ಭಾರತಕ್ಕೊಂದು ಬೆಳಕು ತೋರಿದ ಕ್ರೈಸ್ತ ಬಾಂಧವರು

ಪುರುಷೋತ್ತಮ ಬಿಳಿಮಲೆ

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತಕ್ಕೆ ಆಗಮಿಸಿದ ಕ್ರಿಶ್ಚಿಯನ್ನರು ಇವತ್ತು ಭಾರತೀಯ ಸಂಸ್ಕೃತಿಯ ಭಾಗವೇ ಆಗಿದ್ದಾರೆ. ಇದನ್ನು ಕೆಲವರಿಗೆ ಒಪ್ಪಿಕೊಳ್ಳಲಾಗದಿದ್ದರೆ ಅದು ಅವರ ಮಾನಸಿಕ ಸಮಸ್ಯೆಯೇ ಹೊರತು ಕ್ರಿಶ್ಚಿಯನ್ನರ ಸಮಸ್ಯೆ ಅಲ್ಲ. ಈ ನಡುವೆ ಕ್ರಿಶ್ಚಿಯನ್ನರು ಹಲವರನ್ನು ಮತಾಂತರ ಮಾಡಿರುವುದು ನಿಜ, ಆದರೆ ಅದನ್ನು ಅವರು ಮಾತ್ರ ಮಾಡಿದ್ದಲ್ಲ. ಉಳಿದವರೂ ಮಾಡಿದ್ದಾರೆ. ಕೋಳಿ, ಹಂದಿ ತಿನ್ನುತ್ತಿದ್ದ ದೈವಗಳು ಈಚೆಗೆ ಕುಂಬಳಕಾಯಿ ತಿನ್ನಲು ಕಲಿತದ್ದನ್ನು ನೋಡಿದರೆ ಈ ಮತಾಂತರ ಪ್ರಕ್ರಿಯೆಗಳ ಒಂದು ದೊಡ್ಡ ಚಿತ್ರ ದೊರೆಯುತ್ತದೆ.

ಏನೇ ಇರಲಿ, ಭಾರತೀಯ ಸಂಸ್ಕೃತಿಗೆ ಕ್ರಿಶ್ಚಿಯನ್ನರ ಬಹುದೊಡ್ಡ ಮತ್ತು ನಿರ್ಣಾಯಕ ಕೊಡುಗೆ ಎಂದರೆ ಆಧುನಿಕ  ಶಿಕ್ಷಣ. ಭಾರತದಲ್ಲಿ ಕೆಲವರಿಗೆ ಮಾತ್ರ ಲಭ್ಯವಾಗುತ್ತಿದ್ದ ಶಿಕ್ಷಣವನ್ನು ಅವರು ಮೊದಲ ಬಾರಿಗೆ ಸಾರ್ವತ್ರಿಕಗೊಳಿಸಿದರು. ಮುದ್ರಣ ಯಂತ್ರಗಳನ್ನು ಸ್ಥಾಪಿಸಿ, ಪತ್ರಿಕೆಗಳನ್ನು ನಡೆಸುವುದರ ಜೊತೆಗೆ ಪ್ರಾಚೀನ ಗ್ರಂಥಗಳನ್ನು ಮುದ್ರಿಸಿ, ಅವು ಎಲ್ಲರಿಗೂ ದೊರೆಯುವಂತೆ ಮಾಡಿದರು. ಇದರಿಂದ ಜ್ಞಾನವು ಕೆಲವರ ಖಾಸಗಿ ಸೊತ್ತಾಗಿ ಉಳಿಯದೆ ಎಲ್ಲರ ಸೊತ್ತಾಯಿತು.

ದೇಸೀ ಭಾಷೆಗಳಲ್ಲಿಯೂ ಶಿಕ್ಷಣ ನೀಡಬಹುದೆಂಬುದನ್ನು ಭಾರತಕ್ಕೆ ಗಟ್ಟಿಯಾಗಿ ಹೇಳಿದವರು ಕ್ರಿಶ್ಚಿಯನ್ನರೇ. 1818ರಷ್ಟು ಹಿಂದೆಯೇ ಅವರು ಸುಮಾರು 111 ಶಾಲೆಗಳನ್ನು ಉತ್ತರ ಭಾರತದಲ್ಲಿ ನಡೆಸುತ್ತಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 1829(?) ರಲ್ಲಿ ಮುಂಬೈಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆಗಳನ್ನೂ ತೆರೆದರು.

ದಲಿತರು ಮತ್ತು ಬುಡಕಟ್ಟಿನ ಜನರ ಶಿಕ್ಷಣಕ್ಕಾಗಿ ಅವರು ಮಾಡಿದ ಕೆಲಸಗಳು ಮತಾಂತರದ ಉದ್ದೇಶವನ್ನೂ ಮೀರಿ ಕೆಲಸ ಮಾಡಿವೆ. ಈ ಶಾಲೆಗಳಲ್ಲಿ ಓದಲು ಅನುಕೂಲವಾಗುವಂಥ ಹೊಸ ಬಗೆಯ ಪಠ್ಯಪುಸ್ತಕಗಳನ್ನೂ ಅವರೇ ರಚಿಸಿದರು. ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲೂ ಅವರು ದುಡಿದರು. ಕ್ರಿಶ್ಚಿಯನ್ನರ ಶಿಕ್ಷಣದ ಕುರಿತಾದ ಬದ್ಧತೆಯು ಇಂದಿಗೂ ಮುಂದುವರೆದಿರುವುದರಿಂದ,  ದೆಹಲಿಯ St. Stephen’s college, ಮುಂಬಯಿ ಮತ್ತು ಕಲ್ಕತ್ತಾದ St. Xavier college, ಚೆನ್ನೈಯ Loyola College,  Stella Maris College ಮತ್ತು Christian College, ಲಕ್ನೋದ  Isabella Thorburn College (ಮಹಿಳೆಯರಿಗಾಗಿ)  ಬೆಂಗಳೂರಿನ Mount Carmel Women’s College ಮೊದಲಾದುವು ದೇಶದ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಖ್ಯಾತಿ ಪಡೆದಿವೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸಿ, ಉದೀಯಮಾನ ಬುದ್ದಿಜೀವಿಗಳೆಂಬ ಬಿರುದಿಗೆ ಪಾತ್ರರಾಗಿದ್ದ ರಾಜಾರಾಂ ಮೋಹನ್‌ ರಾಯ್‌, ದಯಾನಂದ ಸರಸ್ವತಿ , ರಾಮಕೃಷ್ಣ ಪರಮಹಂಸ, ವಿವೇಕಾನಂದ ಮೊದಲಾದವರು ಕ್ರಿಶ್ಚಿಯನ್‌ ಧರ್ಮ ತಮ್ಮ ಮೇಲೆ ಬೀರಿದ ಪ್ರಭಾವಗಳನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಸತಿ ಪದ್ಧತಿ, ಮಕ್ಕಳ ಬಲಿ, ಬಾಲ್ಯ ವಿವಾಹ, ಮೊದಲಾದ ಅನೇಕ ಸಾಮಾಜಿಕ ಅನಿಷ್ಠಗಳನ್ನು ನಿಲ್ಲಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಹುಟ್ಟುವಂತೆ ಮಾಡಲು ಅವರು ಮಾಡಿದ ಕೆಲಸಗಳು ಚಾರಿತ್ರಿಕವಾದುವು.

1883ರಲ್ಲಿ ಅವರು ಲುಧಿಯಾನಾದಲ್ಲಿ ಸ್ಥಾಪಿಸಿದ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ಮತ್ತು 1885ರಲ್ಲಿ  ಸ್ಥಾಪಿಸಿದ ವೆಲ್ಲೋರ್‌ ಮೆಡಿಕಲ್‌ ಕಾಲೇಜುಗಳು ಬದುಕುಳಿಸಿದ ಜನರ ಪ್ರಾಣಗಳ ಲೆಕ್ಕ ಇಟ್ಟವರಿಲ್ಲ. 1884ರಲ್ಲಿ ಮುಂಬೈಯಲ್ಲಿ ಬುದ್ದಿ ಮಾಂದ್ಯ ಮಕ್ಕಳಿಗೆ ಶಾಲೆ ಆರಂಭಿಸಿದರು. ಇದರಿಂದ ಪಂಡಿತ ರಮಾ ಬಾಯಿ ಪ್ರೇರಣೆ ಪಡೆದು 1898ರಲ್ಲಿ ಮಹಿಳೆಯರಿಗಾಗಿಯೇ ಸಂಸ್ಥೆ ಸ್ಥಾಪಿಸಿದರು. 1910ರಲ್ಲಿ ಕ್ರಿಶ್ಚಯನ್ನರೇ ಅಲಹಾಬಾದ್‌ ಅಗ್ರಿಕಲ್ಚರಲ್‌ ಕಾಲೇಜನ್ನು ಆರಂಭಿಸಿ ಗ್ರಾಮೀಣಾಭಿವೃದ್ಧಿಗೆ ಹೊಸ ಆಯಾಮ ನೀಡಿದರು. ಮಂಗಳೂರಿನಲ್ಲಿ ಬಾಸೆಲ್‌ ಮಿಶನರಿಗಳು ಹಂಚಿನ ಕಾರ್ಖಾನೆ ಸುರು ಮಾಡಿದರು. ಹಂಚುಗಳು ಎಲ್ಲರ ಮನೆಯನ್ನೂ ಆವರಿಸಿಕೊಂಡವು.

ಬಹುಶ: ಭಾರತೀಯ ಕ್ರಿಶ್ಚಿಯನ್ನರು ಮಾಡಿದ ಬಹಳ ದೊಡ್ಡ ಒಂದು ತಪ್ಪೆಂದರೆ ಕೆಲವು ಮಹನೀಯರನ್ನು ಹೊರತುಪಡಿಸಿದರೆ, ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕವಾಗಿ ಭಾಗವಹಿಸದೇ ಇದ್ದದ್ದು. ಈ ಕುರಿತು ಅನೇಕ ಕ್ರಿಶ್ಚಿಯನ್ನರು ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಹಾಗೆ ಇನ್ನೂ ಕೆಲವು ಸಂಘಟನೆಗಳು ಭಾಗವಹಿಸದ್ದು ನಮಗೆಲ್ಲಾ ಗೊತ್ತೇ ಇದೆ. ಆದರೆ ಅವರ‍್ಯಾರೂ ವಿಷಾದ ಪ್ರಕಟಪಡಿಸಿಲ್ಲ.

ಒಂದು ದೇಶದ ಸಭ್ಯತೆ ಇರುವುದು ಅದು ತನ್ನ ಇತಿಹಾಸದ ಗತಿಗಳನ್ನು ಸರಿಯಾಗಿ ಗ್ರಹಿಸುವುದರಲ್ಲಿ. ಅದನ್ನು ಅದಕ್ಕೆ ಮಾಡಲಾಗದಿದ್ದರೆ ಅದು ತಪ್ಪು ದಾರಿಯಲ್ಲಿದೆ ಎಂದು ಅರ್ಥ. ಗೋವಿಂದ ಪೈ ಬರೆಯುತ್ತಾರೆ-

ʼಕ್ಷಮಿಸಿವರನೆಲೆ ತಂದೆ

ತಾವೇನನೆಸಗಿದಪೆವೆಂದರಿಯರಿವರುʼ

ತನ್ನದೇ ರೀತಿಯಲ್ಲಿ ಭಾರತಕ್ಕೊಂದು ಬೆಳಕು ತೋರಿದ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು.

Donate Janashakthi Media

Leave a Reply

Your email address will not be published. Required fields are marked *