ಭಾವನಾವಾದದ ತಲೆಕೆಳಗು ದೃಷ್ಟಿ

ವಿ.ಎನ್.ಲಕ್ಷ್ಮೀನಾರಾಯಣ

ವಾಸ್ತವವನ್ನು ಅರ್ಥೈಸಿಕೊಳ್ಳುವ ಪ್ರಜ್ಞೆಯು ವಸ್ತುವಿನಿಂದ ಮೂಡಿದೆಯೆಂದು ಅರ್ಥಮಾಡಿಕೊಳ್ಳುವ ಬದಲು, ಪ್ರಜ್ಞೆಯಿಂದಲೇ ವಸ್ತು ಸೃಷ್ಟಿಯಾಗಿದೆಯೆಂಬ ತಲೆಕೆಳಗು ದೃಷ್ಟಿಯನ್ನೇ  ಆಧರಿಸಿ ದೈವಶಾಸ್ತ್ರ, ತತ್ವಶಾಸ್ತ್ರ ಮತ್ತು ಅವುಗಳನ್ನು ಆಧರಿಸಿದ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಭಾವನಾವಾದೀ ಚಿಂತಕರು ಮಂಡಿಸುತ್ತಾರೆ. ಭಾವನಾವಾದೀ ದೃಷ್ಟಿಯ ಹೇಗಲ್ನಿಂದ ದ್ವಂದ್ವಾತ್ಮಕ ಚಿಂತನಾ ವಿಧಾನವನ್ನು ಪಡೆದುಕೊಂಡು ಅದನ್ನು ಬಳಸಿ ದ್ವಂದ್ವಾತ್ಮಕ ಚಾರಿತ್ರಿಕ ಭೌತವಾದವನ್ನು ರೂಪಿಸಿದ ಮಾರ್ಕ್ಸ್ ‘ನಾನು ಹೊಸದೇನನ್ನೂ ಹೇಳಿಲ್ಲ, ತಲೆಕೆಳಕಾಗಿ ನಿಂತಿದ್ದ ಹೇಗಲ್ ನನ್ನು ಸರಿಯಾಗಿ ನಿಲ್ಲಿಸಿದೆ ಅಷ್ಟೆ’ ಎಂದು ಹೇಳಿರುವುದು ಇದನ್ನೇ. ಆಧುನಿಕ ಅವತಾರಗಳಲ್ಲಿ ಆಧಿಪತ್ಯ ಹೊಂದಿರುವ, ಬಂಡವಾಳವಾದದ ಫಲಾನುಭವಿಗಳೂ, ಅವುಗಳ ಪ್ರತಿಪಾದಕರೂ ಆದ ಸಂಘಪರಿವಾರದ ಸಿದ್ಧಾಂತಿಗಳು ಮತ್ತು ರಾಜಕಾರಣಿಗಳು ಭಾವನಾವಾದವನ್ನು ಪೌರಾಣಿಕವಾಗಿ ಅದರ ಕಾಲ್ಪನಿಕ ಆದರ್ಶಗಳ ಸಾಕ್ಷಾತ್ಕಾರಕ್ಕಾಗಿ ಬಳಸುತ್ತಾರೆ. ಆ ಮೂಲಕ ಅದರ ತಲೆಕೆಳಗು ದೃಷ್ಟಿಯನ್ನು ರಾಜಕೀಯವಾಗಿ ಅಧಿಕೃತಗೊಳಿಸಲು ಯತ್ನಿಸುತ್ತಾರೆ. ಇದಕ್ಕೆ ದೃಷ್ಟಾಂತವಾಗಿ ಕೆಲವು ಉದಾಹರಣೆಗಳನ್ನು ನೋಡಬಹುದು.

