- ಭವಿಷ್ಯದಲ್ಲೂ ದ್ವಿಭಾಷಾ ಸೂತ್ರವನ್ನೇ ಮುಂದುವರಿಸಲು ರಾಜ್ಯ ಸರಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ: ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆಪಿ ಅನ್ಬಳಗನ್
ಚೆನ್ನೈ: ಭಾಷಾ ವಿಚಾರದಲ್ಲಿ ಪಟ್ಟು ಬಿಡದ ತಮಿಳುನಾಡು ಸರಕಾರ ತನ್ನ ತೀರ್ಮಾನವನ್ನು ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ತ್ರಿಭಾಷಾ ನೀತಿಯನ್ನು ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಸ್ಪಷ್ಟನೆ ನೀಡಿರುವ ತಮಿಳುನಾಡು, ದ್ವಿಭಾಷಾ ಸೂತ್ರವನ್ನೇ ರಾಜ್ಯದಲ್ಲಿ ಮುಂದುವರಿಸುವುದಾಗಿ ಕಡ್ಡಿ ಮುರಿದಂತೆ ಹೇಳಿದೆ.
“ತಮಿಳುನಾಡು ದ್ವಿಭಾಷಾ ಸೂತ್ರವನ್ನೇ ಅನುಸರಿಸುತ್ತಾ ಬಂದಿದ್ದು, ಇದು ಯಶಸ್ವಿಯಾಗಿದೆ. ಭವಿಷ್ಯದಲ್ಲೂ ದ್ವಿಭಾಷಾ ಸೂತ್ರವನ್ನೇ ಮುಂದುವರಿಸಲು ರಾಜ್ಯ ಸರಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ,” ಎಂದು ಉನ್ನತ ಶಿಕ್ಷಣ ಸಚಿವ ಕೆಪಿ ಅನ್ಬಳಗನ್ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪದವಿ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾಪಕ್ಕೂ ಸಚಿವರು ವಿರೋಧ ವ್ಯಕ್ತಪಡಿಸಿದ್ದು, ಈ ತೀರ್ಮಾನ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ನಿರುತ್ಸಾಹಗೊಳಿಸಲಿದೆ ಎಂದು ಹೇಳಿದ್ದಾರೆ. ಈ ರೀತಿಯ ಪ್ರಸ್ತಾಪಕ್ಕೆ ತಮಿಳುನಾಡು ಸರಕಾರ ಸಿದ್ಧವಿಲ್ಲ ಎಂದು ಸೆಪ್ಟೆಂಬರ್ 4 ರಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಅನ್ಬಳಗನ್ ವಿವರಿಸಿದ್ದಾರೆ.
ವಿವರವಾದ ಚರ್ಚೆಗಳ ನಂತರ ಮತ್ತು ಸಿಎಂ ಅವರ ಸೂಚನೆಯಂತೆ, ತಮಿಳುನಾಡು ಸರಕಾರವು ಉನ್ನತ ಶಿಕ್ಷಣ ಕಾರ್ಯದರ್ಶಿ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಿ ಎನ್‌ಇಪಿ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯವು ಅಳವಡಿಸಿಕೊಳ್ಳಬಹುದಾದ ಅಂಶಗಳ ಬಗ್ಗೆ ಅಭಿಪ್ರಾಯ ಮತ್ತು ಶಿಫಾರಸುಗಳನ್ನು ನೀಡಲು ಸೂಚನೆ ನೀಡಲಾಗಿತ್ತು ಅದರಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಶೇ. 50ನ್ನು 2035ರಲ್ಲಿ ಸಾಧಿಸುವ ಎನ್‌ಇಪಿಯ ಗುರಿಯ ಬಗ್ಗೆ ಉಲ್ಲೇಖಿಸಿರುವ ಸಚಿವರು, ಈ ಸಾಧನೆಯನ್ನು ತಮಿಳುನಾಡು 2019-20ನೇ ಶೈಕ್ಷಣಿಕ ವರ್ಷದಲ್ಲಿಯೇ ಸಾಧಿಸಿದ್ದು, 2035ರಲ್ಲಿ ಮಹತ್ವಾಕಾಂಕ್ಷಿ ಶೇ. 65 ಜಿಇಆರ್ ಸಾಧಿಸಲಿದೆ ಎಂದು ಹೇಳಿದ್ದಾರೆ.