಂದಿನ ವಿಚಾರಣೆಯ ವೇಳೆಯಲ್ಲಿ ಕೇಳಿದ್ದ ನ್ಯಾಯಪೀಠ ಈ ವಿಚಾರಣೆಯ ವೇಳೆಯಲ್ಲಿ ಇಡೀ ಸಮಾಜವನ್ನೇ ತಟ್ಟುವ ಹೀನ ಅಪರಾಧಗಳಲ್ಲಿ ಕ್ಷಮಾದಾನವನ್ನು ಪರಿಗಣಿಸುವಾಗ ಅಧಿಕಾರವನ್ನು ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಚಲಾಯಿಸಬೇಕು, ಅಪರಾಧದ ಗಂಭೀರತೆಯನ್ನು ಪರಿಗಣಿಸಬೇಕಾಗಿತ್ತು ಎಂದೂ ಟಿಪ್ಪಣಿ ಮಾಡಿತು. ಈ ವ್ಯಕ್ತಿಗಳು 15 ವರ್ಷ ಜೈಲಿನಲ್ಲಿದ್ದರು ಎಂದು ಅವರ ಪರವಾಗಿ ವಕಾಲತ್ತು ವಹಿಸಿದವರು ಹೇಳಿದಾಗ “ಅವರು 15 ವರ್ಷ ಜೈಲಿನಲ್ಲಿದ್ದರೇ? 1000ದಿನಗಳಿಗೂ ಹೆಚ್ಚು ಪೆರೋಲ್” ಎನ್ನುತ್ತ ಈ 11 ಅಪರಾಧಿಗಳಿಗೆ ಅವರ ಸೆರೆವಾಸದ ಅವಧಿಯಲ್ಲಿ ನೀಡಲಾದ ಪೆರೋಲ್‌ಗಳನ್ನು ಕೂಡ ನ್ಯಾಯಪೀಠ ಪ್ರಶ್ನಿಸಿತು ಎಂದು ವರದಿಯಾಗಿದೆ.
ಈ ಕ್ಷಮಾದಾನವನ್ನು ಪ್ರಶ್ನಿಸುವ ಅರ್ಜಿಗಳ ಅಂತಿಮ ವಿಲೇವಾರಿಗಾಗಿ ಮೇ 2 ನ್ನು ನಿಗದಿ ಮಾಡಿದ ಪೀಠವು ಎಲ್ಲಾ ಅಪರಾಧಿಗಳು ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಕೇಳಿದೆ. ಹಾಗೂ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಅದು ಹೇಳಿದೆ.