ಮಾರ್ಕ್ಸ್ ಮತ್ತು ಏಂಗೆಲ್ಸ್ ಪ್ರತಿಪಾದಿಸಿದ ದ್ವಂದ್ವಾತ್ಮಕ ಮತ್ತು ಚಾರಿತ್ರಿಕ ಭೌತವಾದದಲ್ಲಿ ಬಹುಮುಖ್ಯವಾದ ಅಂಶ ನಾವು ಪ್ರಪಂಚವನ್ನು ನೋಡುವ ದೃಷ್ಟಿಗೆ ಸಂಬಂಧಿಸಿದ್ದು. ಸಾಂಪ್ರದಾಯಿಕ ಅಥವಾ ಪಾರಂಪರಿಕ ತತ್ವಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜವಾದಗಳ ಚಿಂತನೆಗಳಿಗೆ ಆಧಾರವಾಗಿರುವುದು ಮತ್ತು ಅವುಗಳಲ್ಲಿ ಹಾಸುಹೊಕ್ಕಾಗಿರುವುದು ಈ ಅಂಶವೇ. ಜರ್ಮನ್ ಸಿದ್ಧಾಂತ, ಬ್ರಿಟಿಷ್ ಅರ್ಥಶಾಸ್ತ್ರ ಮತ್ತು ಫ್ರೆಂಚ್ ಸಮಾಜವಾದಗಳನ್ನು ವಿಮರ್ಶೆಗೆ ಒಳಪಡಿಸಿ ಅವುಗಳ ಮಿತಿಗಳನ್ನು ವಿವರಿಸುವಾಗ ಮತ್ತು ಅವು ಎಲ್ಲಿ ದಾರಿತಪ್ಪುತ್ತವೆ ಎಂದು ನಿರ್ದಿಷ್ಟವಾಗಿ ಬೊಟ್ಟುಮಾಡಿ ತೋರಿಸುವಾಗ ಮಾರ್ಕ್ಸ್ ಮತ್ತು ಏಂಗೆಲ್ಸ್ ನಾವು ಪ್ರಪಂಚವನ್ನು ನೋಡುವ ದೃಷ್ಟಿಯ ಕಡೆಗೆ ನಮ್ಮ ಗಮನಸೆಳೆಯುತ್ತಾರೆ. ಮನುಷ್ಯನ ಪ್ರಜ್ಞೆಯಿಂದ  ವಸ್ತು ಹುಟ್ಟಿದೆ ಎಂದು ನಂಬುವ ಭಾವನಾವಾದವು ಹೇಗೆ ತಲೆಕೆಳಗು ದೃಷ್ಟಿಯಾಗಿದೆ ಎಂಬುದನ್ನು ದ್ವಂದ್ವಾತ್ಮಕ ಮತ್ತು ಚಾರಿತ್ರಿಕ ಭೌತವಾದದ ಪ್ರತಿಪಾದನೆಯ ಮೂಲಕ ತೋರಿಸುತ್ತಾರೆ. ಕ್ಯಾಮರಾದ ಮಸೂರದ ಮೂಲಕ ಮೂಡುವ ವಸ್ತುವಿನ ತಲೆಕೆಳಗು ಮತ್ತು ಎಡ-ಬಲಗಳು ಪಲ್ಲಟವಾಗಿರುವ ವಸ್ತುವಿನ  ಬಿಂಬವನ್ನೇ ಆಧರಿಸಿ ಇಡೀ ಪ್ರಪಂಚವು ನಮಗೆ ಹೇಗೆ ಕಾಣಿಸುತ್ತಿದೆಯೋ ಹಾಗೇ (ಅಂದರೆ ತಲೆಕೆಳಕಾಗೇ) ಇದೆ, ಎಂದು ಯಾರಾದರೂ ಹೇಳಿದರೆ, ಅವರ ತಲೆಕೆಳಗು ದೃಷ್ಟಿಯನ್ನು ಸುಲಭವಾಗಿ ಲೇವಡಿ ಮಾಡುತ್ತೇವೆ. ಕ್ಯಾಮರಾದ ತಲೆಕೆಳಗು ಬಿಂಬವನ್ನು ಅದು ಇರುವಂತೆಯೇ ನೋಡದೆ ಸರಿಯಾಗಿಟ್ಟು ನೋಡಬೇಕೆಂದು ಹೇಳಿದಂತೆ, ಕಣ್ಣಿನ ಮಸೂರದ ಮೂಲಕ ಮೆದುಳಿನಲ್ಲಿ ಮೂಡುವ ವಾಸ್ತವದ ತಲೆಕೆಳಗು-ತಿರುವು ಮುರುವು ಬಿಂಬವನ್ನು ಸರಿಯಾಗಿರಿಸಿ ನಮ್ಮ ಆಲೋಚನೆಗಳನ್ನು ರೂಪಿಸಿಕೊಳ್ಳಬೇಕೆಂದು ಮಾರ್ಕ್ಸ್ ಮತ್ತು ಏಂಗೆಲ್ಸ್  ಹೇಳಿದ್ದಾರೆ. ಆದರೆ, ಅದು ‘ಸರಿ’ ಅಲ್ಲವೆಂದು, ಕೇವಲ ತಾತ್ವಿಕ ಭಿನ್ನಾಭಿಪ್ರಾಯವೆಂದು, ಆದ್ದರಿಂದ  ಅದನ್ನು ಒಪ್ಪಬೇಕಾಗಿಲ್ಲವೆಂದು ಭಾವನಾವಾದೀ ಚಿಂತಕರು ವಾದಿಸುತ್ತಾರೆ. ವಾಸ್ತವವನ್ನು ಅರ್ಥೈಸಿಕೊಳ್ಳುವ ಪ್ರಜ್ಞೆಯು ವಸ್ತುವಿನಿಂದ ಮೂಡಿದೆಯೆಂದು ಅರ್ಥಮಾಡಿಕೊಳ್ಳುವ ಬದಲು ಪ್ರಜ್ಞೆಯಿಂದಲೇ ವಸ್ತು ಸೃಷ್ಟಿಯಾಗಿದೆಯೆಂಬ ತಲೆಕೆಳಗು ದೃಷ್ಟಿಯನ್ನೇ ಆಧರಿಸಿ ದೈವಶಾಸ್ತ್ರ, ತತ್ವಶಾಸ್ತ್ರ ಮತ್ತು ಅವುಗಳನ್ನು ಆಧರಿಸಿದ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಭಾವನಾವಾದೀ ಚಿಂತಕರು ಮಂಡಿಸುತ್ತಾರೆ.

ಭಾವನಾವಾದೀ ದೃಷ್ಟಿಯ ಹೇಗಲ್ನಿಂದ ದ್ವಂದ್ವಾತ್ಮಕ ಚಿಂತನಾ ವಿಧಾನವನ್ನು ಪಡೆದುಕೊಂಡು ಅದನ್ನು ಬಳಸಿ ದ್ವಂದ್ವಾತ್ಮಕ ಚಾರಿತ್ರಿಕ ಭೌತವಾದವನ್ನು ರೂಪಿಸಿದ ಮಾರ್ಕ್ಸ್ ‘ನಾನು ಹೊಸದೇನನ್ನೂ ಹೇಳಿಲ್ಲ, ತಲೆಕೆಳಕಾಗಿ ನಿಂತಿದ್ದ ಹೇಗಲ್ ನನ್ನು ಸರಿಯಾಗಿ ನಿಲ್ಲಿಸಿದೆ ಅಷ್ಟೆ’ ಎಂದು ಹೇಳಿರುವುದು ಇದನ್ನೇ.

ಭಾವನಾವಾದದ ತಲೆಕೆಳಗು ದೃಷ್ಟಿಯ ಪ್ರಭಾವವು ವೈಜ್ಞಾನಿಕ ವಿಧಾನವನ್ನು ಅನುಸರಿಸುವ 21 ನೇ ಶತಮಾನದ ನಿಸರ್ಗ ವಿಜ್ಞಾನಿಗಳ ಮೇಲೂ ಎಷ್ಟೊಂದು ಗಾಢವಾಗಿದೆಯೆಂದರೆ, ಸೃಷ್ಟಿಯ ಮೂಲವನ್ನು ಮತ್ತು ಜೀವದ ಉಗಮವನ್ನು ಶೋಧಿಸುವಾಗ, ತಮ್ಮ ಭೌತವಾದೀ ದೃಷ್ಟಿಯ ಹೊರತಾಗಿಯೂ, ಸೃಷ್ಟಿಯ ಮೂಲ ಮತ್ತು ಉಗಮಕ್ಕೆ ಕಾರಣವಾಗಿರಬಹುದೆಂದು ಅವರು ನಂಬುವ ‘ಮೂಲಕಣ’ವನ್ನು ‘ದೇವಕಣ’ ಎಂದು ಹೆಸರಿಸುತ್ತಾರೆ.

ಆದರೆ 19ನೇ ಶತಮಾನದಲ್ಲೇ ವೈಜ್ಞಾನಿಕ ದೃಷ್ಟಿ ಎಂದರೇನೆಂದು ಸ್ಪಷ್ಟವಾಗಿ ಗ್ರಹಿಸಿದ್ದ ಮಾರ್ಕ್ಸ್ ಮತ್ತು ಏಂಗೆಲ್ಸ್ ತಮ್ಮ ಕಾಲದ ನಿಸರ್ಗವಿಜ್ಞಾನಗಳ ಸೀಮಿತ ಶೋಧನೆಗಳ ಆಧಾರದಿಂದಲೇ ನಮ್ಮ ಕಾಲದ ಎಷ್ಟೋ ವಿಜ್ಞಾನಿಗಳಿಗಿಂತಲೂ ಹೆಚ್ಚು ವೈಜ್ಞಾನಿಕವಾಗಿ ಯೋಚಿಸಬಲ್ಲನೆಂಬುದಕ್ಕೆ ಹೇರಳ ಪುರಾವೆಗಳು ಅವರ ಬರಹಗಳಲ್ಲಿ ಸಿಗುತ್ತವೆ.

ಆಧುನಿಕ ಅವತಾರಗಳಲ್ಲಿ ಆಧಿಪತ್ಯ ಹೊಂದಿರುವ, ಬಂಡವಾಳವಾದದ ಫಲಾನುಭವಿಗಳೂ, ಅವುಗಳ ಪ್ರತಿಪಾದಕರೂ ಆದ ಸಂಘಪರಿವಾರದ ಸಿದ್ಧಾಂತಿಗಳು ಮತ್ತು ರಾಜಕಾರಣಿಗಳು ಭಾವನಾವಾದವನ್ನು ಪೌರಾಣಿಕವಾಗಿ ಅದರ ಕಾಲ್ಪನಿಕ ಆದರ್ಶಗಳ ಸಾಕ್ಷಾತ್ಕಾರಕ್ಕಾಗಿ ಬಳಸುತ್ತಾರೆ. ಆ ಮೂಲಕ ಅದರ ತಲೆಕೆಳಗು ದೃಷ್ಟಿಯನ್ನು ರಾಜಕೀಯವಾಗಿ ಅಧಿಕೃತಗೊಳಿಸಲು ಯತ್ನಿಸುತ್ತಾರೆ. ಇದಕ್ಕೆ ದೃಷ್ಟಾಂತವಾಗಿ ಈ ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಬಹುದು.

  1. ‘ಭಾರತವು ಹಿಂದೂ ರಾಷ್ಟ್ರ. ಭಾರತದಲ್ಲಿ ವಾಸಿಸುವ ಜನರು ಭಾರತಾಂಬೆಯ ಮಕ್ಕಳು’

ಭಾರತದ ಜನ ಎಂಬುದು ತಾರತಮ್ಯಗಳಿಂದ ವಿವಿಧ ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳ ಒಂದು ವಾಸ್ತವಿಕ ಜನಸಂಖ್ಯಾ ಸತ್ಯ. ಹಾಗೆಯೇ ಭಾರತ ಎಂಬುದೂ ಒಂದು ವಾಸ್ತವಿಕ ಭೌಗೋಳಿಕ ಮತ್ತು ರಾಜಕೀಯ ಸತ್ಯ. ದೇಶವನ್ನು ತಾಯಿಯೆಂದೂ, ಅದರಲ್ಲಿ ವಾಸಿಸುವ ಜನರನ್ನು ಅವಳ ಮಕ್ಕಳೆಂದೂ ನೋಡುವುದು ಒಂದು ಕಾಲ್ಪನಿಕ, ಆದರ್ಶ ಕುಟುಂಬದ ಭಾವನಾತ್ಮಕ ವಿಸ್ತರಣೆ. ಇದನ್ನು ಹೀಗೆಯೇ ನೋಡಿದರೆ ಸಮಸ್ಯೆಯೇನೂ ಇಲ್ಲ. ಅದರ ಬದಲು ಈ ಸತ್ಯಗಳು ಮತ್ತು ಭಾವನೆಗಳು ಪ್ರಜ್ಞೆಯಲ್ಲಿ ಮೂಡಿಸುವ ತಲೆಕೆಳಗು ಬಿಂಬವನ್ನು ಸರಿಪಡಿಸಿಕೊಳ್ಳದೆ, ಅದು ಮೂಡುವಂತೆಯೇ ಗ್ರಹಿಸಿದಾಗ ಈಗಿರುವ ಸಮಸ್ಯೆಗಳು ಜನರನ್ನು ಕಾಡುವುದು ಅನಿವಾರ್ಯ. ಅಂದರೆ, ವಾಸ್ತವಿಕ ಸತ್ಯಗಳನ್ನು ಕಾಲ್ಪನಿಕವೆಂದೂ, ಕಾಲ್ಪನಿಕ ಆದರ್ಶವನ್ನು ವಾಸ್ತವಿಕ ಸತ್ಯವೆಂದೂ ಆಳುವ ವರ್ಗಗಳು ಗ್ರಹಿಸಿ ಆಗ್ರಹಿಸುತ್ತಿರುವುದರಿಂದ ಜನಸಮುದಾಯ ಮತ್ತು ಆಳುವವರ್ಗಗಳ ನಡುವೆ ಇರುವ  ವರ್ಗ ವೈಷಮ್ಯಗಳು ಜನರ ಜಾತಿ, ಧರ್ಮ, ಭಾಷೆ ಮತ್ತು ಜೀವನವಿಧಾನಗಳ ವೈಷಮ್ಯಗಳಾಗಿ   ಪ್ರಕಟಗೊಳ್ಳುತ್ತಿವೆ. ಅವನ್ನು ಈಗ ಗ್ರಹಿಸುತ್ತಿರುವಂತೆ ತಲೆಕೆಳಕಾಗಿಯೇ ಗ್ರಹಿಸಿ ಬಗೆಹರಿಸಿಕೊಳ್ಳುವುದೆಂದರೆ ಬಿಂಬವನ್ನು ಅಳಿಸಿ ವಸ್ತುವನ್ನು ನಾಶಗೊಳಿಸಿದೆವೆಂದು ನಂಬಿದಂತೆ. ಇದು ಎಂದಿಗೂ ಸಾಧ್ಯವಿಲ್ಲ.

  1. ‘ಗುಲಾಮರನ್ನು ಮಾಲೀಕರು ಸಾಕುತ್ತಾರೆ’

ಮೇಲುನೋಟಕ್ಕೆ ಹೌದೆಂದು ಅನ್ನಿಸಬಹುದಾದ ಈ ಗ್ರಹಿಕೆಯು ಭಾವನಾವಾದದ ತಲೆಕೆಳಗು ದೃಷ್ಟಿಯಿಂದ ಹುಟ್ಟಿದ್ದು.

ಚಾರಿತ್ರಿಕವಾಗಿ ಸೋತ ಬುಡಕಟ್ಟುಗಳ ಜನರು, ನಿರ್ಬಲರು, ಅಸಹಾಯಕರೂ ಮತ್ತು ಜೀವನಾಧಾರವನ್ನು ಸ್ವತಹ ಪಡೆಯಲಾಗದ ಅಸ್ವತಂತ್ರ ಜನರು, ಬಲಿಷ್ಠರಾದ ಯಜಮಾನರಿಗಾಗಿ ದುಡಿದು ಉತ್ಪಾದಿಸುತ್ತಾರೆ. ಅವರ  ಉತ್ಪಾದನೆಯಿಂದಲೇ ಶ್ರಮರಹಿತ ಜೀವನ ನಡೆಸುವ ಮಾಲೀಕ ಮತ್ತು ಅವನ ಪರಿವಾರದವರು ಜೀವಿಸುವುದು. ಜೊತೆಗೆ ಅವರು ಗುಲಾಮರಿಗೆ ಒದಗಿಸುವ ಜೀವನಾಧಾರವೂ ಗುಲಾಮರೇ ಉತ್ಪಾದಿಸಿದ ಉತ್ಪನ್ನಗಳ ಸಣ್ಣ ಭಾಗ. ಆದರೆ ಹೊರಗಿನಿಂದ ನೋಡಲು ಮಾತ್ರ ಯಜಮಾನರಿಲ್ಲದಿದ್ದರೆ ಗುಲಾಮರು ಹಸಿವಿನಿಂದ ಸತ್ತೇಹೋಗುತ್ತಾರೆ ಎಂಬಂತೆ ಕಾಣಿಸುತ್ತದೆ. ವಾಸ್ತವವಾಗಿ ದುಡಿಯಲು ಅಶಕ್ತರಾದ, ವೃದ್ಧ ಅಥವಾ ರೋಗಗ್ರಸ್ತ ಗುಲಾಮರಿಗೆ ಯಾವ ಯಜಮಾನನೂ ಜೀವನಾಧಾರವನ್ನು ಒದಗಿಸುವುದಿಲ್ಲ. ನರಳಿ ಸಾಯುವುದೊಂದೇ ಅಂಥ ಗುಲಾಮರಿಗೆ ಒದಗುವ ಸ್ಥಿತಿ.

  1. ‘ಬಂಡವಾಳಗಾರರಿಲ್ಲದಿದ್ದರೆ ಕಾರ್ಮಿಕರು/ಶ್ರಮಿಕರು ನಿರುದ್ಯೋಗಿಗಳಾಗುತ್ತಾರೆ’

ಮಾರಲು ಶ್ರಮಶಕ್ತಿಯ ಹೊರತಾಗಿ ಬೇರೇನೂ ಇಲ್ಲದವರೇ ಶ್ರಮಿಕರು. ಶ್ರಮವನ್ನು ಕೊಂಡುಕೊಳ್ಳುವವರು ಬಂಡವಳಿಗರು. ಯಾವುದೇ ವಸ್ತುವಿನ ಉತ್ಪಾದನೆಗೆ ಉತ್ಪಾದನಾ ಸಲಕರಣೆಗಳು, ಕಚ್ಚಾಪದಾರ್ಥಗಳು ಮತ್ತು ಶ್ರಮ ಅತ್ಯಗತ್ಯ. ಮೊದಲನೆಯ ಎರಡು ಹಳೆಯ ಶ್ರಮ ಅಥವಾ ನಿರ್ಜೀವ ಶ್ರಮ. ಕೆಲಸದ ಸ್ಥಳದಲ್ಲಿ ಶ್ರಮಿಕರು ಖರ್ಚುಮಾಡುವ ಶ್ರಮ, ಹೊಸ ಶ್ರಮ ಅಥವಾ ಜೀವಂತ ಶ್ರಮ. ಶ್ರಮಿಕರು ನಿರ್ದಿಷ್ಟ ಶ್ರಮಕಾಲದಲ್ಲಿ ಉತ್ಪಾದಿಸುವ ವಸ್ತು ಅಥವಾ ಸರಕಿನ ಮೌಲ್ಯವು ಅವರು ಬಂಡವಳಿಗರಿಂದ ಪಡೆಯುವ ಕೂಲಿ ಅಥವಾ ಸಂಬಳದ ಮೌಲ್ಯಕ್ಕಿಂತಾ ಹೆಚ್ಚಿನದು. ಅದನ್ನು ಬಂಡವಳಿಗನು ತನ್ನದೆಂದು ಲಪಟಾಯಿಸಿ ಮರು ಉತ್ಪಾದನೆಯಲ್ಲಿ ತೊಡಗಿಸುತ್ತಾನೆ. ಅದೇ ಕಟ್ಟಡ, ಯಂತ್ರ, ಹಣ, ಕಚ್ಚಾ ಸಾಮಗ್ರಿ ಮುಂತಾಗಿ ಉತ್ಪಾದನೆ ಮತ್ತು ಮರುಉತ್ಪಾದನೆಯಲ್ಲಿ ಬಳಸುವ ಬಂಡವಾಳ. ಮತ್ತೆ ಮತ್ತೆ ಶ್ರಮಿಕರದ್ದೇ ಆದ ಹೆಚ್ಚುವರಿ ಮೌಲ್ಯವನ್ನು ಕಿತ್ತುಕೊಳ್ಳುತ್ತಾ ಶ್ರೀಮಂತನಾಗುತ್ತಾನೆ. ಅಂದರೆ ಬಂಡವಳಿಗನದ್ದೆಂದು ತೋರುವ ಎಲ್ಲಾ ಬಂಡವಾಳದ ಮೌಲ್ಯವೂ ವಾಸ್ತವವಾಗಿ ಶ್ರಮಿಕರದ್ದೇ. ಹೀಗಾಗಿ ‘ಬಂಡವಳಿಗರಿಂದಾಗಿ ಶ್ರಮಿಕರಿಗೆ ಉದ್ಯೋಗ’ ಎಂಬುದು ತಲೆಕೆಳಗು ದೃಷ್ಟಿ. ವಾಸ್ತವವಾಗಿ ಶ್ರಮಿಕರಿಂದ ಬಂಡವಳಿಗರಿಗೆ ‘ದುಡಿಮೆರಹಿತ ಉದ್ಯೋಗ’ ದೊರೆಯುತ್ತದೆ.

  1. ‘ಜೀವವಿದ್ದರೆ, ಜೀವನ’

ಇದು ಜನಪ್ರಿಯವಾದ, ಮೇಲುನೋಟಕ್ಕೆ ನಿಜವೆಂದು ತೋರುವ, ಭಾವನಾವಾದೀ ದೃಷ್ಟಿಯ, ತಲೆಕೆಳಗು ದೃಷ್ಟಿಯಿಂದ ಹುಟ್ಟಿದ ನಾಣ್ಣುಡಿ.

ಮೊದಲನೆಯದಾಗಿ ‘ಜೀವ’ ಅಥವಾ ಪ್ರಾಣ ಎಂಬುದು ಒಂದು ವಸ್ತುವಲ್ಲ. ಲಕ್ಷಾಂತರ ವರ್ಷಗಳ ಸುದೀರ್ಘ ಅವಧಿಯಲ್ಲಿ ಒಂದು ವಿಶಿಷ್ಟ ಪ್ರೋಟೀನ್ ಅಣುವು ವಿಕಾಸಹೊಂದುತ್ತಾ ಪಡೆದುಕೊಂಡಿರುವ ಮತ್ತು ಪ್ರಕಟಪಡಿಸುವ ಕೆಲವು ಲಕ್ಷಣಗಳ ಮೊತ್ತ. ಸ್ಥೂಲವಾಗಿ ಹೇಳುವುದಾದರೆ, ಚಲನೆ, ‘ಉಸಿರಾಟ’ ಚಯಾಪಚಯ, ಆಹಾರ ಸೇವನೆ, ತನ್ನಂತೆಯೇ ಇರುವ ಜೀವಿಯ ಪುನರುತ್ಪಾದನೆ, ಇವುಗಳ ಮೊತ್ತ. ಈ ಲಕ್ಷಣಗಳಲ್ಲಿ ಯಾವುದೊಂದು ಏರುಪೇರಾದರೂ ಅನಾರೋಗ್ಯ ಅಥವಾ ಕಾಯಿಲೆ. ಈ ಕ್ರಿಯೆಗಳು ಸಂಪೂರ್ಣವಾಗಿ ನಿಂತರೆ ಮರಣ. ಈ ಇಡೀ ಪ್ರಕ್ರಿಯೆ ನೈಸರ್ಗಿಕವಾದದ್ದು.

ಈ ಪ್ರಕ್ರಿಯೆಯು ನಡೆಯಲು ನಿರಂತರವಾಗಿ ಆಹಾರ, ನೀರು, ತೀವ್ರ ನೈಸರ್ಗಿಕ ಬದಲಾವಣೆಗಳಿಂದ ರಕ್ಷಣೆ ಸಿಗುತ್ತಿರಬೇಕು. ಇವಕ್ಕೆ ಇನ್ನೊಂದು ಹೆಸರು ಜೀವನಾಧಾರ. ಇವನ್ನು ಸಂಪಾದಿಸಿಕೊಳ್ಳುವುದು, ಜೀವವನ್ನು ರಕ್ಷಿಸಿಕೊಳ್ಳುವುದೇ ಜೀವನ. ಪ್ರಾಣಿಗಳು ಜೀವನಾಧಾರವನ್ನು ನಿಸರ್ಗದಿಂದ ಸಂಪಾದಿಸಿಕೊಳ್ಳುತ್ತವೆ. ಮನುಷ್ಯರು ನಿಸರ್ಗ ಪದಾರ್ಥಗಳಿಗೆ ಶ್ರಮವನ್ನು ಸೇರಿಸಿ ಜೀವನಾಧಾರವನ್ನು ಉತ್ಪಾದಿಸಿಕೊಳ್ಳುತ್ತಾರೆ. ಇದು ಸಾಮಾಜಿಕವಾದದ್ದು. ಇದಿಲ್ಲದೆ ಜೀವವಿಲ್ಲ. ಅಂದರೆ ಸಾಮಾಜಿಕ ಜೀವನದಿಂದ ಜೀವವೇ ಹೊರತು ಜೀವದಿಂದ ಜೀವನವಲ್ಲ. ಜೀವ ಇರುವುದು ಜೀವಿ. ಬದುಕಿರುವುದು ಎಂದರೆ ಸಾಮಾಜಿಕವಾಗಿ ಸಕ್ರಿಯರಾಗಿರುವುದು. ಅದೇ ಜೀವಂತಿಕೆ. ಜೀವವಿರಬೇಕಾದರೆ ಜೀವನವಿರಬೇಕು.

Donate Janashakthi Media

Leave a Reply

Your email address will not be published. Required fields are marked *