ಭೀಮ-ಕೊರೆಗಾಂವ್ ಹಿಂಸಾಚಾರದ ಪ್ರಕರಣ:   ಆರೋಪಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ?

ರೋನಾ ವಿಲ್ಸನ್ ವಿರುದ್ಧ ಹಾಕಿರುವ ಭೀಮ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಸಿಕ್ಕಿದೆಯೆನ್ನಲಾದ ಸಾಕ್ಷ್ಯ ಒಂದು ಮಾಲ್‍ವೇರನ್ನು, ಅಂದ ದುರುದ್ದೇಶದ ತಂತ್ರಾಂಶವನ್ನು ಬಳಸಿ ಅವರ ಲ್ಯಾಪ್ ಟಾಪ್‍ನಲ್ಲಿ ಕಳ್ಳತನದಿಂದ ಹಾಕಿರುವಂತದ್ದು ಎಂದು ಅಮೆರಿಕಾದ  ಡಿಜಿಟಲ್ ಫೊರೆನ್ಸಿಕ್ (ನ್ಯಾಯವ್ಯವಹಾರ) ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್‍ನ ವರದಿ ಬಯಲಿಗೆ ತಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ವತಂತ್ರ ಸಂಶೋಧಕರಾಗಿರುವ ರೋನಾ ವಿಲ್ಸನ್ ರವರ ಬಂಧನದ ಮೊದಲು ಅವರ ಲ್ಯಾಪ್ ಟಾಪ್‍ನಲ್ಲಿ ಸುಳ್ಳುಗಳನ್ನು ತುರುಕುವ ಹಲ್ಲೆಕೋರನೊಬ್ಬ ಒಂದು ಮಾಲ್ ವೇರನ್ನು ಬಳಸಿ ಕನಿಷ್ಟ ಹತ್ತು ಪತ್ರಗಳನ್ನು ಹಾಕಿದ್ದಾರೆ ಎಂದು ಆರ್ಸೆನಲ್ ಕನ್ಸಲ್ಟಿಂಗ್‍ ನ ವರದಿ ಹೇಳಿರುವುದಾಗಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಈ ಹತ್ತರಲ್ಲಿ ಪ್ರಧಾನ ಮಂತ್ರಿ ಮೋದಿಯವರನ್ನು ಹತ್ಯೆ ಮಾಡುವ ಒಂದು ನಿಷೇಧಿತ ಮಾವೋವಾದಿ ಸಂಘಟನೆಯ ಪಿತೂರಿಯ ಭಾಗವಾಗಿ ರೋನ ವಿಲಿಯಮ್ಸ್ ಒಬ್ಬ ಮಾವೋವಾದಿ ಉಗ್ರಗಾಮಿಗೆ ಬರೆದಿದ್ದರು ಎಂದು ಪೋಲಿಸರು ಆಪಾದಿಸಿರುವ ಪತ್ರವೂ ಸೇರಿದೆ ಎನ್ನಲಾಗಿದೆ. ಈ ಕಂಪ್ಯೂಟರ್ ಹಲ್ಲೆಕೋರರು ಯಾರು ಎಂದು ಗೊತ್ತಾಗಿಲ್ಲ, ಆದರೆ ಈ ಕಂಪ್ಯೂಟರ್ ಹಲ್ಲೆಗೆ ರೋನಾ ವಿಲ್ಸನ್ ಅಲ್ಲದೆ ಇತರರೂ ಬಲಿಯಾಗಿದ್ದಾರೆ ಎಂದೂ ಆರ್ಸೆನಲ್ ಕನ್ಸಲ್ಟಿಂಗ್‍ನ ವರದಿ ಹೇಳಿರುವುದಾಗಿ ತಿಳಿದು ಬಂದಿದೆ.

ವಿಲ್ಸನ್ ರವರ ಲ್ಯಾಪ್‍ಟಾಪ್ 22 ತಿಂಗಳುಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಮಾರ್ಪಾಟಿಗೆ ಒಳಗಾಗಿತ್ತು, ಇದನ್ನು ಕಳ್ಳತನದಿಂದ ಮಾಡಿದಾತನ ಉದ್ದೇಶ “ನಿಗಾವಣೆ ಮತ್ತು ಆರೋಪಿಸಬಹುದಾದ ದಸ್ತಾವೇಜನ್ನು ಒದಗಿಸುವುದು” ಎನ್ನುತ್ತ  20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆರ್ಸೆನಲ್ ಕಂಪನಿಯ ಈ ವರದಿ, ಇದು ತಾನು ಇದುವರೆಗೆ ನೋಡಿರುವ ಸಾಕ್ಷ್ಯದಲ್ಲಿ ಅಕ್ರಮ ನಡೆಸುವ ಗಂಭೀರ ಪ್ರಕರಣಗಳಲ್ಲಿ ಒಂದು ಎಂದಿರುವುದಾಗಿಯೂ ವರದಿಯಾಗಿದೆ.

ಜೂನ್ 2016ರಲ್ಲಿ ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿರುವ 80 ವರ್ಷದ ವರವರ ರಾವ್‍ ರವರ ಇಮೇಲ್ ಬಳಸಿ ಈ ದಾಳಿ ಆರಂಭವಾಗಿತ್ತು, ನೆಟ್‍ವೈರ್ ಎಂಬ ದುರುದ್ದೇಶದ ತಂತ್ರಾಂಶವನ್ನು ಬಳಸಿ ರೋನ ವಿಲಿಯಂಸ್‍ರವರ ಲ್ಯಾಪ್‍ಟಾಪ್ ನ ಮೇಲೆ ಹಲ್ಲೆಕೋರರು ಹತೋಟಿ ಪಡೆದರೆಂದು, ಈ ಕಂಪ್ಯೂಟರ್ ಹಲ್ಲೆಯ ವಿವರಗಳನ್ನು ಕೊಡುತ್ತ ಈ ವರದಿ ಹೇಳಿದೆ.

ಪುಣೆ ಪೋಲಿಸ್ ಈ ಪ್ರಕರಣದಲ್ಲಿ ಈ ಪತ್ರಗಳನ್ನು ಪ್ರಾಥಮಿಕ ಸಾಕ್ಷ್ಯವಾಗಿ ಕೊಟ್ಟಿದ್ದರು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ  ಸೋತ ನಂತರ ಈ ಕೇಸನ್ನು ಇದ್ದಕಿದ್ದಂತೆ  ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‍ಐಎ)ಗೆ ವರ್ಗಾಯಿಸಲಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕೇಸಿನಲ್ಲಿ ರೋನ ವಿಲಯಮ್ಸ್ ರಲ್ಲದೆ ಇನ್ನೂ 15 ಮಾನವ ಹಕ್ಕು ಹೋರಾಟಗಾರರು, ವಕೀಲರು ಮತ್ತು ಅಧ್ಯಯನಕಾರರು ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಸುಮಾರು ಎರಡು ವರ್ಷಗಳಿಂದ ಜೈಲುಗಳಲ್ಲಿದ್ದಾರೆ.

ಆರೋಪ ಪಟ್ಟಿಯಲ್ಲಿ ಹೇಳಿರುವ ಈ ‘ಪತ್ರಗಳ’ ಬಗ್ಗೆ ರೋನ ವಿಲಿಯಮ್ಸ್‍ರವರಿಗೆ ಗೊತ್ತಾದದ್ದು ಒಂದು ವರ್ಷದ ಮೇಲೆ ಅವರ ಮೇಲೆ ಹಾಕಿದ ಆರೋಪ ಪಟ್ಟಿಯ ಭಾಗವಾಗಿ ಕೊಟ್ಟ ‘ಇಲೆಕ್ಟ್ರಾನಿಕ್ ಸಾಕ್ಷ್ಯ’ದ ಮೂಲಕ. ಈ ‘ಸಾಕ್ಷ್ಯ’ದ ಪರೀಕ್ಷಣೆ ನಡೆಸಲು ರೋನ ವಿಲಿಯಮ್ಸ್  ರವರ ವಕೀಲರು ಅಮೆರಿಕನ್ ಬಾರ್ ಅಸೋಸಿಯೇಷನ್‍ಗೆ ಸಲ್ಲಿಸಿದ ಕೋರಿಕೆಯಂತೆ ಆರ್ಸೆನಲ್ ಕನ್ಸಲ್ಟಿಂಗ್ ಇದರ ಪರೀಕ್ಷಣೆಯನ್ನು ನಡೆಸಿ ಈ ವರದಿಯನ್ನು ಕೊಟ್ಟಿದೆ.

ಈ ವರದಿಯ ಆಧಾರದಲ್ಲಿ ರೋನ ವಿಲಿಯಮ್ಸ್ ರವರ ವಕೀಲರು ಫೆಬ್ರುವರಿ 10ರಂದು ಮುಂಬೈ ಹೈಕೋರ್ಟಿನಲ್ಲಿ ರೋನ ವಿಲ್ಸನ್ ವಿರುದ್ಧದ ಈ ಕೇಸನ್ನೇ ವಜಾ ಮಾಡಬೇಕು  ಮತ್ತು   ಸುಳ್ಳು ಸಾಕ್ಷ್ಯ ಸೃಷ್ಟಿಯ ಪ್ರಕರಣದ ತನಿಖೆಗೆ ಒಂದು ‘ವಿಶೇಷ ತನಿಖಾ ತಂಡ’ (ಎಸ್.ಐ.ಟಿ.)ವನ್ನು ರಚಿಸಬೇಕು, ಇದು ಹೈಕೋರ್ಟ್‍ನ ಉಸ್ತುವಾರಿಯಲ್ಲಿ ತನಿಖೆ ನಡೆಸುವಂತಾಗಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ವಾಶಿಂಗ್ಟನ್ ಪೋಸ್ಟ್ ನ  ಈ ವರದಿಯನ್ನು ಕೇಂದ್ರ ಸರಕಾರದ ಮೂಲಗಳು ನಿರಾಕರಿಸಿವೆ, ಎನ್.ಐ.ಎ. ಅಧಿಕಾರಿಯೊಬ್ಬರು ಇದು ಈ ತನಿಖೆಗೆ  ಮತ್ತು ಇದರಲ್ಲಿ ಸಂಗ್ರಹಿಸಿದ ಸಾಕ್ಷ್ಯಕ್ಕೆ ಮಸಿ ಬಳೆವ ಪ್ರಯತ್ನ ಎಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ (ಟಿ. ಎನ್.ಎನ್., ಫೆ.11) ವರದಿ ಮಾಡಿದೆ.

ಆಪಾದಿತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು-ಸಿಪಿಐ(ಎಂ)ಪೊಲಿಟ್‍ ಬ್ಯುರೊ : ಭೀಮ-ಕೋರೆಗಾಂವ್‍ ಕೇಸಿನಲ್ಲಿ  ಬಂಧಿಸಿರುವ ಕಾರ್ಯಕರ್ತರುಗಳ ವಿರುದ್ಧ ಇರುವ ಮೊಕದ್ದಮೆಗಳನ್ನು ಕೈಬಿಡಬೇಕು, ಮತ್ತು ಸಾಕ್ಷ್ಯವನ್ನು ಹೇಗೆ ಸೃಷ್ಟಿಸಲಾಯಿತು ಹಾಗೂ ಇವರಲ್ಲಿ ಒಬ್ಬರಾದ ರೋನಾ ವಿಲ್ಸನ್ ರವರ ಕಂಪ್ಯುಟರ್‍ ನಲ್ಲಿ ಹೇಗೆ ಹಾಕಲಾಯಿತು ಎಂಬ ಬಗ್ಗೆ ಅಂತರ್ -ರಾ ಷ್ಟ್ರೀಯ ಪರಿಣತರ ವಿಶ್ವಾಸಾರ್ಹ ವರದಿಗಳಲ್ಲಿ ಬಹಿರಂಗವಾಗಿರುವ ಬೆಳವಣಿಗೆಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ಒಂದು  ವಿಶೇಷ ತನಿಖಾ ತಂಡ(ಎಸ್‍.ಐ.ಟಿ.)ವನ್ನು ರಚಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

ರೋನಾ ವಿಲ್ಸನ್  ಕಂಪ್ಯುಟರನ್ನು ಹ್ಯಾಕ್ ಮಾಡಲಾಯಿತು ಮತ್ತು ಒಂದು ದುರುದ್ದೇಶದ ತಂತ್ರಾಂಶ(ಮಾಲ್‍ ವೇರ್)ವನ್ನು ಅದರಲ್ಲಿ ನೆಲೆಗೊಳಿಸಲಾಯಿತು, ಅದು ಅವರ ಕಂಪ್ಯೂಟರ್‍ ಕಡತಗಳಲ್ಲಿ ಅವರ ಮೇಲೆ ಆರೋಪ ಹೊರಿಸಲು ಅನುವು ಮಾಡಿಕೊಡುವ ಮೇಲ್‍ಗಳನ್ನು ಹಾಕಿತು; ಇವನ್ನು ಅವರು ಎಂದೂ ನೋಡಿರಲೇ ಇಲ್ಲ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ಅಪರಾಧ ಪರೀಕ್ಷಣಾ(ಫೊರೆನ್ಸಿಕ್) ಪ್ರಯೋಗಾಲಯ  ಕಂಡು ಹಿಡಿದಿದೆ. ಇದನ್ನು ಇತರ ಪರಿಣಿತರು ಪರೀಕ್ಷಿಸಿದ್ದಾರೆ.

ಅಲ್ಲದೆ ಈ ಮೋಸದ ಕೆಲಸ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಅವರ ಅರಿವಿಗೆ ಬರದಂತೆ ನಡೆದಿದೆ. ಈ ಮೇಲ್‍ ಗಳನ್ನೇ “ಪಿತೂರಿ” ಯ ಭಾಗ ಎಂದು ಎನ್‍.ಐ.ಎ. ಹೇಳಿಕೊಂಡಿದೆ ಎಂಬುದನ್ನು ಪೊಲಿಟ್‍ ಬ್ಯುರೊ ನೆನಪಿಸಿದೆ.

ಆಪಾದನಾಕಾರಿ ಮೇಲ್ ಗಳನ್ನು ಮೋಸದಿಂದ ಹಾಕಲು ಕಂಪ್ಯೂಟರನ್ನು ಹ್ಯಾಕ್‍ ಮಾಡುವ  ಒಂದು  ಮಾರಣಾಂತಿಕ  ಆಯುಧವನ್ನು ಮೋದಿ ಸರಕಾರ ಬಳಸಿದೆ ಮತ್ತು ಭವಿಷ್ಯದಲ್ಲಿ ರಾಜಕೀಯ ವಿರೋಧಿಗಳ ಮೇಲೆ ಬಳಸಬಹುದು.  ಇದನ್ನು ಬಯಲು ಮಾಡಿರುವುದನ್ನು, ಆರಂಭಿಕ ಅಧಿಕೃತ ಪ್ರತಿಕ್ರಿಯೆಗಳು ಸೂಚಿಸುವಂತೆ, ಮುಚ್ಚಿ ಹಾಕಲು ಅಥವ ತಳ್ಳಿ ಹಾಕಲು ಬಿಡಬಾರದು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ

Donate Janashakthi Media

Leave a Reply

Your email address will not be published. Required fields are marked *