ಬೆಂಗಳೂರು: ಬೋಧನಾ ಶುಲ್ಕ ಕಡಿತದ ಆದೇಶ ಪರಿಷ್ಕರಿಸುವಂತೆ ಆಗ್ರಹಿಸಿ ಖಾಸಗಿ ಶಾಲೆಗಳು ಸರ್ಕಾರದ ವಿರುದ್ಧ ಇಂದು ಪ್ರತಿಭಟನೆ ನಡೆಸಿದರು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಖಾಸಗಿ ಶಾಲೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದವು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಪುಟ್ಟಣ್ಣ, ಸಂಘಟನೆ ಸಂಚಾಲಕ ಡಿ.ಶಶಿಕುಮಾರ್ ಮುಂತಾದವರು ಸರ್ಕಾರದ ಕ್ರಮವನ್ನು ಖಂಡಿಸಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ದುಸ್ತರವಾಗಿದೆ. ಕೋವಿಡ್-19 ಪರಿಸ್ಥಿತಿಯಲ್ಲಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ಯಾವುದೇ ನೆರವು ನೀಡಲಿಲ್ಲ, ಸಾಲ ಮಾಡಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಸಾಲದ ಕಂತು ಕಟ್ಟಲು ಸಮಯಾವಕಾಶ ಕೂಡ ನೀಡಿಲಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ : ಖಾಸಗಿ ಶಾಲೆಗಳ ದುಬಾರಿ ಶುಲ್ಕ ವಸೂಲಾತಿಗೆ ಕಡಿವಾಣ ಹಾಕಲು ವಿದ್ಯಾರ್ಥಿಗಳ ಆಗ್ರಹ
ವಿದ್ಯುತ್ ಬಿಲ್ ಪಾವತಿ ಮತ್ತಿತರ ಯಾವುದೇ ರಿಯಾಯಿತಿಗಳನ್ನು ಕೂಡ ಸರ್ಕಾರ ನೀಡಿಲ್ಲ. ಈಗ ಏಕಾಏಕಿ ಶೇ.30ರಷ್ಟು ಶುಲ್ಕ ಕಡಿತಗೊಳಿಸಿದರೆ ನಾವು ಸಿಬ್ಬಂದಿಗೆ ಸಂಬಳ ಕೊಡುವುದು ಹೇಗೆ ಎಂದು ಪ್ರಶ್ನಿಸಿದರು. ಶಿಕ್ಷಣ ಸಂಸ್ಥೆಗಳ ಆರ್ಥಿಕ ಸಂಕಷ್ಟ, ಅವೈಜ್ಞಾನಿಕ ಶುಲ್ಕ ಕಡಿತ, ಕೋವಿಡ್-19 ಸಂಕಷ್ಟದಲ್ಲೂ ಹಳೆಯ ಶಾಲೆಗಳಿಗೆ ಹೊಸ ಶಾಲೆಗಳ ಶರತ್ತು ವಿಸಿ ಮಾನ್ಯತೆ ನವೀಕರಣದ ಹೆಸರಿನಲ್ಲಿ ಭ್ರಷ್ಟಾಚಾರ, ಶಾಲೆಗಳಿಗೆ ಕಡ್ಡಾಯ ದಾಖಲಾತಿ, ಹಾಜರಾತಿ, ಕನಿಷ್ಟ ಮೌಲ್ಯಮಾಪನಕ್ಕೆ ಒತ್ತು ನೀಡದೆ ಇರುವುದು, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಿಗೆ 371(ಜೆ) ಅಡಿಯಲ್ಲಿ ಬೇಡಿಕೆಗಳ ಈಡೇರಿಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ರಾಯಚೂರು, ಗುಲ್ಬರ್ಗಾ ಸೇರಿದಂತೆ ವಿವಿಧೆಡೆಯಿಂದ ಖಾಸಗಿ ಶಾಲೆಗಳ ಸಾವಿರಾರು ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಭಾಗವಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಮ್ಯಾನೇಜ್ ಮೆಂಟ್ಸ್ ಆಫ್ ಇಂಡಿಪೆಂಡೆಂಟ್ ಸಿಬಿಎಸ್’ಇ ಸ್ಕೂಲ್ಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ, ಕರ್ನಾಟಕ ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳ ಸಂಘ ಸೇರಿದಂತೆ 8 ಸಂಘಟನೆಗಳು ವಹಿಸಿದ್ದವು.
ಪೋಷಕರ ವಿರೋಧ : ಕೊರೊನಾ, ಲಾಕ್ಡೌನ್ ಹಿನ್ನಲೆಯಲ್ಲಿ ಆರ್ಥಿಕವಾಗಿ ಜನರು ಸುಧಾರಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಅವರು ಕೇಳಿದಷ್ಟು ಶುಲ್ಕವನ್ನು ಪೋಷಕರು ಕಟ್ಟುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳು 30% ಶುಲ್ಕ ಬಿಟ್ಟಿದ್ದರೆ ಏನು ಆಗುತ್ತಿರಲಿಲ್ಲ, ಖಾಸಗಿ ಶಾಲೆಗಳು ಹನ ಮಾಡುವುದಕ್ಕಾಗಿಯೇ ಖಾಸಗಿ ಶಾಲೆಗಳನ್ನು ತೆರೆದಿವೆ, ಸರಕಾರ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಿ, ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಪೋಷಕರು ಸಂಘಟನೆಗಳು ಆರೋಪಿಸಿವೆ.