ಭೋಪಾಲ್​ ಗ್ಯಾಸ್ ದುರಂತಕ್ಕೆ 37 ವರ್ಷ: ಸಂತ್ರಸ್ತರಿಗೆ ಪರಿಹಾರವಂತೂ ಇನ್ನೂ ಮರಿಚಿಕೆ

ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌​ನಲ್ಲಿ ಅನಿಲ ದುರಂತ ಸಂಭವಿಸಿದ ಭೀಕರತೆ ಸಂಭವಿಸಿ ಇಂದಿಗೆ 37 ವರ್ಷ. 1984ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್​​ನ ಕೀಟನಾಶಕ ಸ್ಥಾವರದಿಂದ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿತ್ತು.

ಅಂದಿನ ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಇಂದಿಗೂ ಸಹ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗಲಿಲ್ಲ. ಈ ದುರಂತದಲ್ಲಿ ಮೃತಪಟ್ಟವರಿಗೆ ನ್ಯಾಯ ಇನ್ನೂ ಮರಿಚಿಕೆಯಾಗಿದೆ. ಅಂದಿನಿಂದಲೂ ಈವರೆಗೆ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬ ಆರೋಪಗಳಿವೆ.

1969ರಿಂದಲೂ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್​​ ಇಲ್ಲಿ ತನ್ನ ಕಾರ್ಯಾಚರಣೆಯನ್ನು ಮಾಡುತ್ತಿತ್ತು. ಈ ಕಂಪೆನಿಯ ಸರಿಸುಮಾರು ಅರ್ಧದಷ್ಟು ಪಾಲನ್ನು ಅಮೆರಿಕಾ ಮೂಲದ ಉದ್ಯಮಿ ವಾರೆನ್ ಅಂಡೆರ್ಸನ್ ಒಡೆತನದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಒಡೆತನದಲ್ಲಿತ್ತು.

ಅನಿಲ ದುರಂತವು ಡಿಸೆಂಬರ್ 2-3ರ ಮಧ್ಯರಾತ್ರಿಯಲ್ಲಿ ಸಂಭವಿಸಿದೆ. ಇದು ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿದೆ. 30 ಟನ್ನುಗಳಿಗೂ ಅಧಿಕ ಪ್ರಮಾಣದ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಯಿತು. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮೀಥೈಲ್ ಐಸೊಸೈನೇಟ್ ಅನಿಲ ದುರಂತದಲ್ಲಿ ಸಿಲುಕಿ ಪರಿತಪಿಸಿದ್ದಾರೆ. ಈ ದುರಂತದಲ್ಲಿ ತಕ್ಷಣಕ್ಕೆ ಮೃತಪಟ್ಟವರು 2,259 ಮಂದಿ ಎನ್ನಲಾಗಿತ್ತು.

ಆದರೆ 2006ರಲ್ಲಿ ಅಂದಿನ ಮಧ್ಯಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಒಟ್ಟು 3787 ಮಂದಿ ಈ ಅನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಆ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಇದರೊಂದಿಗೆ ಗ್ಯಾಸ್ ಸೋರಿಕೆ ದುರಂತದಲ್ಲಿ ಅಸ್ವಸ್ಥರಾದ 5.58 ಲಕ್ಷ ಮಂದಿಗೂ ಅಂದಿನ ಸರ್ಕಾರ ನೆರವು ನೀಡಿದೆ. ಆದಾಗ್ಯೂ ಸಂತ್ರಸ್ತರಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಈ ಅನಿಲ ಸೋರಿಕೆ ದುರಂತ ಸುಮಾರು 25 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳುತ್ತಿವೆ.

ಈ ವಿಷಾನಿಲ ದುರಂತದಲ್ಲಿ 5,58,125 ಜನರು ಗಾಯಗೊಂಡರೆ (ನ್ಯೂನತೆಗೆ ಒಳಗಾಗುವುದು) ಇವರಲ್ಲಿ 38,478 ಜನರು ನಿರಂತರ ಅನಾರೋಗ್ಯಕ್ಕೆ ಹಾಗೂ ಅಂಗಾಗಗಳ ನ್ಯೂನತೆಗಳಿಗೆ ಒಳಗಾದವರು ಮತ್ತು ಸರಿಸುಮಾರು 3,900 ಜನ ಶಾಶ್ವತ ದೈಹಿಕ ನ್ಯೂನತೆಗಳಿಗೆ ಒಳಗಾಗಿದ್ದಾರೆ ಎಂದು ಮಧ್ಯಪ್ರದೇಶ ಸರಕಾರ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ದುರಂತ ಸಂಭವಿಸಿ 37 ವರ್ಷಗಳಾಗಿದ್ದು, ಬದುಕುಳಿದವರು ಮತ್ತು ಮೃತರ ಸಂಬಂಧಿಕರು ಇನ್ನೂ ಸರ್ಕಾರದಿಂದ ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ದುರಂತದ ಪ್ರತಿ ಸಂತ್ರಸ್ತರು ಇದುವರೆಗೆ ನಿಗದಿಪಡಿಸಿದ ಮೊತ್ತದ ಐದನೇ ಒಂದು ಭಾಗಕ್ಕಿಂತ ಕಡಿಮೆ ಹಣವನ್ನು ಪಡೆದಿದ್ದಾರೆ.

ಅಂದಿನ ದುರಂತದಿಂದ ಜೀವ ಕಳೆದುಕೊಂಡವರು ಒಂದೆಡೆಯಾದರೆ, ಹಲವು ರೀತಿಯ ಬೇರೆಬೇರೆ ರೋಗಗಳಿಗೆ ಈಡಾದವರು ಸಾವಿರಾರು ಮಂದಿ. ಕುಟುಂಬಕ್ಕೆ ಆಧಾರಸ್ತಂಭದಂತಿದ್ದ ಹಿರಿಯರನ್ನು ಕಳೆದುಕೊಂಡ ನಿರಾಶ್ರಿತರಾದವರೂ ಇದ್ದಾರೆ. ಆದರೆ ಅಂಥವರಿಗೆ ಇದುವರೆಗೂ ಯಾವ ಸರ್ಕಾರಗಳೂ ನ್ಯಾಯ ಒದಗಿಸಿಲ್ಲ ಎಂಬುದು ಅನೇಕರ ಆರೋಪ.

ಕಳೆದ ತಿಂಗಳು ಅಕ್ಟೋಬರ್‌ 26ರಂದು ಘಟನೆ ನಡೆದು 37 ವರ್ಷಗಳಾದರೂ ಸಾಕಷ್ಟು ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲವೆಂದು ಕೆಲವು ಎನ್​ಜಿಒಗಳು ಸ್ಥಳೀಯರನ್ನು ಒಟ್ಟಾಗಿಸಿಕೊಂಡು ಪ್ರತಿಭಟನೆ ಆರಂಭಿಸಿದ್ದರು. ಭೋಪಾಲ್​ನಲ್ಲಿ ಈಗ ಮುಚ್ಚಲ್ಪಟ್ಟ ಯೂನಿಯನ್​ ಕಾರ್ಬೈಡ್​ ಕಾರ್ಖಾನೆಯಿಂದ 1 ಕಿಮೀ ದೂರದಲ್ಲಿ ರಸ್ತೆ ಬದಿಯಲ್ಲೇ ಪ್ರತಿಭಟನೆ ನಡೆದಿತ್ತು.

ಅನಿಲ ದುರಂತದಲ್ಲಿ ಸಂತ್ರಸ್ತರಾದವರಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ, ಪರಿಹಾರ ಮತ್ತು ಪುನರ್ವಸತಿ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಿದ್ದಲ್ಲದೆ, ಸರ್ಕಾರಗಳ ನಿರ್ಲಕ್ಷ್ಯತೆ ಬಗ್ಗೆ 37 ಪ್ರಶ್ನೆಗಳನ್ನು ಕೇಳಲಾಗಿದೆ. ಇನ್ನು ಈ ಪ್ರತಿಭಟನೆಯಲ್ಲಿ ಬಹುಪಾಲು ವೃದ್ಧ ಮಹಿಳೆಯರೇ ಇದ್ದುದು ವಿಶೇಷವಾಗಿತ್ತು.

ಆರ್ಥಿಕ ನೆರವು 1989 ರಲ್ಲಿ ಯುಎಸ್‌ಡಿ 470 ಮಿಲಿಯನ್ ಆಗಿತ್ತು. ಭೋಪಾಲ್ ಗ್ಯಾಸ್ ಪೀಠದ ಸಂಘರ್ಷ್ ಸಹಕಾರ್ ಸಮಿತಿ ಸಹ-ಸಂಚಾಲಕ ಎನ್ ಡಿ ಜಯಪ್ರಕಾಶ್ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ. “2004 ರಲ್ಲಿ ವಿತರಣೆಗಳು ಪ್ರಾರಂಭವಾದಾಗ ಡಾಲರ್‌ಗಳು ₹ 3,000 ಕೋಟಿಗಿಂತ ಹೆಚ್ಚಾಯಿತು, ಆದರೆ ಸಂತ್ರಸ್ತರ ಸಂಖ್ಯೆ 5.73 ಲಕ್ಷಕ್ಕೆ ಏರಿತು ಮತ್ತು ಈ ಮೊತ್ತವನ್ನು ಅವರಿಗೆ ವಿತರಿಸಲಾಯಿತು. ಆದ್ದರಿಂದ, ಪ್ರತಿ ಸಂತ್ರಸ್ತರಿಗೆ ಐದನೇ ಒಂದು ಭಾಗದಷ್ಟು ಪರಿಹಾರ ಸಿಕ್ಕಿತು” ಎಂದು ಅವರು ಹೇಳಿದರು.

20ನೇ ಶತಮಾನದ ವಿಶ್ವದ ಭೀಕರ ಕೈಗಾರಿಕಾ ಅಪಘಾತಗಳಲ್ಲಿ 1984ರ ಭೋಪಾಲ್‌ ಅನಿಲ ದುರಂತ, 1986ರ ಉಕ್ರೇನ್‍ನ ಚರ್ನೋಬಿಲ್ ದುರಂತ, ಜಪಾನ್‍ನ 2011ರ ಫಕುಶಿಮಾ ಪರಮಾಣು ದುರ್ಘಟನೆ ಹಾಗೂ ಢಾಕಾದ 2013ರ ರಾಣಾ ಪ್ಲಾಜಾ ಕಟ್ಟಡ ಅವಘಡಗಳೂ ಸೇರಿವೆ. ಪ್ರತಿ ವರ್ಷ ವಿಶ್ವದಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟ ಅಪಘಾತಗಳು ಮತ್ತು ರೋಗಗಳಿಂದ ಸುಮಾರು 3 ಲಕ್ಷ ಕಾರ್ಮಿಕರು ದುರಂತದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *