– ನವೀನ್ ಸೂರಿಂಜೆ
ಕಾಂತಾರಾ ಸಿನೀಮಾದ ಹೀರೋ ಶಿವ ಕೋಲ ಕಟ್ಟಲು ಒಪ್ಪದೇ ಇರುವುದರಿಂದ ಆತನನ್ನು ಬೇಜವಾಬ್ದಾರಿ ಯುವಕ ಎಂದು ಬಿಂಬಿಸಲಾಗುತ್ತೆ. ಆದರೆ ಶಿವನ ಬಳಿ ಕಂಬಳದ ಕೋಣವಿರುತ್ತೆ. ಕಂಬಳದ ಕೋಣ ಇರುವವನು ಬೇಜವಾಬ್ದಾರಿ ಮನುಷ್ಯ ಆಗಲು ಹೇಗೆ ಸಾದ್ಯ ? ದಲಿತನಾದ ಆತ ಕೋಲ ಕಟ್ಟುವ ವೃತ್ತಿಯಿಂದ ಹೊರ ಬಂದು ಪ್ರತಿಷ್ಟೆಯ ಜೀವನ ನಡೆಸುತ್ತಿದ್ದಾನೆ ಎಂಬುದು ಬೇಜವಾಬ್ದಾರಿ ಹೇಗಾಗುತ್ತದೆ ?
ಕಾಂತಾರ ಸಿನೇಮಾ ಕರಾವಳಿಯ ದೈವಾರಾಧನೆ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಜನರಿಗೆ ಪರಿಚಯಿಸುತ್ತೆ ಎಂದು ನಟ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೊಂದು ದಲಿತ ಸಂವೇದನೆಯನ್ನು ತೆರೆಯಲ್ಲಿ ಪ್ರಸ್ತುತಪಡಿಸಿದ ಸಿನೇಮಾ ಎಂದು ಕೆಲ ವಿಮರ್ಶೆಗಳು ಬಂದಿದೆ. ವಾಸ್ತವವಾಗಿ ಇದೊಂದು ಬಲಪಂಥೀಯರ ಸಾಂಸ್ಕೃತಿಕ ರಾಜಕಾರಣದ ಹುನ್ನಾರ.
ನಿಮಗೆ ನೆನಪಿರಬಹುದು. ಮಂಗಳೂರಿನಲ್ಲಿ ಕರ್ನಾಟಕದ ಜನಪರರೆಲ್ಲಾ ಸೇರಿಕೊಂಡು ಜನನುಡಿಯನ್ನು ಆಯೋಜಿಸಲಾಗಿತ್ತು. ಪ್ರಗತಿಪರರ ಜನನುಡಿಗೆ ಎದುರಾಗಿ ಬಲಪಂಥೀಯರು ಮಂಗಳೂರು ಲಿಟ್ ಫೆಸ್ಟ್ ಅನ್ನು ಪ್ರಾರಂಭಿಸಿದರು. ಈ ಲಿಟ್ ಫೆಸ್ಟ್ ನಲ್ಲಿ ಸಿನೇಮಾ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಇದೇ ರಿಷಬ್ ಶೆಟ್ಟಿ ಮತ್ತು ಪ್ರಕಾಶ್ ಬೆಳವಾಡಿ. ಅಂದರೆ ರಿಷಬ್ ಶೆಟ್ಟಿಯವರು ಬಲಪಂಥೀಯ ಸಾಂಸ್ಕೃತಿಕ ರಾಜಕಾರಣದ ಬಹುಮುಖ್ಯ ವ್ಯಕ್ತಿ. ಇದನ್ನು ಅರಿತುಕೊಂಡೇ ನಾವು ಸಿನೇಮಾವನ್ನು ಗ್ರಹಿಸಬೇಕಿದೆ.
“ಈಗ ಕಂಬಳ ಗದ್ದೆಯಲ್ಲಿದೆ ಶಿವಣ್ಣರ ಕೋಣಗಳು” ಎಂಬ ಕಂಬಳದ ಘೋಷಣೆಯೊಂದಿಗೆ ಕಾಂತಾರ ಸಿನೇಮಾದ ಅಸಲೀ ಕತೆ ಆರಂಭವಾಗುತ್ತದೆ ಮತ್ತು ಹೀರೋ ಶಿವ ಎಂಟ್ರಿ ಕೊಡುತ್ತಾನೆ.
ಕಂಬಳವೆಂದರೆ ವೇಲ್ವರ್ಗಗಳ ಪ್ರತಿಷ್ಠೆಯ ಆಟ. ಇದಕ್ಕೊಂದು ಸಾಂಸ್ಕೃತಿಕ- ಆರಾಧನಾ ಹಿನ್ನಲೆಯೂ ಇದೆ. ಆದರೆ ಈಗ ಈ ಕಂಬಳದಲ್ಲಿ ಮುಸ್ಲೀಮರ, ಕ್ರಿಶ್ಚಿಯನ್ನರ ಕೋಣಗಳು ಮಾತ್ರವಲ್ಲದೆ ಹಿಂದುಳಿದ ವರ್ಗಗಳಲ್ಲಿ ಬರುವ ಎಲ್ಲಾ ಜಾತಿಯ ಶ್ರೀಮಂತರು ಕಂಬಳದಲ್ಲಿ ಕೋಣ ಕಟ್ಟಿ ಭಾಗವಹಿಸುತ್ತಾರೆ. ಖುಷಿಯ ವಿಷಯವೆಂದರೆ ಒಂದೆರಡು ಶ್ರೀಮಂತ ದಲಿತರಲ್ಲಿಯೂ ಕಂಬಳ ಕೋಣಗಳಿವೆ. ಒಂದು ಕಾಲದಲ್ಲಿ ಕಂಬಳ ಗದ್ದೆಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದ ಸಮುದಾಯ ಅದೇ ಕಂಬಳ ಗದ್ದೆಯಲ್ಲಿ ಮುಂಡಾಸು ಕಟ್ಡಿ ಮೆರೆಯುತ್ತಿದೆ. ಅದಕ್ಕೆ ಕಾರಣ ಅಂಬೇಡ್ಕರ್ ಮತ್ತು ಇಂದಿರಾಗಾಂಧಿ-ಅರಸು. ಇಂದಿರಾಗಾಂಧಿ-ಅರಸು ಭೂಮಿ ನೀಡಿದರೆ ಅಂಬೇಡ್ಕರ್ ಹಕ್ಕುಗಳನ್ನು ನೀಡಿದರು. ಭೂಮಿ ಸಿಕ್ಕರೂ ಮೇಲ್ವರ್ಗದ ಜೊತೆ ಸರಿ ಸಮಾನಾಗಿ ನಿಲ್ಲಲು ಸಮುದಾಯಕ್ಕೆ ಸಾಧ್ಯವಾಗಿದೆ ಎಂದರೆ ಅದಕ್ಕೆ ಡಾ ಬಿ ಆರ್ ಅಂಬೇಡ್ಕರ್ ಕಾರಣವೇ ಹೊರತು ಯಾವ ದೈವಗಳೂ ಅಲ್ಲ.
ಕಂಬಳದ ಕೋಣಗಳು ಇರಬೇಕಾದರೆ ಆನೆ ಸಾಕುವಷ್ಟು ದುಡ್ಡಿರಬೇಕು ಎಂಬ ಮಾತಿದೆ. ಯಥೇಚ್ಚ ಕೃಷಿ, ಹತ್ತಾರು ಜನ ಆಳುಗಳನ್ನು ಸಾಕಲು ಸಾಧ್ಯ ಇರುವವರು ಮಾತ್ರ ಕಂಬಳ ಕೋಣ ಸಾಕಬಹುದು. ಹತ್ತಾರು ಬಂಟರು, ಬೆರಳೆಣಿಕೆಯ ಬಿಲ್ಲವರ ಜೊತೆ ಕರಾವಳಿಯಲ್ಲಿ ಇಬ್ಬರು ದಲಿತ ಸಮುದಾಯದ ಬಳಿಯೂ ಕಂಬಳ ಕೋಣಗಳಿವೆ. ಇದು ಖುಷಿಯ ವಿಷಯ. ಇಷ್ಟನ್ನು ತಲೆಯಲ್ಲಿ ಇಟ್ಟುಕೊಂಡು ಆ ಬಳಿಕ “ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನೇಮಾ”ವನ್ನು ನೋಡಬೇಕಿದೆ.
ಮತ್ತೆ ಸಿನೇಮಾ ಕತೆಗೆ ಬರೋಣಾ. ಹೀರೋ ಶಿವನ ಅಪ್ಪ ಕೋಲ ಕಟ್ಟುವವನು. ಆತನ ಮರಣದ ನಂತರ ಶಿವ ಕೋಲ ಕಟ್ಟಬೇಕಿತ್ತು. ಆದರೆ ಶಿವನಿಗೆ ಜವಾಬ್ದಾರಿ ಇಲ್ಲದ್ದರಿಂದ ಶಿವನ ದೊಡ್ಡಪ್ಪನ ಮಗ ಗುರುವ ಕೋಲ ಕಟ್ಟುತ್ತಾನೆ. ಇಲ್ಲಿ ಹೀರೋ ಶಿವ ಕೋಲ ಕಟ್ಟಲು ಒಪ್ಪದೇ ಇರುವುದರಿಂದ ಆತನನ್ನು ಬೇಜವಾಬ್ದಾರಿ ಯುವಕ ಎಂದು ಬಿಂಬಿಸಲಾಗುತ್ತೆ. ಆದರೆ ಶಿವನ ಬಳಿ ಕಂಬಳದ ಕೋಣವಿರುತ್ತೆ. ಕಂಬಳದ ಕೋಣ ಇರುವವನು ಬೇಜವಾಬ್ದಾರಿ ಮನುಷ್ಯ ಆಗಲು ಹೇಗೆ ಸಾದ್ಯ ? ದಲಿತನಾದ ಆತ ಕೋಲ ಕಟ್ಟುವ ವೃತ್ತಿಯಿಂದ ಹೊರ ಬಂದು ಪ್ರತಿಷ್ಟೆಯ ಜೀವನ ನಡೆಸುತ್ತಿದ್ದಾನೆ ಎಂಬುದು ಬೇಜವಾಬ್ದಾರಿ ಹೇಗಾಗುತ್ತದೆ ? “ಈಗ ಕಂಬಳದ ಕಲದಲ್ಲಿ ಶಿವಣ್ಣನ ಕೋಣಗಳಿವೆ” ಎಂದು ಕಂಬಳ ಗದ್ದೆಯಲ್ಲಿ ಘೋಷಣೆ ಮಾಡುತ್ತಾರೆ ಎಂದರೆ ಕರಾವಳಿಯಲ್ಲಿ ಅದಕ್ಕಿಂತ ದೊಡ್ಡ ದೊಡ್ಡಸ್ಥಿಕೆ ಇನ್ನೊಂದಿಲ್ಲ.
ಆದರೆ ಕಾಂತಾರ ಕತೆಗಾರ ಕಂಬಳ ಕೋಣದ ಶ್ರೀಮಂತ ಶಿವಣ್ಣರನ್ನು “ಕೋಲ ಕಟ್ಟುವ ಶಿವ” ಮಾಡಲೇಬೇಕು ಎಂದು ಪಣ ತೊಟ್ಟಂತೆ ಕಾಣುತ್ತದೆ. ಶಿವನಿಗೆ ಪಂಜುರ್ಲಿ ಒಳ್ಳೆ ಬುದ್ದಿ ಕೊಟ್ಟು ಕೋಲ ಕಟ್ಟುವ ಮನಸ್ಸು ಬರುವಂತೆ ಮಾಡುತ್ತದೆ. ಆತ ಎಲ್ಲವನ್ನೂ ತ್ಯಜಿಸಿ ಕೋಲ ಕಟ್ಟಲು ರೆಡಿ ಆಗುತ್ತಾನೆ.
ಕಾಂತಾರದಲ್ಲಿನ ಫಾರೆಸ್ಟ್ ಅಧಿಕಾರಿ ದಲಿತರ ಪಾಲಿಗೆ ವಿಲನ್ ಆದರೂ ಆತನ ಉದ್ದೇಶ ಒಳ್ಳೆಯದಿದೆ ಎಂದು ಅರ್ಥ ಬರುವಂತೆ ಕತೆ ಹೆಣೆಯಲಾಗಿದೆ. “ನಿಮ್ಮ ಭೂಮಿಯಲ್ಲಿ ಮೊದಲು ರಾಷ್ಟ್ರೀಯ ಉದ್ಯಾನವನ ಅನುಷ್ಠಾನ ಮಾಡಲು ಬಿಡಿ. ಆ ಬಳಿಕ ನೀವು ಸರ್ಕಾರದ ಬಳಿ ನಿಮ್ಮ ಭೂಮಿ ಕೇಳಬಹುದು” ಎನ್ನುತ್ತಾನೆ. ಇದು ಕೃಷಿ ಭೂಮಿ ಹೊಂದಿರುವ ದಲಿತರನ್ನು ಭೂ ರಹಿತರನ್ನಾಗಿ ಮಾಡುವ ಕೃತ್ಯ. ದಲಿತರಲ್ಲಿ ಭೂಮಿ ಇದ್ರೆ ತಾನೆ ಕಂಬಳ ? ಈ ಕೃತ್ಯದ ಸಂದರ್ಭದಲ್ಲಿ ಫಾರೆಸ್ಟ್ ಅಧಿಕಾರಿಯೇ ಸಿನೇಮಾದ ನಿಜವಾದ ಹೀರೋ ಆಗಿರುತ್ತಾನೆ ಎಂದರೆ ಸಿನೇಮಾದ ಉದ್ದೇಶವೇನು ?
ಒಟ್ಟಾರೆಯಾಗಿ ಕಂಬಳ, ಮರದ ವ್ಯಾಪಾರ, ಹೋರಾಟ ಇವೆಲ್ಲವೂ ದಲಿತರಿಗಲ್ಲ. ನೀವು ಕೋಲ ಕಟ್ಟಿಕೊಂಡಿದ್ದರೆ ಚಂದ ಎಂದು ಹೇಳುವಂತಿದೆ ಕಾಂತಾರ ಸಿನೇಮಾ. ನಮ್ಮ ಸಂಸ್ಕೃತಿ, ಆಚರಣೆಗಳು ಉಳಿಯಬೇಕು ಎಂದರೆ ನೀವು ಶಿಕ್ಷಣ, ಉದ್ಯೋಗ, ವ್ಯಾಪಾರ ಮರೆತು ಕೋಲ ಕಟ್ಟುತ್ತಿರಬೇಕು. ಇದು ಬಲಪಂಥೀಯ ಸಾಂಸ್ಕೃತಿಕ ರಾಜಕಾರಣ ಹುನ್ನಾರ.