ಇಟಾಲಿಯನ್‌ ನವವಾಸ್ತವವಾದಿ ಸಿನಿಮಾ ʼದಿ ಬೈಸಿಕಲ್‌ ಥೀವ್ಸ್ʼಗೆ 75ರ ಗರಿ

ಮ ಶ್ರೀ ಮುರಳಿ ಕೃಷ್ಣ
ಎರಡನೇ ವಿಶ್ವ ಸಮರದ ತರುವಾಯ, ಯೂರೋಪಿನ ಅನೇಕ ದೇಶಗಳು ಜರ್ಝರಿತಗೊಂಡವು.  ಇಟಲಿ ಅದಕ್ಕೆ ಹೊರತಾಗಿರಲಿಲ್ಲ.  ಅದರ ಜನತೆ ಅಭಾವ, ಬಡತನ, ಹಸಿವು, ನಿರುದ್ಯೋಗ, ಗಲಭೆಗಳು, ಸಾಮಾಜಿಕ ಪ್ರಕ್ಷುಬ್ಧತೆ ಇತ್ಯಾದಿಗಳಿಂದ ನಲುಗಿತು.  ನಂತರ ನಿಧಾನವಾಗಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು.  ಇದರ ಪರಿಣಾಮ ಸಿನಿಮಾರಂಗದ ಮೇಲೂ ಆಯಿತು.  ಕೆಲವು ಸಿನಿಮಾ ನಿರ್ದೇಶಕರು ವಸ್ತುಸ್ಥಿತಿಯನ್ನು ಯಥಾರೂಪದಲ್ಲಿ, ಯಾವುದೇ ಕುಸುರಿ ಕೆಲಸಗಳಿಲ್ಲದೆ, ಅಭಿವ್ಯಕ್ತಿಸುವ ನಿಟ್ಟಿನಲ್ಲಿ ಹೊಸ ಸಿನಿಮಾ ಭಾಷೆಯ ಅಗತ್ಯತೆಯನ್ನು ಮನಗಂಡರು.  ಸಾಮಾನ್ಯ ಮಂದಿಯ ನಿತ್ಯದ ಕಥೆಗಳು, ಬಾಳುವುದಕ್ಕಾಗಿ ಅವರು ಪಡುವ ಪಡಿಪಾಟಲುಗಳು ಇತ್ಯಾದಿಗಳನ್ನು ಸಿನಿಮಾ ಮಾಧ್ಯಮದ ಮೂಲಕ ಬಿಂಬಿಸಲು ಮುಂದಾದರು.  ಇದು ಇಟಾಲಿಯಲ್ಲಿ ನವವಾಸ್ತವಾದಿ ಸಿನಿಮಾದ ಚಾಲನೆಗೆ ಅಡಿಗಲ್ಲಾಯಿತು. ಇಟಾಲಿಯನ್‌ ನವವಾಸ್ತವವಾದಿ ಸಿನಿಮಾ ಚಳವಳಿ ಫ್ರಂಚ್‌ ನವ ಅಲೆ ಮತ್ತು ನವ ಜರ್ಮನ್‌ ಸಿನಿಮಾ ಚಳವಳಿಗಳಿಗೆ ಪ್ರೇರೇಪಣೆಯನ್ನು ನೀಡಿತು ಎನ್ನಬಹುದು.  ʼದಿ ಬೈಸಿಕಲ್ಥೀವ್ಸ್” ನವವಾಸ್ತವಾದಿ ಸಿನಿಮಾದ ಒಂದು ಪ್ರಮುಖ ಚಿತ್ರ. ಎಪ್ಪತ್ತೈದು ವರ್ಷಗಳಾದರೂ, ಪ್ರಪಂಚದಾದ್ಯಂತ, ಈ ಸಿನಿಮಾ ಸಿನಿಪ್ರೇಮಿಗಳು ಮತ್ತು ಸಿನಿವಿದ್ವಾಂಸರ ಚರ್ಚೆಗಳಿಗೆ ಗ್ರಾಸವಾಗಿರುವುದು ಅದರ ಮಹತ್ವವನ್ನು ಸಾರುತ್ತದೆ !

ವಿಟ್ಟೋರಿಯೊ ಡಿ ಸಿಕಾ ನಿರ್ದೇಶನದ “ದಿ ಬೈಸಿಕಲ್‌ ಥೀವ್ಸ್” ಸಿನಿಮಾದ ಆಂತರ್ಯವನ್ನು ಹೊಕ್ಕುವ ಮುನ್ನ ಇಟಾಲಿಯನ್‌ ನವವಾಸ್ತವವಾದಿ ಸಿನಿಮಾ ಚಳಚಳಿ ಕುರಿತು ಸ್ಥೂಲವಾಗಿ ಅರಿತಾಗ ಇಂತಹ ಚಲನಚಿತ್ರಗಳ ಉಗಮದ ಹಿಂದಿನ ಕಾರಣಗಳನ್ನು ತಿಳಿಯಬಹುದು.  1920ರ ದಶಕದಲ್ಲಿ ಇಟಾಲಿಯಲ್ಲಿ ಅಮೆರಿಕಾದ ಸಿನಿಮಾಗಳು ಪ್ರವರ್ಧಮಾನದಲ್ಲಿದ್ದವು.  ಇದರಿಂದ ಇಟಾಲಿಯ ಸಿನಿಮಾ ಉದ್ಯಮ ಮಸುಕಾಗಿತ್ತು. ಬೆನಿಟೊ ಮುಸ್ಸೊಲಿನಿ ಸರಕಾರ ತನ್ನ ಫ್ಯಾಸಿಸ್ಟ್‌ ಆಳ್ವಿಕೆಯನ್ನು ಬಲಪಡಿಸಿಕೊಳ್ಳಲು ಅದರ ಕೈಗಾರಿಕಾ ಮತ್ತು ಸಾಂಸ್ಕೃತಿಕ ನೀತಿಗಳ ಅನುಸಾರ ಸಿನಿಮಾ ನಿರ್ಮಾಣಕ್ಕೆ ಸಹಾಯಧನವನ್ನು ಒದಗಿಸಲು ಮುಂದಾಯಿತು.  ಹೀಗೆ ಸಿನಿಮಾ ಉದ್ಯಮಕ್ಕೂ ಮತ್ತು ಅಲ್ಲಿನ ಆಡಳಿತ ಯಂತ್ರಕ್ಕೂ ಒಂದು ಹೊಸ ಪಾಲುದಾರಿಕೆ ಪ್ರಾರಂಭವಾಯಿತು. ಇದು 99 ಏಕರೆಯ ಭೂಮಿಯಲ್ಲಿ “ಸಿನಿಸಿಟ್ಟ” ಎಂಬ ಬಹುದೊಡ್ಡ ಸ್ಟುಡಿಯೊದ ಸ್ಥಾಪನೆಗೆ ನಾಂದಿಯನ್ನು ಹಾಡಿತು!

ಇಟಾಲಿಯ ಫ್ಯಾಸಿಸ್ಟ್‌ ಆಡಳಿತದ ಸಮಯದಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಖುಲ್ಲಂಖುಲ್ಲ ಫ್ಯಾಸಿಸ್ಟ್‌ ವಿಚಾರಧಾರೆಯ ಅಂಶಗಳಿರುತ್ತಿರಲಿಲ್ಲ.  ಆದರೆ ಆ ಕಾಲದ ಸರ್ಕಾರಕ್ಕೆ ಹಾಯೆನಿಸುವ, ಬೆರಗುಗೊಳಿಸುವ, ಥಳಕಿನ ಪಲಾಯನವಾದಿ ಸಿನಿಮಾಗಳ ನಿರ್ಮಾಣಕ್ಕೆ ಉತ್ತೇಜನವನ್ನು ನೀಡುವ ಉದ್ದೇಶವಿತ್ತು.  ಅಂದರೆ ವೀಕ್ಷಕರಿಗೆ ಜೋಗುಳದ ಹಾಡಿನಂತೆ ಮುದವನ್ನು ನೀಡುವ ಸಿನಿಮಾಗಳಿಗೆ ಪ್ರಾಶಸ್ತ್ಯ ದೊರಕಿತು.  ಇಂತಹ ಸಿನಿಮಾಗಳನ್ನು ʼ ವೈಟ್‌ ಟೆಲಿಫೋನ್‌ ಫಿಲ್ಮ್ಸ್‌ ಎಂದು ಕರೆಯಲಾಗುತ್ತಿತ್ತು.  ಈ ಸಿನಿಮಾಗಳಲ್ಲಿ ಫ್ರೇಮ್‌ಗಳನ್ನು ವೈಭವೀಕರಿಸಲು ಬಿಳಿ ಟೆಲಿಫೋನ್‌ಗಳನ್ನು ಬಳಸಲಾಗುತ್ತಿತ್ತು!  ಇದೇ ಅವಧಿಯಲ್ಲಿ ಅಡಾಲ್ಫ್‌ ಹಿಟ್ಲರ್‌ನ ನಾಝಿ ಸರ್ಕಾರ ಕೂಡ ತನ್ನ ಪ್ರಚಾರ ಸಚಿವನಾಗಿದ್ದ ಜೋಸೆಫ್‌ ಗೊಬೆಲ್ಸ್‌ ಮೂಲಕ ಇಂತಹ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಿತ್ತು! ಮುಂದೆ ಇಟಾಲಿಯನ್‌ ನವವಾಸ್ತವವಾದಿ ಸಿನಿಮಾ ಚಳವಳಿಯ ಅರ್ದ್ವಯುವಾದ ರಾಬರ್ಟೊ ರೊಸ್ಸೆಲಿನಿ ಕೂಡ ಪ್ರಚಾರದ ಸರಕಿದ್ದ ಸಿನಿಮಾಗಳನ್ನು ನಿರ್ದೇಶಿಸುವಂತೆ ನೋಡಿಕೊಳ್ಳಲಾಯಿತು!

ನವ ವಾಸ್ತವವಾದಿ ಸಿನಿಮಾ

ಎರಡನೇ ವಿಶ್ವ ಸಮರದ ತರುವಾಯ, ಯೂರೋಪಿನ ಅನೇಕ ದೇಶಗಳು ಜರ್ಝರಿತಗೊಂಡವು.  ಇಟಲಿ ಅದಕ್ಕೆ ಹೊರತಾಗಿರಲಿಲ್ಲ.  ಅದರ ಜನತೆ ಅಭಾವ, ಬಡತನ, ಹಸಿವು, ನಿರುದ್ಯೋಗ, ಗಲಭೆಗಳು, ಸಾಮಾಜಿಕ ಪ್ರಕ್ಷುಬ್ಧತೆ ಇತ್ಯಾದಿಗಳಿಂದ ನಲುಗಿತು.  ನಂತರ ನಿಧಾನವಾಗಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು.  ಇದರ ಪರಿಣಾಮ ಸಿನಿಮಾರಂಗದ ಮೇಲೂ ಆಯಿತು.  ಕೆಲವು ಸಿನಿಮಾ ನಿರ್ದೇಶಕರು ವಸ್ತುಸ್ಥಿತಿಯನ್ನು ಯಥಾರೂಪದಲ್ಲಿ, ಯಾವುದೇ ಕುಸುರಿ ಕೆಲಸಗಳಿಲ್ಲದೆ, ಅಭಿವ್ಯಕ್ತಿಸುವ ನಿಟ್ಟಿನಲ್ಲಿ ಹೊಸ ಸಿನಿಮಾ ಭಾಷೆಯ ಅಗತ್ಯತೆಯನ್ನು ಮನಗಂಡರು.  ಸಾಮಾನ್ಯ ಮಂದಿಯ ನಿತ್ಯದ ಕಥೆಗಳು, ಬಾಳುವುದಕ್ಕಾಗಿ ಅವರು ಪಡುವ ಪಡಿಪಾಟಲುಗಳು ಇತ್ಯಾದಿಗಳನ್ನು ಸಿನಿಮಾ ಮಾಧ್ಯಮದ ಮೂಲಕ ಬಿಂಬಿಸಲು ಮುಂದಾದರು.  ಕಲೆ ಸಮಾಜವನ್ನು ಪ್ರತಿಫಲಿಸಬೇಕು ಎಂಬ ಪರಿಕಲ್ಪನೆ ಮುನ್ನೆಲೆಗೆ ಬಂದಿತು. ಇದು ಇಟಾಲಿಯಲ್ಲಿ ನವವಾಸ್ತವಾದಿ ಸಿನಿಮಾದ ಚಾಲನೆಗೆ ಅಡಿಗಲ್ಲಾಯಿತು.  ಒಂದು ಹೊಸ ಸಿನಿಮಾ ಪ್ರಜ್ಞೆ ರೂಪುಗೊಂಡಿತು.  ಹೊರಾಂಗಣದ ಶೂಟಿಂಗ್‌, ವೃತ್ತಿಯೇತರ ನಟ-ನಟಿಯರು, ಕೊನೆ ಸಮಯದಲ್ಲಿ ಬದಲಾವಣೆಯಾಗುವ ಸಂಬಾಷಣೆಗಳು, ಕಡಿಮೆ ಸೆಟ್‌ ಡಿಸೈನುಗಳು, ಲಾಂಗ್‌ ಟೇಕ್‌ಗಳು, ಸಾಕ್ಷ್ಯಚಿತ್ರ ಮಾದರಿಯ ಸಿನಿಮಾ ತಯಾರಕ ವಿಧಾನಗಳು, ಪ್ರಕೃತಿದತ್ತ ಬೆಳಕಿನ ಬಳಕೆ, ಎದ್ದು ಕಾಣದ ಸಂಕಲನ, ದುಡಿಯುವ ವರ್ಗದ ಪಾತ್ರಗಳು, ಹಾಲಿ ಸಾಮಾಜಿಕ ಬೆಳವಣಿಗೆಗಳು ಇತ್ಯಾದಿ ಇಟಾಲಿಯನ್‌ ನವವಾಸ್ತವವಾದಿ ಸಿನಿಮಾದ ಹೆಗ್ಗುರುತುಗಳಾಗಿದ್ದವು.

