ಬಿಡೆನ್ ಮತ್ತು ಮೋದಿ ರಕ್ಷಣಾ ಪ್ಯಾಕೇಜ್‌ಗಳು: ಎಷ್ಟೊಂದು ಅಂತರ!

ಜೋ ಬಿಡೆನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಆ ದೇಶದ ಜಿಡಿಪಿಯ 10%ದಷ್ಟು ಗಾತ್ರದ ಒಂದು ರಕ್ಷಣಾ ಪ್ಯಾಕೇಜ್ ಘೋಷಿಸಿದ್ದಾರೆ. ಮೊತ್ತದಲ್ಲಿ ಒಂದು ಟ್ರಿಲಿಯನ್ ಡಾಲರ್‌ನಷ್ಟು ಹಣ ದುಡಿಯುವ ಜನರಿಗೆ ನೇರ ವರ್ಗಾವಣೆ ರೂಪದಲ್ಲಿ ತಲುಪಲಿದೆ. ಗಮನಾರ್ಹ ಸಂಗತಿಯೆಂದರೆ, ಪ್ಯಾಕೇಜ್ ಒದಗಿಸಲು ಬೇಕಾಗುವ ಹಣವನ್ನು ಹೊಂದಿಸಿಕೊಳ್ಳಲು, ಸಾಮಾನ್ಯ ಜನರ ಮೇಲೆ ತೆರಿಗೆ ಹಾಕುವ ಬದಲು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಬಿಡೆನ್ ಮಾಡಿರುವ ಕೆಲವು ಪ್ರಸ್ತಾಪಗಳು. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಒಟ್ಟು ಸರ್ಕಾರಿ ವೆಚ್ಚಗಳು ತಗ್ಗಿದ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು. ಮೋದಿ ಸರ್ಕಾರದ ಬುದ್ಧಿಹೀನ ನೀತಿಗಳಿಗೆ ಅದರ ನಿರ್ದಯತೆ ಮಾತ್ರ ಸಾಟಿಯಾಗಬಲ್ಲದು. ಹಾಗಾಗಿ, ನರೇಂದ್ರ ಮೋದಿಗೆ ಹೋಲಿಸಿದರೆ ಜೋ ಬಿಡೆನ್ ಪ್ರಕಾಶಮಾನವಾಗಿ ಕಾಣುತ್ತಾರೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಜೋ ಬಿಡೆನ್ ಅವರು 1.9 ಟ್ರಿಲಿಯನ್ ಡಾಲರ್ ಗಾತ್ರದ ಒಂದು ರಕ್ಷಣಾ ಪ್ಯಾಕೇಜ್ ಘೋಷಿಸಿದ್ದರು. ಈ ಮೊತ್ತದಲ್ಲಿ ಒಂದು ಟ್ರಿಲಿಯನ್ ಡಾಲರ್‌ನಷ್ಟು ಹಣ ದುಡಿಯುವ ಜನರಿಗೆ ನೇರ ವರ್ಗಾವಣೆ ರೂಪದಲ್ಲಿ ತಲುಪಲಿದೆ. ಅಮೇರಿಕಾದ 2020ರ ಜಿಡಿಪಿಯ ಗಾತ್ರ 20.8 ಟ್ರಿಲಿಯನ್ ಡಾಲರ್ ಎಂಬ ಅಂದಾಜಿನ ಮೇಲೆ, ಬಿಡೆನ್ ಅವರು ಘೋಷಿಸಿರುವ ಪ್ರಸ್ತುತ ರಕ್ಷಣಾ ಪ್ಯಾಕೇಜಿನ ಗಾತ್ರವು ಅಮೇರಿಕಾದ ಜಿಡಿಪಿಯ ಸುಮಾರು ಶೇ.10ರಷ್ಟಾಗುತ್ತದೆ. ಕೊರೊನಾ ಸಾಂಕ್ರಾಮಿಕವು ಉಂಟುಮಾಡಿದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಹಿಂದಿನ ಅಧ್ಯಕ್ಷ ಟ್ರಂಪ್ ಅವರು ಕೆಲವು ತಿಂಗಳುಗಳ ಹಿಂದೆ ಘೋಷಿಸಿದ್ದ ಜಿಡಿಪಿಯ ಸುಮಾರು ಶೇ.10ರಷ್ಟು ಮೊತ್ತದ ಪರಿಹಾರ ಪ್ಯಾಕೇಜಿನ ಜೊತೆಗೆ, ಬಿಡೆನ್ ಅವರು ಈಗ ಮತ್ತೊಂದು ರಕ್ಷಣಾ ಪ್ಯಾಕೇಜ್ (1.9 ಟ್ರಿಲಿಯನ್ ಡಾಲರ್) ಘೋಷಿಸಿದ್ದಾರೆ. ವಾಸ್ತವವಾಗಿ, ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಅಮೆರಿಕಾದಲ್ಲಿ, ಏಪ್ರಿಲ್‌ನಲ್ಲಿ ಶೇ.15ಕ್ಕೆ ಏರಿದ್ದ ನಿರುದ್ಯೋಗವು ಡಿಸೆಂಬರ್ ತಿಂಗಳ ಹೊತ್ತಿಗೆ ಶೇ.6.7ಕ್ಕೆ ಇಳಿದಿತ್ತು. ಇದೇ ಕಾರಣವನ್ನು ಮುಂದೊಡ್ಡಿ, ಇನ್ನು ಮುಂದೆ ದುಡಿಯುವ ಜನರಿಗೆ ಸಹಾಯವನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಸಂಪ್ರದಾಯವಾದಿಗಳು ಈಗ ತಗಾದೆ ತೆಗೆಯಬಹುದು. ಆದಾಗ್ಯೂ, ಬಿಡೆನ್ ಅವರು ಉದ್ದೇಶಿಸಿರುವ ಈ ಪಾರು ಯೋಜನೆಯು ಅಮೇರಿಕಾದಲ್ಲಿ ದುಡಿಯುವ ಜನರಿಗೆ ಈಗ ಒದಗಿಸುತ್ತಿರುವ ನೇರ ವರ್ಗಾವಣೆಯ ನೆರವನ್ನು ದೀರ್ಘಾವಧಿಯವರೆಗೆ ಮುಂದುವರಿಸುವ ಮತ್ತು ಈ ನೆರವಿನ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿದೆ.

ಬಿಡೆನ್ ಈಗ ಘೋಷಿಸಿರುವ ತಮ್ಮ ಪ್ಯಾಕೇಜನ್ನು ಕೋವಿಡ್-19ರ ಚೇತರಿಕೆಯ ಪ್ಯಾಕೇಜ್ ಎಂದು ಕರೆದಿದ್ದರೂ ಸಹ, ಅದಕ್ಕಿಂತಲೂ ಹೆಚ್ಚಿನದು ಎಂದೇ ಹೇಳಬಹುದು. ಸಾಮಾಜಿಕ ವೆಚ್ಚಗಳಲ್ಲಿ ಬಹಳ ಹೆಚ್ಚಳವಾಗಿದೆ ಮತ್ತು ಅದರ ವ್ಯಾಪ್ತಿಯು ಸಾಂಕ್ರಾಮಿಕ ರೋಗದ ತಕ್ಷಣದ ಸನ್ನಿವೇಶದ ಆಚೆಗೆ ಚಾಚುತ್ತದೆ. ಜೊತೆಗೆ, ತೆರಿಗೆ ಪಾವತಿದಾರರಿಗೆ ಅಮೆರಿಕದ ಕಾಂಗ್ರೆಸ್ ಕಳೆದ ತಿಂಗಳು ಸಮ್ಮತಿಸಿದ ನಗದು ಪರಿಹಾರವನ್ನು 600 ಡಾಲರ್‌ಗಳಷ್ಟು ಹೆಚ್ಚಿಸಿ, ಅದನ್ನು 1400 ರಿಂದ 2000 ಡಾಲರ್‌ಗೆ ಏರಿಸಲಾಗಿದೆ. ಪ್ರಸ್ತುತ ನಿರುದ್ಯೋಗ ಭತ್ಯೆ ಪಡೆಯುತ್ತಿರುವ 18 ದಶಲಕ್ಷ ಅಮೆರಿಕನ್ನರಿಗೆ ನಿರುದ್ಯೋಗ ಪ್ರಯೋಜನವನ್ನು ವಾರಕ್ಕೆ 300 ರಿಂದ 400 ಡಾಲರ್‌ಗಳಿಗೆ ಏರಿಸಿ ಅದರ ಪ್ರಯೋಜನವನ್ನು ಸೆಪ್ಟೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ. ಕನಿಷ್ಠ ವೇತನವನ್ನು ಪ್ರತಿ ಗಂಟೆಗೆ 15 ಡಾಲರ್‌ಗಳಿಗೆ ಏರಿಸಲಾಗಿದೆ. ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಬೇಕಿದ್ದ ಮನೆ ಖಾಲಿ ಮಾಡಿಸುವುದನ್ನು ತಡೆದಿರುವ ರಾಷ್ಟ್ರವ್ಯಾಪಿ ಕಾರ್ಯಾಚರಣೆಯನ್ನು ಈಗ ಸೆಪ್ಟೆಂಬರ್ ಅಂತ್ಯದವರೆಗೆ ಮುಂದಕ್ಕೆ ಹಾಕಲಾಗಿದೆ. ಇಷ್ಟೇ ಅಲ್ಲದೆ, ಲಸಿಕೆ ವಿತರಣೆ, ಸಣ್ಣ ಉದ್ಯಮಗಳಿಗೆ ನೆರವು, ಶಿಕ್ಷಣ ಸಂಸ್ಥೆಗಳಿಗೆ ನೆರವು ಮುಂತಾದ ಅನೇಕ ವೆಚ್ಚಗಳು ಪ್ಯಾಕೇಜಿನಲ್ಲಿವೆ.

ಅಮೇರಿಕಾದ ಸರ್ಕಾರವು ಕೈಗೊಳ್ಳುತ್ತಿರುವ ಖರ್ಚು ವೆಚ್ಚಗಳಿಗಿಂತಲೂ ಹೆಚ್ಚು ಗಮನ ಸೆಳೆಯುವ ಅಂಶವೆಂದರೆ, ಈ ಪ್ಯಾಕೇಜ್ ಒದಗಿಸಲು ಬೇಕಾಗುವ ಹಣವನ್ನು ಹೊಂದಿಸಿಕೊಳ್ಳಲು, ಸಾಮಾನ್ಯ ಜನರ ಮೇಲೆ ತೆರಿಗೆ ಹಾಕುವ ಬದಲು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಬಿಡೆನ್ ಮಾಡಿರುವ ಕೆಲವು ಪ್ರಸ್ತಾಪಗಳು. ಈ ಪ್ರಸ್ತಾಪಗಳ ಪೈಕಿ, ಷೇರು ಮಾರಾಟ-ಲಾಭದ ಮೇಲೆ ತೆರಿಗೆ ಹಾಕುವ ಮತ್ತು ಅತ್ಯಧಿಕ ಆದಾಯ ಸಂಪಾದಿಸುವವರ ಮೇಲೆ ವಿಧಿಸುವ ತೆರಿಗೆಯನ್ನು ಶೇ.40ಕ್ಕೆ ಏರಿಸುವ ಕ್ರಮಗಳು ಪ್ರಮುಖವಾಗಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ದುಡಿಯುವ ಜನರಿಗೆ ನೆರವು ಒದಗಿಸುವ ಸಲುವಾಗಿ ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದು ಬಿಡೆನ್ ಅವರ ಕಾರ್ಯತಂತ್ರವಾಗಿದೆ. ದುಡಿಯುವ ಜನರಿಗೆ ನೆರವು ಒದಗಿಸುವ ಅಂಶವನ್ನು ಬಹಳ ದಿನಗಳಿಂದಲೂ ಎಡಪಂಥೀಯರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಬಿಡೆನ್ ಎಡಪಂಥದತ್ತ ವಾಲುತ್ತಿದ್ದಾರೆ ಎಂಬುದನ್ನು ಈ ಪ್ಯಾಕೇಜ್ ಸೂಚಿಸುತ್ತದೆ ಎಂಬುದು ಬಹುತೇಕ ಟೀಕಾಕಾರರ ಅಂಬೋಣ. ಆದರೆ, ಈ ಬದಲಾವಣೆಯು ಒಂದು ಹಠಾತ್ ವಿದ್ಯಮಾನವಲ್ಲ. ಬಿಡೆನ್ ಅವರ ಬದಲಾವಣೆಯನ್ನು ಗಮನಿಸಿರುವುದಾಗಿ ಅನೇಕ ಪ್ರಮುಖ ಅಮೆರಿಕನ್ ಪತ್ರಿಕೆಗಳು ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅವಧಿಯುದ್ದಕ್ಕೂ ಹೇಳಿವೆ. ಬಿಡೆನ್ ಅವರು ಈಗ ಮಾಡಿರುವುದು ಏನೆಂದರೆ, ಚುನಾಯಿತರಾದ ಬಳಿಕ, ಒಬ್ಬ ಅವಕಾಶವಾದಿಯಾಗಿ ಭರವಸೆಗಳನ್ನು ಹುಸಿಗೊಳಿಸುವ ಬದಲು, ತಮ್ಮ ಚುನಾವಣಾ ಭರವಸೆಗಳಿಗೆ ನಿಷ್ಠರಾಗಿಯೇ ಉಳಿದಿದ್ದಾರೆ.

ಒಟ್ಟಾರೆ ಬೇಡಿಕೆ-ಕೊರತೆಯ ಕಾರಣದಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದಾದರೆ, ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮತ್ತು ಅದನ್ನು ಸಾಧಿಸಬಹುದಾದ ಒಂದು ಸ್ಪಷ್ಟ ವಿಧಾನವೆಂದರೆ, ಈ ಬಿಕ್ಕಟ್ಟಿನ ವಿಶೇಷ ಸಂದರ್ಭವನ್ನು ಪರಿಗಣಿಸಿ, ಹಣ ವರ್ಗಾವಣೆಯ ಮೂಲಕ, ದುಡಿಯುವ ಜನರ ಕೈಗೆ ಕೊಳ್ಳುವ ಶಕ್ತಿಯನ್ನು ತುಂಬಬೇಕಾಗುತ್ತದೆ. ಅಂದರೆ, ಎಡಪಂಥದ ಮರುಹಂಚಿಕೆಯ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯವನ್ನು ಸಾಧಿಸಬೇಕಾಗುತ್ತದೆ. ಈ ಅನಿವಾರ್ಯತೆಯಿಂದಾಗಿಯೇ ಬಿಡೆನ್ ವೈಯುಕ್ತಿಕವಾಗಿ ಒಬ್ಬ ನಡುಪಂಥೀಯ ನಿಲುವಿನ ಕಟ್ಟಾ ಸಮರ್ಥಕರಾಗಿದ್ದರೂ ಸಹ ಎಡಪಂಥೀಯ ಕಾರ್ಯಸೂಚಿಯತ್ತ ವಾಲಿದರು.

ಬಿಡೆನ್ ಅವರ ಸೈದ್ಧಾಂತಿಕ ನಿಲುವಿನ ಬಗ್ಗೆ ಹೇಳುವುದಾದರೆ, ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷದ ಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಪಕ್ಷದ ಆಂತರಿಕ ಸ್ಪರ್ಧೆಯಲ್ಲಿ ಸೋತ ಅಧ್ಯಕ್ಷೀಯ-ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ಅವರಂತೆ ಬಿಡೆನ್ ಎಡಪಂಥದ ಅನುಯಾಯಿ ಅಲ್ಲ. ತಾನು ಎಡಪಂಥೀಯನೆಂದು ಬಿಡೆನ್ ಎಂದೂ ಹೇಳಿಕೊಂಡಿರಲಿಲ್ಲ. ಬರಾಕ್ ಒಬಾಮಾ ಅವರಿಗೆ ಉಪಾಧ್ಯಕ್ಷರಾಗಿದ್ದ ಬಿಡೆನ್, ಅವರದೇ ಸೈದ್ಧಾಂತಿಕ ನಿಲುವಿನವರು, ಅದು ಎಡಪಂಥದಿಂದ ಬಹಳ ದೂರದಲ್ಲಿರುವ ನಿಲುವು. ಹಾಗಾದರೆ, ಅವರ ಈ ಹೊಸ ನಿಲುವನ್ನು ಅರ್ಥೈಸುವುದು ಹೇಗೆ? ಅವರ ನಿಲುವನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ತಳೆದ ಅವಕಾಶವಾದಿ ನಿಲುವು ಎನ್ನುವಂತಿಲ್ಲ. ಅದಾಗಿದ್ದರೆ, ಅವರು ಚುನಾಯಿತರಾದ ನಂತರ ತಮ್ಮ ನಡು ಪಂಥೀಯ ನಿಲುವಿಗೆ ಸದ್ದಿಲ್ಲದೆ ಹಿಂದಿರುಗುತ್ತಿದ್ದರು.

ಬಿಡೆನ್ ಅವರ ಬದಲಾದ ನಿಲುವು, ಬಂಡವಾಳಶಾಹಿ ಬಿಕ್ಕಟ್ಟಿನ ಗಂಭೀರತೆಯನ್ನು ಸೂಚಿಸುತ್ತದೆ. ಈ ಬಿಕ್ಕಟ್ಟನ್ನು ನಿರ್ಲಕ್ಷಿಸುವುದು ಅಥವಾ ಅದು ಬಿಕ್ಕಟ್ಟೇ ಅಲ್ಲ ಎಂದು ಸೋಗು ಹಾಕುವುದು ಹಾನಿಕಾರಕವಾಗಿ ಪರಿಣಮಿಸಿದೆ. ಅಮೆರಿಕದ ಈ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಂದಿನ ದಿನಮಾನಗಳಲ್ಲಿ ಅಮೇರಿಕಾ ಮತ್ತು ಇತರ ದೇಶಗಳನ್ನು ಕಾಡುತ್ತಿದ್ದ 2008ರ ಆರ್ಥಿಕ ಬಿಕ್ಕಟ್ಟನ್ನು ನಿರ್ಲಕ್ಷಿಸಿದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ-ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಧೋರಣೆಯೇ ಅವರ ಸೋಲಿಗೆ ಕಾರಣವಾಯಿತು ಮತ್ತು ಟ್ರಂಪ್ ಅವರನ್ನು ಅಧಿಕಾರಕ್ಕೆ ತಂದಿತು. ಟ್ರಂಪ್ ಅವರ ಗೆಲುವನ್ನು ಮತದಾರರು ಇದ್ದಕ್ಕಿದ್ದಂತೆ ಬಲಪಂಥೀಯರಾಗಿ ಬದಲಾದರು ಎಂದು ಅರ್ಥೈಸಲಾಗದು. ಬಿಕ್ಕಟ್ಟಿನಲ್ಲಿದ್ದ ಅರ್ಥವ್ಯವಸ್ಥೆಯು ದುಡಿಯುವ ಜನರಿಗೆ ಅತೀವ ಸಂಕಟವನ್ನು ಉಂಟುಮಾಡಿತ್ತು ಮತ್ತು ಅದರ ಬಗ್ಗೆ ಹಿಲರಿ ಕ್ಲಿಂಟನ್ ಕಾಳಜಿ ವಹಿಸಲಿಲ್ಲ. ಹಿಲರಿ ಕ್ಲಿಂಟನ್ ಮಾಡಿದ ತಪ್ಪನ್ನು ಬಿಡೆನ್ ಮಾಡಲಿಲ್ಲ. ಬಿಕ್ಕಟ್ಟು ನೆಲೆಸಿರುವುದು ನಿಜ ಮತ್ತು ಅದು ಗಂಭೀರ ಸ್ವರೂಪದ್ದು ಎಂಬುದನ್ನು ಮತ್ತು ಅದು ಕೊರೊನಾ ಹರಡುವ ಮುನ್ನವೇ ನೆಲೆಸಿತ್ತು ಎಂಬುದನ್ನು ಮತ್ತು ಕೊರೊನಾ ಸಾಂಕ್ರಾಮಿಕವು ಬಿಕ್ಕಟ್ಟನ್ನು ತೀವ್ರಗೊಳಿಸಿತು ಎಂಬುದನ್ನು ಬಿಡೆನ್ ಗುರುತಿಸಿದರು.

ಆದರೆ ಮೋದಿ ಸರಕಾರದ ನಿರ್ದಯತೆ ಎಷ್ಟೆಂದರೆ, ತನ್ನ ಕನಿಷ್ಠ ಕರ್ತವ್ಯದ ನಿರ್ವಹಣೆಯಿಂದಲೂ ಅದು ತಪ್ಪಿಸಿಕೊಂಡು, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅದು ಜನರನ್ನು ಹಿಂಡಿ ಹಿಪ್ಪೆಮಾಡುವ ಕಾರ್ಪೊರೇಟ್-ಹಣಕಾಸು ಕುಳಗಳ ಕಾರ್ಯಸೂಚಿಯೇ ಪರಿಹಾರವೆಂದು ತಿಳಿದು ಅದನ್ನೇ ನಿಷ್ಠಾ ಪೂರ್ವಕವಾಗಿ ಜಾರಿ ಮಾಡುವಲ್ಲಿ ತೊಡಗಿದೆ.

ಬಂಡವಾಳಗಾರರು ಹೊಂದಿದ್ದಾರೆ ಎಂದು ಭಾವಿಸಲಾದ “ಮೃಗೀಯ ಧೈರ್ಯೋತ್ಸಾಹ”ವನ್ನು ಬಡಿದೆಬ್ಬಿಸುವ ಸಲುವಾಗಿ ಕಾರ್ಪೊರೇಟ್-ಪರ ನೀತಿಗಳನ್ನು ಅನುಸರಿಸುವುದರಿಂದ ಏನೂ ಪ್ರಯೋಜನವಾಗದು ಎಂಬುದು ಮತ್ತು ಬಿಕ್ಕಟ್ಟಿನ ಬಗ್ಗೆ ಈ ಸನ್ನಿವೇಶದಲ್ಲಿ ಏನಾದರೂ ಮಾಡಲೇಬೇಕು ಎಂಬುದು ಬಹುತೇಕ ಮಂದಿಗೆ ಈಗಾಗಲೇ ಸ್ಪಷ್ಟವಾಗಿದೆ. ಹಾಗಾಗಿ, ಒಟ್ಟಾರೆ ಬೇಡಿಕೆ-ಕೊರತೆಯ ಕಾರಣದಿಂದ ಉಂಟಾಗಿರುವ ಈ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದಾದರೆ, ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮತ್ತು ಅದನ್ನು ಸಾಧಿಸಬಹುದಾದ ಒಂದು ಸ್ಪಷ್ಟ ವಿಧಾನವೆಂದರೆ, ಈ ಬಿಕ್ಕಟ್ಟಿನ ವಿಶೇಷ ಸಂದರ್ಭವನ್ನು ಪರಿಗಣಿಸಿ, ಹಣ ವರ್ಗಾವಣೆಯ ಮೂಲಕ, ದುಡಿಯುವ ಜನರ ಕೈಗೆ ಕೊಳ್ಳುವ ಶಕ್ತಿಯನ್ನು ತುಂಬಬೇಕಾಗುತ್ತದೆ. ಅಂದರೆ, ಎಡಪಂಥದ ಮರುಹಂಚಿಕೆಯ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯವನ್ನು ಸಾಧಿಸಬೇಕಾಗುತ್ತದೆ. ಈ ಅನಿವಾರ್ಯತೆಯಿಂದಾಗಿಯೇ ಬಿಡೆನ್ ಅವರು ಎಡಪಂಥದತ್ತ ವಾಲಿದರು; ವೈಯುಕ್ತಿಕವಾಗಿ ಬಿಡೆನ್ ಒಬ್ಬ ನಡುಪಂಥೀಯ ನಿಲುವಿನ ಕಟ್ಟಾ ಸಮರ್ಥಕರಾಗಿದ್ದರೂ ಸಹ.

ಬಿಡೆನ್ ಅವರ ರಕ್ಷಣಾ ಪ್ಯಾಕೇಜಿನ ಬಗ್ಗೆ ಕಾರ್ಪೊರೇಟ್ ಅಮೇರಿಕಾಗೆ ಸಮಾಧಾನವಿಲ್ಲ. ಶೀಘ್ರದಲ್ಲೇ ಹಣಕಾಸು ಬಂಡವಾಳವು ತನ್ನ ಅಸಮಾಧಾನವನ್ನು ಹೊರಹಾಕಲಿದೆ. ವಿಶ್ವದ ಪ್ರಧಾನ ಬಂಡವಾಳಶಾಹಿ ದೇಶವಾಗಿರುವ ಮತ್ತು ಅದರ ಡಾಲರ್ ಕರೆನ್ಸಿಯನ್ನು “ಚಿನ್ನಕ್ಕೆ ಸಮ” ಎಂದು ವಿಶ್ವವೇ ಭಾವಿಸಿರುವ ಕಾರಣದಿಂದ, ವಿಶ್ವದ ಇತರ ಪ್ರಮುಖ ಬಂಡವಾಳಶಾಹಿ ದೇಶಗಳಿಗೆ ಹೋಲಿಸಿದರೆ, ಯಾವ ದೇಶಕ್ಕೂ ಇಲ್ಲದ ಹೆಚ್ಚು ಸ್ವಾತಂತ್ರ್ಯವನ್ನು ಅಮೇರಿಕಾ ಹೊಂದಿದೆ ಎಂಬುದು ನಿಜವೇ. ಆದರೆ, ಬಿಡೆನ್ ತಮ್ಮ ಪ್ರಸಕ್ತ ನೀತಿ-ನಿಲುವುಗಳನ್ನು ಇದೇ ದಿಕ್ಕಿನಲ್ಲಿ ಮುಂದುವರಿಸಿದ್ದೇ ಆದರೆ, ಅಮೇರಿಕಾ ಹೊಂದಿರುವ ವಿಶೇಷ ಸ್ಥಾನ-ಮಾನ ಬಹಳ ಕಾಲ ಮುಂದುವರಿಯುವುದು ಶಕ್ಯವಿಲ್ಲ. ಅಂತಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ, ಬಿಡೆನ್ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಕೊಳ್ಳಬೇಕಾಗುತ್ತದೆ: ಒಂದೋ ತಮ್ಮ ಪ್ರಸಕ್ತ ನೀತಿ-ನಿಲುವುಗಳ ಸಮರ್ಥನೆ, ಇಲ್ಲವೇ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ನೀತಿಗಳಿಗೆ ಶರಣಾಗತಿ. ಒಂದು ವೇಳೆ ಅವರು ತಮ್ಮ ಪ್ರಸಕ್ತ ನೀತಿ-ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಆಯ್ಕೆ ಮಾಡಿಕೊಂಡರೆ, ಆಗ, ಅವರು ಎಡಪಂಥದತ್ತ ವಾಲುತ್ತಿರುವ ತಮ್ಮ ನೀತಿ-ನಿಲುವುಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕಾಗುತ್ತದೆ.

ಬಿಡೆನ್ ಅವರು ಘೋಷಿಸಿರುವ ರಕ್ಷಣಾ ಪ್ಯಾಕೇಜನ್ನು ಮೋದಿ ಸರ್ಕಾರವು ಈಗಾಗಲೇ ಕಂತುಗಳಲ್ಲಿ ಘೋಷಣೆ ಮಾಡಿರುವ ಪ್ಯಾಕೇಜ್‌ಗಳೊಂದಿಗೆ ಹೋಲಿಸುವುದು ಬಾಲಿಷವಾಗುತ್ತದೆ. ಸಂಕಷ್ಟಕ್ಕೀಡಾದ ಜನರಿಗೆ ನೆರವು ಒದಗಿಸುವಲ್ಲಿ ಮೋದಿ ಸರ್ಕಾರವು ಒಂದು ನಿರ್ದಯ ನೀತಿಯನ್ನು ಅನುಸರಿಸಿತು. ಆಸ್ತಿ-ಪಾಸ್ತಿ ಹೊಂದಿದ ವರ್ಗಗಳ ಸವಲತ್ತು-ಹಕ್ಕುಗಳಿಗೆ ಚ್ಯುತಿ ತಾರದಂತಹ ರೀತಿಯ ನೆರವು ಒದಗಿಸುವುದನ್ನೂ ಸಹ ಬಿಟ್ಟುಬಿಟ್ಟಿತು. ಕೊನೆಯ ಪಕ್ಷ, ಒಂದು ಅಸಾಧಾರಣ ಸನ್ನಿವೇಶವೆಂದು ಎಲ್ಲರೂ ಗುರುತಿಸುವ ಈ ಸಾಂಕ್ರಾಮಿಕದ ಸಂದರ್ಭದಲ್ಲಾದರೂ, ಜಾಗತೀಕರಣಗೊಂಡ ಹಣಕಾಸು ಬಂಡವಾಳದ ವಿರೋಧವನ್ನು ಕೆರಳಿಸದೆ, ದುಡಿಯುವ ಜನರಿಗೆ ಸಹಾಯ ಮಾಡುವ ಕೆಲವು ಕ್ರಮಗಳನ್ನಾದರೂ ಸರ್ಕಾರವು ಕೈಗೊಳ್ಳಬಹುದಿತ್ತು. ಆದರೆ ಮೋದಿ ಸರಕಾರದ ನಿರ್ದಯತೆ ಎಷ್ಟೆಂದರೆ, ಈ ಕನಿಷ್ಠ ಕರ್ತವ್ಯದ ನಿರ್ವಹಣೆಯಿಂದಲೂ ಅದು ತಪ್ಪಿಸಿಕೊಂಡಿತು. ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅದು ಜನರನ್ನು ಹಿಂಡಿ ಹಿಪ್ಪೆಮಾಡುವ ಕಾರ್ಪೊರೇಟ್-ಹಣಕಾಸು ಕುಳಗಳ ಕಾರ್ಯಸೂಚಿಯೇ ಪರಿಹಾರವೆಂದು ತಿಳಿದು ಅದನ್ನೇ ನಿಷ್ಠಾಪೂರ್ವಕವಾಗಿ ಜಾರಿ ಮಾಡುವಲ್ಲಿ ತೊಡಗಿದೆ. ಆದರೆ, ಸರ್ಕಾರವು ಅನುಸರಿಸುತ್ತಿರುವ ಈ ಮಾರ್ಗವು ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅಸಮರ್ಥವಾಗಿದೆ ಮಾತ್ರವಲ್ಲ, ಹಾನಿಕಾರಕವೂ ಹೌದು. ಆದ್ದರಿಂದಲೇ, ದೇಶದ ಜನರ ಅತಿ ದೊಡ್ಡ ವಿಭಾಗವಾದ ರೈತರು ಈ ಕಡು ಚಳಿಯಲ್ಲೂ ದೆಹಲಿ ಗಡಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊರೊನಾ ಕಾರಣದಿಂದಾಗಿ ಬಾಡಿಗೆ ತೆರಲಾರದ ಜನರನ್ನು ಮನೆಯಿಂದ ಹೊರ ಹಾಕದಂತೆ ಟ್ರಂಪ್‌ನಂತಹ ಅಧ್ಯಕ್ಷರೂ ಸಹ ಆಜ್ಞೆ ಹೊರಡಿಸಿದ್ದರು. ಆದರೆ, ಕೇವಲ ನಾಲ್ಕು ಗಂಟೆಗಳ ಎಚ್ಚರಿಕೆಯ ನೋಟೀಸ್ ಕೊಟ್ಟು ಒಂದು ಅಮಾನವೀಯ ಲಾಕ್‌ಡೌನ್ ಘೋಷಿಸಿದ ಮೋದಿ ಸರ್ಕಾರವು ಈ ಒಂದು ಸಣ್ಣ ಕೆಲಸವನ್ನೂ ಮಾಡಲಿಲ್ಲ. ಲಾಕ್‌ಡೌನ್ ಘೋಷಣೆಯಾದ ಕೂಡಲೇ ಲಕ್ಷ ಲಕ್ಷ ಮಂದಿ ವಲಸೆ ಕಾರ್ಮಿಕರು ಉದ್ಯೋಗವಿಲ್ಲದಂತಾದರು, ಆದಾಯವಿಲ್ಲದಂತಾದರು, ಮಾತ್ರವಲ್ಲ, ಮಲಗಲು ಮನೆಯಿಲ್ಲದಂತಾದರು. ಆದ್ದರಿಂದ, ಅವರು ತಕ್ಷಣವೇ ಗಂಟು ಮೂಟೆ ಹೊತ್ತುಕೊಂಡು ನೂರಾರು ಮೈಲಿಗಳ ದೂರದ ತಮ್ಮ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದರು. ಕೆಲಸ ಕಳೆದುಕೊಂಡ ಜನರಿಗೆ ಟ್ರಂಪ್ ಸರ್ಕಾರ ಕೂಡ ಹಣ ಒದಗಿಸಿತ್ತು. ಆದರೆ, ಮೋದಿ ಸರ್ಕಾರವು ಕೆಲಸ ಕಳೆದುಕೊಂಡ ಜನರಿಗೆ ಒಂದು ಬಿಡಿ ಕಾಸಿನ ನೆರವನ್ನೂ ಒದಗಿಸಲಿಲ್ಲ. ರಾಜಕೀಯ ಪಕ್ಷಗಳು, ಕೆಲವು ನಾಗರಿಕ ಗುಂಪುಗಳು ಮತ್ತು ಬುದ್ಧಿಜೀವಿಗಳು, ಆದಾಯವಿಲ್ಲದ ಪ್ರತಿ ಕುಟುಂಬಕ್ಕೂ ತಿಂಗಳಿಗೆ 7000 ರೂ.ಗಳ ನೆರವನ್ನು ಕೆಲವು ತಿಂಗಳ ಮಟ್ಟಿಗಾದರೂ ಒದಗಿಸುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ, ಮೋದಿ ಸರ್ಕಾರವು ಅದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಎಂಟು ವರ್ಷಕ್ಕೆ ಮಗ ದಂಟು ಎಂದು ತೊದಲಿದ ಎಂಬ ರೀತಿಯಲ್ಲಿ ಮೋದಿ ಸರ್ಕಾರವು ಒಂದು “ರಕ್ಷಣಾ ಪ್ಯಾಕೇಜ್”ಅನ್ನು ಎರಡು ಕಂತುಗಳಲ್ಲಿ ಪ್ರಕಟಿಸಿತು. ಸಾಮಾನುಗಳನ್ನು ತಮ್ಮ ಬಳಿ ಇದ್ದುದಕ್ಕಿಂತ ಹೆಚ್ಚಿಗೆ ತೋರುವಂತೆ ಅಂಗಡಿಯವರು ಪ್ರದರ್ಶಿಸುವ ರೀತಿಯಲ್ಲಿತ್ತು ಈ ಪ್ಯಾಕೇಜ್. ಕೊರೊನಾ ಹರಡುವ ಮೊದಲೇ ಮಂಡಿಸಿದ್ದ ಬಜೆಟ್‌ನಲ್ಲಿ ಅದಾಗಲೇ ಘೋಷಣೆಯಾಗಿದ್ದ ಕೆಲವು ಯೋಜನೆಗಳು ಮತ್ತು ಅದರ ಜೊತೆಗೆ ಸಾಲ ಒದಗಿಸುವ ಕೆಲವು ಭರವಸೆಗಳನ್ನು ಸೇರಿಸಿ ತೆಗೆದ ಒಂದು ಕಲಸುಮೇಲೋಗರವಾಗಿತ್ತು ಈ ಪ್ಯಾಕೇಜ್. ಒಟ್ಟು 20 ಲಕ್ಷ ಕೋಟಿ ರೂ.ಗಳ ಗಾತ್ರದ್ದು ಎಂದು ಹೇಳಿಕೊಂಡ ಈ ರಕ್ಷಣಾ ಪ್ಯಾಕೇಜ್‌ನಲ್ಲಿ ಹಣಕಾಸು ನೆರವಿನ ಭಾಗವು 1.9 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿಗೆ ಇರಲಿಲ್ಲ. ಕೆಲವರು ಈ ಮೊತ್ತವನ್ನು 1.65 ಲಕ್ಷ ಕೋಟಿ ರೂ.ಗಳೆಂದು ಅಂದಾಜು ಮಾಡಿದ್ದಾರೆ. ಇದು ಜಿಡಿಪಿಯ ಸುಮಾರು ಶೇ.1ರಷ್ಟಾಗುತ್ತದೆ.

ಹಣಕಾಸು ನೆರವಿಗೆ ಎಂದು ತೆಗೆದಿಟ್ಟ ಈ ಅಲ್ಪ ಮೊತ್ತದ ಹಣವನ್ನೂ ಪೂರ್ತಿ ಖರ್ಚು ಮಾಡಿಲ್ಲವಂತೆ. 2020ರ ಏಪ್ರಿಲ್‌ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ, ಕೇಂದ್ರ ಸರ್ಕಾರದ ಒಟ್ಟು ಖರ್ಚು-ವೆಚ್ಚಗಳು, 2019ರ ಇದೇ ಅವಧಿಯ ಖರ್ಚು-ವೆಚ್ಚಗಳಿಗಿಂತ ಶೇ.4.7ರಷ್ಟು ಮಾತ್ರ ವೃದ್ಧಿಯಾಗಿವೆ. ಇದೇ ಅವಧಿಯಲ್ಲಿ ವರ್ಷದಿಂದ-ವರ್ಷದ ಹಣದುಬ್ಬರವು ಶೇ.6ಕ್ಕಿಂತ ಹೆಚ್ಚಿಗೆ ಇತ್ತು. ಅಂದರೆ, ಕೊರೊನಾ ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ, ಕೇಂದ್ರ ಸರ್ಕಾರವು ಹೆಚ್ಚು ಹೆಚ್ಚು ಹಣ ಖರ್ಚು ಮಾಡಬೇಕಿದ್ದುದರ ಬದಲು, ಹಣದುಬ್ಬರದೊಂದಿಗೆ ಹೊಂದಿಸಿದ ಲೆಕ್ಕಾಚಾರದಲ್ಲಿ, ಖರ್ಚುಗಳು ಕುಸಿದಿದ್ದವು ಎಂದಾಗುತ್ತದೆ.

ತನ್ನದೇ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿದ ವಿಕೃತ ನಡೆಯಿಂದ ತೃಪ್ತಿಪಟ್ಟುಕೊಳ್ಳದ ಕೇಂದ್ರ ಸರ್ಕಾರವು, ಅದೇ ಸಮಯದಲ್ಲಿ ಜಿಎಸ್‌ಟಿ ಪರಿಹಾರ ಬಾಬ್ತು ರಾಜ್ಯ ಸರಕಾರಗಳಿಗೆ ನ್ಯಾಯಯುತವಾಗಿ ಕೊಡಬೇಕಿದ್ದ ಬಾಕಿ ಹಣವನ್ನೂ ಕೊಡದೆ ಸತಾಯಿಸಿತು. ಪರಿಣಾಮವಾಗಿ, ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ, ಹಣದುಬ್ಬರದೊಂದಿಗೆ ಹೊಂದಿಸಿದ ಲೆಕ್ಕಾಚಾರದಲ್ಲಿ, ಒಟ್ಟು ಸರ್ಕಾರಿ ವೆಚ್ಚಗಳು ತಗ್ಗಿದ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು. ಸರ್ಕಾರದ ಈ ಬುದ್ಧಿಹೀನ ನೀತಿಗಳಿಗೆ ಅದರ ನಿರ್ದಯತೆ ಮಾತ್ರ ಸಾಟಿಯಾಗಬಲ್ಲದು. ಹಾಗಾಗಿ, ನರೇಂದ್ರ ಮೋದಿಗೆ ಹೋಲಿಸಿದರೆ ಜೋ ಬಿಡೆನ್ ಪ್ರಕಾಶಮಾನವಾಗಿ ಕಾಣುತ್ತಾರೆ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *