ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸರ್ವೊಚ್ಚ ನ್ಯಾಯಾಲಯಕ್ಕೆ ಅರ್ಜಿ

ನವದೆಹಲಿ: ಗೋಧ್ರಾ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಪರಾಧಿಗಳಾಗಿರುವ 11 ಮಂದಿಯನ್ನು ಗುಜರಾತ್‌ ಸರ್ಕಾರ ಕ್ಷಮಾಪಣೆ ನೀಡಿ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸರ್ವೊಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿಯ ವಿಚಾರಣೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಪೀಠಕ್ಕೆ ಕೋರಲಾಗಿದೆ. ಈ ಪ್ರಕರಣದಲ್ಲಿ ಗುಜರಾತ್‌ ಸರ್ಕಾರ ಅಪರಾಧಿಗಳಿಗೆ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್ ಅರ್ಜಿ ಸಲ್ಲಿಸಿದ್ದಾರೆ.

ನಾಳೆಯೇ ಅರ್ಜಿಯ ವಿಚಾರಣೆ ನಡೆಸುವಂತೆ ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠಕ್ಕೆ ಕೋರಲಾಗಿದೆ. ಅರ್ಜಿಯನ್ನು ಓದುವುದಾಗಿ ತಿಳಿಸಿದ ಪೀಠ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವ ಕುರಿತಂತೆ ಯಾವುದೇ ಆದೇಶ ನೀಡಲಿಲ್ಲ.

ಬಿಲ್ಕಿಸ್‌ ಬಾನೊ ಅವರ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಲಾಗಿದೆ. ನಾವು ಕ್ಷಮಾಪಣೆ ನೀಡಿದ್ದನ್ನು ಪ್ರಶ್ನಿಸುತ್ತಿದ್ದೇವೆಯೇ ಹೊರತು ಸರ್ವೊಚ್ಚ ನ್ಯಾಯಾಲಯದ ಆದೇಶವನ್ನಲ್ಲ. ನ್ಯಾಯಾಲಯದ ಆದೇಶ ಸರಿಯಾಗಿದೆ. ಆದರೆ, ಯಾವ ತತ್ವಗಳ ಆಧಾರದ ಮೇಲೆ ಕ್ಷಮಾಪಣೆ ನೀಡಲಾಗಿದೆ ಎಂಬುದನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಕಪಿಲ್ ಸಿಬಲ್ ಹೇಳಿದರು. ಕಪಿಲ್‌ ಸಿಬಲ್‌ ಅವರು, ಸಿಪಿಐ(ಎಂ) ನಾಯಕಿ ಸುಭಾಷಿನಿ ಅಲಿ, ಸ್ವತಂತ್ರ ವಿಭಾಗದ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ರೇವತಿ ಲಾಲ್ ಮತ್ತು ಮಾಜಿ ತತ್ವಶಾಸ್ತ್ರ ಪ್ರೊಫೆಸರ್ ಮತ್ತು ಕಾರ್ಯಕರ್ತ ರೂಪ್ ರೇಖ್ ವರ್ಮಾ ಅವರನ್ನು ಪ್ರತಿನಿಧಿಸುತ್ತಿದ್ದಾರೆ.

2002ರ ಸಂದರ್ಭದಲ್ಲಿ ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಹಿಂಸಾಚಾರದ ಅವಧಿಯಲ್ಲಿ ಗುಜರಾತ್‌ನ ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಗುಂಪೊಂದು ಹತ್ಯೆಗೈದ ಹನ್ನೆರಡು ಜನರಲ್ಲಿ ಬಿಲ್ಕಿಸ್‌ ಬಾನೊ ಮೂರು ವರ್ಷದ ಮಗಳು ಸಹ ಸೇರಿದ್ದಳು. ಆಗ ಬಿಲ್ಕಿಸ್ ಬಾನೊಗೆ 21 ವರ್ಷ, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು.

ವಿಚಾರಣೆಯ ಸಂದರ್ಭದಲ್ಲಿ ತಮಗೆ ಆರೋಪಿಗಳಿಂದ ಜೀವ ಬೆದರಿಕೆ ಇದೆ ಎಂದು ಬಿಲ್ಕಿಸ್‌ ಬಾನೊ ದೂರಿದ್ದರಿಂದ ವಿಚಾರಣೆಯನ್ನು ಗುಜರಾತ್‌ನ ಗೋಧ್ರಾದಿಂದ ಮಹಾರಾಷ್ಟ್ರಕ್ಕೆ ಸರ್ವೊಚ್ಚ ನ್ಯಾಯಾಲಯ ವರ್ಗಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಜನವರಿ 2008ರಲ್ಲಿ 13 ಅಪರಾಧಿಗಳಿಗೆ ಶಿಕ್ಷೆ ವಿಧಿಸಿತ್ತು. ಇದರಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ಮುಂದೆ ಮೇ, 2017ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.

ಸಂತ್ರಸ್ತೆ ಬಿಲ್ಕಿಸ್‌ ಬಾನೊಗೆ ರೂ. 50 ಲಕ್ಷ ಪರಿಹಾರ, ವಸತಿ ಹಾಗೂ ಸರ್ಕಾರಿ ಉದ್ಯೋಗ ನೀಡುವಂತೆ ಸರ್ವೊಚ್ಚ ನ್ಯಾಯಾಲಯ  2019ರಲ್ಲಿ ಆದೇಶಿಸಿತ್ತು.

ಅಪರಾಧಿಗಳು 14 ವರ್ಷಗಳಿಂದ ಜೈಲುವಾಸ ಪೂರ್ಣಗೊಳಿಸಿರುವುದು, ವಯಸ್ಸು, ಅಪರಾಧದ ಸ್ವರೂಪ ಮತ್ತು ಅವರ ನಡವಳಿಕೆಯಂತಹ ಇತರೆ ಅಂಶಗಳನ್ನು ಆಧರಿಸಿ ಆಸಗ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದಿನದಂದು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *