ಬೆಂಗಳೂರು: ಕರ್ನಾಟಕದಲ್ಲಿ ಲಕ್ಷಾಂತರ ಜನ ಬೀದಿ ವ್ಯಾಪಾರಿಗಳಿದ್ದು, ಬೆಂಗಳೂರು ನಗರದಲ್ಲೇ ಸರಿಸುಮಾರು ಎರಡು ಲಕ್ಷದಷ್ಟು ಬೀದಿ ವ್ಯಾಪಾರ ಮಾಡಿಕೊಂಡು ತಮ್ಮ ಜೀವನೋಪಾಯವನ್ನಾಗಿ ಆಧರಿಸಿದ್ದಾರೆ. ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ ಸಾಕಷ್ಟು ಸಮಸ್ಯೆಗೆ ಒಳಗಾಗಿರುವ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸೂಕ್ತವಾದ, ಮತ್ತು ಸಮಗ್ರವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ ಮನವಿ ಸಲ್ಲಿಕೆಯಾಗಿದೆ.
ಎಐಸಿಸಿಟಿಯು ಅಂಗ ಸಂಘಟನೆಯಾದ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆಯು ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬೀದಿ ವ್ಯಾಪಾರವನ್ನು ಜೀವನೋಪಾಯವಾಗಿ ಒಪ್ಪಿಕೊಂಡು ಸ್ವಾಯತ್ತತೆಯಿಂದ ಬದುಕುತ್ತಿರುವರನ್ನು ಸಂಘಟಿಸುತ್ತಾ, ಅವರ ಹಕ್ಕು ಮತ್ತು ಘನತೆಯ ಬದುಕಿಗಾಗಿ ʻಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ, 2014ʼರ ಅಡಿಯಲ್ಲಿ ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದೆ.
ಇದನ್ನು ಓದಿ: ಕರ್ಫ್ಯೂ ಅವಧಿಯಲ್ಲಿ ಕಾರ್ಮಿಕರ ಸಂಬಳ ಕಡಿತ ಮಾಡದಂತೆ ಕೋರಿ ಪಿಐಎಲ್
ಬೀದಿ ವ್ಯಾಪಾರಿಗಳಿಗೆ ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲೇ ಸಮಸ್ಯೆಗಳು ಉದ್ಭವವಾದವು. ಬೀದಿ ವ್ಯಾಪಾರಿಗಳಿಗೆ ಮಾರ್ಚ್ 2020 ರಿಂದ ಜೂನ್ 2020ರವರೆಗೂ ಘೋಷಿದ್ದ ಲಾಕ್‌ಡೌನ್ ಸಮಯದಲ್ಲಿ ಬೀದಿ ವ್ಯಾಪಾರವನ್ನು ಅಗತ್ಯ ಸೇವೆ ಎಂದು ಘೋಷಿಸಿದ್ದರೂ, ಪೋಲೀಸರ ಕಿರುಕುಳದಿಂದ ಒಂದು ಪೈಸೆಯಷ್ಟು ವ್ಯಾಪಾರವನ್ನು ಮಾಡಲು ಸಾಧ್ಯವಾಗಲಿಲ್ಲ.
ಸಂಘಟನೆಯ ಕಾರ್ಯದರ್ಶಿ ಪಿ.ಪಿ. ಅಪ್ಪಣ್ಣ ಅವರು ʻʻನಗರ ಪ್ರದೇಶಗಳಲ್ಲಿ ವಾಸಿಸುವ ಮಂದಿ ಸಾಲಗಳನ್ನು ಮಾಡಿ ಮನೆ ಬಾಡಿಗೆ, ಶಾಲಾ-ಕಾಲೇಜಿನ ಫೀಸ್ ಕಟ್ಟಿದರು. ಕಳೆದ ವರ್ಷದ ಕಷ್ಟ-ನಷ್ಟಗಳ ಕುರಿತು ಮುಖ್ಯಮಂತ್ರಿಗಳು ಮನವಿ ಸಲ್ಲಿಸಲಾಗಿತ್ತು. ಆಗಲೇ ಸಂಘಟನೆ ವತಿಯಿಂ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ ಎಂದು ಕೋರಿದ್ದೆವು. ಆದರೂ ಸಹ ರಾಜ್ಯ ಸರ್ಕಾರದ ಕಡೆಯಿಂದ ಯಾವುದೇ ನೆರವು ಸಿಗಲಿಲ್ಲ, ಬದಲಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲು ಮುಂದಾದರು. ಬೀದಿ ವ್ಯಾಪಾರಿಗಳು ದಿನನಿತ್ಯದ ಜೀವನ ನಡೆಸಲು ಮಾಡಿದ ಸಾಲಕ್ಕೆ ಕೇಂದ್ರ ಸರ್ಕಾರಕ್ಕೂ ಸಾಲವನ್ನು ತೀರಿಸುವ ಪರಿಸ್ಥಿತಿಗೆ ಬೀದಿ ವ್ಯಾಪಾರಿಗಳನ್ನು ನೂಕಲಾಗಿದೆ ಎಂದು ಆರೋಪಿಸಿದರು.
ಈಗ ಮತ್ತೆ ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಜಾರಿಗೊಳಿಸಿರುವ ಲಾಕ್‌ಡೌನ್ ಕಾರಣದಿಂದಾಗಿ ಬೀದಿ ವ್ಯಾಪಾರಿಗಳೂ ತಮ್ಮ ವಸ್ತು ಮತ್ತು ಸೇವೆಗಳಿಂದ ಆದಾಯ ಪಡೆಯುವುದು ಕಡಿಮೆಯಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಹರಡುವ ಮುನ್ನ ಮುನಿಸಿಪಾಲಿಟಿ ಮತ್ತು ಪೋಲೀಸರ ದೌರ್ಜನ್ಯದಿಂದ ವ್ಯಾಪಾರ ಮಾಡಲು ಪಾಡುಪಡುತ್ತಿದ್ದರು, ಈಗ ಕೋವಿಡ್ ಕಾರಣ ಸಂಪಾದನೆ ಮಾಡಲು ಅಸಾಧ್ಯವಾಗಿದೆ.
ಇದನ್ನೂ ಓದಿ : ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ
ಕಳೆದ ಒಂದು ವರ್ಷದಿಂದ ಕಷ್ಟದಲ್ಲಿ ನರಳುತ್ತಿರುವ ಬೀದಿ ವ್ಯಾಪಾರಿಗಳನ್ನು ಮತ್ತಷ್ಟು ತೀವ್ರ ಸಂಕಷ್ಟದಲ್ಲಿ ನೂಕಲಾಗಿದೆ. ಹಣ್ಣು-ಹೂವು-ತರಕಾರಿ ವ್ಯಾಪಾರಿಗಳಿಗೆ ಮುಂಜಾನೆ 6 ರಿಂದ 10 ಗಂಟೆವರೆಗೂ ವ್ಯಾಪಾರ ಮಾಡಲು ಅವಕಾಶವಿದೆ. ಲಾಕ್‌ಡೌನ್ ಏಪ್ರಿಲ್ 28ರಿಂದ ಜಾರಿಯಾದರೂ ಸಹ ಏಪ್ರಿಲ್ 22 ರಿಂದಲೇ ಹಣ್ಣು-ಹೂವು-ತರಕಾರಿ ವ್ಯಾಪಾರಸ್ಥರಿಗಿದ್ದು ಬಟ್ಟೆ, ಪ್ಲಾಸ್ಟಿಕ್, ಊಟದ ವ್ಯಾಪಾರ, ಮತ್ತು ಇತರೆ ಸೇವೆಗಳನ್ನು ಒದಗಿಸುವ ವ್ಯಾಪಾರಿಗಳಿಗೆ (ಚಪ್ಪಲಿ ಹೊಲಿಯುವವರು, ರಿಪೇರಿ ಕೆಲಸ ಮಾಡುವವರು, ಇತರರು) ಸಾಮಾನು ಮಾರುತ್ತಿರುವ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ.
ಹೂವು-ಹಣ್ಣು-ತರಕಾರಿ ವ್ಯಾಪಾರ ಮಾಡುವವರು ಎ.ಪಿ.ಎಂ.ಸಿ/ಸಗಟು ಮಾರುಕಟ್ಟೆಗಳಿಂದ ಪ್ರತಿ ಮುಂಜಾನೆ 6 ಗಂಟೆಗೆ ಕೊಳ್ಳುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಅನುಮತಿ ಇರುವುದು ಮುಂಜಾನೆ 6 ಗಂಟೆಯಿಂದ ಇರುವುದರಿಂದ, ಹಲವಾರು ವ್ಯಾಪಾರಿಗಳು ಎ.ಪಿ.ಎಂ.ಸಿ/ಸಗಟು ಮಾರುಕಟ್ಟೆ ತಲುಪುವಷ್ಟರಲ್ಲಿ ಹೂವು-ಹಣ್ಣು ತರಕಾರಿಗಳು ಹರಾಜಾಗಿ ಹೋಗಿರುತ್ತದೆ. ಅವರಿಗೆ ಮಾರಾಟ ಮಾಡಲು ಸರಕು-ಸಾಮಾನುಗಳು ದೊರಕುತ್ತಿಲ್ಲ.
ಇದನ್ನು ಓದಿ: ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿಸಲು ಪ್ರಾಂತ ರೈತ ಸಂಘ ಆಗ್ರಹ
ಸಾಮಾನುಗಳು ದೊರಕಿದ್ದಲ್ಲಿ, ಅವರು ತಮ್ಮ ತಮ್ಮ ಮಾರುಕಟ್ಟೆ ಸ್ಥಳಕ್ಕೆ ತಲುಪುವಷ್ಟರಲ್ಲಿ ಹೆಚ್ಚಿನ ಕಾಲ ಅವರಿಗೆ ಮಾರಾಟ ಮಾಡಲು ಅವಕಾಶ ಸಿಗುತ್ತಿಲ್ಲ. ಅವಕಾಶವಿಲ್ಲದೆ, ಗಿರಾಕಿಗಳು ಇಲ್ಲದೆ ಬೀದಿ ವ್ಯಾಪಾರಿಗಳ ಹೂವು, ಹಣ್ಣು, ತರಕಾರಿ, ಸೊಪ್ಪುಗಳು ಈ ಬೇಸಿಗೆ ಕಾಲದ ಉರಿ ಬಿಸಿಲಿನಲ್ಲಿ ಕೊಳೆತುಹೋಗುತ್ತಿವೆ. ಇದರ ಮೇಲೆ ಪೋಲೀಸರ ಕಿರುಕುಳವು ಹೆಚ್ಚಾಗಿದ್ದು, ಬೀದಿ ವ್ಯಾಪಾರಿಗಳ ಸರಕು ಸಾಮಾನುಗಲು ಹಾಳಾಗುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವ್ಯಾಪಾರಿಗಳಿಗೆ ವ್ಯಾಪಾರದ ಹಕ್ಕು ಕಿತ್ತುಕೊಂಡಿರುವ ಸರ್ಕಾರ ಆರ್ಥಿಕ ನೆರವಾದರು ನೀಡಬೇಕು. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಯಾವುದೇ ಘೋಷಣೆ ಆಗಿರುವುದಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಲಾಕ್‌ಡೌನ್ ಜೊತೆಗೆ ಬೀದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕವಾಗಿ ಆರ್ಥಿಕ ನೆರವು ಘೋಷಿಸಿದರು. ಆದರೆ ಇಲ್ಲಿ ಬಡವರ ಕಷ್ಟ-ನಷ್ಟಗಳನ್ನು ಲೆಕ್ಕಿಸದೆ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು
ಈ ನಿಟ್ಟಿನಲ್ಲಿ ಸರ್ಕಾರವು ತಕ್ಷಣದಲ್ಲಿ ಈ ಅಗತ್ಯ ಕ್ರಮಗಳನ್ನು ಜರುಗಿಸಬೇಕು:
- ದಿನನಿತ್ಯದ ವ್ಯಾಪಾರದ ಸಮಯವನ್ನು ಕನಿಷ್ಠ ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಿಸುತ್ತಾ, ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು.
- ಪೊಲೀಸರ ದೌರ್ಜನ್ಯ ಮತ್ತು ಒಕ್ಕಲೆಬ್ಬಿಸುವಿಕೆ ಆಗದಂತೆ ಆದೇಶ ನೀಡಬೇಕು.
- ಮನೆ ಮಾಲೀಕರು ತಿಂಗಳ ಬಾಡಿಗೆಗೆ ಒತ್ತಾಯ ಮಾಡಬಾರದೆಂದು ಆದೇಶವನ್ನು ಹೊರಡಿಸಬೇಕು.
- ಖಾಸಗಿ ಫೈನ್ಯಾನ್ಸ್ ಕಂಪನಿಗಳು ಸಾಲವನ್ನು ಮರುಪಾವತಿಸಲು ತೀವ್ರ ಒತ್ತಡ ಹಾಕುತ್ತಿದ್ದಾರೆ. ಹಾಗೆಯೇ ಹಲವು ಬೀದಿ ವ್ಯಾಪಾರಿಗಳು ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ವ್ಯಾಪಾರ ಇಲ್ಲದ ಕಾರಣ ಸಾಲ ತೀರಿಸಲು ಕಷ್ಟವಾದ ಕಾರಣ ಸಾಲದ ಬಡ್ಡಿಯನ್ನು ಮನ್ನಾ ಮಾಡುವಂತೆ ಆದೇಶ ಹೊರಡಿಸಬೇಕು.
- ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ನೀಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
- ಪ್ರತಿಯೋರ್ವ ಬೀದಿ ವ್ಯಾಪಾರಿಗೆ ಮೇ ಮತ್ತು ಜೂನ್ ತಿಂಗಳಿಗೆ ರೂ.15,000/- ಅಷ್ಟು ಆರ್ಥಿಕ ನೆರವು ನೀಡಬೇಕು.
- ಕೇರಳ ಮಾದರಿಯಲ್ಲಿ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಅಕ್ಕಿ, ಬೇಳೆ, ಕಾಳುಗಳು, ಅಡುಗೆ ಎಣ್ಣೆ, ಮಸಾಲೆ, ಇತ್ಯಾದಿಗಳನ್ನು ನೀಡಬೇಕು. ಕಡಿತವಾದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಬೇಕು.
- ಬೀದಿ ವ್ಯಾಪಾರಿಗಳಿಗೂ ಸಹ ಇ.ಎಸ್.ಐ. ಸ್ವರೂಪದಂತಹ ಸರ್ಕಾರಿ ಆರೋಗ್ಯ ವಿಮೆ ನೀಡಬೇಕು.
- ನಗರ ಪ್ರದೇಶಗಳಲ್ಲಿ ಕೊಳಗೇರಿ ಪ್ರದೇಶಗಳಲ್ಲಿ, ವಲಸೆ ಕಾರ್ಮಿಕರ ವಾಸಸ್ಥಳಗಳಲ್ಲಿ ಸರ್ಕಾರವು ‘ಸಾಮೂಹಿಕ ಅಡುಗೆ ಮನೆ’ (community kitchen) ರಚಿಸಿ ಅದರ ಮುಖಾಂತರ ನಗರದ ನಿರಾಶ್ರಿತರಿಗೆ ತಾಜಾ ಆಹಾರ ನೀಡಬೇಕು. ಇಂತಹ ಸಾಮೂಹಿಕ ಅಡುಗೆ ಮನೆಗಳನ್ನು ನಡೆಸಲು ಬೀದಿ ವ್ಯಾಪಾರಿಗಳ ಸೇವೆಯನ್ನು ಪಡೆಯಬೇಕು ಹಾಗೂ ಅವರಿಗೆ ವೇತನ ಅಥವಾ ಗುತ್ತಿಗೆ ನೀಡಬೇಕು.
ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟನೆಯು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.