ನಗರಗಳ ಭೌಗೋಳಿಕ ವಿಸ್ತರಣೆಗೂ ಔದ್ಯಮಿಕ ಹಿತಾಸಕ್ತಿಗಳಿಗೂ ನೇರವಾದ ಸಂಬಂಧವಿದೆ
ಯಾವುದೇ ದೇಶದ ಬಂಡವಾಳಶಾಹಿ ಅಭಿವೃದ್ಧಿ-ಬೆಳವಣಿಗೆಯ ಮಾದರಿಗಳಲ್ಲಿ ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ ಮೂಲತಃ ನಗರೀಕರಣ ಮತ್ತು ಅದಕ್ಕೆ ಪೂರಕವಾದ ಭೌಗೋಳಿಕ-ಮೂಲ ಸೌಕರ್ಯಗಳ ವಿಸ್ತರಣೆ ಮತ್ತು ಆಧುನಿಕ ಔದ್ಯಮಿಕ ಜಗತ್ತಿಗೆ ಅನುಕೂಲವಾಗುವಂತಹ ಮಾರುಕಟ್ಟೆ ವ್ಯವಸ್ಥೆ. ಇದು ಔದ್ಯೋಗಿಕ ಬಂಡವಾಳದ ಕಾಲದಿಂದಲೂ ಕಾಣಬಹುದಾದ ವಿದ್ಯಮಾನವಾಗಿದ್ದು, ಬಂಡವಾಳದ ಬೆಳವಣಿಗೆಯನ್ನು ನೇರವಾಗಿ ಔದ್ಯೋಗಿಕ ಪ್ರಗತಿ ಮತ್ತು ಅದನ್ನು ಪೋಷಿಸಲು ಬೇಕಾದ ವಿಶಾಲ ನಗರಗಳ ನಿರ್ಮಾಣಗಳಲ್ಲಿ ಗುರುತಿಸಬಹುದು. ಭಾರತದಲ್ಲಿ ಇದರ ಮೊದಲ ಪ್ರಯೋಗವಾಗಿದ್ದು 1950ರ ದಶಕದ ಆರಂಭದಲ್ಲಿ, ಮುಂಬೈ ನಗರದಲ್ಲಿ. ಬೃಹನ್ ಮುಂಬೈ ಎಂಬ ಔದ್ಯಮಿಕ ಮಾರುಕಟ್ಟೆ ಪರಿಕಲ್ಪನೆಯನ್ನೇ ಅತ್ಯಂತ ಅವಶ್ಯಕ ಎಂದು ಪರಿಗಣಿಸುವ ಬಂಡವಾಳಶಾಹಿ ಆರ್ಥಿಕತೆಯನ್ನು ಆಧರಿಸಿದ ಸರ್ಕಾರಗಳು ನಗರಾಭಿವೃದ್ಧಿಯನ್ನು ಭೌಗೋಳಿಕ ಮತ್ತು ಔದ್ಯಮಿಕ ದೃಷ್ಟಿಯಿಂದಾಚೆಗೆ ನೋಡುವುದೂ ಇಲ್ಲ. ಬೃಹತ್
-ನಾ ದಿವಾಕರ
ಬೃಹನ್ ಮುಂಬೈ ಯೋಜನೆಗೆ ಮೊದಲು ಬಲಿಯಾದದ್ದು ನೂರಾರು ಬಟ್ಟೆ ಗಿರಣಿಗಳು ಮತ್ತು ಅದನ್ನೇ ನಂಬಿ ಬದುಕುತ್ತಿದ್ದ ಲಕ್ಷಾಂತರ ಶ್ರಮಜೀವಿಗಳು. ತಮ್ಮ ಶ್ರಮಶಕ್ತಿಯನ್ನೇ ನಂಬಿಕೊಂಡು ಬದುಕುವ ದುಡಿಯುವ ವರ್ಗಗಳಿಗೆ ಅಂತಿಮವಾಗಿ ದಕ್ಕಿದ್ದು ಸ್ವಂತ ದುಡಿಮೆಯ ಮಾರ್ಗಗಳು. ಸಹಜವಾಗಿ ನಗರೀಕರಣದಿಂದ ಉಂಟಾದ ಔದ್ಯೋಗಿಕ-ಔದ್ಯಮಿಕ ವಿಸ್ತರಣೆಗೆ ಅಗತ್ಯವಾದ ಶ್ರಮಶಕ್ತಿಯನ್ನು ಮಾರುಕಟ್ಟೆಗಳು , ನಗರಗಳಲ್ಲಿ ವಿಲೀನವಾದ ಸುತ್ತಲಿನ ಸಣ್ಣಪುಟ್ಟ ಗ್ರಾಮ/ಪಟ್ಟಣಗಳಿಂದ ವಲಸೆ ಬಂದವರಲ್ಲಿ ಕಂಡುಕೊಂಡವು. ಬೃಹತ್ ನಗರ ಎಂಬ ಕಲ್ಪನೆಯಲ್ಲಿ ಈ ಶ್ರಮಜೀವಿಗಳಿಗೆ ಬದುಕಲು ಅವಕಾಶ ದಕ್ಕಿದ್ದು ಕೊಳೆಗೇರಿ ಪ್ರದೇಶಗಳಲ್ಲಿ ಅಥವಾ ಸ್ಲಂ ಎನ್ನಲಾಗುವ ಬೆಂಕಿಪೆಟ್ಟಿಗೆಯಷ್ಟು ವಿಸ್ತೀರ್ಣದ ಮನೆಗಳಲ್ಲಿ. ನಗರೀಕರಣ ಪ್ರಕ್ರಿಯೆಯಲ್ಲಿ ಕಣ್ಮರೆಯಾದ ಸುತ್ತಲಿನ ಗ್ರಾಮ/ಪಟ್ಟಣಗಳಲ್ಲಿದ್ದ ಕೃಷಿಕರು, ಗುಡಿ ಕೈಗಾರಿಕೆಯ ಕುಶಲಕರ್ಮಿಗಳು ಹಾಗೂ ಸ್ವಂತ ದುಡಿಮೆಯ ಶ್ರಮಿಕರು ನಿರ್ಮಣವಾದ ನವೀ ಮುಂಬೈನ ಮೂಲ ಸೌಕರ್ಯಗಳ ನಿರ್ವಹಣೆಯ ಕಾಲಾಳುಗಳಾಗಿ, ವಿಸ್ತರಿಸಲಾದ ಸ್ಲಂಗಳಲ್ಲಿ ವಾಸಿಸಬೇಕಾಯಿತು. ಬೃಹತ್
ದುಡಿಮೆಗಾರರ ಶ್ರಮಜೀವೀಕರಣ
ಉತ್ಪಾದಕೀಯ ಶ್ರಮಶಕ್ತಿಯನ್ನು (Productive Labour) ನಗರ ವಿಸ್ತರಣೆ ಮತ್ತು ಮೇಲ್ ವರ್ಗಸಮಾಜದ ಉನ್ನತಿಗಾಗಿ ರೂಪುಗೊಂಡ ರಿಯಲ್ ಎಸ್ಟೇಟ್ ಜಗತ್ತಿನಲ್ಲಿ ಪರಾವಲಂಬಿಯನ್ನಾಗಿ ಮಾಡುವ ಮೂಲಕ ಬಂಡವಾಳಶಾಹಿ ಮತ್ತು ಮಾರುಕಟ್ಟೆ ವ್ಯವಸ್ಥೆಯು ಬೃಹನ್ನಗರದ ಪರಿಕಲ್ಪನೆಯನ್ನು ಸಾರ್ವತ್ರೀಕರಿಸಿತ್ತು. ಹೀಗೆ ಸ್ವಂತ ದುಡಿಮೆ ಮತ್ತು ಶ್ರಮವನ್ನೇ ಅವಲಂಬಿಸಿ ಬದುಕುವ ಲಕ್ಷಾಂತರ ಜನರನ್ನು Proletarianisation ಪ್ರಕ್ರಿಯೆಗೊಳಪಡಿಸುವ, ಅಂದರೆ ತಮ್ಮ ಶ್ರಮವನ್ನು ಬಿಟ್ಟು ಮತ್ತೇನನ್ನೂ ಅವಲಂಬಿಸದ ಶ್ರಮಜೀವಿಗಳನ್ನಾಗಿ ಪರಿವರ್ತಿಸುವ, ಬಂಡವಾಳಶಾಹಿಯ ಈ ಗುಣವನ್ನು ಮಾರ್ಕ್ಸ್ “ಶ್ರಮಜೀವಿೀಕರಣವು ಸಾಮಾಜಿಕ ಪ್ರಕ್ರಿಯೆಯಾಗಿದ್ದು, ಅದರ ಮೂಲಕ ಜನರು ಉದ್ಯೋಗದಾತ, ನಿರುದ್ಯೋಗಿ ಅಥವಾ ಸ್ವಯಂ ಉದ್ಯೋಗಿ, ಉದ್ಯೋಗದಾತರ ಹಂತದಿಂದ ಕೂಲಿ ಕಾರ್ಮಿಕರಾಗಿ ನೇಮಕಗೊಳ್ಳುವ ಹಂತಕ್ಕೆ ಚಲಿಸುತ್ತಾರೆ.” ಎಂದು ನಿರ್ವಚಿಸುತ್ತಾರೆ. ಆಧುನಿಕ ಭಾರತದ ನಗರೀಕರಣ ಪ್ರಕ್ರಿಯೆಯಲ್ಲಿ ಇದನ್ನು ಇಂದಿಗೂ ಗುರುತಿಸಬಹುದು.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ – ಕಾಂಗ್ರೆಸ್ ಸಭೆ, ಅಮೆರಿಕ ಪ್ರವಾಸ ಮೊಟಕುಗೊಳಿಸಿದ ರಾಹುಲ್ ಗಾಂಧಿ
ಈ ಆಧುನಿಕ ನಗರಗಳಲ್ಲಿ ಶ್ರಮಜೀವಿಗಳಿಗೆ ಶಾಶ್ವತ ಸುಸ್ಥಿರ ಬದುಕು ಕಲ್ಪಿಸುವಂತಹ ಉತ್ಪಾದಕ ಕೈಗಾರಿಕೆಗಳು (Manufacturing Industries) ಇಲ್ಲವಾಗುತ್ತವೆ ಅಥವಾ ಹೊರವಲಯಗಳಿಗೆ ದೂಡಲ್ಪಡುತ್ತವೆ. ನವ ಉದಾರವಾದ ಪೋಷಿಸುವ ಡಿಜಿಟಲ್ ಆರ್ಥಿಕತೆಯಲ್ಲಿ ಸೇವಾ ವಲಯದ ಉದ್ಯಮಗಳು ಪ್ರಧಾನವಾಗುತ್ತವೆ. ಈ ಸೇವಾ ಕ್ಷೇತ್ರವನ್ನು (Service Sector) ಆವರಿಸಿಕೊಳ್ಳುವ ಬೌದ್ಧಿಕವಾಗಿ ಮುಂದುವರೆದ ಹಾಗೂ ಆರ್ಥಿಕವಾಗಿ ನೆಲೆಗೊಂಡ ಮಧ್ಯಮ ವರ್ಗಗಳು ನಗರಗಳನ್ನು ಆಕ್ರಮಿಸುತ್ತವೆ. ಈ ಜನಸಂಖ್ಯೆಯ ವಸತಿಯೇ ಆಧುನಿಕ ನಗರಗಳ ಲಂಬಗತಿಯ ಬೆಳವಣಿಗೆಗೆ (Vertical Development) ಅಥವಾ ಅಪಾರ್ಟ್‌ಮೆಂಟ್ ಸಂಸ್ಕೃತಿ ರೂಪುಗೊಳ್ಳುತ್ತದೆ. ನಗರಗಳಲ್ಲಿ ಲೀನವಾದ ಗ್ರಾಮ/ಪಟ್ಟಣಗಳಲ್ಲಿ ಸ್ವಂತ ದುಡಿಮೆಯಲ್ಲಿದ್ದಂತಹ ಕೃಷಿ, ವ್ಯಾಪಾರ ಕ್ಷೇತ್ರದ ಕೆಳಸ್ತರದ ಸಮಾಜದ ಶ್ರಮಿಕರು , ಆಧುನಿಕ ನಗರಗಳ ಐಷಾರಾಮಿ ವಸತಿ ಸಮುಚ್ಛಯಗಳಲ್ಲಿ, ಔದ್ಯಮಿಕ ಕಚೇರಿಗಳಲ್ಲಿ ನಾಲ್ಕನೆ ದರ್ಜೆಯ ನೌಕರರಾಗಿ, ಭದ್ರತಾ ಸಿಬ್ಬಂದಿಯಾಗಿ ರೂಪಾಂತರ ಹೊಂದುತ್ತಾರೆ. ಬೃಹತ್
ಹಾಗಾಗಿಯೇ ನವ ಶತಮಾನದ ಭಾರತದ ಆರ್ಥಿಕತೆ ರಿಯಲ್ ಎಸ್ಟೇಟ್, ಹೆದ್ದಾರಿಗಳು, ಆರು-ಎಂಟು-ಹತ್ತು ವಿಭಾಗಗಳ ಎಕ್ಸ್‌ಪ್ರೆಸ್‌ವೇಗಳು, ಸುರಂಗಗಳು, ಮೇಲ್ ಸೇತುವೆಗಳು ಮತ್ತು ಇನ್ನಿತರ ಮೂಲ ಸೌಕರ್ಯಗಳನ್ನು ಪೋಷಿಸುವ ನಿಟ್ಟಿನಲ್ಲಿ ಹೊಸ ನೀತಿಗಳನ್ನು ರೂಪಿಸುತ್ತಿದೆ. ಶಾಸನಸಭೆಗಳಿಗೆ ಆಯ್ಕೆಯಾಗುವ ಬಹುಪಾಲು ಪ್ರತಿನಿಧಿಗಳು ಈ ವಲಯಗಳನ್ನೇ ಪ್ರಧಾನವಾಗಿ ಪ್ರತಿನಿಧಿಸುವುದು ಸಮಕಾಲೀನ ವಾಸ್ತವ. ಈ ಲಂಬಗತಿಯ ಬೆಳವಣಿಗೆಯ ನಡುವೆಯೇ, ಇಲ್ಲಿ ನೆಲೆಗೊಳ್ಳುವ ಮೇಲ್ಪದರ ವರ್ಗದ (Elite class) ಹಿತಕರ ಸಾರಿಗೆ, ಸಂಚಾರ ಮತ್ತು ಮಾರುಕಟ್ಟೆ ಅವಶ್ಯಕತೆಗಳಿಗೆ ಅನುಗುಣವಾಗಿ ಸೂಪರ್ ಮಾಲ್‌ಗಳು, ಅಗಲವಾದ ರಸ್ತೆಗಳು, ಮೇಲ್ ಸೇತುವೆಗಳು ನಿರ್ಮಾಣವಾಗುತ್ತವೆ. ʼ ರಸ್ತೆ ಅಗಲೀಕರಣ ʼ ಎಂಬ ಪ್ರಕ್ರಿಯೆಗೆ ಚಾಲನೆ ದೊರೆತಿದ್ದೇ ಈ ಹೊಸ ಸಮಾಜಕ್ಕಾಗಿ ಮತ್ತು ಅದರ ಹಿತಕರ ಬದುಕಿಗಾಗಿ. ಬೃಹತ್
ರಸ್ತೆ ಅಗಲೀಕರಣ ಮತ್ತು ನಗರೀಕರಣ
ಹಾಗಾಗಿಯೇ ಮೈಸೂರಿನಂತನ ಸುಂದರ ಹಸಿರುಹೊದಿಕೆಯ ನಗರಗಳೂ ಸಹ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಒಳಗಾಗಿ, ಬೆಳೆದು ನಿಂತ ಗಟ್ಟಿಬೇರಿನ ಮರಗಳೂ ಸಹ ನಾಶವಾಗುತ್ತವೆ. ಇತ್ತೀಚೆಗೆ ಮೈಸೂರಿನ ಹೈದರಾಲಿ ರಸ್ತೆಯಲ್ಲಿ 40 ಬೆಳೆದು ನಿಂತ ಮರಗಳ ಹನನ ಮಾಡಿದ ಪ್ರಕರಣವನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಈ ʼ ರಸ್ತೆ ಅಗಲೀಕರಣ ʼ ನಗರದ ದುಡಿಯುವ ವರ್ಗಗಳಿಗಾಗಲೀ ಅಥವಾ ಕೆಳಮಧ್ಯಮ ವರ್ಗದ, ಕೆಳಸ್ತರದ ಸಮಾಜಕ್ಕಾಗಲೀ ಅನಿವಾರ್ಯವಲ್ಲ. ಆದರೆ ಅಗಲೀಕರಣದಿಂದ ತಮ್ಮ ನೆಲೆ ಕಳೆದುಕೊಳ್ಳುವುದು ಇದೇ ಜನತೆ, ಅವರ ದುಡಿಮೆಯ ಆಧಾರವಾಗಿದ್ದ ಸಣ್ಣ ಪುಟ್ಟ ಅಂಗಡಿ, ಹೋಟೆಲ್, ಪೆಟ್ಟಿಗೆ ಅಂಗಡಿ, ಬೀದಿ ಬದಿಯ ವ್ಯಾಪಾರ ಇತ್ಯಾದಿ ಜೀವನಾಧಾರದ ನೆಲೆಗಳು. ಬೃಹತ್
ಅಗಲೀಕರಣಕ್ಕಾಗಿ ಬಲಿಯಾದ ಮರಗಳಿಗೆ ʼ 11ನೇ ದಿನದ ತಿಥಿ ʼ ಮಾಡುವ ಸಮಾಜಕ್ಕೂ ಸಹ ಈ ಬದುಕು ಕಳೆದುಕೊಂಡ ಜೀವಗಳು ಅಷ್ಟೇನೂ ಮುಖ್ಯ ಎನಿಸುವುದಿಲ್ಲ. ಏಕೆಂದರೆ ರಸ್ತೆ ಅಗಲೀಕರಣದ ಪ್ರಕ್ರಿಯೆ ಚಾಲನೆ ಪಡೆದು ಎರಡು ದಶಕಕ್ಕೂ ಹೆಚ್ಚು ಕಾಲ ಗತಿಸಿದ್ದರೂ, ಮೈಸೂರು-ಬೆಂಗಳೂರು ದಶಪಥ ರಸ್ತೆಯೂ ಸೇರಿದಂತೆ, ಯಾವುದೇ ಆಧುನಿಕ ನಗರೀಕರಣದ ಪ್ರಕ್ರಿಯೆಯಲ್ಲಿ ತಮ್ಮ ಬದುಕಿನ ಮೂಲ ನೆಲೆಯನ್ನು ಕಳೆದುಕೊಂಡವರ ಸಮೀಕ್ಷೆಯಾಗಲೀ, ಸಂಶೋಧನೆಯಾಗಲೀ ನಡೆದೇ ಇಲ್ಲ. ಇದು ಸುಡುವಾಸ್ತವ. ಬೃಹತ್
ಈಗ ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿಯಾಗಿರುವ ಮೈಸೂರು ಸಹ ʼ ಬೃಹತ್ ನಗರ ʼ ವಾಗಿ ರೂಪಾಂತರಗೊಳ್ಳಲು ಸಜ್ಜಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ನೀಲನಕ್ಷೆಯನ್ನು ಸಿದಧಪಡಿಸಿದ್ದು, ಸುತ್ತಲಿನ 20 ರಿಂದ 30 ಹಳ್ಳಿಗಳನ್ನು ವಿಲೀನಗೊಳಿಸುವ ಮೂಲಕ (ಸರಳ ಜನಭಾಷೆಯಲಿ ನುಂಗಿಹಾಕುವುದು) ಮೈಸೂರು ನಗರವನ್ನು ʼಮಹಾನಗರ ʼ ವನ್ನಾಗಿ ಮಾಡುವ ಪ್ರಯತ್ನಗಳು ಚಾಲ್ತಿಯಲ್ಲಿವೆ. ತತ್ಪರಿಣಾಮವಾಗಿ ಈಗ 13.30 ಲಕ್ಷ ಇರುವ ಮೈಸೂರು ಜನಸಂಖ್ಯೆ 16.80 ಲಕ್ಷಗಳಾಗುತ್ತದೆ. ಆಧುನಿಕ ನಗರೀಕರಣದಲ್ಲಿ ಅತ್ಯಂತ ನಿಕೃಷ್ಟವಾಗಿ ಕಾಣಲ್ಪಡುವ ಮತ್ತು ನಿರ್ಲಕ್ಷಿಸಲ್ಪಡುವ ಒಂದು ಅಂಶ ಎಂದರೆ, ಹೀಗೆ ನಗರೀಕರಣದ ವಿಸ್ತೀರ್ಣ ಪ್ರಕ್ರಿಯೆಯಲ್ಲಿ ನುಂಗಿಹಾಕಲ್ಪಡುವ ಗ್ರಾಮಗಳ ಪಾರಂಪರಿಕ ಜನಸಂಸ್ಕೃತಿ ಮತ್ತು ಅದರ ಒಳಪದರಗಳು. ಕೊನೆಗೆ ಈ ಹಳ್ಳಿಗಳು ನಗರ ಬಡಾವಣೆಗಳಾಗಿ ತಮ್ಮ ಮೂಲ ಹೆಸರನ್ನೂ ಕಳೆದುಕೊಂಡು, ಇಂಗ್ಲಿಷ್ ಅಕ್ಷರಗಳಲ್ಲಿ ಗುರುತಿಸಿಕೊಳ್ಳಬೇಕಾಗುತ್ತದೆ. (ಎಂಜಿ ಕೊಪ್ಪಲು, ಕೆ ಜಿ ಕೊಪ್ಪಲು ಇತ್ಯಾದಿ). ಬೃಹತ್
ಇಲ್ಲಿ ಶಾಶ್ವತವಾಗಿ ನಾಶವಾಗುವ ಗ್ರಾಮೀಣ ಸಂಸ್ಕೃತಿಯ ಸೌಂದರ್ಯ ಮೇಲ್ಪದರದ ಸಮಾಜವನ್ನು (Elite Society), ವಿಕಸಿತ ಭಾರತವನ್ನು ಬಾಧಿಸುವುದೂ ಇಲ್ಲ. ಬೆಂಗಳೂರು ಮೈಸೂರು ದಶಪಥ ರಸ್ತೆಗಾಗಿ ಇಬ್ಭಾಗವಾಗಿರುವ ನೂರಾರು ಗ್ರಾಮಗಳಲ್ಲಿ ಕೃಷಿಕ ತನ್ನ ಭೂಮಿಯಿಂದ ದೂರವಾಗಿದ್ದರೆ, ಸಣ್ಣ ವ್ಯಾಪಾರಿ ಜೀವನಾಧಾರವನ್ನೇ ಕಳೆದುಕೊಂಡಿದ್ದಾನೆ. ದಶಪಥದ ಒಂದು ಬದಿಯಲ್ಲಿ ಮನೆ ಕೆಲವು ಕಿಲೋಮೀಟರ್ ದೂರದ ಮತ್ತೊಂದು ಬದಿಯಲ್ಲಿ ಭೂಮಿ ಹೊಂದಿರುವ ರೈತರು ಮತ್ತು ಗ್ರಾಮೀಣ ಜನತೆ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಕಳೆದುಕೊಳ್ಳಬಹುದಾದ ಒಂದು ಪರಂಪರೆಯ ಬಗ್ಗೆ ಸಂಶೋಧನೆ ಅಗತ್ಯವಾಗಿದ್ದರೂ, ಯಾರಿಂದಲೂ, ವಿಶ್ವವಿದ್ಯಾಲಯಗಳನ್ನೂ ಸೇರಿದಂತೆ, ಈ ಪ್ರಯತ್ನಗಳು ನಡೆದಂತೆ ಕಾಣುವುದಿಲ್ಲ. ಇಲ್ಲಿ ತಳಸಮಾಜದ ಜನತೆ ಕಳೆದುಕೊಳ್ಳುವುದು ಕೇವಲ ಆರ್ಥಿಕತೆಯನ್ನಷ್ಟೇ ಅಲ್ಲ, ತಮ್ಮ ಶತಮಾನಗಳ ಮೂಲ ಬೇರುಗಳನ್ನು ಎಂಬ ಸುಡು ವಾಸ್ತವ ನಮ್ಮನ್ನು ಕಾಡಬೇಕಲ್ಲವೇ ?
ಸಾಂಸ್ಕೃತಿಕ ನಗರಿಯ ಪಲ್ಲಟದ ಹಾದಿ
ಮೈಸೂರು ಬೃಹನ್ನಗರಿ ಆದರೆ, ಇಲ್ಲಿ ಶತಮಾನಗಳಿಂದ ಜೀವಂತವಾಗಿರುವ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಜನಪದೀಯ ನೆಲೆಗಳ ಅವಕಾಶಗಳೂ ವಿಸ್ತರಿಸುತ್ತವೆಯೇ ? ಬೃಹತ್ ಮೈಸೂರಿನಲ್ಲಿ ಹೆಚ್ಚಿನ ರಂಗಮಂದಿರಗಳು ನಿರ್ಮಾಣವಾಗುವುದೇ ? ನುಂಗಿಹಾಕಲ್ಪಟ್ಟ ಗ್ರಾಮಗಳ ದುಡಿಯುವ ಜೀವಗಳಿಗೆ ಅಗತ್ಯವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಪ್ರಾಥಮಿಕ ಶಾಲೆಗಳು ಹೆಚ್ಚು ನಿರ್ಮಾಣವಾಗುತ್ತವೆಯೇ ? ಕೈಗೆಟುಕುವ ಸುಲಭ ದರದಲ್ಲಿ ಜೀವನಾವಶ್ಯ ವಸ್ತುಗಳು ದೊರೆಯುವ ಸಣ್ಣ ಮಾರುಕಟ್ಟೆಗಳು ಬೆಳೆಯುತ್ತವೆಯೇ್? ಉತ್ಪಾದಕೀಯ ನೆಲೆಯಿಂದ ಶ್ರಮಜೀವೀಕರಣಕ್ಕೊಳಗಾಗಿ ನಗರಗಳಲ್ಲಿ ಲೀನವಾಗುವ ಅಪಾರ ಸಂಖ್ಯೆಯ ಶ್ರಮಿಕರಿಗೆ ಪೂರಕವಾದ ಆರ್ಥಿಕತೆ ರೂಪುಗೊಳ್ಳುವುದೇ ? ಅಥವಾ ಮೇಲ್ಪದರ ಸಮಾಜದ ಹಿತವಲಯಕ್ಕಾಗಿ ನಿರ್ಮಾಣವಾಗುವ ಅತ್ಯಾಧುನಿಕ ಬಡಾವಣೆಗಳಲ್ಲಿ ಈ ಶ್ರಮಿಕರಿಗೆ ವಸತಿ ಸೌಲಭ್ಯ ದೊರೆಯುವುದೇ ? ಈ ಯಾವುದೇ ಪ್ರಶ್ನೆಗಳಿಗೂ ಹೌದು ಎನ್ನಲು ನಿದರ್ಶನಗಳೇ ಇಲ್ಲ. ಈ ಶ್ರಮಜೀವಿಗಳು ನಗರೀಕರಣದ ಸೌಂದರ್ಯಕ್ಕೆ ಅಡ್ಡಿಯಾಗಬಾರದೆಂದು, ಹೊರವಲಯಗಳಲ್ಲಿ ವಸತಿಗಳನ್ನು ಒದಗಿಸಲಾಗುತ್ತದೆ. ಇದನ್ನು ನಗರ ಕೊಳೆಗೇರಿ ( City Slums) ಎಂದು ಕರೆಯಲಾಗುತ್ತದೆ.
ನವ ಉದಾರವಾದಿ ಕಾರ್ಪೋರೇಟ್ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವೂ ಬಹುಮುಖ್ಯ ವಲಯವಾಗಿರುವ ಕಾರಣ, ಪ್ರವಾಸೋದ್ಯಮದ ಅಭಿವೃದ್ಧಿಯ ನೆಪದಲ್ಲಿ ಹಸಿರು, ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲಗಳು ಕ್ರಮೇಣ ಬಲಿಯಾಗುತ್ತಲೇ ಹೋಗುತ್ತದೆ. ಪ್ರವಾಸೋದ್ಯಮದ ಮುಖ್ಯ ಫಲಾನುಭವಿಗಳಾದ ಮೇಲ್ಪದರ ಸಮಾಜದ ಐಷಾರಾಮಿ ಅಗತ್ಯತೆಗಳಿಗೆ ಪೂರಕವಾದ ರಸ್ತೆ, ಮೇಲ್ಸೇತುವೆ, ಹೋಟೆಲ್, ರೆಸಾರ್ಟ್, ಮಾಲ್‌ಗಳು ನಿರ್ಮಾಣವಾಗುತ್ತವೆ. ಇಲ್ಲಿ ಸದ್ದಿಲ್ಲದೆ ನಾಶವಾಗುವುದು ಶತಮಾನಗಳಿಂದ ಕಾಪಿಟ್ಟುಕೊಂಡು ಬಂದಂತಹ ಸ್ಥಳೀಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೆಲೆಗಳು. ಹೈದರಾಲಿ ರಸ್ತೆಯಲ್ಲಿ 40 ಮರಗಳ ಹನನಕ್ಕೆ ಅರಣ್ಯ ಇಲಾಖೆ ಸಮ್ಮತಿಸಿರುವುದನ್ನು ಇದೇ ವ್ಯವಸ್ಥೆಯ ಒಂದು ಭಾಗವಾಗಿ ನೋಡಬೇಕಿದೆ. ಮೈಸೂರಿನ ಹೊರವಲಯದಲ್ಲಿ ಇನ್ನೂ ನೂರಕ್ಕೂ ಹೆಚ್ಚು ಮರಗಳ ಬಲಿಪೀಠ ಸಿದ್ಧವಾಗಿದ್ದು, ಪರಿಸರವಾದಿಗಳ ಹೋರಾಟದ ಫಲವಾಗಿ, ಆಗದೆ ಇರಬಹುದು.
ಜನಪ್ರಾತಿನಿಧ್ಯದ ಆದ್ಯತೆಗಳು
ಈ ಎಲ್ಲ ಸಮಸ್ಯೆಗಳಿಂದಾಚೆಗೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಗಳು 2023ರಲ್ಲಿ ನಡೆಯಬೇಕಿದ್ದುದು ಈವರೆಗೂ ನಡೆದಿಲ್ಲ. ಜನಪ್ರತಿನಿಧಿಗಳಿಲ್ಲದೆ ಅಧಿಕಾರಶಾಹಿಯ ಹಿಡಿತದಲ್ಲಿರುವ ಮೈಸೂರು ನಗರ ಈಗ ಗ್ರೇಟರ್ ಮೈಸೂರು ಅಥವಾ ಬೃಹತ್ ಮೈಸೂರು ಆಗುವುದರಿಂದ, ಒಳಗೆ ಸೇರಿಸಲ್ಪಡುವ 20-30 ಹಳ್ಳಿಗಳನ್ನೂ ಸೇರಿದಂತೆ, ಜನಪ್ರಾತಿನಿಧ್ಯದ ಅನುಪಾತಗಳು ಪಲ್ಲಟವಾಗುತ್ತವೆ. ಈಗ ಮೈಸೂರಿನಲ್ಲಿರುವ 65 ವಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ವಾರ್ಡ್‌ಗಳ ಪ್ರಾದೇಶಿಕ ವಿನ್ಯಾಸ ಮತ್ತು ವಿಸ್ತೀರ್ಣ ಬದಲಾಗುತ್ತದೆ. ಇದರಿಂದ ಈ ನುಂಗಿಹಾಕಲ್ಪಟ್ಟ ಗ್ರಾಮಗಳಲ್ಲಿದ್ದ ಗ್ರಾಮ-ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳು ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಂಡು, ನಗರಪಾಲಿಕೆಯ ಭಾಗವಾಗಬೇಕಾಗುತ್ತದೆ. ಮುಂದೆ ನಡೆಯಬಹುದಾದ ಚುನಾವಣೆಗಳಲ್ಲಿ ಪ್ರಾತಿನಿಧ್ಯದ ಲಕ್ಷಣಗಳೇ ಬದಲಾಗಿ, ನಗರೀಕರಣಕ್ಕೊಳಗಾದ ಸಮಾಜದ ಪ್ರಬಲ ವರ್ಗಗಳು ಆಡಳಿತ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುತ್ತವೆ
ಇದು ಕೇವಲ ಅಂಕಿ ಸಂಖ್ಯೆಗಳ ಸಮಸ್ಯೆಯಲ್ಲ. ಸಮಾಜ, ಸಂಸ್ಕೃತಿ, ತಳಮಟ್ಟದ ಪ್ರಜಾಸತ್ತಾತ್ಮಕ ನೆಲೆಗಳು, ಅವಕಾಶವಂಚಿತ ಜನಸಮುದಾಯಗಳ ಪ್ರಾತಿನಿಧ್ಯ ಮತ್ತು ಕಳೆದುಹೋಗುವ ಸಾಂಸ್ಕೃತಿಕ ಅಸ್ಮಿತೆಗಳ ಪ್ರಶ್ನೆ. ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕು ಜಿಲ್ಲಾ ಪಂಚಾಯತಿ ಚುನಾವಣೆಗಳೂ ನಡೆದಿಲ್ಲ. ಈಗ ಮೈಸೂರು ಮಹಾನಗರ ಪಾಲಿಕೆಯ ಆದ್ಯತೆ ಚುನಾವಣೆಗಳನ್ನು ನಡೆಸುವುದಾಗಬೇಕಿತ್ತು. ಆದರೆ ದುರದೃಷ್ಟವಶಾತ್ ಅಧಿಕಾರಶಾಹಿ ಮತ್ತು ಆಡಳಿತ ವ್ಯವಸ್ಥೆ ಇದನ್ನು ಮನಗಾಣುವುದರಲ್ಲಿ ವಿಫಲವಾಗಿವೆ. ಬದಲಾಗಿ ಮೈಸೂರನ್ನು ಬೃಹನ್ನಗರಿಯನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿವೆ. ಇದು ಮೈಸೂರಿನ ಪಾರಂಪರಿಕ ಸೊಬಗು ಮತ್ತು ಸಾಂಸ್ಕೃತಿಕ ಸೌಂದರ್ಯವನ್ನು ವಿನಾಶದೆಡೆಗೆ ಕೊಂಡೊಯ್ಯುವ ಹೆಜ್ಜೆಯಾಗಲಿದೆ. ಬೃಹನ್ ನಗರ ಎಂಬ ಸಾಮ್ರಾಜ್ಯಶಾಹಿ ನಗರೀಕರಣದ ಪರಿಕಲ್ಪನೆಯನ್ನು ದೇಸೀ ನೆಲೆಯಲ್ಲಿ ಸಾಕಾರಗೊಳಿಸುವ ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆಯ ಈ ನಡೆ, ಬಹುಶಃ ಮೈಸೂರಿನ ಶತಮಾನಗಳ ಸಾಂಸ್ಕೃತಿಕ ಇತಿಹಾಸವನ್ನು ಕಡೆಗಣಿಸುತ್ತಲೇ, ಅಭಿವೃದ್ಧಿಯ ಮಾದರಿಯಾಗುತ್ತದೆ.
ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಯಲ್ಲಿ ಸಾಮಾಜಿಕ ವೆಚ್ಚ (Social Cost), ಸಾಂಸ್ಕೃತಿಕ ವೆಚ್ಚ (Cultural Cost) ಇವೆರಡನ್ನೂ ನಿರ್ಲಕ್ಷಿಸಿ, ಕೇವಲ ಆರ್ಥಿಕ ವೆಚ್ಚವನ್ನು (Economic Cost) ಮಾತ್ರವೇ ಪರಿಗಣಿಸುವುದು ಜಾಗತಿಕ ವಿದ್ಯಮಾನ. ಇದರ ಒಂದು ಆಯಾಮವನ್ನು ಭಾರತದ ನಗರೀಕರಣ ಪ್ರಕ್ರಿಯೆಯಲ್ಲಿ, ಇದೀಗ ಮೈಸೂರಿನ ಬೃಹತ್ ಆಗುವ ಕನಸಿನಲ್ಲಿ ಕಾಣುತ್ತಿದ್ದೇವೆ. ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ, ಕೆಆರ್‌ಎಸ್ ಅಣೆಕಟ್ಟಿನ ಬಳಿ ಡಿಸ್ನಿ ಪಾರ್ಕ್ ಮೊದಲಾದ ಮಾರುಕಟ್ಟೆ ಯೊಜನೆಗಳು ಈ ಕನಸಿನ ಒಂದು ಭಾಗ ಎನ್ನುವುದನ್ನೂ ಮೈಸೂರಿನ ನಾಗರಿಕರು ಗಮನಿಸಬೇಕಿದೆ. ಇದು ರಾಜಕೀಯ ಪ್ರಶ್ನೆಯಲ್ಲ. ತಳಸಮಾಜವನ್ನೂ, ಮೇಲ್ದದರ ಸಮಾಜವನ್ನೂ ಸಮಾನವಾಗಿ ಕಾಡುವ ಬದುಕಿನ ಪ್ರಶ್ನೆ. ಇದರ ವಿರುದ್ಧ ನಮ್ಮ ದನಿ ಇರಲಿ.
ಇದನ್ನೂ ನೋಡಿ: IPL 2025 | ಪ್ಲೇಆಫ್ ಲೆಕ್ಕಾಚಾರ ಶುರು: ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? Janashakthi Media