ಲುಕಿನೊ ವಿಸ್ಕೊಂತಿ ನಿರ್ದೇಶಿಸಿದ ʼಒಸ್ಸೆಸಿಯೋನೆʼ(Ossessione-1943)ಯನ್ನು ಇಟಾಲಿಯ ನವವಾಸ್ತವವಾದಿ ಸಿನಿಮಾ ಚಳವಳಿಯ ಪ್ರಥಮ ಸಿನಿಮಾ ಎಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ.  ನಂತರದ ಒಂದು ದಶಕದಲ್ಲಿ ವಿಟ್ಟೊರಿಯೊ ಡಿ ಸಿಕಾ, ರಾಬರ್ಟೊ ರೊಸ್ಸೆಲಿನಿ, ಪಿಯರ್‌ ಪೌಲೊ ಪಸೊಲಿನಿ, ಗುಸೆಪ್ಪೆ ಡಿ ಸಾಂತಿಸ್‌, ಆಲ್ಬೆರ್ತೊ ಲತುವಾದ, ಫೆಡ್ರಿಕೊ ಫೆಲ್ಲಿನಿ ಮುಂತಾದ ನಿರ್ದೇಶಕರು ಗಮನಾರ್ಹ ಸಿನಿಮಾಗಳನ್ನು ನಿರ್ದೇಶಿಸಿದರು. ಒಂದರ್ಥದಲ್ಲಿ ಇಟಾಲಿಯನ್‌ ನವವಾಸ್ತವವಾದಿ ಸಿನಿಮಾ ಚಳವಳಿ ಫ್ರಂಚ್‌ ನವ ಅಲೆ ಮತ್ತು ನವ ಜರ್ಮನ್‌ ಸಿನಿಮಾ ಚಳವಳಿಗಳಿಗೆ ಪ್ರೇರೇಪಣೆಯನ್ನು ನೀಡಿತು ಎನ್ನಬಹುದು.

“ದಿ ಬೈಸಿಕಲ್‌ ಥೀವ್ಸ್‌”

ವಿಟ್ಟೊರಿಯೊ ಡಿ ಸಿಕಾ 1917ರಲ್ಲಿ ಒಂದು ಮೂಕಿ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವುದರ ಮೂಲಕ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು.  ಸುಮಾರು 55 ವರ್ಷಗಳ ವೃತ್ತಿಜೀವನದಲ್ಲಿ ಅವರು 150 ಸಿನಿಮಾಗಳಲ್ಲಿ ಪಾತ್ರವನ್ನು ವಹಿಸಿದರು; 35 ಸಿನಿಮಾಗಳನ್ನು ನಿರ್ದೇಶಿಸಿದರು.  ಹಾಸ್ಯಗಾರರು ಮತ್ತು ವೃದ್ಧರ ಪಾತ್ರಗಳನ್ನು ಮಾಡುತ್ತಲೇ ಅನೇಕ ರೊಮ್ಯಾಂಟಿಕ್‌ ಹಾಸ್ಯ ಸಿನಿಮಾಗಳಲ್ಲಿ ನಟಿಸಿದರು.  1930ರ ದಶಕದಲ್ಲಿ ಅವರು ಮ್ಯಾಟಿನಿ ಐಡಲ್ ಆದರು.  ನಂತರದ ವರ್ಷಗಳಲ್ಲಿ ಅವರು ಸಿನಿಮಾ ನಿರ್ದೇಶನದಲ್ಲಿ ತೊಡಗಿದರು.  ಈ ಅವಧಿಯಲ್ಲಿ ಅವರು ʼವೈಟ್‌ ಟೆಲಿಫೋನ್‌ ಫಿಲ್ಮ್‌ʼಗಳನ್ನು ನಿರ್ದೇಶಿಸಿದರು. ಇದರಿಂದ ಅವರು ನಿರ್ದೇಶನದ ಮತ್ತು ತಾಂತ್ರಿಕ ಕೌಶಲಗಳನ್ನು ಗಳಿಸಿದರು.  1944ರಲ್ಲಿ ಅವರು ನಿರ್ದೇಶಿಸಿದ ʼದಿ ಚಿಲ್ಡ್ರನ್‌ ಆರ್‌ ವಾಚಿಂಗ್‌ ಅಸ್‌ ʼಸಿನಿಮಾಕ್ಕೆ ಚೆಸಾರೆ ಝವಟ್ಟಿನಿಯವರ ಚಿತ್ರಕಥೆಯಿತ್ತು.  ನಂತರ ಅವರು ಖ್ಯಾತ ಚಿತ್ರಕಥಾಗಾರರಾದರು. ಡಿ ಸಿಕಾ ಮತ್ತು ಝನಟ್ಟಿನಿ ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ದುಡಿದರು.  ಗಮನಾರ್ಹ ಜೋಡಿಯಾದರು.

1948ರಲ್ಲಿ ಡಿ ಸಿಕಾ  “ದಿ ಬೈಸಿಕಲ್‌ ಥೀವ್ಸ್” ಸಿನಿಮಾವನ್ನು ನಿರ್ದೇಶಿಸಿದರು.  ಆಂಟೊನಿಯೊ ರಿಚಿ (ನಟ ಲಮ್ಬೆರ್ಟೊ ಮಗ್ಗಿಯೊರನಿ- ಈತ ಒಬ್ಬ ವೃತ್ತಿಯೇತರ ನಟ) ಒಬ್ಬ ಬಡವ.  ಆತ ತನ್ನ ಸಂಸಾರವನ್ನು ನಿಭಾಯಿಸಲು ನಿತ್ಯ ದೊಡ್ಡ ಕ್ಯೂನಲ್ಲಿ ನಿಂತು ಉದ್ಯೋಗವನ್ನು ಅರಸುತ್ತಿರುತ್ತಾನೆ.  ಒಂದು ದಿನ ಆತನಿಗೆ ಒಂದು ಕೆಲಸವಿರುವುದು ತಿಳಿಯುತ್ತದೆ.  ಆದರೆ ಉದ್ಯೋಗಾಕಾಂಕ್ಷಿಯ ಬಳಿ ಒಂದು ಬೈಸಿಕಲ್‌ ಇರಲೇಬೇಕು ಎಂಬ ನಿಬಂಧನೆಯಿರುತ್ತದೆ.  ರಿಚಿ ಜೋರಾಗಿ “ನನ್ನಲ್ಲಿದೆ“ ಎಂದು ಕೂಗುತ್ತಾನೆ. ಆದರೆ ಆತನ ಬಳಿ ಬೈಸಿಕಲ್‌ ಇರುವುದಿಲ್ಲ. ಏಕೆಂದರೆ ಆತ ಅದನ್ನು ಅಡವಿಟ್ಟಿರುತ್ತಾನೆ. ಬೈಸಿಕಲ್‌ನ್ನು ವಾಪಸ್ಸು ಪಡೆಯಲು ಆತನ ಮಡದಿ ಮರಿಯಾ (ನಟಿ ಲಿಯನೆಲ್ಲ ಕರೆಲ್)‌ ತಮ್ಮ ಹಾಸಿಗೆಯ ಹೊದಿಕೆಗಳನ್ನು ರಿಚಿಗೆ ನೀಡಿ ಅವುಗಳನ್ನು ಅಡವಿಡಲು ತಿಳಿಸುತ್ತಾಳೆ.  ಹೀಗಾಗಿ ರಿಚಿಗೆ ಗೋಡೆಗಳ ಮೇಲೆ ಸಿನಿಮಾ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ದೊರಕುತ್ತದೆ.  ಈ ಕೆಲಸದಲ್ಲಿರುವಾಗ ಆತನ ಬೈಸಿಕಲ್‌ ಕಳುವಾಗುತ್ತದೆ.  ಇದಕ್ಕಾಗಿ ರೋಮ್‌ನ ಬೀದಿಗಳಲ್ಲಿ ಹುಡುಕುವಾಗ, ಮಗ ಬ್ರೂನೊ (ನಟ ಎನ್ಝೊ ಸ್ಟೈಓಲಾ) ಆತನ ಜೊತೆಗೂಡುತ್ತಾನೆ.

ವಿಟ್ಟೊರಿಯೊ ಡಿ ಸಿಕಾ

ಸಿನಿಮಾ ಶುರುವಾಗುವಾಗ, ರಿಚಿ ನಿರುದ್ಯೋಗಿಗಳ ಸಮೂಹದಿಂದ ಹೊರಹೊಮ್ಮುತ್ತಾನೆ.  ಕೊನೆಯಲ್ಲಿ ಆತ ಜನರ ನಡುವೆ ಕರಗಿ ಹೋಗುತ್ತಾನೆ!  ಪರಿಕರದಿಂದಾಚೆ ಬೈಸಿಕಲ್‌ ಒಂದು ಬಡ ಕುಟುಂಬದ ಉತ್ತಮ ನಾಳೆಗಳ ಪ್ರತೀಕವಾಗುತ್ತದೆ.  ಕಳುವಾದ ಬೈಸಿಕಲ್‌ ನೊಂದ ಕುಟುಂಬದ ಭವಿಷ್ಯ ಹರಣವನ್ನು ಸೂಚಿಸುತ್ತದೆ.  ಈ ಸಿನಿಮಾದಲ್ಲಿ ಹಾಲಿವುಡ್‌ ಸಿನಿಮಾಗಳ ನಿರೂಪಣೆಯ ಹಲವು ಲಕ್ಷಣಗಳಿವೆ.  ಆದರೆ ಅಂತ್ಯ ಹಾಲಿವುಡ್‌ ಸಿನಿಮಾ ಆಕೃತಿಯ ಎಂದಿನ ಆಯಾಮವನ್ನು ಹೊಂದಿಲ್ಲ.  ಇಲ್ಲಿ ಫೀಲ್-ಗುಡ್‌ ಅಂಶವಿಲ್ಲ.  ರಿಚಿ ಕುಟುಂಬದ ಭವಿಷ್ಯದ ಬಗೆಗೆ ವೀಕ್ಷಕರು ಯೋಚಿಸುವಂತೆ ಮಾಡುತ್ತದೆ.

ರಿಚಿ ಪಾತ್ರದಲ್ಲಿ ಕಂದು ವರ್ಣವೂ ಇದೆ.  ಪ್ರಾರಂಭದಲ್ಲಿ ಆತ ಬಡವನಾಗಿದ್ದರೂ, ಒಬ್ಬ ಪ್ರಾಮಾಣಿಕ ಮತ್ತು ನೇರ ಸ್ವಭಾವದ ವ್ಯಕ್ತಿಯಾಗಿ ತೋರಿಸಲಾಗಿದೆ.  ಸಿನಿಮಾ ಮುಂದುವರೆದಂತೆ, ಆತ ಜನರನ್ನು ಸಾಯಿಸಲು ಪ್ರಯತ್ನಿಸುತ್ತಾನೆ, ತನ್ನ ಮಗನ ಬಳಿ ಕೆಟ್ಟದ್ದು ಎನ್ನಬಹುದಾದ ರೀತಿಯಲ್ಲಿ ವರ್ತಿಸುತ್ತಾನೆ ಮತ್ತು ಒಂದು ಬೈಸಿಕಲನ್ನು ಕದಿಯಲು ಮುಂದಾಗುತ್ತಾನೆ!  ಸಮಾಜಶಾಸ್ತ್ರಜ್ಞರು ಅಪರಾಧ ಮತ್ತು ಇತರ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಬಡತನ ವಹಿಸುವ ಪಾತ್ರವನ್ನು ಬೊಟ್ಟುಮಾಡಿ ತೋರಿಸುತ್ತಾರೆ.  ಈ ಅಂಶವನ್ನು ರಿಚಿ ಪಾತ್ರದ ಮೂಲಕ ನಿರ್ದೇಶಕರು ವೀಕ್ಷಕರಿಗೆ ರವಾನಿಸಿದ್ದಾರೆ ಎಂದೆನಿಸುತ್ತದೆ.

ಮಕ್ಕಳ ಪಾತ್ರ

ಡಿ ಸಿಕಾ ತನ್ನ ಸಿನಿಮಾಗಳಲ್ಲಿ ಮಕ್ಕಳ ಪಾತ್ರಗಳ ಮೇಲೆ ಒತ್ತನ್ನು ನೀಡಿದ್ದರು.  ಅವರ ಕಳೆದು ಹೋದ ಮುಗ್ಧತೆ, ಅನುಭವಿಸುವ ಕಷ್ಟಗಳು ಮತ್ತು ಅವರ ಪಕ್ವ ಎನ್ನಬಹುದಾದ ವರ್ತನೆ ಇತ್ಯಾದಿಗಳನ್ನು “ದಿ ಚಿಲ್ಡ್ರನ್‌ ಆರ್‌ ವಾಚಿಂಗ್‌ ಅಸ್‌” (1944), “ಶೂಶೈನ್‌” (1946) ಸಿನಿಮಾಗಳಲ್ಲಿ ಕಟ್ಟಿ ಕೊಟ್ಟಿದ್ದರು.  “ದಿ ಬೈಸಿಕಲ್‌ ಥೀಪ್‌” ನ ಬ್ರೂನೊ ಪಾತ್ರದಲ್ಲಿ ಸೂಕ್ಷ್ಮತೆಯಿದೆ; ಹಲವು ಪದರಗಳಿವೆ.  ಇವು ವೀಕ್ಷಕರ ಗಮನವನ್ನು ಸೆಳೆಯುತ್ತವೆ.

ಒಂದು ರೆಸ್ಟೊರಾಂಟ್‌ ದೃಶ್ಯದಲ್ಲಿ ರಿಚಿ ಆದೇಶಿಸುವ ಆಹಾರಕ್ಕೂ ಮತ್ತು ಪಕ್ಕದ ಟೇಬಲ್ಲಿನ ಅನುಕೂಲಸ್ಥ ಹುಡುಗ ಭುಜಿಸುವ ಆಹಾರಕ್ಕೂ ಇರುವ ವ್ಯತ್ಯಾಸವನ್ನು ದಾಟಿಸುವುದರ ಮೂಲಕ ಇರುವವರು ಮತ್ತು ಇಲ್ಲದವರ ನಡುವಿನ ಅಂತರವನ್ನು ನಿರ್ದೇಶಕರು ಸೂಚಿಸುತ್ತಾರೆ.  ಇದರಲ್ಲಿರುವ mise-en-sceņe , ಪರಿಕರಗಳು, ಉಡುಪುಗಳು, ಬೆಳಕಿನ ವಿನ್ಯಾಸಗಳು ಮತ್ತು ಸಿನಿಮಾಟೋಗ್ರಫಿ ಇತ್ಯಾದಿ ಗುಣಾತ್ಮಕ ಅಂಶಗಳು ಸಿನಿಮಾಗೆ ವಿಶಿಷ್ಟತೆಯನ್ನು ನೀಡಿವೆ.

ಎಪ್ಪತ್ತೈದು ವರ್ಷಗಳಾದರೂ, ಪ್ರಪಂಚದಾದ್ಯಂತ, ಈ ಸಿನಿಮಾ ಸಿನಿಪ್ರೇಮಿಗಳು ಮತ್ತು ಸಿನಿವಿದ್ವಾಂಸರ ಚರ್ಚೆಗಳಿಗೆ ಗ್ರಾಸವಾಗಿರುವುದು ಅದರ ಮಹತ್ವವನ್ನು ಸಾರುತ್ತದೆ !

 

 

Donate Janashakthi Media

Leave a Reply

Your email address will not be published. Required fields are marked *