ಚಿಕ್ಕಬಳ್ಳಾಪುರ: ಮಳೆ ಬರಲಿ ಎಂದು ಪರಿತಪ್ಪಿಸುತ್ತಿದ್ದ ಜಿಲ್ಲೆಯ ಜನತೆ ಈಗ ಮಳೆಯ ರೌದ್ರಾವತಾರ ನಿಲ್ಲಲಿ ಎಂದು ಶಪಿಸುತ್ತಿದ್ದಾರೆ. 50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ. ಚಿಕ್ಕಂದಿನಿಂದಲೂ ಇಂಥ ಮಳೆ ನೀರು ಹರಿಯುವುದನ್ನು ನೋಡಿಯೆ ಇಲ್ಲ. ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಅನಾನುಕೂಲವಾಗಿ, ಜನ ಪರಿತಪಿಸುವತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಇಂದು ಬೆಳ್ಳಂಬೆಳಿಗ್ಗೆ ಆರೋಗ್ಯ- ವೈದ್ಯಕೀಯ ಹಾಗೂ ಚಿಕ್ಕಬಳ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ .ಕೆ. ಸುಧಾಕರ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು. ಜಲಾವೃತವಾಗಿರುವ ಸೇತುವೆಗಳ ವೀಕ್ಷಣೆ ಮಾಡಿದರು. ನಗರದ ಕಂದವಾರ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಅಲ್ಲಿಗೆ ತೆರಳಿ ವೀಕ್ಷಣೆ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ ಅಪಾರ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 436 ಮನೆಗಳು ನೆಲಸಮವಾಗಿದೆ. ಬಿದ್ದ ಮನೆ ದುರಸ್ತಿಗೆ ₹ 5 ಲಕ್ಷ ಪರಿಹಾರ ನೀಡುತ್ತೇವೆ, ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಘೋಷಿಸಿದ್ದಾರೆ.
ಭಾರಿ ಮಳೆಯಿಂದ ತೊಂದರೆಗೆ ಸಿಲುಕಿಕೊಂಡಿರುವ ಜನರ ರಕ್ಷಣೆಗಾಗಿ ಜಿಲ್ಲೆಯಲ್ಲಿ ಎಸ್ಡಿಆರ್ಎಫ್ ತಂಡ ನಿಯೋಜನೆ ಮಾಡಲಾಗಿದೆ. ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಎಸ್ಡಿಆರ್ಎಫ್ ಕಾರ್ಯಚರಣೆಗೆ ಇಳಿದಿದೆ.
ಜಿಲ್ಲಾಡಳಿತ ಮಳೆ ಹಾನಿ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಎಚ್ಚರಿಕೆಯ ಮಧ್ಯೆಯೂ ಕೆಲವರು ನೀರಿಗಿಳಿಯುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಜನರನ್ನು ಎಚ್ಚರಿಸಬೇಕು. ಮಳೆ ಆಪತ್ತನ್ನು ಎಲ್ಲರೂ ಒಗ್ಗಟ್ಟಗಾಗಿ ಎದುರಿಸೋಣ. ಮನೆ ಕಳೆದುಕೊಂಡವರು ಆತಂಕ ಪಡಬೇಕಾಗಿಲ್ಲ. ಜಿಲ್ಲಾಡಳಿತ ನಿಮ್ಮ ಜೊತೆ ಇರುತ್ತೆ ಎಂದು ಸಚಿವರು ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಅವರು ʻಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾ ಮಳೆಯಿಂದಾಗಿ 360 ಕೋಟಿ ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿನ 1,253 ಕೆರೆಗಳು ತುಂಬಿವೆ. 24 ಸೇತುವೆಗಳ ಮೇಲ್ಮಟ್ಟದಲ್ಲಿ ನೀರು ಹರಿಯುತ್ತಿದೆ. ರಭಸದಿಂದ ಹರಿಯುವ ನೀರಿನಲ್ಲಿ ಯಾರೂ ಸಂಚಾರ ಮಾಡಬೇಡಿ. ಗೌರಿಬಿದನೂರಿನಲ್ಲಿ 1015 ಜನರನ್ನು ಸ್ಥಳಾಂತರಿಸಿದ್ದೇವೆ. ಉತ್ತರ ಪಿನಾಕಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಿನ್ನೆ ಮೇಳ್ಯಾ ಕೆರೆ, ಇಂದು ಕಲ್ಲೊಡಿ ಕೆರೆ ಏರಿ ಒಡೆದಿವೆ ಎಂದು ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 48 ಮನೆ ಸಂಪೂರ್ಣ ಕುಸಿತಗೊಂಡಿದೆ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ. ಜಿಲ್ಲೆಯಲ್ಲಿ 33,000 ಹೆಕ್ಟೇರ್ನಷ್ಟು ರಾಗಿ ಬೆಳೆ ಹಾಳಾಗಿದೆ. 30 ಸಾವಿರ ಹೆಕ್ಟೇರ್ನಷ್ಟು ಜೋಳದ ಬೆಳೆ ಹಾನಿಯಾಗಿದೆ. 5000 ಹೆಕ್ಟೇರ್ನಲ್ಲಿದ್ದ ಹೂ, ಹಣ್ಣು, ತರಕಾರಿ ಹಾಳಾಗಿದೆ.