ಭೂರಹಿತ ಕೊರಗ ಸಮುದಾಯಕ್ಕೆ ಭೂಮಿ ನೀಡಬೇಕೆಂದು ಧರಣಿ ಸತ್ಯಾಗ್ರಹ

ಕುಂದಾಪುರ: ಕೊರಗರಿಗೆ ಭೂಮಿ ನೀಡಲು ಒತ್ತಾಯಿಸಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆದಿದೆ. ಆಲೂರು ಗ್ರಾಮ ಪಂಚಾಯತಿ ಕಛೇರಿ ಮುಂಭಾಗ ನಡೆದ ಧರಣಿಯಲ್ಲಿ ಆಲೂರು ಮತ್ತು ಸ್ಥಳೀಯ 23 ಭೂರಹಿತ ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿ ನೀಡಬೇಕೆಂದು ಆಗ್ರಹಿಸಲಾಯಿತು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಮಿತಿ ಅಡಿಯಲ್ಲಿ ಧರಣಿ ನಡೆದಿದೆ.

ಧರಣಿ ಸತ್ಯಾಗ್ರಹ ಉದ್ದೇಶಿಸಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಮಾತನಾಡಿ, ಕೊರಗ ಸಮುದಾಯ ಅಳಿವಿನಂಚಿನಲ್ಲಿರುವ ಸಮುದಾಯ. 2001ರಲ್ಲಿ ಜಿಲ್ಲೆಯಲ್ಲಿ 16 ಸಾವಿರ ಜನಸಂಖ್ಯೆ ಇದ್ದ ಕೊರಗ ಸಮುದಾಯ ಇಂದು 9 ಸಾವಿರಕ್ಕೆ ಇಳಿದಿದೆ. ಈ ಸಮುದಾಯ  ಉಳಿಯಬೇಕಾದರೆ ಕೃಷಿ ಪೂರ್ವ ನಾಗರಿಕತೆಯಿಂದ ಕೃಷಿ ನಾಗರಿಕತೆಗೆ ಬದಲಾವಣೆ ಹೊಂದಬೇಕು. ಆಗ ಮಾತ್ರ ಮುಂದಿನ ಹಂತಕ್ಕೆ ಸಮುದಾಯ ತಲುಪಲು ಸಾಧ್ಯವಿದೆ. ಕೊರಗ ಸಮುದಾಯ ಅಭಿವೃದ್ಧಿಗಾಗಿ 1994ರಲ್ಲಿ ಸರ್ಕಾರ ನೇಮಿತ ವರದಿ ಪ್ರಕಾರ ಪ್ರತಿ ಕುಟುಂಬಕ್ಕೆ 2 ಎಕರೆ ಭೂಮಿ ನೀಡಬೇಕೆಂದು ಶಿಫಾರಸ್ಸು ಮಾಡಿದ್ದರೂ ಸಹ ಈಗಲೂ ಹಲವು ಕುಟುಂಬಗಳಿಗೆ ಭೂಮಿ ಹಂಚಿಕೆಯಾಗಿಲ್ಲ.

1994 ರಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಡಾಕ್ಟರ್ ಮಹಮ್ಮದ್ ಪೀರ್ ಅಧ್ಯಕ್ಷತೆಯಲ್ಲಿ ಕೊರಗ ಸಮುದಾಯದ ಅಭಿವೃದ್ಧಿಗಾಗಿ ವರದಿಯನ್ನು ಪಡೆದರು. ವರದಿಯು 13 ಶಿಫಾರಸು ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಕೊರಗ ಸಮುದಾಯದ ಪ್ರತಿ ಕುಟುಂಬಗಳಿಗೆ 2 ಎಕರೆ ಭೂಮಿ ನೀಡುವುದು ಬಹುಮುಖ್ಯ ಶಿಫಾರಸು ಆಗಿದೆ. ಇದುವರೆಗೆ ಕೊರಗರಿಗೆ 900 ಎಕರೆ ಭೂಮಿ ನೀಡಲಾಗಿದೆ. ಆದರೆ ಕುಂದಾಪುರ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಭೂಮಿ ನೀಡಲಾಗಿದೆ. ಮಹ್ಮದ್ ಪೀರ್ ವರದಿ ಪ್ರಕಾರ ಆಲೂರು ಮತ್ತು ಸ್ಥಳೀಯ ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿ ನೀಡಲು ಕಳೆದ 6 ವರ್ಷಗಳಿಂದ ಮನವಿ ಹೋರಾಟ ಮಾಡಿದರು, ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ನಮ್ಮ ಈ ಧರಣಿ ಸತ್ಯಾಗ್ರಹದ ತೀವ್ರತೆಯನ್ನು ಮನಗಂಡ ಕುಂದಾಪುರ ತಹಶೀಲ್ದಾರರು ಕೊರಗರ ಸಭೆಯನ್ನು ಆಲೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಡೆಸಿ ಭೂಮಿ ನೀಡಲು ಭರವಸೆ ನೀಡಿದರು. ಅದರಂತೆ, ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ. ತಮ್ಮ ಭರವಸೆಯನ್ನು ಏಪ್ರಿಲ್‌ 20ರ ಒಳಗಾಗಿ ಈಡೇರದಿದ್ದಲ್ಲಿ, ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಿರುವ ಭೂಮಿಯಲ್ಲಿ ನೇರವಾಗಿ ನಾವು ಮೆರವಣಿಗೆ ನಡೆಸಿ ಭೂಮಿ ಆಕ್ರಮಣ ಮಾಡಿ ಕೃಷಿ ಮಾಡಲ್ಲಿದ್ದೇವೆ. ಹಿಂದೆ ನಡೆದಿರುವ ಕೊರಗರ ಭೂಮಿ ಚಳವಳಿ ಮತ್ತೆ ಮರುಕಳಿಸಲಿದೆ. ನಾವು ಭೂಮಿಗಾಗಿ ಜೈಲಿಗೆ ಹೋಗಲೂ ಸಿದ್ಧವಾಗಿದೆವೆಂದರು. ಇನ್ನೂ ನಾವು ಕಡತದ ಹಿಂದೆ ಅಲೆಯುದಿಲ್ಲ ಭೂಮಿ ಚಳವಳಿ  ಬಲಗೊಳಿಸುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈಗಾಗಲೇ ಹಕ್ಲಾಡಿ, ಕೆರಾಡಿ, ಬೆಳ್ಳಾಲ, ಇಡೂರು, ಹೆರೂರು, ಮೌವಾಡಿ, ಗುಜ್ಜಾಡಿ, ತಲ್ಲೂರು, ಕೆಂಚನೂರು, ನಾಡ ಇನ್ನೂ ಹಲವಾರು ಪ್ರದೇಶದಲ್ಲಿ ಭೂರಹಿತ ಕೊರಗ ಕುಟುಂಬಗಳು ಇವೆ. ಮುಂದೆ ಅವರು ಭೂಮಿ ಕೇಳಲು ಹೋರಾಟ ರೂಪಿಸಬೇಕಾಗುತ್ತದೆ. ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ನಮ್ಮ ಸಮುದಾಯದ ಹೋರಾಟ ವಿಸ್ತರಿಸಲಿದ್ದೇವೆ ಎಂದರು.

ಸಿಐಟಿಯು ಸಂಘಟನೆ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೊರಗರು ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಭೂಮಿಯ ಹಕ್ಕು ಪತ್ರ ಬೇಕಾಗಿದೆ. ಅಲ್ಲದೆ, ಕೊರಗ ಸಮುದಾಯ ಅಭಿವೃದ್ಧಿ ಹೊಂದಲು ಸರಕಾರ ವಿಶೇಷ ಗಮನ ಕೊಡಬೇಕಾಗುತ್ತದೆ. ಈ ಸಮುದಾಯದ ಕುರಿತು ಸಂವೇದನೆ ಇದ್ದರೆ ಮಾತ್ರ ಅವರ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಕೊರಗ ಸಮುದಾಯದ ಭೂಮಿ ನೀಡುವುದಮತೆ ಸಂಬಂಧಿಸಿದ 2016ರಲ್ಲಿ ಅಂದಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾಗ ಭೂಮಿ ನೀಡುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೆ ಕೊರಗರೊಂದಿಗೆ ಸಭೆ ನಡೆಸಿದ್ದು ಬಿಟ್ಟರೆ ಯಾವುದೇ ಭೂಮಿ ನೀಡಲು ಕ್ರಮಕೈಗೊಂಡಿಲ್ಲ. ನಮ್ಮ ಕಾರ್ಮಿಕ ಸಂಘಟನೆಗಳು ಕೊರಗರು ನಡೆಸುವ ಭೂಮಿ ಹೋರಾಟಕ್ಕೆ ಅವರು ಗೆಲ್ಲುವ ವರೆಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದರು.

ಬೈಂದೂರು ಕಟ್ಟಡ ಕಾರ್ಮಿಕರ ಸಂಘಟನೆ ಮುಖಂಡ ರಮೇಶ್ ಗುಲ್ವಾಡಿ ಮಾತನಾಡಿ, ಕೊರಗರ ಅಭಿವೃದ್ಧಿಗೆ ಸಂಬಂಧಿಸಿ ಡಾಕ್ಟರ್ ಮಹಮ್ಮದ್ ಪೀರ್ ವರದಿ ಶಿಫಾರಸ್ಸು ಆಗಿ 28 ವರ್ಷ ಕಳೆದಿದೆ. ಆದರೆ, ಇದುವರೆಗೆ ಕೊರಗರಿಗೆ ಭೂಮಿ ನೀಡಲು ಸಾಧ್ಯವಾಗಿಲ್ಲ ಎಂಬುದು ನಾಚಿಕೆಗೇಡು. ಅಳಿವಿನಂಚಿನ ಸಮುದಾಯದ ಕುರಿತು 28 ವರ್ಷಗಳ ಕಾಲ ಸರ್ಕಾರ ಜಾಣ ಮೌನ ವಹಿಸುತ್ತಾ ಬಂದಿದೆ. ಇವರ ಬದುಕು ಉಳಿಸುವ ಕೆಲಸ ಸರಕಾರವೇ ಮಾಡಬೇಕು ಎಂದರು.

ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷ ಹಾಗೂ ಕೃಷಿ ಕೂಲಿಕಾರರ ಸಂಘದ ಮುಖಂಡ ರಾಜು ಪಡುಕೋಣೆಧರಣಿ ಬೆಂಬಲಿಸಿ ಮಾತನಾಡಿದ್ದು, ಕೊರಗ ಸಮುದಾಯದವರು ಯಾವುದೇ ಭರವಸೆಯನ್ನು ನಂಬಿ ಹೋರಾಟ ಕೈಬಿಡಬಾರದು ಕೈಗೆ ಹಕ್ಕು ಪತ್ರ ಮತ್ತು ಆರ್.ಟಿ.ಸಿ. ಸಿಗುವವರೆಗೂ ಹೋರಾಟ ಮುಂದುವರಿಸಬೇಕು ಎಂದರು.

ಈ ಬಾರಿ ಧರಣಿ ಸತ್ಯಾಗ್ರಹದ ಮೂಲಕ ಸರಕಾರಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಿದೇವೆ. ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡಿದ್ದಲ್ಲಿ, ಭೂಮಿ ನೀಡುವ ಭರವಸೆ ಈಡೇರದಿದ್ದಲ್ಲಿ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಘಟಕರು ಎಚ್ಚರಿಕೆ ನೀಡಿದರು.

ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ತಿಂಗಳ ಒಳಗೆ ಭೂಮಿ ನೀಡಲು ಬೇಕಾದ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.

ಧರಣಿಯ ನೇತೃತ್ವವನ್ನು ಜಿಲ್ಲಾ ಸಹ ಸಂಚಾಲಕರಾದ ಗಣೇಶ ಆಲೂರು, ರೇವತಿ ಆಲೂರು, ಸುರೇಂದ್ರ ನಾರ್ಕಳಿ, ಶಿವರಾಜ್ ನಾಡ, ಪೂರ್ಣಿಮಾ ಹಕ್ಲಾಡಿ, ಜಯಂತಿ ಗುಜ್ಜಾಡಿ ಹಾಗೂ ಮುಖಂಡರಾದ ನಾಗೇಶ ಬಾರಂದಾಡಿ, ಪ್ರಭಾಕರ ನಂದ್ರೋಳಿ, ಬಾಬು ನಾಡ, ಬಚ್ಚಿ ಕೊರಗ ಆಲೂರು, ದಾರು ಕೊರಗ ನಾರ್ಕಳಿ, ಶಂಕರ ನಾರ್ಕಳಿ, ನಾರಾಯಣ ಆಲೂರು. ನಾಗರತ್ನ ನಾಡ ವಹಿಸಿಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *