ಬಿಹಾರ ಎಸ್‍.ಐ.ಆರ್. ವಿಚಾರಣೆ ಆಗಸ್ಟ್ 12-13ಕ್ಕೆ

‘ಸಾಮೂಹಿಕ ಹೊರಪಡಿಕೆಯಾದರೆ…ನಾವು ನೋಡುತ್ತೇವೆ’- ಸುಪ್ರಿಂ ಕೋರ್ಟ್
ಬಿಹಾರ: ಮತದಾರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’(ಎಸ್‍ಐಆರ್)ಗೆ ಸವಾಲು ಹಾಕಿದ ಅರ್ಜಿಗಳ ವಿಚಾರಣೆ ಆಗಸ್ಟ್12.13ರಂದು ನಡೆಯಲಿದೆ ಎಂದು ಜುಲೈ 29ರಂದು ಸುಪ್ರಿಂ ಕೋರ್ಟ್ ಪೀಠ ನಿಗದಿಗೊಳಿಸಿದೆ. ಈಗಾಗಲೇ ಅರ್ಜಿ ನಮೂನೆಗಳನ್ನು ಸಲ್ಲಿಸುವ ಅವಧಿ ಮುಗಿದಿದ್ದು, ಆಗಸ್ಟ್1ರಂದು ಕರಡು ಮತದಾರಪಟ್ಟಿ ಪ್ರಕಟವಾಗಲಿದೆ. ಅಂದರೆ ಪಟ್ಟಿ ಪ್ರಕಟವಾದ 12 ದಿನಗಳ ನಂತರ ಮುಂದಿನ ವಿಚಾರಣೆ ನಡೆಯಲಿದೆ. ಬಿಹಾರ

ಈ ಮೊದಲು ಜುಲೈ 10ರಂದು ನ್ಯಾಯಪೀಠ ಹೇಳಿದ್ದನ್ನು ಪುನರುಚ್ಚರಿಸುತ್ತ ‘ಅರ್ಜಿದಾರರು ಈ ಹಂತದಲ್ಲಿ ಮಧ್ಯಂತರ ತಡೆಯಾಜ್ಞೆಗೆ ಒತ್ತಾಯಿಸದ್ದರಿಂದ’  ಕರಡು ಮತದಾರ ಪಟ್ಟಿಯ ಪ್ರಕಟಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಪೀಠ , ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುವ ಸಂಕೇತಗಳಿವೆ ಎಂಬ ಭಯವನ್ನು ಅರ್ಜಿದಾರರು ವ್ಯಕ್ತಪಡಿಸಿದಾಗ,  ಆ ಪಟ್ಟಿಯಲ್ಲಿ ಮತದಾರರ ಹೆಸರುಗಳ “ಸಾಮೂಹಿಕ ಹೊರಪಡಿಕೆ”ಯಾದರೆ ತಾನು ಖಂಡಿತಾ ಮಧ್ಯಪ್ರವೇಶಿಸುವುದಾಗಿ  ಭರವಸೆಯನ್ನು ನೀಡಿದೆ. ಬಿಹಾರ

“ಸಾಮೂಹಿಕ ಹೊರಪಡಿಕೆಯಲ್ಲ, ಸಾಮೂಹಿಕ ಒಳಗೊಳ್ಳುವಿಕೆ’

ಇದರ ಹಿಂದಿನ ದಿನ, ಜುಲೈ 28ರಂದು ವಿಚಾರಣೆಯ ವೇಳೆಯಲ್ಲಿ, ನ್ಯಾಯ ಪೀಠ  ಈ ಪರಿಷ್ಕರಣೆ “ಸಾಮೂಹಿಕ ಹೊರಪಡಿಕೆಯಲ್ಲ, ಸಾಮೂಹಿಕ ಒಳಗೊಳ್ಳುವಿಕೆ’ಯ ಆಧಾರದಲ್ಲಿ ನಡೆಯಬೇಕಾಗಿದೆ ಎನ್ನುತ್ತ  ತಾನು ಈ ಹಿಂದೆ ಸೂಚಿಸಿದಂತೆ ಆಧಾರ್ ಮತ್ತು ಮತದಾರ ಫೋಟೋ ಗುರುತು ಕಾರ್ಡ (ಎಪಿಕ್‍)ನ್ನು ಗುರುತಿನ ಪ್ರಮಾಣವಾಗಿ ಏಕೆ ಸ್ವೀಕರಿಸುವುದಿಲ್ಲ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿತು.

ಇದನ್ನೂ ಓದಿ: ಧರ್ಮಸ್ಥಳ | ಶವಗಳನ್ನು ಹೂತಿಟ್ಟ ಪ್ರಕರಣ – ತನಿಖೆ ಚುರುಕುಗೊಳಿಸಿದ ಎಸ್‌ ಐ ಟಿ

ಇವುಗಳು ಖೋಟಾ ಆಗಿರುವ ಸಾಧ್ಯತೆಗಳಿವೆ ಎಂಬ ಆಯೋಗದ ತರ್ಕವನ್ನು ಒಪ್ಪದ ಪೀಠ ಆಯೋಗ ಸ್ವೀಕರಿಸಲು ಸಿದ್ಧವಿರುವ 11 ದಾಖಲೆಗಳಲ್ಲಿ 10 ಕೂಡ ಹೀಗೆಯೇ ಖೋಟಾ ಇರಲು ಸಾಧ್ಯವಿದೆ, ಆದ್ದರಿಂದ ಇಂತಹ ಪ್ರಸಂಗಗಳನ್ನು ಪ್ರತ್ಯೇಕವಾಗಿ ನಿಭಾಯಿಸಬಹುದು ಎಂದು ಹೇಳಿತು. ಈ ಕಾರಣಕ್ಕಾಗಿ, ಹೆಚ್ಚಿನವರ ಬಳಿ ಇರುವ ಆಧಾರ್‍ ಮತ್ತು ಎಪಿಕ್‍ ಗಳನ್ನು ಕೂಡ ಗುರುತಿನ ಪ್ರಮಾಣವಾಗಿ ಸ್ವೀಕರಿಸಬೇಕು ಎಂದು ಪೀಠ ಮತ್ತೊಮ್ಮೆ ಸೂಚಿಸಿತು.

ಇತ್ತೀಚೆಗೆ ನಡೆಸಿದ ಒಂದು ಸರ್ವೆಯ ಪ್ರಕಾರ ಬಿಹಾರಿನಲ್ಲಿರುವ ಮತದಾರರಲ್ಲಿ 99% ಮಂದಿಯ ಬಳಿ ಆಧಾರ್‍ ಕಾರ್ಡ್‍ ಮತ್ತು 89% ಮಂದಿಯ ಬಳಿ ಎಪಿಕ್‍ ಕಾರ್ಡ್‍ ಇದ್ದರೆ, ಆಯೋಗ ಸ್ವೀಕರಿಸುವ 11 ದಾಖಲೆಗಳು ಇರುವವರ ಪ್ರಮಾಣ ಕೇವಲ 35%. ವಲಸೆ ಹೋದ ಬಿಹಾರಿಗಳಲ್ಲಿ ಆಧಾರ್‍ ಹೊಂದಿರುವವರು 96% ಮತ್ತು ಎಪಿಕ್‍ ಹೊಂದಿರುವವರು 83%, ಆಯೋಗ ಕೇಳುವ ದಾಖಲೆಗಳು ಇರುವವರ ಪ್ರಮಾಣ 34% ಮಾತ್ರ.

 ಎಸ್‍ಐಆರ್‍ ಬಗ್ಗ ತೀವ್ರ ಸಂದೇಹವನ್ನು ಬಲಪಡಿಸಿದ ಮತ್ತೊಂದು ಸಂಗತಿಯೆಂದರೆ ಆಯೋಗ ಜುಲೈ 22 ಮತ್ತು 23  ರಂದು ನೀಡಿದ ಅಂಕಿ-ಅಂಶಗಳಲ್ಲಿನ ಅಗಾಧ ಏರಿಕೆ. ಜುಲೈ 22ರಂದು ಪ್ರಕಟಿಸಿದ ಪ್ರಕಾರ ‘ ಪತ್ತೆಯಾಗದ’ ಮತದಾರರ ಸಂಖ್ಯೆ 11,484 , ಆದರೆ ಜುಲೈ 23ರ ಆಯೋಗದ ಪ್ರಕಟಣೆಯಲ್ಲಿ ಇದು 1,00,000 ಲಕ್ಷಕ್ಕೆ ಏರಿತು.ಅಂದರೆ 24 ಗಂಟೆಗಳಲ್ಲಿ 809% ಏರಿಕೆ. ಆಯೋಗದ ಪ್ರಕಾರ ‘ಪತ್ತೆಯಾಗದವರು’ ಎಂದರೆ ಶಾಶ್ವತವಾಗಿ ಬಿಹಾರದಿಂದ ಹೊರಗೆ ಹೋದವರು ಅಥವ 20023 ಮತ್ತು 2025ರ ನಡುವೆ ಸಾವಿಗೀಡಾದವರು. ಅಂದರೆ ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಹೆಸರುಗಳು. ಜುಲೈ 22ರಂದು 97.3% ಮಂದಿ ಗಣತಿ ಪತ್ರಗಳನ್ನು ಸಲ್ಲಿಸಿದ್ದಾಗ  ಈ ಸಂಖ್ಯೆ 52 ಲಕ್ಷವಿದ್ದರೆ, 24 ಗಂಟೆಗಳಲ್ಲಿ ಗಣತಿ ಪತ್ರ ಸಲ್ಲಿಸಿದವರ ಸಂಖ್ಯೆ ತುಸುವೇ ಏರಿ 98.01% ಆದಾಗ, ‘ಪತ್ತೆಯಾಗದವರ’ ಸಂಖ್ಯೆ 56 ಲಕ್ಷಕ್ಕೆ ನೆಗೆಯಿತು.

65 ಲಕ್ಷ  ‘ಪತ್ತೆಯಾಗದ’ ಹೆಸರುಗಳು

ಜುಲೈ 27  ರ ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ 91.69% ಮತದಾರರು ನಮೂನೆ ಪತ್ರಗಳನ್ನು ಸಲ್ಲಿಸಿದ್ದಾರೆ. ಅಂದರೆ 65 ಲಕ್ಷ ಮತದಾರರ ಹೆಸರುಗಳು  ಹೊಸ ಮತದಾರ ಪಟ್ಟಿಯಿಂದ ಹೊರಹೋಗುತ್ತವೆ. ಅಲ್ಲದೆ ಗಣತಿ ಪತ್ರಗಳನ್ನು ಸಲ್ಲಿಸಿದವರಲ್ಲಿಯೂ ಸ್ವೀಕಾರಾರ್ಹ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬಿತ್ಯಾದಿ ಕಾರಣಗಳಿಂದ ಇನ್ನಷ್ಟು ಹೆಸರುಗಳು ತೆಗೆದು ಹಾಕಲ್ಪಡಬಹುದು.

ಇದನ್ನು ನ್ಯಾಯ ಪೀಠದ ಗಮನಕ್ಕೆ ತಂದಾಗ “65ಲಕ್ಷದಷ್ಟು ಮತದಾರರು (ಪಟ್ಟಿಯಲ್ಲಿ) ಇರಲಿಕ್ಕಿಲ್ಲ ಎಂಬುದು ನಿಮ್ಮ ಸಂದೇಹ, ಚುನಾವಣಾ ಆಯೋಗ 2025ರ ಪಟ್ಟಿಗೆ ಸಂಬಂಧಿಸಿದಂತೆ ಸರಿಪಡಿಕೆಗಳನ್ನು ಪ್ರಯತ್ನಿಸುತ್ತಿದೆ. ನಾವು ನ್ಯಾಯಾಂಗ ಪ್ರಾಧಿಕಾರವಾಗಿ ಇದನ್ನು ಗಮನಿಸುತ್ತೇವೆ. ಸಾಮೂಹಿಕ ಹೊರಪಡಿಕೆ ಇದ್ದರೆ, ನಾವು ತಕ್ಷಣವೇ ಪ್ರವೇಶಿಸುತ್ತೇವೆ, ತಾವು ಬದುಕಿದ್ದೇವೆ, ಆದರೂ ಹೊರಪಡಿಸಲಾಗಿದೆ ಎನ್ನುವ 15 ಮಂದಿಯನ್ನು ತನ್ನಿ”ಎಂದು ನ್ಯಾಯಮೂರ್ತಿ ಜೊಯ್ಮಾಲ ಬಾಗ್ಚಿಯವರು ಹೇಳಿರುವುದಾಗಿ ವರದಿಯಾಗಿದೆ. ಈ 65ಲಕ್ಷ ಜನರ ಹೆಸರುಗಳು ಕರಡು ಪಟ್ಟಿಯಲ್ಲಿದ್ದು, ನಂತರ ಆಕ್ಷೇಪಗಳಿಗೆ ಅವಕಾಶವಿದ್ದರೆ ಪರವಾಗಿಲ್ಲ ಎಂದು ಅರ್ಜಿದಾರ ಪರ ವಕೀಲರಲ್ಲಿ ಒಬ್ಬರಾದ ಕಪಿಲ ‍ಸಿಬಲ್ ‍ಹೇಳಿದಾಗ “ಕರಡು ಪಟ್ಟಿ ಈಬಗ್ಗೆ ಮೌನವಾಗಿದ್ದರೆ,ನೀವು ನಮ್ಮ ಗಮನಕ್ಕೆ ತನ್ನಿ.ನಾವು ಇಲ್ಲಿದ್ದೇವ, ವಿಚಾರಣೆ ನಡೆಸುತ್ತೇವೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್‍ರವರು ಹೇಳಿರುವುದಾಗಿಯೂ ವರದಿಯಾಗಿದೆ.

ಕರಡು ಪಟ್ಟಿ ಪ್ರಕಟವಾದ ಮೇಲೆ ಆಕ್ಷೇಪಗಳನ್ನು ಸಲ್ಲಿಸಲು 30ದಿನಗಳ ಅವಕಾಶವಿದೆ, ಹೆಸರುಗಳನ್ನು ಸೇರಿಸಲು ಮತದಾರರು ನೆರವಾಗಬೇಕು ಎಂದು ಚುನಾವಣಾ ಆಯೋಗದ ವಕೀಲರು ಹೇಳಿದರು.

ಆಯೋಗ ವಿಧಿಸಿದ ಸಮಯಗಡುವು ಅವಾಸ್ತವಿಕವಾದ್ದರಿಂದ ಗಣತಿ ಪತ್ರಗಳನ್ನು ಮತದಾರರ ಒಪ್ಪಿಗೆಯಿಲ್ಲದೆಯೇ ಸಾರಾಸಗಟಾಗಿ ಅಪ್‍ಲೋಡ್‍ ಮಾಡಲಾಗಿದೆ ಎಂಬುದನ್ನು ಅರ್ಜಿದಾರರಲ್ಲಿ ಒಬ್ಬರಾದ ಎಡಿಆರ್‍ ಸಲ್ಲಿಸಿರುವ ಅಫಿಡವಿಟ್ ನ್ಯಾಯಾಲಯದ ಗಮನಕ್ಕೆ ತಂದಿದೆ.

ಇದನ್ನು ಮತ್ತು ಅರ್ಜಿದಾರರು ಎತ್ತಿರುವ ಇನ್ನೂ ಹಲವು ಪ್ರಶ್ನೆಗಳನ್ನು ಹೇಗೆ  ಗಮನಿಸಲಾಗುತ್ತದೆ, ಆಗಸ್ಟ್ 1ರಂದು ಪ್ರಕಟವಾಗುವ ಕರಡು ಪಟ್ಟಿ ಹೇಗಿರುತ್ತದೆ, ಇದು ನ್ಯಾಯಾಲಯ ಸೂಚಿಸಿದಂತೆ ‘ಸಾಮೂಹಿಕ ಹೊರಪಡಿಕೆಯಾಗಿರದೆ, ಸಾಮೂಹಿಕ ಒಳಗೊಳ್ಳುವಿಕೆ’ಯನ್ನು ಆಧರಿಸಿದೆ ಎಂದು ನ್ಯಾಯಾಲಯ ಹೇಳುವಂತಿರುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media

Donate Janashakthi Media

Leave a Reply

Your email address will not be published. Required fields are marked *