ಭಾಷೆ ಸದೃಢವಾಗಿದ್ದರೆ- ರಾಜ್ಯವೂ ಶಕ್ತಿಶಾಲಿಯಾಗಿರುತ್ತದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯವೂ ಶಕ್ತಿಶಾಲಿಯಾಗಿರುತ್ತದೆ. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಭಾಷೆ ತಿಳಿಯದವರಿಗೂ ಕನ್ನಡ ಕಲಿಸಬೇಕಿದೆ. ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಆಗಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು ʻಕನ್ನಡಕ್ಕೆ ತನ್ನದೇ ಆದ  ಅಂತರ್ಗತ ಶಕ್ತಿ ಇದೆ. ಎಲ್ಲಾ ರಂಗಗಳಲ್ಲಿಯೂ ಕನ್ನಡಕ್ಕೆ ಸ್ಥಾನ ನೀಡಬೇಕು. ಕನ್ನಡದ ಶಕ್ತಿಯನ್ನು ಕುಗ್ಗಿಸಲು ಯಾರಿಗೂ ಸಾಧ್ಯವಿಲ್ಲ. ಕನ್ನಡವನ್ನು ಎಲ್ಲ ಆಯಾಮಗಳಲ್ಲೂ ಬಳಕೆಗೆ ತರುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕಿದೆ. ಅದಕ್ಕೆ ಪೂರಕವಾಗಿ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಬೋಧಿಸುವ ಕೆಲಸವನ್ನು ತಮ್ಮ ಸರ್ಕಾರ ಆರಂಭಿಸಿದೆ. ಈ ವಿಚಾರದಲ್ಲಿ ಗಟ್ಟಿಯಾದ ನಿಲುವನ್ನು ಸರ್ಕಾರ ಹೊಂದಿದೆʼ ಎಂದರು.

ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು‌ ಅದಕ್ಕಾಗಿ ಕಲ್ಯಾಣ ಕರ್ನಾಟಕಕ್ಕೆ ಮುಂದಿನ ಬಜೆಟ್ ನಲ್ಲಿ ₹3000 ಕೋಟಿ ವಿಶೇಷ ಅನುದಾನ ಒದಗಿಸಲಾಗುವುದು. ಕನ್ನಡದ ಮಕ್ಕಳಿಗೆ ಉದ್ಯೋಗದ ಭರವಸೆಯನ್ನು ನೀಡಬೇಕಿದೆ. ಆಗ ಮಾತ್ರ ಕನ್ನಡ, ಕನ್ನಡಿಗರ ಶಕ್ತಿ ಹೆಚ್ಚುತ್ತದೆ. ಅದಕ್ಕಾಗಿ ಕೈಗಾರಿಕಾ ತರಬೇತಿ ಕೇಂದ್ರಗಳು, ಪಾಲಿಟೆಕ್ನಿಕ್ ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಜ್ಯದಲ್ಲಿ ಆರಂಭವಾಗುವ ಉದ್ದಿಮೆಗಳಲ್ಲಿ ಕೌಶಲ ವಲಯದ ಶೇಕಡ 75ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ 80 ಐಟಿಐಗಳನ್ನು ಉನ್ನತೀಕರಣ ಮಾಡಲಾಗಿದೆ. ರಾಜ್ಯದ ವಿದ್ಯಾರ್ಥಿಗಳು ಯಾವುದರಲ್ಲೂ ಹಿಂದುಳಿಯಬಾರದು. ಕನ್ನಡಿಗರಿಗೆ ಹೆಚ್ಚು ಅವಕಾಶಗಳು ಸಿಗುವಂತೆ  ನಮ್ಮ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಮೈಸೂರು ಕರ್ನಾಟಕದಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಕನ್ನಡವನ್ನು ರಾಜ್ಯದ ಗಡಿಯೊಳಗೆ ಸೀಮಿತವಾಗಿ ನೋಡುತ್ತಿಲ್ಲ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಇದಕ್ಕೆ ಸರ್ಕಾರ ಬದ್ಧವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಗಡಿ ವಿವಾದಗಳು ಇದ್ದಾಗಲೂ ಮುಂಬೈ ಕರ್ನಾಟಕ ಅನ್ನಬಾರದು. ರಾಜ್ಯದ ಯಾವುದೇ ಪ್ರದೇಶ ಹಿಂದುಳಿಯಲು ಬಿಡುವುದಿಲ್ಲ. ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಯೋಜನೆ ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *