ಬಿಬಿಎಂಪಿ ರಸ್ತೆ ಗುಂಡಿ ದುರಂತ: ಭೀಕರ ಅಪಘಾತದಿಂದ ಬೈಕ್‌ ಸವಾರ ಸಾವು

ಬೆಂಗಳೂರು: ರಸ್ತೆ ಗುಂಡಿಗಳಿಂದಾಗಿ ನಗರದ ಜನತೆ ಸಂಕಷ್ಟಗಳನ್ನು ಎದುರಿಸುತ್ತಿದ್ದು, ದುರಂತದ ಮೇಲೆ ದುರಂತ ಸಂಭವಿಸುತ್ತಲೇ ಇದೆ. ಮತ್ತೀಗ ರಸ್ತೆ ಗುಂಡಿಯಿಂದಾಗಿ ಸಂಭವಿಸಿದ ಅಪಘಾತದಿಂದ ಮತ್ತೊಬ್ಬ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ರಸ್ತೆಗಳ ಸಮಪರ್ಕ ನಿರ್ವಹಣೆ ಇಲ್ಲಿದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಮತ್ತು ಇದರಿಂದ ಕೆಲವು ಜೀವಗಳು ಬಲಿಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಕೇರಳ ಮೂಲದ ಅರ್ಷದ್ ಎಂಬ ಯುವಕ ಮರಣ ಹೊಂದಿದ್ದಾರೆ.

ಶನಿವಾರ ರಾತ್ರಿ ನಡೆದ ಘಟನೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಅರ್ಷದ್ ಭಾರೀ ಗಾತ್ರದ ರಸ್ತೆಗುಂಡಿಯೊಂದು ಕಂಡು ತಕ್ಷಣ ಬ್ರೇಕ್‌ ಹಾಕಿದ್ದಾನೆ. ಇದರಿಂದ ಬೈಕ್ ಸ್ಕಿಡ್ ಆಗಿದೆ. ಇದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಆಗಮಿಸಿದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅರ್ಷದ್ ತಲೆಗೆ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದಾರೆ.

ದಿಢೀರ್‌ ಎಂದು ನಿಂತ ಬೈಕಿಗೆ ಡಿಕ್ಕಿ ಹೊಡೆದ ಕಾರು ಸಹ ಆಳವಾದ ಗುಂಡಿಗೆ ಬಿದ್ದು ಪಲ್ಟಿಯಾಗಿ ಬಿದ್ದಿದೆ. ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ. ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತದ ದೃಶ್ಯಗಳು ಸಿಸಿಟಿವಿ ಸೆರೆಯಾಗಿವೆ. ರಸ್ತೆಗುಂಡಿಗಳಿಂದಾಗಿ ಪದೇ ಪದೇ ಅಪಘಾತವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗುಂಡಿ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸಿದೆ ಎಂದು ವರದಿ ಮಾಡಿದೆ.

ಬೆಂಗಳೂರಲ್ಲಿ 20 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿ ಇರುವುದೆಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮತ್ತೊಂದೆಡೆ, ಯಲಹಂಕದಲ್ಲಿ ಬಿಬಿಎಂಪಿ ತನ್ನ ಸ್ವಂತ ಡಾಂಬರು ಘಟಕವನ್ನು ಹೊಂದಿದೆ. ಇದಲ್ಲದೆ, ಯಲಹಂಕ, ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿ ಖಾಸಗಿಯವರಿಂದ ತಲಾ ಒಂದು ಘಟಕವನ್ನು ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ.

ಕಳೆದ 2-3 ತಿಂಗಳ ಅವಧಿಯಲ್ಲಿ ಬಿಟಿಎಂ ಲೇಔಟ್‌ನ ಕುವೆಂಪು ನಗರ ಬಸ್ ನಿಲ್ದಾಣದ ಬಳಿ ದ್ವಿಚಕ್ರ ಸವಾರ ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಜೆ.ಸಿ.ನಗರದ ನಿವಾಸಿಯಾಗಿರುವ 38 ವರ್ಷದ ಬಾಲಾಜಿ ಎಂಬುವರು ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿತ್ತು. ಸುಜಾತಾ ಚಿತ್ರಮಂದಿರದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದವರು ದಿಢೀರ್‌ ಎಂದು  ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಗುದ್ದಿ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗಳು ರಸ್ತೆಗೆ ಬಿದ್ದಿದ್ದರು. ನಂತರ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದರು.

Donate Janashakthi Media

Leave a Reply

Your email address will not be published. Required fields are marked *