ಬೆಂಗಳೂರು: ಅಸಮಾನತೆ, ಬಡತನ, ಸಿರಿತನ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾಾತರು, ಮಹಿಳೆಯರು ಕುರಿತಾಗಿ ಚಿತ್ರಗಳನ್ನು ಮಾಡಬೇಕು ಸಿನಿಮಾಗಳು ಮನರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ವಾಸ್ತವ ಸ್ಥಿತಿಯನ್ನು ತೋರಿಸುವ ಕೆಲಸ ಮಾಡಬೇಕು. ಕನ್ನಡದ ಮಟ್ಟಿಗೆ ಡಾ.ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಳಿದರು.
ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಗುರುವಾರ ಹಮ್ಮಿಕೊಳ್ಳಲಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರೋತ್ಸವಗಳಿಂದ ಬೇರೆ ದೇಶಗಳ ಜನರ ಜೀವನ, ರಾಜಕೀಯ ಮತ್ತು ಸಮಾಜದ ಬಗ್ಗೆ ಅರ್ಥವಾಗುತ್ತದೆ. ಅಸಮಾನತೆ, ಸಮಾನತೆ ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಅದಕ್ಕೆ ಚಿತ್ರೋತ್ಸವ ಸುವರ್ಣಾವಕಾಶ ಒದಗಿಸುತ್ತದೆ. ಅದನ್ನು ಉಪಯುಕ್ತವಾಗಿ ಬಳಸಿಕೊಂಡು, ಸಮಾಜದಲ್ಲಿ ಬದಲಾವಣೆ ತರಬೇಕು. ಅದು ಆಗದಿದ್ದರೆ, ಸಿನಿಮಾ ಬರೀ ಮನರಂಜನೆಗೆ ಸೀಮಿತವಾಗುತ್ತದೆ ಎಂದರು.
ಬೇಧ, ಭಾವ, ಅಸಮಾನತೆ ಹೋಗಲಾಡಿಸುವ ಕೆಲಸವನ್ನು ಸಿನಿಮಾದ ಮೂಲಕ ಮಾಡಬೇಕು. ನಮ್ಮ ಸರ್ಕಾರ ಚಲನಚಿತ್ರ ಅಭಿವೃದ್ಧಿಗೆ ಸಹಕಾರ, ಬೆಂಬಲ ಕೊಡುತ್ತದೆ. ನಾವು ಮನುಷ್ಯರು, ಮಾನವರಾಗಿ ಬಾಳುವುದು ಅವಶ್ಯಕ. ಪ್ರತಿ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಸಮಾಜ ಕಟ್ಟುವುದಕ್ಕೆ ಸಾಧ್ಯ. ಬದುಕನ್ನು ಹಸನು ಮಾಡುವ ಕೆಲಸವನ್ನು ಚಲನಚಿತ್ರಗಳು ಮಾಡಲಿ ಎಂದು ಚಿತ್ರೋತ್ಸವಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ : ಬಲವಂತದ ಹೆಚ್ಚುವರಿ ಸಮಯ – ಗುಪ್ತ ಶೋಷಣೆ ವಿರುದ್ಧ ಎಂಟಿಎಂ ಸ್ವಯಂಸೇವಕರ ಪ್ರತಿಭಟನೆ
ದೇಶ-ವಿದೇಶಗಳ ಅಪರೂಪದ ಈ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವಿದೆ. ಫೆಬ್ರವರಿ 6ರ ವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಸುಮಾರು 70 ದೇಶಗಳ ಆಯ್ದ ಸುಮಾರು 240 ಸಿನಿಮಾ ಪ್ರದರ್ಶನ ನಡೆಯಲಿದೆ. ಜಗತ್ತಿನ ಪ್ರಸಿದ್ಧ ಜನಮನ್ನಣೆಗಳಿಸುರುವ 100ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳು ಹಾಗೂ 30ಕ್ಕೂ ಹೆಚ್ಚು ವಿವಿಧ ಭಾರತೀಯ ಭಾಷೆಗಳ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಇಡೀ ದೇಶದಲ್ಲಿ ಹೆಮ್ಮೆಪಡುವಂತಹ ಕಾರ್ಯಕ್ರಮ ಇದಾಗಿದೆ. ಕಲಾವಿದರ ಕುರಿತು ಮುಖ್ಯಮಂತ್ರಿಗಳಿಗೆ ಹೆಚ್ಚಿನ ಕಾಳಜಿ ಇದೆ. ಸಿನಿಮಾ ನೋಡುವಾಗ ಕನಿಷ್ಟ ನಾವು ನೆಮ್ಮದಿಯಿಂದ ಮೂರು ತಾಸು ಕಳೆಯುತ್ತೇವೆ. ಟಿವಿ ಮೊಬೈಲ್ ಗಳ ಹಾವಳಿಯಿಂದ ಇಂದು ಸಿನಿಮಾ ಕ್ಷೇತ್ರ ಸಮಸ್ಯೆಯಲ್ಲಿದೆ. ಈ ಚಿತ್ರೋತ್ಸದಲ್ಲಿ ಸಿನಿಮಾ ಪ್ರದರ್ಶನದ ಜೊತೆ ಈ ಸಮಸ್ಯೆಗಳ ಕುರಿತು ಚರ್ಚೆಗಳೂ ನಡೆಯಲಿ ಎಂದು ತಿಳಿಸಿದರು.
ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಾಧ್ಯವಾದ ಸಹಾಯ, ಸಹಕಾರ ನೀಡಲಾಗುವುದು. ಇಂತಹ ಕಾರ್ಯಕ್ರಮಗಳಲ್ಲಿ ನಡೆಯುವ ವಿಚಾರಗಳಿಗೆ ಸ್ಪಂದಿಸಲಾಗುವುದು. ಕಾರ್ಯಕ್ರಮ ಸಾರ್ಥಕತೆಗೆ ಶ್ರಮಿಸುವಂತೆ ಸಿನಿಮಾಸಕ್ತರಿಗೆ ಸಭಾಪತಿಗಳು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಸಿನಿಮಾ ಸಮಾಜದ ಒಂದು ಭಾಗ, ಪ್ರತಿ ವಿಷಯದಲ್ಲಿ ಅದರ ಕೊಡುಗೆ ಅಪಾರ. ಎಷ್ಟೇ ಕಷ್ಟದಲ್ಲಿದ್ದರೂ ಸಹ ಜನರಿಗೆ ಸಿನಿಮಾ ಮನರಂಜನೆ ನೀಡುತ್ತದೆ. ನಮ್ಮ ಸರ್ಕಾರದ ವತಿಯಿಂದ ಅದ್ಭುತವಾದ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದೊಂದು ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದ್ದು, ಸಿನಿಮಾ ಮುಖಾಂತರ ಮನುಷ್ಯ ಮತ್ತು ಮನುಷ್ಯತ್ವವನ್ನು ಬೆಸೆಯುವ ಕೆಲಸವಾಗಬೇಕು. ಸಿನಿಮಾ ಕ್ಷೇತ್ರ ಮರೆತಿರುವುದು ಮತ್ತೆ ಮರುಕಳಿಸಲಿ. ಪ್ರಕಾಶ್ ರಾಜ್ ಕೇವಲ ನಟರಲ್ಲ, ಅವರೊಬ್ಬ ಮಾನವೀಯ ಕಾಳಜಿಯುಳ್ಳ ಜವಾಬ್ಧಾರಿಯುತ ನಾಗರಿಕ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಈ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 255 ಚಿತ್ರಗಳು ಪ್ರದರ್ಶನ ಹಮಿಕೊಂಡಿದ್ದು, ಅದರಲ್ಲಿ 65 ಮಹಿಳಾ ನಿರ್ದೇಶಕರ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಚಿತ್ರೋತ್ಸವವನ್ನು ಮಹಿಳೆಯರಿಗೆ ಅರ್ಪಿಸಿರುವುದು ಅತ್ಯಂತ ಗೌರವಯುತ ಕಾರ್ಯವಾಗಿದೆ. ಸರ್ಕಾರ ಚಿತ್ರೋದ್ಯಮಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಮುಖ್ಯವಾಗಿ ಮೈಸೂರಿನಲ್ಲಿ ಚಲನಚಿತ್ರ ನಗರಿ, ಅಕಾಡೆಮಿ ಕಟ್ಟಡದಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ, ಕನ್ನಡ ಚಿತ್ರಗಳಿಗಾಗಿ ಓಟಿಟಿ ಸೇರಿದಂತೆ ಚಲನ ಚಿತ್ರ ಕಾರ್ಮಿಕರಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಈ ಬಾರಿಯ ವಿಶೇಷವೆಂದರೆ ಲುಲು ಮಾಲ್ ಆವರಣದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಟೆಂಟ್ ಸಿನಿಮಾ ಮಾದರಿಯಲ್ಲಿ ಓಪನ್ ಏರ್ ಥೇಟರ್ನಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಚಲನಚಿತ್ರ ನಿರ್ಮಾಣ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆಯಲು ಸಿಂಗಲ್ ವಿಂಡೋ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಸಾಧು ಕೋಕಿಲ ಬೇಡಿಕೆ ಸಲ್ಲಿಸಿದರು.
ಕನ್ನಡ ಚಲನಚಿತ್ರದ ಸಾಧಕರ ಸಿನಿಮಾಯಾನವನ್ನು ಸಹ ಈ ಚಲನಚಿತ್ರೋತ್ಸವದಲ್ಲಿ ಸಂಭ್ರಮಿಸಲಾಗುತ್ತಿದೆ. ಚಲನ ಚಿತ್ರೋತ್ಸವ ಕಲಾತ್ಮಕ ನಿರ್ದೇಶಕರಾದ ಮುರಳಿ ಮಾತನಾಡಿ, ಈ ಬಾರಿಯ ವಿಶೇಷತೆಗಳನ್ನು ವಿವರಿಸಿದರು. ಇದೊಂದು ಸಿನಿಮಾ ಹಬ್ಬವಾಗಿದ್ದು ಎಲ್ಲರೂ ಭಾಗವಹಿಸಿ ಎಂದು ಹೇಳಿದರು.
ಈ ಬಾರಿಯ ಚಲನ ಚಿತ್ರೋತ್ಸವದ ರಾಯಭಾರಿ ಹಿರಿಯ ನಟ ಪ್ರಕಾಶ್ ರಾಜ್ ಮಾತನಾಡಿ, ಸುಮಾರು 16 ವರ್ಷಗಳ ಹಿಂದೆ ನಾನು ಈ ಚಲನಚಿತ್ರೋತ್ಸವವನ್ನು ಉದ್ಘಾಟನೆ ಮಾಡಿದ್ದೆ. ಇದೊಂದು ರಂಗನತಿಟ್ಟು ಇದ್ದಂತೆ, ಅಲ್ಲಿಯಂತೆಯೇ ಇಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಿನಿಮಾ ಪಕ್ಷಿಗಳು ಸೇರುವುದು ವಿಶೇಷ. ಅಂತಾರಾಷ್ಟ್ರೀಯ ಚಿತ್ರೋತ್ಸವ ಅಥವಾ ಸಾಹಿತ್ಯೋತ್ಸವಗಳು ಜನರ ಬದುಕು ಹಾಗೂ ಮನುಷ್ಯತ್ವವನ್ನು ಹಂಚಿಕೊಳ್ಳುವ ವೇದಿಕೆಗಳು. ಇಂತಹ ವೇದಿಕೆಗಳಿಗೆ ರಾಜಕೀಯ ಪ್ರವೇಶವಾಗಿರುವುದು ದುರಂತ, ಕೆಲ ದೇಶದ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಡದಿರುವುದನ್ನು ರಾಜ್ಯ ಸರ್ಕಾರ ಖಂಡಿಸಬೇಕು. ಅದನ್ನು ವಿರೋಧಿಸುವ ಮೂಲಕ ನಮ್ಮ ಚಿತ್ರೋತ್ಸವಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಪ್ಯಾಲೇಸ್ತೀನಿ ಸಿನಿಮಾಗಳನ್ನು ಬೆಂಬಲಿಸಿ ಕವನ, ವಾಚನ ಮಾಡಿದ ಅವರು, ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿಧಾಮವನ್ನು ಹೋಲಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ರಾಜಕೀಯ ಮಾಡದಂತೆ ಪ್ರತಿರೋಧ ತೋರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಈ ಬಾರಿಯ ಚಲನಚಿತ್ರೋತ್ಸವದ ಸಿಗ್ನೇಚರ್ ಫಿಲ್ಮ್ ಬಿಡುಗಡೆ ಮಾಡಿದರು.
ಬೆಂಗಳೂರು ಎಲ್ಲಾ ಕಲೆಗಳ ನೆಲೆ, ಸಿನಿಮಾ ಎಲ್ಲಾ ಕಲೆಯನ್ನು ಬಳಸಿಕೊಳ್ಳುವ ಮಾಧ್ಯಮ, ಎಲ್ಲಾ ರಾಷ್ಟ್ರಗಳ ಸಿನಿಮಾಗಳನ್ನು ನೋಡುವ ಮೂಲಕ ಸಿನಿಮಾಸಕ್ತರು ಕಲಿಯಲು ಇದೊಂದು ವೇದಿಕೆ. ಕಾಂತಾರ ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ ಮಾತನಾಡಿ, ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ನನ್ನಂತ ಯುವ ನಟಿಯನ್ನು ಆಹ್ವಾನಿಸಿರುವುದು ನನಗೆ ಸಿಕ್ಕ ಸೌಭಾಗ್ಯ. ಮುಖ್ಯವಾಗಿ ತಂತ್ರಜ್ಞರ ಹಾಗೂ ಸಿನಿಮಾ ಪ್ರಿಯರ ಸಿನಿಮಾ ವಿಷಯಗಳ ವಿನಿಮಯ ಅತ್ಯಂತ ಸಹಾಯಕವಾಗಲಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಬಿ.ಬಿ.ಕಾವೇರಿ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ.ಜ್ಯೋತ್ಸ್ನಾ ಶ್ರೀಕಾಂತ್ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ವೇದಿಕೆಯಲ್ಲಿ ನೆದರ್ಲ್ಯಾಂಡ್ ದೇಶದ ‘ಪೋರ್ಟ್ ಬ್ಯಾಗೇಜ್’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಯಿತು.
ಈ ಸಂದರ್ಭದಲ್ಲಿ, ವಿಧಾನಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ, ಹಿರಿಯ ನಟಿ, ಮಾಜಿ ಸಚಿವೆ ಡಾ.ಜಯಮಾಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ವಾರ್ತಾ ಇಲಾಖೆಯ ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಡೊಳ್ಳಿನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಚಂದ್ರು, ನಟರಾದ ಸುಂದರ್ ರಾಜ್, ಶ್ರೀನಗರ ಕಿಟ್ಟಿ, ಶರತ್ ಲೋಹಿತಾಶ್ವ, ರಘು ಮುಖರ್ಜಿ, ಚೇತನ್ ಅಹಿಂಸ, ನಟಿಯರಾದ ಪೂಜಾ ಗಾಂಧಿ, ಅನು ಪ್ರಭಾಕರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮುಂತಾದವರು ಇದ್ದರು.
ಇದನ್ನೂ ನೋಡಿ : ‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?Janashakthi Media
