ಕುಂದಾಪುರ: ಕಳೆದ ಮೂರು ವರ್ಷಗಳು ಅತ್ಯಂತ ಸವಾಲಿನ ದಿನಗಳನ್ನು ದೇಶದ ಸಾಮಾನ್ಯ ಜನ ಹಾಗೂ ಶ್ರಮಜೀವಿ ವರ್ಗ ಕಂಡಿದೆ. ಕೋವಿಡ್ ಸಾಂಕ್ರಾಮಿಕ ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿತ್ತು. ಆದರೆ ಕಾರ್ಪೋರೇಟ್ ಬಂಡವಾಳದಾರರು ಈ ಸಂದರ್ಭವನ್ನೂ ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದನ್ನು ನೋಡಿದ್ದೇವೆ ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಡಾ. ಹೇಮಲತಾ ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) 15ನೇ ಕರ್ನಾಟಕ ರಾಜ್ಯ ಸಮ್ಮೇಳನ ಮೂರು ದಿನಗಳು(ನವೆಂಬರ್ 15 ರಿಂದ 17) ಉಡುಪಿ ಜಿಲ್ಲೆಯ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣ ಹಮ್ಮಿಕೊಳ್ಳಲಾಗಿದೆ. ಡಾ. ಹೇಮಲತಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು, ಪ್ರಧಾನಿ ಮೋದಿ ಇಂತಹ ಸಂದರ್ಭದಲ್ಲಿ ಕೇವಲ ಭಾಷಣದಲ್ಲಿ ಮುಳುಗಿದ್ದರು. ಇಂತಹ ಸಂದರ್ಭದಲ್ಲಿ ಸಿಐಟಿಯು ‘ಭಾಷಣ ಸಾಕು ರೇಷನ್ ಬೇಕು’ ಎಂಬ ಕರೆಯ ಮೂಲಕ ಮನೆ-ಮನೆಗಳಿಂದ ಪ್ರತಿಭಟನೆ ನಡೆಸಿ ಬಡಜನರ, ಕಾರ್ಮಿಕರ ನೆರವಿಗೆ ನಿಲ್ಲುವಂತೆ ಒತ್ತಡ ತರಲು ಪ್ರಯತ್ನಿಸಿತು.
ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಜತೆಯಲ್ಲೇ ರೈತಾಪಿ ಕೃಷಿಯನ್ನು ಕಂಪನೀಕರಿಸುವ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿತ್ತು. ಆದರೆ ದೇಶದ ರೈತರು ಕೇಂದ್ರ ವಿರುದ್ಧ ನಡೆಸಿದ ದಣಿವರಿಯದ ಹೋರಾಟದ ಫಲವಾಗಿ ಕರಾಳ ಕಾಯ್ದೆಗಳು ವಾಪಸ್ ಆಗಿವೆ. ಈ ವಿದ್ಯಮಾನ ಎಲ್ಲ ಚಳುವಳಿಗಳಿಗೆ ಸ್ಪೂರ್ತಿಯಾಗಿದೆ.
ಕೇಂದ್ರದ ಜನ ವಿರೋಧಿ ಆರ್ಥಿಕ ನೀತಿಗಳು ಸಾಮಾನ್ಯ ಜನರನ್ನು ತೀರ ಸಂಕಷ್ಟಕ್ಕೆ ಸಿಲುಕಿಸಿವೆ. ಇದರ ವಿರುದ್ಧ ಸಿಐಟಿಯು ಅನೇಕ ಪ್ರಬಲ ಹೋರಾಟಗಳನ್ನು ಸಂಘಟಿಸಿದೆ ಎಂದು ತಿಳಿಸಿದರು.
ಕಾರ್ಪೋರೇಟ್ ಬಂಡವಾಳದಾರರನ್ನು ಸಂತುಷ್ಟಗೊಳಿಸಲು ಉದಾರವಾದಿ ನೀತಿಗಳನ್ನು ಶತಾಯಗತಾಯ ಜಾರಿ ಮಾಡಲು ಕೇಂದ್ರದ ಪ್ರಯತ್ನ ಮುಂದುವರಿದಿದೆ. ಇದರ ಪ್ರಬಲ ಪ್ರತಿರೋಧ ಎದ್ದು ಬರದಂತೆ ಜಾತಿ, ಧರ್ಮದ ಆಧಾರದಲ್ಲಿ ಜನತೆಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಲವ್ ಜಿಹಾದ್, ಹಲಾಲ್, ಸೇರಿದಂತೆ ಎಲ್ಲವನ್ನೂ ಕೋಮುವಾದಿ ನೆಲೆಯಲ್ಲಿ ನೋಡುತ್ತಾ, ಜನರ ಮನಸ್ಸನ್ನು ನೈಜ ಸಮಸ್ಯೆಗಳಿಂದ ಮರೆಸುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ನಾವು ಕಾರ್ಪೊರೇಟ್ ಬಂಡವಾಳವಾದದ ಶೋಷಣೆ ವಿರುದ್ಧ ಹೋರಾಟ ನಡೆಸುವಾಗಲೇ ಕೋಮುವಾದ, ಮತೀಯತೆ, ಫ್ಯಾಸಿಸ್ಟ್ ವಾದದ ಅಪಾಯದ ವಿರುದ್ಧ ನಮ್ಮ ಚಳುವಳಿಯನ್ನು ಹುರಿಗೊಳಿಸಬೇಕಿದೆ ಎಂದು ಡಾ. ಹೇಮಲತಾ ಕರೆ ನೀಡಿದರು.
ಮಾಧ್ಯಮ ಪೂರ್ತಿಯಾಗಿ ಆಳುವ ವರ್ಗದ ಅಡಿಯಾಳಾಗಿದೆ. ಬಹುತೇಕ ಮಾಧ್ಯಮ ಸಂಸ್ಥೆಗಳು ರಿಲೆಯನ್ಸ್ ಕಂಪನಿ ಖರೀದಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಹಿಂದಿನ ಕರೆಯಂತೆ ತಲುಪದಿರುವ ಕಾರ್ಮಿಕರನ್ನು ತಲುಪಿ ಹಾಗೂ ಸಮಸ್ಯೆಗಳು ನೀತಿಗಳ ಭಾಗವಾಗಿ ಎಂಬುದನ್ನು ಜೋಡಿಸಿ, ಕಾರ್ಮಿಕರಲ್ಲಿ ಜಾಗೃತಿ ತರುವ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಈ ಸಮ್ಮೇಳನದಲ್ಲಿ ಚರ್ಚೆ ನಡೆಯಬೇಕೆಂದು ನಾನು ಆಶಿಸುತ್ತೇನೆ ಎಂದರು.
ಕೇಂದ್ರದ ಜನ ವಿರೋಧಿ ಆರ್ಥಿಕ ನೀತಿಗಳು ಸಾಮಾನ್ಯ ಜನರನ್ನು ತೀರ ಸಂಕಷ್ಟಕ್ಕೆ ಸಿಲುಕಿಸಿವೆ. ಇದರ ವಿರುದ್ಧ ಸಿಐಟಿಯು ಅನೇಕ ಪ್ರಬಲ ಹೋರಾಟಗಳನ್ನು ಸಂಘಟಿಸಿದೆ.
ಸಂಪತ್ತನ್ನು ಸೃಷ್ಟಿಸುವ ರೈತಾಪಿ ವರ್ಗ ಮತ್ತು ಕಾರ್ಮಿಕ ವರ್ಗದ ನಡುವೆ ಐಕ್ಯತೆಯನ್ನು ಸಾಧಿಸಲು ನಮ್ಮ ಪ್ರಯತ್ನ ಮುಂದುವರಿಸಬೇಕು. ರೈತರು ನಡೆಸುವ ಹೋರಾಟಗಳಿಗೆ ಸಾಂಕೇತಿಕ ಬೆಂಬಲ ನೀಡುವುದಲ್ಲ, ಹೋರಾಟಗಳಲ್ಲಿ ಪಾಲ್ಗೊಂಡು ನೈಜ ಐಕ್ಯತೆಯನ್ನು ಸಾಧಿಸಬೇಕು ಎಂದು ಡಾ. ಹೇಮಲತಾ ಹೇಳಿದರು.
ಈ ಹಿನ್ನೆಲೆಯಲ್ಲಿ ಮೂರು ಸಂಘಟನೆಗಳು ಸೇರಿ (ಕಾರ್ಮಿಕ, ರೈತರು ಮತ್ತು ಕೃಷಿಕೂಲಿಕಾರರು) ಮಾರ್ಚ್ ತಿಂಗಳ ಬಜೆಟ್ ಪೂರ್ವದಲ್ಲಿ ಬೃಹತ್ ಪಾರ್ಲಿಮೆಂಟ್ ಚಲೋ ನಡೆಸಲು ತೀರ್ಮಾನಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್.ವರಲಕ್ಷ್ಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್, ರಾಷ್ಟ್ರೀಯ ಮುಖಂಡರಾದ ಕೆ.ಎನ್.ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ ವಿ.ಜೆ.ಕೆ.ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 400 ಹೆಚ್ಚಿನ ಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೂ ಮೊದಲು ಕುಂದಾಪುರದ ಸಂಗಾತಿಗಳು ಹಾಡುಗಳನ್ನು ಹಾಡಿದರು.
ಹುತಾತ್ಮರಿಗೆ ಗೌರವ ವಂದನೆ….
ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ನಂತರ, ಸಿಐಟಿಯು ರಾಜ್ಯ 14ನೇ ಸಮ್ಮೇಳನದಿಂದ 15ನೇ ಸಮ್ಮೇಳನದವರೆಗೆ ಚಳುವಳಿಗಾಗಿ ಪ್ರಾಣ ಕೊಟ್ಟ ವೀರ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಸಮ್ಮೇಳನ ಅಧಿಕೃತವಾಗಿ ಉದ್ಘಾಟನೆಗೊಂಡಿತು.