ಬಿಲ್ಕಿಸ್‌ ಬಾನೊ ನಿಮ್ಮ ಜೊತೆ ನಾವಿದ್ದೇವೆ; ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: 2002ರಲ್ಲಿ ಗುಜರಾತಿನಲ್ಲಿ ಐದು ತಿಂಗಳ ಬಸುರಿ ಬಿಲ್ಕಿಸ್‌ ಬಾನು, ಎರಡು ದಿನಗಳ ಬಾಣಂತಿ ಆಕೆಯ ತಂಗಿ ಹಾಗೂ ಕುಟುಂಬದವರ ಮೇಲೆ ಭಯಾನಕ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಘಟನೆಯಿಂದಾಗಿ ಇಡೀ ದೇಶದಲ್ಲಿ ತಲ್ಲಣಿಸಿತು.

ಆದರೆ, ಇದೀಗ 11 ಮಂದಿ ಅತ್ಯಾಚಾರಿ ಆರೋಪಿಗಳನ್ನು ಗುಜರಾತ್‌ ಸರ್ಕಾರ ಸನ್ನಡತೆ ಆಧಾರದ ಮೇಲೆ ಅದೂ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದೇ ಬಿಡುಗಡೆ ಮಾಡಿರುವುದು ಇಡೀ ಅತ್ಯಂತ ಹೇಯ ತೀರ್ಮಾನವಾಗಿದೆ.

ಸರ್ಕಾರದ ಈ ತೀರ್ಮಾನವನ್ನು ಖಂಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ಬೆಂಗಳೂರು ಉತ್ತರ-ದಕ್ಷಿಣ ಜಿಲ್ಲಾ ಸಮಿತಿ ಒಳಗೊಂಡು ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಆಕ್ರೋಶ ವ್ಯಕ್ತಪಡಿಸಿದರು.

2002ರಲ್ಲಿ ನಡೆದ ಭೀಕರ ಘಟನೆಯಿಂದಾಗಿ, ಬಿಲ್ಕಿಸ್‌ ಬಾನೊ ಅವರ ಮೂರು ವರ್ಷದ ಮಗುವನ್ನು ಕಲ್ಲಿಗೆ ಅಪ್ಪಳಿಸಿ ಸಾಯಿಸಲಾಗಿತ್ತು. ಅತ್ಯಾಚಾರದ ಭೀಕರ ಆರೋಪ ಸಾಬೀತಾಗಿ 11 ಜನರಿಗೆ ಸಿಬಿಐ ನ್ಯಾಯಾಲಯ ನೀಡಿದ ಜೀವಾವಧಿ ಶಿಕ್ಷೆಯನ್ನು ಬಾಂಬೇ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಹೀಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಜನರನ್ನು ಗುಜರಾತ್‌ ಸರಕಾರ 14 ವರ್ಷಗಳ ಜೈಲು ವಾಸ ಅನುಭವಿಸಿದವರಿಗೆ ಇರುವ ಅವಕಾಶವನ್ನು ಬಳಸಿ ಬಿಡುಗಡೆ ಮಾಡಿರುವುದು ಖಂಡನೀಯ ಎಂದು ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

ಘೋರ ಅನ್ಯಾಯ ಎಸಗಿರುವ ಗುಜರಾತಿನ ಬಿಜೆಪಿ ರಾಜ್ಯ ಸರ್ಕಾರ ಅತ್ಯಾಚಾರ, ಕೊಲೆಯಂಥಹ ಅಪರಾಧಿಗಳಿಗೆ ಅವಧಿ ಪೂರ್ವ ಬಿಡುಗಡೆ ಮಾಡಲು ಅವಕಾಶವಿಲ್ಲವೆಂಬ ಕೇಂದ್ರ ಸರಕಾರದ ಆದೇಶದ ಉಲ್ಲಂಘನೆ ಮಾಡಿ ಬಿಡುಗಡೆ ಮಾಡಿದೆ.

ಬಿಡುಗಡೆಗೊಂಡ ಆರೋಪಿಗಳಿಗೆ, ಮಹಿಳೆಯರಿಂದ ಹಾರ ತುರಾಯಿಗಳ ಸನ್ಮಾನ, ಸಾರ್ವಜನಿಕ ಸ್ವಾಗತ ಆಯೋಜಿಸಲಾಗಿತ್ತು. ದೇಶಧ ಸ್ವಾಭಿಮಾನಿ ಮಹಿಳೆಯರಿಗೆ ಮಾಡಿದ ಅವಮಾನ ಮತ್ತು ಅಕ್ಷಮ್ಯ ಅಪರಾಧವಿದು.

ಭಾರತ ದೇಶದ ಸ್ವಾತಂತ್ರ್ಯ 75ರ ಸಂಭ್ರಮಾಚರಣೆಯ ಅಂಗವಾಗಿ ಆಗಸ್ಟ್‌ 15ರಂದು ಕೆಂಪು ಕೋಟೆಯ ಮೇಲೆ ಬಾವುಟ ಹಾರಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉಚ್ಛ ಕಂಠದಲ್ಲಿ ಮಾತಾಡಿ ಎಲ್ಲ ಭಾರತೀಯರಲ್ಲಿ ನನ್ನದೊಂದು ಮನವಿ, ನಮ್ಮ ದೈನಂದಿನ ಜೀವನದಲ್ಲಿ ಮಹಿಳೆಯರ ಬಗೆಗಿನ ನಮ್ಮ ಧೋರಣೆಯನ್ನು ಬದಲಿಸಿಕೊಳ್ಳೋಣ. ಕನಸಿನ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದು. ಭಾರತದ ಪ್ರಗತಿಗೆ ಮಹಿಳೆಯರ ಕುರಿತ ಗೌರವದ ಭಾವನೆ ಅತ್ಯಗತ್ಯ. ಒಂದು ವ್ಯತಿರಿಕ್ತ ಭಾವನೆ ನಮ್ಮೊಳಗೆ ನುಸುಳಿ, ನಾವು ಕೆಲವೊಮ್ಮೆ ಮಹಿಳೆಯರ ಘನತೆಗೆ ಕುಂದುಂಟಾಗುವಂತೆ ನಡೆದುಕೊಳ್ಳುತ್ತೇವೆ. ಅದರಿಂದ ಹೊರಬರಲು ನಾವು ಪ್ರತಿಜ್ಞೆ ಮಾಡೋಣ” ಎಂದು ಭಾಷಣ ಮಾಡಿದ್ದರು.

ರಾಷ್ಟ್ರ ಧ್ವಜ ಕೈಯಲ್ಲಿ ಹಿಡಿದು ಆಡಿದ ಮಾತಿಗೆ ವಿರುದ್ಧವಾಗಿ ಪ್ರಧಾನ ಮಂತ್ರಿಗಳ ತವರು ರಾಜ್ಯದಲ್ಲಿ ವ್ಯತಿರಿಕ್ತ ಘಟನೆ ಜರುಗಿದೆ. ಇದು ದೇಶದ ಸ್ವಾಭಿಮಾನಿ ಮಹಿಳೆಯರಿಗೆ ಮಾಡಿದ ಘನಘೋರ ಅನ್ಯಾಯವಿದು ಎಂದು ಜನವಾದಿ ಮಹಿಳಾ ಸಂಘಟನೆ ಆರೋಪಿಸಿದೆ.

೨೦೦೨ರ ಫೆಬ್ರುವರಿ ೨೭ ಮತ್ತು ನಂತರ ಗುಜರಾತಿನ ಗೋದ್ರಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಗಳು ಭಾರತದ ನೆಲಕ್ಕಂಟಿದ ಅಳಿಸಲಾರದ ಕಲೆ. ಗುಜರಾತಿನ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅಲ್ಲಿನ ಸರಕಾರವೇ ಪ್ರಾಯೋಜಿಸಿದ ನರಮೇಧದ ವಾಸನೆಯ ಕಮಟು ಇನ್ನೂ ಉಳಿದಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೋಯ್‌ ಮತ್ತು ಇತರ ನ್ಯಾಯಮೂರ್ತಿಗಳು, ನಡೆಯಬಾರದ ಘಟನೆಯೊಂದು ನಡೆದಿದೆ, ಗುಜರಾತ್‌ ಸರಕಾರ ಬಿಲ್ಕಿಸ್‌ ಬಾನೊಗೆ 50 ಲಕ್ಷ ಪರಿಹಾರ, ಒಂದು ಕೆಲಸ ಮತ್ತು ವಾಸಕ್ಕೆ ಮನೆಯನ್ನು ಕೊಡಬೇಕು ಎಂದು ಆದೇಶ ನೀಡಿತ್ತು. ೨೦೦೨ರ ಘಟನೆಯ ನಂತರದ ಪ್ರಥಮ ಪರಿಹಾರವಿದಾಗಿತ್ತು. ಇದಲ್ಲದೆಯೇ  ಜನವರಿ ೨೩ ೨೦೧೪ ರಲ್ಲಿ ಗೃಹ ಮಂತ್ರಾಲಯವು ಖೈದಿಗಳ ಸನ್ನಡತೆಯ ಬಿಡುಗಡೆಗೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನ ಮತ್ತು  ೧೮-೦೭-೨೦೧೮ ರಲ್ಲಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಕೈಗೊಂಡ ತೀರ್ಮಾನದ ಆದೇಶದಂತೆ ʼಮರಣದಂಡನೆ, ಜೀವಾವಧಿ ಮತ್ತು ಮರಣದಂಡನೆ, ಜೀವಾವಧಿ ಶಿಕ್ಷೆಯಾಗಿ ಮಾರ್ಪಾಟಾದ ಖೈದಿಗಳು, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆʼ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತ ಇರುವ ಅಪರಾಧಿಗಳು ಉಪಶಮನ ಬಿಡುಗಡೆಗೆ ಅರ್ಹರಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ಹಾಗಿದ್ದಾಗ್ಯೂ ಗುಜರಾತ್‌ ಸರಕಾರ ಇಂತದ್ದೊಂದು ಅಪರಾಧಕ್ಕೆ ತನ್ನ ಸಹಾನುಭೂತಿಯನ್ನು ಅಪರಾಧ ನಡೆಯುವಾಗಲೂ ಹೊಂದಿತ್ತು, ಈಗ ಅಪರಾಧಿಗಳನ್ನು ರಕ್ಷಿಸಲೂ ಮುಂದಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಪ್ರತಿಭಟಿಸಿದರು.

