ತೇಜಸ್ವಿ ಯಾದವ್ ಭೂ ಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ
ಉದ್ಯೋಗಕ್ಕಾಗಿ ಭೂ ಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಇತರರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆರ್‌ಜೆಡಿ ನಾಯಕನ ‘ಬೇಟೆ’ ನಡೆಸುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜೀವ್ ರಂಜನ್, “ಈ ಪ್ರಕರಣದಲ್ಲಿ ಸಿಬಿಐನ ಎರಡನೇ ಆರೋಪಪಟ್ಟಿಯನ್ನು ತೇಜಸ್ವಿ ಯಾದವ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸಲ್ಲಿಸಲಾಗಿದೆ. ಅವರ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದು ಸಿಬಿಐ ಈ ಹಿಂದೆ ಹೇಳಿತ್ತು. ಆದರೆ 2022 ರ ಆಗಸ್ಟ್‌ನಲ್ಲಿ ಆರ್‌ಜೆಡಿ ಮತ್ತು ಜೆಡಿಯು ಇತರ ಪಕ್ಷಗಳೊಂದಿಗೆ ಬಿಹಾರದಲ್ಲಿ ಮಹಾ ಮೈತ್ರಿ ಸರ್ಕಾರ ರಚಿಸಿದ ನಂತರ ಒಕ್ಕೂಟ ಸರ್ಕಾರ ತನ್ನ ‘ಗಿಣಿ’ (ಸಿಬಿಐ) ಮತ್ತು ಇತರ ಫೆಡರಲ್ ತನಿಖಾ ಸಂಸ್ಥೆಗಳನ್ನು ಉಪ ಮುಖ್ಯಮಂತ್ರಿ ವಿರುದ್ಧ ಬಳಸಲು ಪ್ರಾರಂಭಿಸಿತು” ಎಂದು ವೀಡಿಯೊದಲ್ಲಿ ಸಂದೇಶದಲ್ಲಿ ತಿಳಿಸಿದ್ದಾರೆ.
ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್, ಅವರ ತಂದೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಮತ್ತು ತಾಯಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧ ಸಿಬಿಐ ಸೋಮವಾರ ನವದೆಹಲಿಯ ಸಕ್ಷಮ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಒಟ್ಟು 14 ಮಂದಿಯನ್ನು ಆರೋಪಪಟ್ಟಿ ಹೆಸರಿಸಿದ್ದು, ಈ ಪ್ರಕರಣದಲ್ಲಿ ದಾಖಲಾಗುತ್ತಿರುವ ಎರಡನೇ ಆರೋಪಪಟ್ಟಿ ಇದಾಗಿದೆ.
ಇದನ್ನೂ ಓದಿ: ರೈಲು ದುರಂತ ಬೆನ್ನಲ್ಲೇ ಬಿಹಾರದಲ್ಲಿ ಸೇತುವೆ ಕುಸಿತ; 1,700 ಕೋಟಿ ರೂ. ಗಂಗಾ ನದಿ ಪಾಲು
ಪ್ರಾಥಮಿಕ ವರದಿಯನ್ನು ಸಲ್ಲಿಸುವ ವೇಳೆಗೆ ಪ್ರಕರಣದಲ್ಲಿ ಆರೋಪಿಗಳ ಪಾತ್ರಗಳ ಬಗ್ಗೆಗಿನ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಎರಡನೇ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
“ಬಿಜೆಪಿಯನ್ನು ವಿರೋಧಿಸುವವರನ್ನೇ ಸಿಬಿಐ ಹಿಂಬಾಲಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೂನ್ 23 ರಂದು ಪಾಟ್ನಾದಲ್ಲಿ ವಿಪಕ್ಷಗಳ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕರು 70,000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು ನಮಗೆಲ್ಲರಿಗೂ ತಿಳಿದಿದೆ. ಐದು ದಿನಗಳ ನಂತರ, ಎನ್‌ಸಿಪಿ ನಾಯಕರು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಭಾಗವಾದರು. ಇದೆರ ನಂತರ ಮೋದಿಗೆ ಎಲ್ಲವೂ ಸರಿಯಾಯಿತು. ಅವರು ಭ್ರಷ್ಟ ಎನ್‌ಸಿಪಿ ನಾಯಕರನ್ನು ಅನುಕೂಲಕರವಾಗಿ ಮರೆತಿದ್ದಾರೆ” ಎಂದು ರಾಜೀವ್ ರಂಜಮನ್ ಹೇಳಿದ್ದಾರೆ.
“ಈ ರೀತಿಯ ರಾಜಕೀಯ ಬೇಟೆಯು ದೇಶದಲ್ಲಿ ಪ್ರತಿಪಕ್ಷಗಳ ಏಕತೆಯನ್ನು ಬಲಪಡಿಸುತ್ತದೆ. ಸಿಬಿಐಗೆ ಅಥವಾ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ತೇಜಸ್ವಿ ಯಾದವ್ ಹೆದರುವುದಿಲ್ಲ. ಮೋದಿ ಸರ್ಕಾರದ ಈ ಎಲ್ಲಾ ಪ್ರಜಾಪ್ರಭುತ್ವ ವಿರೋಧಿ ಕೃತ್ಯವನ್ನು ಮತದಾರರು ಅರ್ಥಮಾಡಿಕೊಂಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ: ಗೋ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಡಿದು ಕೊಂದ ದುರುಳರು
2004 ರಿಂದ 2009 ರವರೆಗೆ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಅವರ ಅವಧಿಯಲ್ಲಿ ಮಧ್ಯಪ್ರದೇಶದ ಜಬಲ್‌ಪುರ ಮೂಲದ ಪಶ್ಚಿಮ ಕೇಂದ್ರ ವಲಯದಲ್ಲಿ ನೇಮಕಾತಿಗಳಿಗೆ ಸಂಬಂಧಿಸಿದಂತೆ ಲಾಲು ಅವರ ಕುಟುಂಬ ಮತ್ತು ಆಪ್ತರು ಜಮೀನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.