ಡಾ. ಸಿ.ಪಿ. ಚಂದ್ರಶೇಖರ್
ಇದರ ಫಲಿತಾಂಶವೆಂದರೆ, ಸಂಪತ್ತು ಮತ್ತು ಆರ್ಥಿಕ ಶಕ್ತಿಯ ವಿಪರೀತ ಕೇಂದ್ರೀಕರಣದತ್ತ ಬಹುತೇಕ ಪಟ್ಟುಬಿಡದ ನಡೆ
ದೊಡ್ಡ5 ಉದ್ಯಮ ಸಮೂಹಗಳ ಒಡೆತನದ ಹಣಕಾಸೇತರ ವಲಯಗಳಲ್ಲಿನ ಸೊತ್ತುಗಳ ಪಾಲು 1991 ರಲ್ಲಿ 10% ಇದ್ದದ್ದು 2021 ರಲ್ಲಿ ಸುಮಾರು 18% ಕ್ಕೆ ಏರಿದೆ, ಆದರೆ ಅವರ ಕೆಳಗಿನ ಐದು ಉದ್ದಿಮೆ ಸಮೂಹಗಳ ಪಾಲು 18% ಇದ್ದದ್ದು,9% ಕ್ಕಿಂತಲೂ ಕೆಳಕ್ಕೆ ಇಳಿದಿದೆಎಂದು ಒಂದು ಅಧ್ಯಯನ ಹೇಳುತ್ತದೆ. ಕೈಗಾರಿಕಾ ಕೇಂದ್ರೀಕರಣದಲ್ಲಿ ಇಂತಹ ಕ್ಷಿಪ್ರಏರಿಕೆ ಅಪಾಯಗಳಿಂದ ತುಂಬಿದೆ ಎಂಬುದನ್ನು ಈ ಹಿಂದೆಪ್ರಪಂಚದಾದ್ಯಂತ ಗುರುತಿಸಲಾಗಿದೆ. ಇದರೊಂದಿಗೇ, ಹೀಗೆ ವಿಪರೀತವಾಗಿ ಹಿಗ್ಗಿದ ಉದ್ದಿಮೆ ಸಮೂಹಗಳ ಬೆಳವಣಿಗೆಯನ್ನು ನೇರವಾಗಿ ತಡೆಯಬೇಕಾಗುತ್ತದೆ, ಅಷ್ಟೇ ಏಕೆ, ಕಳವಳ ಉಂಟುಮಾಡುವಷ್ಟು ದೊಡ್ಡದಾಗಿ ಬೆಳೆಯುತ್ತಿರುವಂತೆ ಕಾಣುವ ಸಮೂಹಗಳನ್ನು ಒಡೆಯಬೇಕಾಗುತ್ತದೆ ಕೂಡ ಎಂಬ ತರ್ಕ ಹುಟ್ಟಿಕೊಂಡಿತ್ತು. ಮೋದಿಯವರ ನವಭಾರತದಲ್ಲಿ ಈಗ ಅಂತಹ ಸನ್ನಿವೇಶ ಉಂಟಾಗಿದ್ದರೂ ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ, ಅಂತಹ ಯಾವುದೇ ಅಭಿಪ್ರಾಯವನ್ನು ಹತ್ತಿಕ್ಕಲು ಪ್ರಭುತ್ವದ ಅಧಿಕಾರವನ್ನು ಬಳಸಲಾಗುತ್ತಿದೆ.
ಹಿಂಡೆನ್ಬರ್ಗ್ ರಿಸರ್ಚ್ ಕೂಡ ಭಾರತದ ದೊಡ್ಡ ಉದ್ಯಮಿಗಳ ಮುನ್ನಡೆಯನ್ನು ತಡೆಯುವಂತೆ ಕಾಣುತ್ತಿಲ್ಲ. ಅದಾನಿ ಸಮೂಹ ನಿಧಾನಗತಿಯಲ್ಲಾದರೂ, ತನ್ನ ಗಳಿಕೆಗಳನ್ನು ಮುಂದುವರೆಸಿದೆ ಮತ್ತು ಅದು ಸಾಲದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಲೆಕ್ಕಾಚಾರಗಳ ಹೊರತಾಗಿಯೂ ಹೆಚ್ಚಿನ ಹಣವನ್ನು
ಸಾಲವಾಗಿ ನೀಡುವಂತೆ ಹಣಕಾಸು ಮಾರುಕಟ್ಟೆಗಳ ಮನವೊಲಿಸಲು ಅದಕ್ಕೆ ಸಾಧ್ಯವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಂದು ಹೊಸ ಸಂಸ್ಥೆಯನ್ನು ಸ್ಥಾಪಿಸಲು ಈ ಮೊದಲು ವಿಲೀನಗೊಳಿಸಿದ್ದ ತನ್ನ ಹಣಕಾಸು ಸೇವೆಗಳ ವಿಭಾಗವನ್ನು ಮತ್ತೆ ಪ್ರತ್ಯೇಕಗೊಳಿಸುವುದಾಗಿ ಘೋಷಿಸಿದೆ, ಇದನ್ನು ಮಾಧ್ಯಮ ಹಣಕಾಸು ಸೇವೆಗಳ ಉದ್ಯಮದಲ್ಲಿ ಪ್ರಬಲವಾದ ಅಸ್ತಿತ್ವವನ್ನು ಸ್ಥಾಪಿಸುವ ಈ ಸಮೂಹದ ಪ್ರಯತ್ನವೆಂಬ ಊಹಾಪೋಹಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದೂರಸಂಪರ್ಕಮತ್ತು ಚಿಲ್ಲರೆ ವ್ಯಾಪಾರದಿಂದ ಹಿಡಿದು ಮಾಧ್ಯಮ ಮತ್ತು ಮನರಂಜನಾ ವ್ಯವಹಾರಗಳ ವರೆಗೆ ವಿಸ್ತರಿಸಿರುವ ಕ್ಷೇತ್ರಗಳಲ್ಲಿ ಈ ಸಮೂಹ
ಅಳವಡಿಸಿಕೊಂಡ ಕಾರ್ಯತಂತ್ರದ ಪುನರಾವರ್ತನೆಯಾಗಿ ಇದನ್ನು ನೋಡಲಾಗುತ್ತಿದೆ. ಟಾಟಾಗಳು ಮತ್ತು ಆದಿತ್ಯ ಬಿರ್ಲಾ ಸಾಮ್ರಾಜ್ಯದಂತಹ ಇತರ
ವ್ಯಾಪಾರ ಸಮೂಹಗಳು ಸ್ಥಿತಿಯೂ ಚೆನ್ನಾಗಿದೆ. ಭಾರತದ ದೊಡ್ಡ ಉದ್ದಿಮೆ ಸಮೂಹಗಳು ಸಮೃದ್ಧಗೊಳ್ಳುತ್ತಿರುವಂತೆ ತೋರುತ್ತಿದೆ.
ಆದರೆ ಈ ಲೆಕ್ಕಾಚಾರ ಭಾರತದಲ್ಲಿನ ಎಲ್ಲಾ ಉದ್ದಿಮೆ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ನಿಜವಲ್ಲ. ಅನೌಪಚಾರಿಕ ಉದ್ಯಮಗಳ ಬೃಹತ್ ಸಮೂಹ ಮಾತ್ರವಲ್ಲ, ಸಣ್ಣ ಮತ್ತು ಮಧ್ಯಮ-ಪ್ರಮಾಣದ ಉದ್ದಿಮೆಗಳ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ, ಅವುಗಳಿಗೆ ಕೊವಿಡ್-19 ಉಂಟುಮಾಡಿದ ನಷ್ಟಗಳಿಂದ ಚೇತರಿಸಿಕೊಳ್ಳಲು ಇನ್ನೂ ಆಗಿಲ್ಲ. ಇಷ್ಟೇ ಅಲ್ಲ-ಅನೇಕ ಸ್ಥಾಪಿತ ದೊಡ್ಡ ಉದ್ದಿಮೆ ಹೆಸರುಗಳು ಕೂಡ ಈ ಕೆಲವೇ ದೊಡ್ಡ ಉದ್ದಿಮೆಗಳಷ್ಟು ಭಾಗ್ಯಶಾಲಿಗಳಲ್ಲ. ಮಾಜಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡೆಪ್ಯುಟಿ ಗವರ್ನರ್ ಮತ್ತು ಅವರ ಸಹ-ಲೇಖಕರು ತಮ್ಮ ಒಂದು ಬಹುಚರ್ಚಿತ ಪ್ರಬಂಧದಲ್ಲಿ ವರದಿ ಮಾಡಿರುವ ಪ್ರಕಾರ ದೊಡ್ಡ-5 ಉದ್ಯಮ ಸಮೂಹಗಳ ಒಡೆತನದ ಹಣಕಾಸೇತರ ವಲಯಗಳಲ್ಲಿನ ಸೊತ್ತುಗಳ ಪಾಲು 1991 ರಲ್ಲಿ 10% ಇದ್ದದ್ದು 2021 ರಲ್ಲಿ ಸುಮಾರು 18% ಕ್ಕೆ ಏರಿದೆ, ಆದರೆ ಅವರ ಕೆಳಗಿನ ಐದು ಉದ್ದಿಮೆ ಸಮೂಹಗಳ ಪಾಲು 18% ಇದ್ದದ್ದು, 9% ಕ್ಕಿಂತಲೂ ಕೆಳಕ್ಕೆ ಇಳಿದಿದೆ. ಈ ರೀತಿ ಸೊತ್ತುಗಳ ಸಾಂದ್ರೀಕರಣ ಹಣದುಬ್ಬರವನ್ನು ಗಾಢಗೊಳಿಸುತ್ತಿದೆ ಎಂದು ಅವರು ಹೇಳುತ್ತಿರುವುದನ್ನು ಪ್ರಶ್ನಿಸಲಾಗಿದೆಯಾದರೂ, ಸಾಂದ್ರೀಕರಣ ಗಮನಾರ್ಹವಾಗಿ ಹೆಚ್ಚಿದೆ ಎಂಬುದಕ್ಕೆ ಅವರು ಕೊಡುವ ಪುರಾವೆಯನ್ನು ಪ್ರಶ್ನಿಸಲಾಗಿಲ್ಲ.
ಪ್ರಭುತ್ವವನ್ನು ವಶಪಡಿಸಿಕೊಳ್ಳುವತ್ತ
ಕೈಗಾರಿಕಾ ಕೇಂದ್ರೀಕರಣದಲ್ಲಿ ಇಂತಹ ಕ್ಷಿಪ್ರ ಏರಿಕೆ ಅಪಾಯಗಳಿಂದ ತುಂಬಿದೆ ಎಂಬುದನ್ನು ಈ ಹಿಂದೆ ಪ್ರಪಂಚದಾದ್ಯಂತ ಗುರುತಿಸಲಾಗಿದೆ. ಸ್ಪರ್ಧೆಯನ್ನು ನಿಗ್ರಹಿಸುವ ಮಾರುಕಟ್ಟೆಯ ಶಕ್ತಿಯನ್ನು ಬಳಸಿಕೊಂಡು ಈ ಪ್ರಕ್ರಿಯೆಯು ಬೆಳೆಯುತ್ತದೆ. ಇದು ವೆಚ್ಚಗಳು ಮತ್ತು ಬೆಲೆಗಳಲ್ಲಿ ಕೈಚಳಕ ನಡೆಸುವ ಮೂಲಕ ಲಾಭದ ಉಬ್ಬರ ಅಥವಾ ಲಾಭಕೋರತನಕ್ಕೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇದು ವಿಪರೀತ ಆಸ್ತಿಯ ಮತ್ತು ಆದಾಯದ ಅಸಮಾನತೆಯನ್ನು ಬೆಳೆಸುತ್ತದೆ. ಇದು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲೆ ಪ್ರಭಾವ ಬೀರುವಂತೆ ಪ್ರಯತ್ನಗಳನ್ನು ನಡೆಸುವಂತೆ ಪ್ರಚೋದಿಸುತ್ತದೆ ಮತ್ತು ಮಾಧ್ಯಮವನ್ನು ಕೈವಶಮಾಡಿಕೊಳ್ಳುವುದು ಮುಂತಾದ ವಿಧಾನಗಳ ಮೂಲಕ, ಇದನ್ನು ಎದುರಿಸುವ ಶಕ್ತಿಯಾಗಿ ನಾಗರಿಕ ಸಮಾಜ ವಹಿಸಬಹುದಾದ ಪಾತ್ರವನ್ನು ದುರ್ಬಲಗೊಳಿಸುತ್ತದೆ. ಕ್ರಮೇಣ ಇದು ರಾಜಕೀಯ ಪ್ರಕ್ರಿಯೆಗಳು ಮತ್ತು ನೀತಿ ನಿರೂಪಣೆಗಳ ಮೇಲೂ ಅನಗತ್ಯ ಕಾರ್ಪೊರೇಟ್ ಪ್ರಭಾವಕ್ಕೆ, ಇನ್ನೇನು ಪ್ರಭುತ್ವವನ್ನೇ ಕೈವಶ ಮಾಡಿಕೊಳ್ಳಬಹುದೆಂಬಂತಹ ಪ್ರವೃತ್ತಿಗಳಿಗೆ ದಾರಿ ಮಾಡಿಕೊಡುತ್ತದೆ.
ಈ ಪ್ರವೃತ್ತಿಗಳನ್ನು ‘ಮಾರುಕಟ್ಟೆ’ಯಲ್ಲಿನ ಸ್ಪರ್ಧೆ ತಡೆಯಲಾರದು, ಬದಲಿಗೆ, ಇದು ಮಾರುಕಟ್ಟೆಗಳ ಕಾರ್ಯನಿರ್ವಹಣೆಯ ಪರಿಣಾಮವೇ ಆಗಿದೆ ಎಂದು ಗುರುತಿಸಿರುವುದು ಈ ಭಯಗಳನ್ನು ಗಟ್ಟಿಗೊಳಿಸಿದೆ. ಆಸ್ತಿ ಮತ್ತು ಆದಾಯದ ಅಸಮಾನತೆ ಮತ್ತು ಅದರಿಂದಾಗಿ ಆರ್ಥಿಕ ಮಾಧ್ಯಮಗಳ ನಡುವೆ ಬಲಾಬಲಗಳ
ಏರುಪೇರುಗಳಿಂದಾಗಿ ‘ಮಾರುಕಟ್ಟೆ’ಯ ನಿರ್ವಹಣೆ ಹಲವು ಕಾರಣಗಳಿಂದಾಗಿ ಹೆಚ್ಚು ಆಸ್ತಿ ಹೊಂದಿರುವವರಿಗೇ ಅನುಕೂಲಕರವಾಗುತ್ತದೆ. ಇದು
ಸಾಂದ್ರೀಕರಣ ಮತ್ತು ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ. ಈ ಬೆಳವಣಿಗೆಯನ್ನು ಗುರುತಿಸಿದಾಗ, ಮಾರುಕಟ್ಟೆಗಳ ವರ್ತನೆಗಳಿಂದ ಉಂಟಾಗಬಹುದಾದ
ದುರ್ವ್ಯವಹಾರಗಳನ್ನು ತಡೆಯಲು ಮಾರುಕಟ್ಟೆಗಳನ್ನು ನಿಯಂತ್ರಿಸಬೇಕಾದ್ದು ಅಗತ್ಯವಷ್ಟೇ ಅಲ್ಲ, ಪ್ರಬಲವಾದ ಉದ್ದಿಮೆಗಳನ್ನು ಮತ್ತು ವಿಪರೀತವಾಗಿ ಹಿಗ್ಗಿದ ಉದ್ದಿಮೆ ಸಮೂಹಗಳ ಬೆಳವಣಿಗೆಯನ್ನು ನೇರವಾಗಿ ತಡೆಯಬೇಕಾಗುತ್ತದೆ ಕೂಡ, ಅಷ್ಟೇ ಏಕೆ, ಕಳವಳ ಉಂಟುಮಾಡುವಷ್ಟು ದೊಡ್ಡದಾಗಿ ಬೆಳೆಯುತ್ತಿರುವಂತೆ ಕಾಣುವ ಸಮೂಹಗಳನ್ನು ಒಡೆಯಬೇಕಾಗುತ್ತದೆ ಕೂಡ ಎಂಬ ತರ್ಕ ಹುಟ್ಟಿಕೊಂಡಿತು.
ದೊಡ್ಡ ಬಂಡವಳಿಗರಿಗೆ ಉತ್ತೇಜನೆ
ತೊಂದರೆ ಏನೆಂದರೆ, ಇಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕ ಸಮಾಜದ ಧ್ವನಿಗಳು ಪ್ರತಿಪಾದಿಸಬಹುದಾದರೂ, ಅಂತಿಮವಾಗಿ, ಇದಕ್ಕೆ ಅಗತ್ಯವಿರುವ ನೀತಿಗಳನ್ನು ಪ್ರಭುತ್ವವೇ ಜಾರಿಗೊಳಿಸಬೇಕಾಗುತ್ತದೆ. ಮತ್ತು ಈ ಪ್ರಭುತ್ವದ ಸ್ವರೂಪವು ಕೂಡ ಸಮಾಜದಲ್ಲಿನ ಸಂರಚನೆಗಳು ಬೀರುವ ಪ್ರಭಾವದಿಂದ ಸ್ವತಂತ್ರವಾಗಿಲ್ಲ. ಪ್ರಜಾಪ್ರಭುತ್ವಗಳು ಸಾಮಾನ್ಯವಾಗಿ ಖಾಸಗಿ ಬಂಡವಾಳದಿಂದ ಮತ್ತು ನಿರ್ದಿಷ್ಟವಾಗಿ ದೊಡ್ಡ ಬಂಡವಳಿಗರಿಂದ ಸ್ವಲ್ಪ ದೂರವನ್ನು ಕಾಯ್ದುಕೊಳ್ಳುವಂತೆ ಸರ್ಕಾರಗಳನ್ನು ಒತ್ತಾಯಿಸಲು ತೀವ್ರವಾಗಿ ಹೋರಾಡಿವೆ. ಆ ಪ್ರಯತ್ನಗಳು ನಿರ್ದಿಷ್ಟ ಐತಿಹಾಸಿಕ ಸಂದರ್ಭಗಳಲ್ಲಿ ಭಾಗಶಃ
ಯಶಸ್ವಿಯಾಗಿವೆ, ಇದರ ಪರಿಣಾಮವಾಗಿ ಏಕಸ್ವಾಮ್ಯ ಮತ್ತು ಟ್ರಸ್ಟೀಕರಣದ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವುದು ಮುಂತಾದವು ನಡೆದವು.
ಭಾರತದಲ್ಲಿ ಸ್ವಾತಂತ್ರ್ಯದ ನಂತರ ಈ ತೆರನ ಪ್ರಯತ್ನಗಳು ಕಂಡುಬಂದವು, ವಿಭಿನ್ನ ವರ್ಗಗಳ ವಿಶಾಲ ಮೈತ್ರಿಕೂಟವಾಗಿದ್ದ ಸ್ವಾತಂತ್ರ್ಯ ಚಳುವಳಿಯಿಂದ ಒಂದು ರಾಷ್ಟ್ರೀಯ ಪ್ರಭುತ್ವವು ಹೊರಹೊಮ್ಮಿತು. ಆದರೆ, ಕ್ರಮೇಣ ಪ್ರಭುತ್ವ ಮತ್ತು ಖಾಸಗಿ ಬಂಡವಾಳದ ನಡುವಿನ ಅಂತರವು ಬಹಳವಾಗಿ ಕಡಿಮೆಯಾಗಿ, ಈಗ ಪ್ರಭುತ್ವವು ದೊಡ್ಡ ಬಂಡವಳಿಗರನ್ನು ನಿಯಂತ್ರಿಸುವ ಅಥವ ತಡೆಯುವ ಬದಲು ಅದನ್ನೇ ಉತ್ತೇಜಿಸುವ ಪ್ರಸಕ್ತ ಸನ್ನಿವೇಶ ಉಂಟಾಗಿದೆ. ಈ ಚೌಕಟ್ಟಿನಲ್ಲಿ ಎಷ್ಟು ಮತ್ತು ಯಾವ ಉದ್ದಿಮೆ ಸಮೂಹಗಳನ್ನು ಎಷ್ಟರ ಮಟ್ಟಿಗೆ ಉತ್ತೇಜಿಸಬೇಕು ಎಂಬುದಕ್ಕೆ ಯಾವುದೇ ಕಟ್ಟಳೆಗಳಿರುವುದಿಲ್ಲ.
ಇದನ್ನೂ ಓದಿ:ಚಂದ್ರಯಾನಕ್ಕೆ ಬೇಕೆ ದೇವರ ಕೃಪಾಶೀರ್ವಾದ?
ಮೂರು ಪ್ರವೃತ್ತಿಗಳು
ಪ್ರಭುತ್ವ ಮತ್ತು ದೊಡ್ಡ ಬಂಡವಳಿಗರ ನಡುವಿನ ರಾಜಕೀಯ ಅಂತರ ಕಡಿಮೆಯಾಗಿರುವುದನ್ನು ಮೂರು ಪ್ರವೃತ್ತಿಗಳು ಸೂಚಿಸಿವೆ.
ಮೊದಲನೆಯದಾಗಿ, ಪ್ರಭುತ್ವದ ಒಳಗೆ ಮತ್ತು ಹೊರಗೆ ಪ್ರಬಲ ಧ್ವನಿಗಳು ನವ ಉದಾರವಾದವನ್ನು ಆಲಿಂಗಿಸಿರುವುದು. ಇದರ ಅರ್ಥವೆಂದರೆ, ಪ್ರಭುತ್ವದ ಪಾತ್ರವು ಖಾಸಗಿ ಬಂಡವಾಳವನ್ನು ನಿಯಂತ್ರಿಸುವುದಲ್ಲ, ಬದಲಿಗೆ ಸರ್ವತೋಮುಖ ಆರ್ಥಿಕ ಪ್ರಗತಿಗೆ ಸಾಧನವಾಗಿ ಅದರ ಬೆಳವಣಿಗೆಗೆ ಅನುಕೂಲ ಕಲ್ಪಿಸಿಕೊಡುವುದು ಎಂಬ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವುದು. ವಾಸ್ತವವಾಗಿ, ನವ ಉದಾರವಾದದ ಪ್ರತಿಪಾದಕರು ಉದಾರೀಕರಣದ ವ್ಯವಸ್ಥೆಯಿಂದ ಉತ್ತೇಜನೆ ಪಡೆಯುವ ಸ್ಪರ್ಧೆಯು ಸಾಂದ್ರೀಕರಣ ನಡೆಯದಂತೆ ತಡೆಯುತ್ತದೆ ಎಂದು ವಾದಿಸಿದ್ದಾರೆ. ಆದರೆ ಕೆಲವು ವಲಯಗಳಲ್ಲಿ ಸ್ಪರ್ಧೆಯು ಹೆಚ್ಚಿದೆ ಎಂಬ ಆರಂಭಿಕ ಚಿಹ್ನೆಗಳು ಕಂಡುಬಂದರೂ, ಒಟ್ಟಾರೆಯಾಗಿ ತದ್ವಿರುದ್ಧವಾದುದೇ ಸಂಭವಿಸಿದೆ. ದೂರಸಂಪರ್ಕ ಮತ್ತು ನಾಗರಿಕ ವಿಮಾನಯಾನದಂತಹ ಕ್ಷೇತ್ರಗಳಲ್ಲಿಯೂ ಸಹ, ಆರಂಭದಲ್ಲಿ ಹೊಸ ಉದ್ಯಮಿಗಳ ಸಂಖ್ಯೆ ಹೆಚ್ಚಿದರೂ ಕೂಡ, ಅದರ ಜೊತೆಗೆ ಬಂದ ಸಾಮಾಜಿಕ ಪೋಲು ಒಂದು ಮಂಥನ ಪ್ರಕ್ರಿಯೆಯನ್ನು ಪ್ರಚೋದಿಸಿತು, ಅದು ಅಂತಿಮವಾಗಿ ಕೆಲವರನ್ನು ಮಾತ್ರ ರಂಗದಲ್ಲಿ ಉಳಿಯಲು ಬಿಟ್ಟಿತು, ಅದರಲ್ಲಿ ಕೂಡ ಪರಸ್ಪರ ಶಾಮೀಲಿನ ಚಿಹ್ನೆಗಳು ಕಂಡವು. ಇದರಿಂದ ಅಂತಿಮವಾಗಿ ನಷ್ಟವಾಗುವುದು ಗ್ರಾಹಕರಿಗೇ.
ಎರಡನೆಯದು, ದೇಶೀ ದೊಡ್ಡ ಬಂಡವಳಿಗರು ದೈತ್ಯ ಜಾಗತಿಕ ಪ್ರತಿಸ್ಪರ್ಧಿಗಳ ವಿರುದ್ಧ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುವಂತೆ ಅವುಗಳನ್ನು ಬಲಪಡಿಸಲು ಮಾತ್ರವಲ್ಲ, ಅವು ಭಾರತದ ಗಡಿಗಳಾಚೆ ಹೆಜ್ಜೆ ಹಾಕಲು ಪ್ರಭುತ್ವವು ಸಹಾಯ ಮಾಡಬೇಕು, ಎಂಬ ದೃಷ್ಟಿಕೋನದ ಪ್ರತಿಪಾದನೆ. ಪ್ರಭುತ್ವ ನೀತಿ, ರಾಜತಾಂತ್ರಿಕತೆ ಮತ್ತು ಸಾರ್ವಜನಿಕ ಸಂಪನ್ಮೂಲಗಳು, ಸಾರ್ವಜನಿಕ ಬ್ಯಾಂಕ್ಗಳ ಮೂಲಕ ಹರಿಸಿದವುಗಳು ಕೂಡ ಈ ಉದ್ದೇಶ ಸಾಧನೆಯ ಸಾಧನಗಳಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಉದಾರೀಕರಣವು ಭಾರತೀಯ ಮಾರುಕಟ್ಟೆಗಳನ್ನು ತೆರೆದಾಗ ಮತ್ತು ಭಾರತೀಯ ಉದ್ದಿಮೆಗಳನ್ನು ಜಾಗತಿಕ ಸ್ಪರ್ಧೆಗೆ ಒಡ್ಡಿದಾಗ, ದೊಡ್ಡ ಉದ್ಯಮಿಗಳ ಕೆಲವು ವಿಭಾಗಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಪ್ರಭುತ್ವದ ಮಧ್ಯಪ್ರವೇಶವನ್ನು ದೊಡ್ಡ ಪ್ರಮಾಣದ ಸಬ್ಸಿಡಿಗಳು ಮತ್ತು ವರ್ಗಾವಣೆಗಳ ಮೂಲಕ ಮಾತ್ರವಲ್ಲ ಬೇರೆ ರೀತಿಗಳಲ್ಲೂ ಮಾರ್ಪಡಿಸಲಾಯಿತು.
ಮೂರನೆಯದು, ರಾಜಕೀಯದಲ್ಲಿ ಹಣದ ಪ್ರಭಾವವನ್ನು ಇಳಿಸಲು ನಿರಾಕರಿಸುವುದು. ಈ ಸಂದರ್ಭದಲ್ಲಿ, ದೊಡ್ಡ ಬಂಡವಳಿಗರೊಂದಿಗೆ ರಾಜಕೀಯ ಪಕ್ಷಗಳ (ಮತ್ತು ಅವರು ಮುನ್ನಡೆಸುವ ಸರ್ಕಾರಗಳ) ನಿಕಟತೆಯು ಚುನಾವಣೆಗಳನ್ನು “ನಿಭಾಯಿಸಲು” ಮತ್ತು ಚುನಾವಣಾ ಬೆಂಬಲವನ್ನು ಗೆಲ್ಲಲು ಅಗತ್ಯವಾದ ಸಂಪನ್ಮೂಲಗಳನ್ನು ಪೇರಿಸಿಕೊಳ್ಳಲು ಒಂದು ಅತ್ಯಗತ್ಯ ಅಂಶವಾಯಿತು. ಕ್ರಮೇಣ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳನ್ನು ಕಾನೂನುಬದ್ಧಗೊಳಿಸಲು ನೀತಿಯನ್ನು ಬದಲಾಯಿಸಲಾಗಿದೆ. ಇದರಲ್ಲಿ ಕುಖ್ಯಾತ ಚುನಾವಣಾ ಬಾಂಡ್ಗಳ ಯೋಜನೆಯೂ ಸೇರುತ್ತದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಭೀತಿ ಹುಟ್ಟಿಸುವ ಸಂಗತಿಯೆಂದರೆ, ಈ ಪ್ರವೃತ್ತಿಗಳು ಒಟ್ಟಾಗಿ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಉತ್ತೇಜಿಸುವ ಭಾಗವಾಗಿ ಭಾರತೀಯ ಉದ್ದಿಮೆಗಳನ್ನು ಬಲಪಡಿಸುವ ಹೆಸರಿನಲ್ಲಿ ಪ್ರಭುತ್ವವು ಕೆಲವೇ ಉದ್ದಿಮೆ ಸಮೂಹಗಳಿಗೆ ಅನುಕೂಲ ಕಲ್ಪಿಸಿ ಕೊಡುವ ಕಾರ್ಯತಂತ್ರವಾಗಿ ಬೆರೆತುಕೊಂಡಿವೆ. ಸಾಮಾನ್ಯ ಸಂದರ್ಭಗಳಲ್ಲಿ, ಇದು ವ್ಯಾಪಕ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬೇಕಿತ್ತು. ಇದು ಸ್ವತ್ತು ಮತ್ತು ಆದಾಯದ ಪಿರಮಿಡ್ನ
ಕೆಳಗಿನ ಭಾಗಗಳಲ್ಲಿರುವ ಉದ್ದಿಮೆದಾರರಲ್ಲಿ ಮಾತ್ರವಲ್ಲದೆ, ಈ ಪಿರಮಿಡ್ಡಿನ ಮೇಲ್ತುದಿಯ ಸಮೀಪದಲ್ಲಿದ್ದರೂ ಪ್ರಭುತ್ವದ ಉಪೇಕ್ಷೆ ಒಳಗಾಗಿರುವ ಹೆಚ್ಚು ಶಕ್ತಿಶಾಲಿ ಉದ್ಯಮಿಗಳ ನಡುವೆಯೂ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬೇಕಿತ್ತು. ಅದು ಅಸ್ಥಿರತೆಯನ್ನು ಉಂಟುಮಾಡುವುದಲ್ಲದೆ, ಬಹುಶಃ
ಸರಿಪಡಿಕೆಯಾಗಿಯೂ ಕೆಲಸ ಮಾಡಬಹುದಾಗಿತ್ತು. ಆದರೆ ನವ ಭಾರತದಲ್ಲಿ ಅದು ಸಂಭವಿಸಲಿಲ್ಲ, ಏಕೆಂದರೆ, ಇಲ್ಲಿಯೂ ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಅಂತಹ ಯಾವುದೇ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಭುತ್ವದ ಅಧಿಕಾರವನ್ನು ಬಳಸಲಾಗುತ್ತಿದೆ. ಇದರ ಫಲಿತಾಂಶವೆಂದರೆ, ಸಂಪತ್ತು ಮತ್ತು ಆರ್ಥಿಕ
ಶಕ್ತಿಯ ವಿಪರೀತ ಕೇಂದ್ರೀಕರಣದತ್ತ ಬಹುತೇಕ ಪಟ್ಟುಬಿಡದ ನಡೆ.
(ಕೃಪೆ: ದಿ ಹಿಂದು, ಜುಲೈ 17,2023, ಅನು: ಕೆವಿ)