ನೆಲದ ನ್ಯಾಯ ಧರ್ಮದ ಆಧಾರದಲ್ಲಿ ನೀಡುವುದಲ್ಲ. ಬಹುತ್ವದಲ್ಲಿ ನಂಬಿಕೆ ಇರುವ, ಬಹು ಸಂಸ್ಕೃತಿ, ಬಹು ಧರ್ಮೀಯ, ಬಹು ಜನಾಂಗೀಯ ಕೂಡು ಬಾಳುವೆಯನ್ನು ಕಟ್ಟಿ ಬೆಳೆಸಿದ ನೆಲ. ಇಲ್ಲಿ ದೇಶದ ಸಂವಿಧಾನಕ್ಕೆ ಅನುಗುಣವಾಗಿ ಸರಕಾರಗಳು ನಡೆಯಬೇಕೇ ಹೊರತೂ ಧರ್ಮದ ಅಮಲಿನಲ್ಲಲ್ಲ ಎಂದಿದ್ದಾರೆ.

ಗುಜರಾತ್‌ ಸರಕಾರದ ಈ ಕ್ರಮ ಮತ್ತು ಅದಕ್ಕೆ ಸಮ್ಮತಿಸಿರುವಂತೆ ಮೌನವಾಗಿರುವ ದೇಶದ ಪ್ರಧಾನಮಂತ್ರಿ, ಗೃಹ ಮಂತ್ರಿ ಮತ್ತು ಕೇಂದ್ರ ಸರಕಾರದ ನಡೆಯನ್ನು ಅತ್ಯುಗ್ರವಾಗಿ ಖಂಡಿಸಿದರು.

ತತ್‌ತಕ್ಷಣವೇ 11 ಜನ ಅಪರಾಧಿಗಳಿಗೆ ನೀಡಿದ ಉಪಶಮನ ಬಿಡುಗಡೆಯನ್ನು ರದ್ದುಗೊಳಿಸಿ ಅಪರಾಧಿಗಳು ತಮ್ಮ ಜೀವಿತ ಕಾಲ ಸಂಪೂರ್ಣವಾಗಿ ಜೈಲಿನಲ್ಲಿ ಉಗ್ರ ಶಿಕ್ಷೆಯನ್ನು ಅನುಭವಿಸುವಂತೆ ಕ್ರಮ ವಹಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಆಗ್ರಹಿಸಿದರು.

ದಲಿತ ಬಾಲಕನ ಮೇಲೆ ದೌರ್ಜನ್ಯ- ಅಸ್ಪೃಶ್ಯತೆಯ ಆಚರಣೆಗೆ ಧಿಕ್ಕಾರ

ಹಾಗೆಯೇ ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧವಾಗಿರುವಾಗ ರಾಜಸ್ಥಾನದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕುಡಿಯುವ ನೀರು ಮುಟ್ಟಿದನೆಂದು ಥಳಿಸಿ ಬಾಲಕನನ್ನು ಕೊಂದ ಘಟನೆ ಕೂಡಾ ಅತ್ಯಂತ ಬರ್ಭರ ಘಟನೆಯಾಗಿದೆ. ದಲಿತರು ದಮನಿತರನ್ನು ಶೋಷಿಸುವ ವ್ಯವಸ್ಥೆಯನ್ನು ನಿರ್ಮೂಲನ ಮಾಡದ ಇದು ಅಮೃತಕಾಲವಲ್ಲ. ನಾವು ಇದನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ. ಅಪರಾಧಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *