ನವ ದೆಹಲಿ: ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳ ಬಿಡುಗಡೆ ಆಘಾತಕಾರಿ ಸುದ್ದಿಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಸುಭಾಷಿಣಿ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ಕೆಂಪು ಕೋಟೆಯಿಂದ ಮಹಿಳೆಯರಿಗೆ ಗೌರವ ನೀಡಬೇಕು ಎಂದು ನಮ್ಮ ಪ್ರಧಾನಿ ನಿನ್ನೆ ಕರೆ ನೀಡಿದ್ದರು. ಬಿಲ್ಕಿಸ್ ಬಾನೊ ಪ್ರಕರಣವು ಅಂತಹ ಒಂದು ಪ್ರಕರಣವಾಗಿದ್ದು, ಇದರಲ್ಲಿ ಎಲ್ಲಾ ಸಾಕ್ಷ್ಯಗಳಿವೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು ಎಂದು ಅವರು ಎನ್‌ಡಿಟಿವಿಯೊಂದಿಗೆ ಮಾತನಾಡುತ್ತ ನೆನಪಿಸಿದ್ದಾರೆ. ನಿಜ. ಗುಜರಾತಿನಲ್ಲಿ ಇರುವ ಕಾನೂನಿನ ಪ್ರಕಾರ ಯಾರಿಗಾದರೂ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಅಂತವರಿಂದ ಕ್ಷಮಾದಾನಕ್ಕೆ ಅರ್ಜಿ ಬಂದಿದ್ದರೆ 14 ವರ್ಷಗಳ ನಂತರ ಅವರನ್ನು ಬಿಡುಗಡೆ ಮಾಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಗುಜರಾತ್ ಸರ್ಕಾರ ವಿವೇಚನೆ ಬಳಸಿ ಅವರನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ಸರ್ಕಾರ ತನ್ನ ವಿವೇಚನೆಯನ್ನು ಹೇಗೆ ಬಳಸಿಕೊಂಡಿದೆ? ಯಾವ ವಿವೇಚನೆಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಅಪರಾಧಿಗಳಲ್ಲಿ ಒಬ್ಬರು ಕ್ಷಮಾದಾನ ಕೋರಿ ಗುಜರಾತ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದು ಅವರ ಅರ್ಜಿಯನ್ನು ವಜಾ ಮಾಡುತ್ತ ಕ್ಷಮಾದಾನದ ಅರ್ಜಿಯನ್ನು ಪರಿಶೀಲಿಸಬೇಕಾಗಿರುವುದು ಮಹಾರಾಷ್ಟ್ರದ ಸರಕಾರವೇ ಹೊರತು ಗುಜರಾತ್ ಸರಕಾರವಲ್ಲ ಎಂದಿತ್ತು (ಈ ಪ್ರಕರಣದಲ್ಲಿ ಸಾಕ್ಷಿಗಳನ್ನು ಬೆದರಿಸುವ ಮತ್ತು ಸಾಕ್ಷ್ಯ ನಾಶದ ದೂರುಗಳು ಬಂದಾಗ ವಿಚಾರಣೆಯನ್ನು ಅಹಮದಾಬಾದಿನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ಅರ್ಜಿದಾರರು ಸುಪ್ರಿಂ ಕೋರ್ಟ್ ಮೊರೆ ಹೋದರು, ಅದು ಗುಜರಾತೇ ಸರಿಯಾದ ರಾಜ್ಯ ಎಂದ ಮೇಲೆ ಕ್ಷಮಾದಾನವನ್ನು ಪರಿಶೀಲಿಸಲು ಒಂದು ಸಮಿತಿಯನ್ನು ನೇಮಿಸಲಾಯಿತು, ಅದು ಆ ಒಬ್ಬ ಅರ್ಜಿದಾರರು ಮಾತ್ರವಲ್ಲದೆ, ಎಲ್ಲ 11 ಅಪರಾಧಿಗಳ ವಯಸ್ಸು, ಜೈಲಿನಲ್ಲಿ ವರ್ತನೆ, ಅಪರಾಧದ ಸ್ವರೂಪ(!) ಇತ್ಯಾದಿಗಳನ್ನು ಗಮನಿಸಿ, ಅವರು 14 ವರ್ಷಗಳ ಶಿಕ್ಷೆ ಅನುಭವಿಸಿರುವುದರಿಂದಾಗಿ ಅವರೆಲ್ಲರನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿತು ಎಂದು ಗುಜರಾತ್ ಸರಕಾರದ ಅಡಿಷನಲ್ ಮುಖ್ಯ ಕಾರ್ಯದರ್ಶಿಗಳ ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ.
ಸುಭಾಷಿಣಿ ಅಲಿ ಗುಜರಾತ್ ಸರಕಾರದ ಈ ನಿರ್ಧಾರದ ಬಗ್ಗೆ ಟಿಪ್ಪಣಿ ಮಾಡುತ್ತ,ಇಲ್ಲಿ ಮೂರು ವಿಷಯಗಳಿವೆ ಎಂದು ಹೇಳಿದರು. ಸರ್ಕಾರದ ಬೆಂಬಲಿಗರಾಗಿದ್ದರೆ, ಅವರು ಅತ್ಯಾಚಾರವೆಸಗಿದರೂ, ಕೊಂದು ಹಾಕಿದರೂ ಅವರನ್ನು ಬಿಟ್ಟು ಬಿಡಲಾಗುತ್ತದೆ, ಸಾಕಷ್ಟು ರಿಯಾಯಿತಿ ನೀಡಲಾಗುತ್ತದೆ ಎಂಬ ಸಂದೇಶವು ಖಂಡಿತವಾಗಿಯೂ ಹೋಗುತ್ತದೆ; ಇದು ತುಂಬಾ ಅಪಾಯಕಾರಿ,ಅದೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಸಮಾಜದಲ್ಲಿ. ಎರಡನೆಯದಾಗಿ, ಪ್ರಧಾನಿಯವರು ಒಂದು ಮಾತು ಹೇಳುತ್ತಾರೆ, ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ ಎಂಬ ಸಂದೇಶ ರವಾನೆಯಾಗುತ್ತಿದೆ. ಇದರಿಂದಾಗಿ ಜನ ಪ್ರಧಾನಿಗಳ ಹೇಳಿಕೆಗಳ ಬಗ್ಗೆ ಏನೆಂದು ಯೋಚಿಸುತ್ತಾರೆ? ಮೂರನೆಯ ವಿಷಯವೆಂದರೆ ಈ ಎಲ್ಲಾ ಅಪರಾಧಿಗಳು ಬಿಲ್ಕಿಸ್ ಬಾನೊ ತನ್ನ ಪತಿಯೊಂದಿಗೆ ವಾಸಿಸುವ ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಆಕೆಗೆ ನಿನ್ನೆಯಿಂದ ಕರೆಗಳು ಬರುತ್ತಿವೆ, ಆಕೆ ಸಂಪೂರ್ಣವಾಗಿ ಅಸುರಕ್ಷಿತಳಾಗಿದ್ದಾಳೆ. ಅವರ ಸುರಕ್ಷತೆಯ ಬಗ್ಗೆ ಗುಜರಾತ್ ಸರ್ಕಾರ ಏನಾದರೂ ಯೋಚಿಸಿದೆಯೇ?
ದೇಶದಲ್ಲಿ ಮಹಿಳೆಯರ ಭದ್ರತೆಯನ್ನು ಬಯಸುವವರು, ಚಳವಳಿಗಳೊಂದಿಗೆ ಇರುವವರು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಬಯಸುತ್ತಾರೆ. ಗುಜರಾತ್‌ನಲ್ಲಿ ನಡೆದಿರುವುದು ಅಪರಾಧಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಅತ್ಯಂತ ಆಕ್ಷೇಪಾರ್ಹ ವಿಷಯವೆಂದರೆ ಅವರು ಜೈಲಿನಿಂದ ಹೊರಗೆ ಬಂದಾಗ ಅವರನ್ನು ಸ್ವಾಗತಿಸಲಾಗಿದೆ,. ಅವರಿಗೆ ಸಿಹಿ ತಿನ್ನಿಸಲಾಗಿದೆ. ಆಗಸ್ಟ್ 15 ರಂದು ನಾವು ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ರೀತಿಯಲ್ಲಿ ಈ ಕ್ರಿಮಿನಲ್ ಅಪರಾಧಿಗಳನ್ನು ಅವರ ಸಮರ್ಥಕರು, ಬೆಂಬಲಿಗರು ಅವರನ್ನು ಸ್ವಾಗತಿಸುತ್ತಿದ್ದಾರೆ ಎಂದು ಸುಭಾಷಿಣಿ ಅಲಿ ಖೇದ ವ್ಯಕ್ತಪಡಿಸಿದರು.
ಅತ್ಯಾಚಾರಿಗಳಿಗೆ ಕೊಲೆಗಡುಕರಿಗೆ ಬಿಡುಗಡೆ, ನ್ಯಾಯಕ್ಕಾಗಿ ಹೋರಾಡುವವರಿಗೆ ಜೈಲುವಾಸ!
ಗರ್ಭಿಣಿ ಯುವತಿಯ ಕೈಗಳಿಂದ ಆಕೆಯ ಮೂರು ವರ್ಷದ ಮಗುವನ್ನು ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿ ಕೊಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಪಿಐ(ಎಂ) ನ ಗುಜರಾತ್ ಮುಖಂಡರೂ ಬಲವಾಗಿ ಖಂಡಿಸಿದ್ದಾರೆ. ಇದು ಮೋದಿಯವರ ನವಭಾರತದ ನಿಜವಾದ ಮುಖ, ಶಿಕ್ಷೆಗೊಳಗಾಗಿರುವ ಅತ್ಯಾಚಾರಿಗಳನ್ನು, ಕೊಲೆಗಡುಕರನ್ನು ಬಿಡುಗಡೆ ಮಾಢಲಾಗಿದೆ, ಗಲಭೆ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಹೋರಾಡುತ್ತಿರುವ ತೀಸ್ತಾ ಸೆಟಲ್ವಾಡ್‍ರನ್ನು ಜೈಲಿಗಟ್ಟಲಾಗಿದೆ ಎಂದು ಅವರು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ಅತ್ತ ಕೆಂಪು ಕೋಟೆಯಲ್ಲಿ ಪ್ರಧಾನ ಮಂತ್ತಿಗಳು “ಒಂದಿಲ್ಲೊಂದು ಕಾರಣದಿಂದ ನಮ್ಮೊಳಗೆ ಒಂದು ಎಂತಹ ವಿಕೃತಿ ಬಂದಿದೆಯೆಂದರೆ, ನಮ್ಮ ನಡೆ-ನುಡಿಗಳಲ್ಲಿ, ನಮ್ಮ ಕೆಲವು ಶಬ್ದಗಳಲ್ಲಿ.. ನಾವು ನಾರಿಯರ ಅಪಮಾನ ಮಾಡುತ್ತೇವೆ. ನಾವು ಸ್ವಭಾವದಿಂದ, ಸಂಸ್ಕಾರದಿಂದ, ದೈನಂದಿನ ಜೀವನದಲ್ಲಿ ನಾರಿಯರನ್ನು ಅಪಮಾನಿತರನ್ನಾಗಿ ಮಾಡುವ ಪ್ರತಿಯೊಂದು ಮಾತಿನಿಂದ ಮುಕ್ತಿಯ ಸಂಕಲ್ಪ ಮಾಡಬಲ್ಲೆವೇಯೇ?” ಎಂದು ಉದ್ಗರಿಸುತ್ತಿರುವಾಗಲೇ, ಇತ್ತ ಅವರ ಸ್ವಂತ ರಾಜ್ಯದ ಸ್ವಂತ ಪಕ್ಷದ ಸರಕಾರ 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡುತ್ತಿರುವುದು ಇಡೀ ದೇಶದ ಪ್ರಜಾಪ್ರಭುತ್ವವಾದಿಗಳು ಅಚ್ಚರಿ ಪಡುವಂತೆ ಮಾಡಿದೆ.
ಅತ್ಯಾಚಾರಿಗಳ ಬಿಡುಗಡೆ ಕೇಂದ್ರ ಸರ್ಕಾರದ ಮಾರ್ಗದರ್ಶಕ ನಿಯಮಗಳಿಗೂ ವಿರುದ್ಧ : ಗುಜರಾತ್ ಸರ್ಕಾರದ ನಿರ್ಧಾರವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಈ ವರ್ಷದ ಜೂನ್‌ನಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಶಿಕ್ಷೆಗೊಳಗಾದ ಕೈದಿಗಳ ವಿಶೇಷ ಬಿಡುಗಡೆ ನೀತಿಯ ಪ್ರಸ್ತಾವವನ್ನು ಮುಂದಿಡುತ್ತ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅವುಗಳ ಪ್ರಕಾರ ಅತ್ಯಾಚಾರದ ಅಪರಾಧಿಗಳಿಗೆ ಈ ವಿಶೇಷ ಬಿಡುಗಡೆ ನೀತಿ ಅನ್ವಯವಾಗುವದಿಲ್ಲ, ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಕೇಂದ್ರದ ವಿಶೇಷ ನೀತಿಯ ಪುಟ 4 ರ ಪಾಯಿಂಟ್ ಸಂಖ್ಯೆ 5 ರಲ್ಲಿ ಇದನ್ನು ಸ್ಪಷ್ಟವಾಗಿ ಸ್ಪಷ್ಟಪಡಿಸಲಾಗಿದೆ ಎನ್ನಲಾಗಿದೆ.