ಬಿಜೆಪಿ ಮನೆ ತುಂಬೆಲ್ಲ ಹಗರಣ

 

ಗುರುರಾಜ ದೇಸಾಯಿ

ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಿದಾಗೆಲ್ಲ, ಅಭಿವೃದ್ಧಿಗಿಂತ, ಹಗರಣಗಳು ನಡೆದದ್ದೆ ಹೆಚ್ಚೆಂದು ಕಾಣಿಸುತ್ತಿದೆ. ಹಾಗಾಗಿಯೇ ಬಿಜೆಪಿ ಎಂದರೆ ಹಗರಣದ ಮನೆಯಾಗಿದೆ.  ಕಳೆದೊಂದು  ವರ್ಷದಿಂದ ನಡೆದ ಹಗರಣಗಳ ಪಟ್ಟಿ ಬೆಟ್ಟದಷ್ಟು ದೊಡ್ಡದಾಗುತ್ತಿದೆ. ಬಹುತೇಕ ಇಲಾಖೆಯಲ್ಲಿ ಹಗರಣದ ವಾಸನೆ ಮೂಗಿಗೆ ಬಡೆಯುತ್ತಲೇ ಇದೆ.  ಶಾಸಕ ಮಾಡಾಳು ವಿರೂಪಾಕ್ಷಪ್ಪ  ಪ್ರಕರಣದಲ್ಲೂಂತು, ಬಿಜೆಪಿ ನಡೆಸಿದ್ದೆ ಆಟ ಎಂಬಂತಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪಿಎಸ್ಐ ನೇಮಕಾತಿ ಹಗರಣ, ವಕ್ಫ್ ಹಗರಣ, ಮತದಾರರ ಪಟ್ಟಿ ಹಗರಣ,  ಶಿಕ್ಷಣ ಇಲಾಖೆ, ಗೃಹ ಇಲಾಖೆ, ಕೆಪಿಎಸ್‌ಸಿ, ಕೆಪಿಟಿಸಿಎಲ್‌, ಕೆಲಸ ಮಾಡಿಕೊಡಲು ಕಮೀಷನ್‌, ಟೆಂಡರ್‌ಗೆ ಕಮೀಷನ್‌ ಹೀಗೆ ಹಗರಣಗಳ ಮೇಲೆ ಹಗರಣ ನಡೆಸಿ 40% ಕಮೀಷನ್‌ ಸರಕಾರ ಎಂದು ಜನ ಕ್ಯಾಕರಿಸಿ ಉಗಿಯುವಂತೆ ನಡೆದುಕೊಂಡಿದೆ. ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದ ಪ್ರಮುಖ ಆರೋಪ, ಹಗರಣಗಳ ಕುರಿತ ವರದಿ ಇಲ್ಲಿದೆ.

40% ಕಮೀಷನ್‌ : ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2021ರ ಜು. 6ಕ್ಕೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಕಾಮಗಾರಿಗಳಿಗೆ ಶೇ. 40ರಷ್ಟು ಕಮೀಷನ್ ಕೇಳಲಾಗುತ್ತಿದೆ. ಸರ್ಕಾರದ ಈ ಬೇಡಿಕೆಯಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದರು.

ರಾಜ್ಯ ಸರ್ಕಾರ ಈ ಆರೋಪವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಪಿಎಂ ಕಚೇರಿ ಮಧ್ಯಪ್ರವೇಶ ಮಾಡಿದ್ದು, 2022 ಜೂನ್ 28 ರಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ಒದಗಿಸುವಂತೆ ಸೂಚಿಸಿತ್ತು. ಇದು ರಾಜ್ಯ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿತ್ತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ತಮ್ಮ ಬಳಿ ಶೇ. 40ರಷ್ಟು ಕಮೀಷನ್ ಕೇಳಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಮೂಲಕ ಗುತ್ತಿಗೆದಾರ ಸಂತೋಷ್ ಡೆತ್ ನೋಟ್ ಬರೆದಿಟ್ಟು ಉಡುಪಿಯಲ್ಲಿ 2022ರ ಏ.12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರತಿಪಕ್ಷದ ಒತ್ತಡ, ಹೋರಾಟಕ್ಕೆ ಮಣಿದು ಏಪ್ರಿಲ್.14ರಂದು ಈಶ್ವರಪ್ಪ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗುವಂತೆ ಮಾಡಿತ್ತು. ಹಿರಿಯ ಸಚಿವರೊಬ್ಬರು ಕಮೀಷನ್ ಆರೋಪಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿತ್ತು.

ಪಿಎಸ್‌ಐ ನೇಮಕಾತಿ ಹಗರಣ: ಪಿಎಸ್ಐ ನೇಮಕದಲ್ಲಿ ನಡೆದ ಅಕ್ರಮ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರದ ಪಾಲಿಗೆ ಅತ್ಯಂತ ದೊಡ್ಡ ಮುಜುಗರ ತರಿಸಿದ ಘಟನೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಬಿಜೆಪಿ ನಾಯಕಿಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದರು.

ಇದು ಬಿಜೆಪಿ ವಿರುದ್ಧದ ಆರೋಪಕ್ಕೆ ಪುಷ್ಟಿ ನೀಡಿತ್ತು. ಈ ಅಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೈಕಮಾಂಡ್​​​ನ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ಪ್ರತಿಪಕ್ಷಗಳಿಂದ ಟೀಕೆಗೂ ಗುರಿಯಾಗಿ ಅಂತಿಮವಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ, ತನಿಖೆಯ ವೇಗವನ್ನು ತಗ್ಗಿಸಿದ್ದು ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್, ಡಿವೈಎಸ್ಪಿ ಶಾಂತಕುಮಾರ್, ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್ ಮೇತ್ರೆ ಸೇರಿದಂತೆ 70ಕ್ಕೂ ಹೆಚ್ಚು ಜನರ ಬಂಧನವಾಗಿದೆ. ಕನಕಗಿರಿ ಶಾಸಕ ಬಸವರಾಜ ದಡೇಸಗೂರ ಸೇರಿದಂತೆ ಅನೇಕರ ಹೆಸರು ಈ ಪ್ರಕರಣದಲ್ಲಿ ಸಿಲುಕಿಕೊಂಡಿದೆ. ಸರ್ಕಾರಕ್ಕೆ ಈ ಪ್ರಕರಣ ಕಪ್ಪುಚುಕ್ಕೆಯಾಗಿದೆ.

ಮತದಾರರ ಪಟ್ಟಿ ಹಗರಣ : ಉದ್ದೇಶಪೂರ್ವಕವಾಗಿಯೇ ನಿರ್ದಿಷ್ಟ ಸಮುದಾಯ ಗುರಿಯಾಗಿಟ್ಟುಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆರೋಪ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿತ್ತು. ಕರ್ನಾಟಕ ರಾಜ್ಯಾದ್ಯಂತ 27 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ಸದ್ದಿಲ್ಲದೇ ಕೈಬಿಡಲಾಗಿತ್ತು. ಬೆಂಗಳೂರು ನಗರವೊಂದರಲ್ಲಿಯೇ 6. 69 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಬಿಜೆಪಿ ಮತದಾರರಲ್ಲದವರನ್ನು ಪಟ್ಟಿಯನ್ನು ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಆ ಮೂಲಕ ಯಾರು ಸರ್ಕಾರದ ಪರವಾಗಿದ್ದಾರೆ? ಯಾರು ವಿರುದ್ಧವಾಗಿದ್ದಾರೆ ಎಂಬ ಅಮೂಲ್ಯ ಮಾಹಿತಿಯನ್ನು ಕದ್ದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ನೇರವಾಗಿ ಬಿಜೆಪಿಯೇ ಇದರಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿವೆ. ಚುನಾವಣೆ ಸನಿಹದಲ್ಲಿರುವಾಗ ಆಡಳಿತಾರೂಢ ಬಿಜೆಪಿ ವಿರುದ್ಧ ಕೇಳಿಬಂದ ಮತದಾರರ ಪಟ್ಟಿ ಹಗರಣ ಆರೋಪ ಬಿಜೆಪಿಗೆ ಹೊಸ ಸಂಕಷ್ಟ ತಂದಿದೆ. ಆಪರೇಷನ್ ಕಮಲದ ಆರೋಪದಂತೆ ಆಪರೇಷನ್ ವೋಟರ್ ಐಸಿ ಆರೋಪ ಬಿಜೆಪಿ ವಿರುದ್ಧ ಸುತ್ತಿಕೊಂಡಿದೆ.

ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ : ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಟ್‌ ಕಾಯಿನ್‌ ಹಗರಣ ದಿನಕ್ಕೊಂದು ತಿರುವು ಪಡೆದುಕೊಂಡಿತ್ತು. ಹಗರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂದು ಹೇಳಲಾಗಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಈ ಹಗರಣ ಕಾರಣವಾಗಿತ್ತು.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ,  25 ರ ಹರೆಯದ ಶ್ರೀಕಿಯನ್ನು ಜಾರಿ ನಿರ್ದೇಶನಾಲಯ (ED), ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಡ್ (CID) ನ ಸೈಬರ್ ಅಪರಾಧ ವಿಭಾಗ ಮತ್ತು ಕೇಂದ್ರ ಅಪರಾಧ ವಿಭಾಗ (CCB) ಹೀಗೆ ಮೂರು ವಿಭಿನ್ನ ತನಿಖಾ ತಂಡಗಳು ವಿಚಾರಣೆಗೆ ಒಳಪಡಿಸಿದ್ದವು. ಶ್ರೀಕಿ, ಸೈಬರ್ ವಂಚನೆ, ಡಾರ್ಕ್ ನೆಟ್ ಮೂಲಕ ಮಾದಕವಸ್ತು ಮಾರಾಟ, ಕ್ರಿಪ್ಟೋಕರೆನ್ಸಿ ಕಳ್ಳತನ ಮತ್ತು ಕರ್ನಾಟಕ ಸರಕಾರದ ಇ-ಆಡಳಿತ ಪೋರ್ಟಲ್‌ನಿಂದ ಹಣವನ್ನು ಕದಿಯುವ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾನೆ.

ಆಪಾದಿತ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಕರ್ನಾಟಕ ಸರಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಇಡಿ (ED) ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೇ? 

ಶ್ರೀಕೃಷ್ಣ ಸೇರಿದಂತೆ ನಡೆದ ಬಿಟ್‌ಕಾಯಿನ್ ಹಗರಣಗಳಲ್ಲಿ ಸುಮಾರು 1,000 ಕೋಟಿ ರೂಪಾಯಿಗಳ ವಹಿವಾಟು ನಡೆದಿರಬಹುದು ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧಿತವಾಗಿ ಹಲವಾರು ರಾಜಕೀಯ ನಾಯಕರುಗಳತ್ತ ಬೆರಳು ತೋರಿಸಲಾಗುತ್ತಿದ್ದು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಈಗಲೂ ಕೇಳಿ ಬರುತ್ತಿದೆ.

8.5% ಲಂಚ ಆರೋಪ : ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ 8.5% ಲಂಚ ಆರೋಪ ಜುಲೈ ಎರಡನೇ ವಾರದಲ್ಲಿ ಕೇಳಿಬಂದಿತ್ತು. ಈ ಕುರಿತು ಚಾಮರಾಜನಗರ ಹನಿ ನೀರಾವರಿ ವಿತರಕರ ಸಂಘದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿತ್ತು.

ರೈತರ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಕರ್ನಾಟಕದ ತೋಟಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮುನಿರತ್ನ ಅವರು ಎಲ್ಲ ಮಾರ್ಗದಿಂದಲೂ ಅಕ್ರಮವಾಗಿ ಹಣ ಮಾಡಲು ಶುರು ಮಾಡಿದ್ದಾರೆ. ಈ ಸಂಬಂಧ ರೈತರಿಗೆ ನೀಡಬೇಕಾದ ಸಬ್ಸಿಡಿ ಹಣದಲ್ಲಿ ಪರ್ಸೆಂಟೇಜ್‌ ಪಡೆಯುವ ಉದ್ದೇಶದಿಂದ ಹನಿ ನೀರಾವರಿ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಅದನ್ನು ಸರಿಪಡಿಸಲು ಇಷ್ಟು ಪರ್ಸೆಂಟೇಜ್‌ ಕೊಡಬೇಕು ಎಂದು ಕಂಪನಿಗಳಿಗೆ ತಾಕೀತು ಮಾಡಿದ್ದಾರೆ. ಕಂಪನಿಯ ಅಪ್ರುವಲ್‌ ಮಾಡಲು ಪ್ರತಿ ಕಂಪನಿಯಿಂದ 15 ಲಕ್ಷ ರೂ. ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ. ಈ ಸಂಬಂಧ ಹನಿ ನೀರಾವರಿ ಕಂಪನಿಗಳು ಡೀಲರ್‌ಗಳ ಬಿಲ್‌ನಲ್ಲಿ ಎಂಟೂವರೆ ಪರ್ಸೆಂಟ್‌ ಹಣವನ್ನು ಮಿನಿಸ್ಟರ್‌ಗೆ ನೀಡುವ ಪರ್ಸೆಂಟೇಜ್‌ ಎಂದು ನಮೂದಿಸಿ ಸ್ಟೇಟ್‌ಮೆಂಟ್‌ಗಳನ್ನು ಡೀಲರ್‌ಗಳಿಗೆ ಕೊಟ್ಟಿರುವುದು ಎಲ್ಲೆಡೆ ಹರಿದಾಡಿತ್ತು.

ಲಿಂಬಾವಳಿಯಿಂದ ಹಣಕಾಸು ವಂಚನೆ : ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ಹೆಚ್‌ಎಸ್‌ಆರ್ ಲೇಔಟ್‌ ನಿವಾಸಿ ಪ್ರದೀಪ್ (47) ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಾಕಷ್ಟು ತಿರುವು ಪಡೆದುಕೊಂಡಿತ್ತು.  ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಿ ಪ್ರದೀಪ್‌ ಆತ್ಮಹತ್ಯೆ ಮಾಡಿಕೊಂಡಿದ್ದ.

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿ ರೆಸಾರ್ಟ್‌ ನಿರ್ಮಾಣವೊಂದಕ್ಕೆ ನಡೆದ ಹಣಕಾಸು ವಂಚನೆಯು ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಈ ಡೆತ್‌ ನೋಟ್‌ನಲ್ಲಿ ಇರುವ ಪ್ರಕಾರ ಪ್ರದೀಪ್‌ ಅವರನ್ನು ಉದ್ಯಮಿಗಳು ರೆಸಾರ್ಟ್‌ ವ್ಯವಹಾರದಲ್ಲಿ ಪಾಲುದಾರರಾಗಿ ಮಾಡುವುದಾಗಿ ಹೇಳಿದ್ದರು. ರೆಸಾರ್ಟ್‌ ನಿರ್ಮಾಣಕ್ಕೆ ಮನೆ ಮಾರಿ, ಸಾಲ ಮಾಡಿ ಸುಮಾರು ಒಂದೂವರೆ ಕೋಟಿ ರೂಪಾಯಿಯನ್ನು ಪ್ರದೀಪ್‌ ನೀಡಿದ್ದರು. ಆದರೆ, ಬಳಿಕ ಉದ್ಯಮಿಗಳು ಇವರಿಗೆ ಮೋಸ ಮಾಡಿದ್ದರು ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

 

“ರೆಸಾರ್ಟ್‌ಗಾಗಿ ನಾನು ಒಟ್ಟು 2.25 ಕೋಟಿ ರೂಪಾಯಿ ನೀಡಿದ್ದೇನೆ. ಪಾರ್ಟನರ್‌ಶಿಪ್‌ ಹೆಸರಿನಲ್ಲಿ ನನಗೆ ಮೋಸವಾಗಿದೆ. ಅರವಿಂದ ಲಿಂಬಾವಳಿಯವರು ಉದ್ಯಮಿಗಳ ಪರವಾಗಿ ಸಂಧಾನಕ್ಕೆ ಯತ್ನಿಸಿದ್ದಾರೆ. ತಿಂಗಳಿಗೆ ಇಂತಿಷ್ಟು ಹಣ ನೀಡುವ ಕುರಿತು ಸಂಧಾನ ಮಾಡಲಾಗಿತ್ತು. ನಂತರ ಸ್ವಲ್ಪ ಹಣ ಮಾತ್ರ ನೀಡಿದ್ದಾರೆ. ಬಳಿಕ ಉಳಿದ ಹಣ ದೊರಕಲಿಲ್ಲ. ಯಾರೂ ನನಗೆ ಸಹಾಯ ಮಾಡುತ್ತಿಲ್ಲʼʼ ಎಂದು ಡೆತ್‌ನೋಟ್‌ನಲ್ಲಿ ಪ್ರದೀಪ್‌ ಬರೆದಿದ್ದ ಎಂದು ಪೊಲೀಸ್‌ ದಾಖಲೆಯಲ್ಲಿದೆ.

₹40 ಲಕ್ಷ ಲಂಚ : ಟೆಂಡರ್ ಕೊಡಿಸೋದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, 40 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ(ಕೆಎಸ್ ಡಿಎಲ್) ರಾಸಾಯನಿಕ ಪೂರೈಸುವ ಟೆಂಡರ್ ಗೆ ಗುತ್ತಿಗೆದಾರರೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಗುತ್ತಿಗೆಯನ್ನು ಕೊಡಿಸೋದಕ್ಕಾಗಿ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವಂತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಹಾಗೂ ಬಿಡಬ್ಲ್ಯೂ ಎಸ್‌ಎಸ್ ಬಿ ಮುಖ್ಯ ಲೆಕ್ಕಾಧಿಕಾರಿಯಾಗಿರುವಂತ ಪ್ರಶಾಂತ್ 80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಗುತ್ತಿಗೆದಾರರು ದೂರು ನೀಡಿದ್ದರು. ಮುಂಗಡವಾಗಿ 40 ಲಕ್ಷ ಲಂಚದ ಹಣವನ್ನು ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿಯಲ್ಲಿ ಪುತ್ರ ಪ್ರಶಾಂತ್ ಗೆ ನೀಡೋದಕ್ಕೆ ತೆರಳಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ, 40 ಲಕ್ಷ ಹಣದೊಂದಿಗೆ ಶಾಸಕರ ಪುತ್ರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ₹81 ಲಕ್ಷ‌ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಮಗನಿಗೆ ತಲುಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಸಿಲುಕಿ ಲೋಕಾಯುಕ್ತ ಪೊಲೀಸರಿಂದ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತು. ಈ ಪ್ರಕರಣ ನ್ಯಾಯಾಂಗದ ಮೇಲೆ ಜನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿತ್ತು.

ಇದರ ಬೆನ್ನಲ್ಲೇ ಚನ್ನಗಿರಿ ಕ್ಷೇತ್ರದಲ್ಲಿ ಬೆಂಬಲಿಗರು ಮಾಡಾಳು ವಿರೂಪಾಕ್ಷಪ್ಪ ಅವರನ್ನು ವಾಹನದಲ್ಲಿ ಮೆರವಣಿಗೆ ಮಾಡಿ, ವಿಜಯೋತ್ಸವ ಆಚರಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಒಟ್ಟಾರೆ ಬಿಜೆಪಿ ಮನೆ ಎಂಬುದು ಹಗರಣ ಮನೆ ಎಂಬಂತಾಗಿದೆ. ಅಧಿಕಾರವನ್ನು ದುರ್ಭಳಿಕೆ ಮಾಡಿಕೊಂಡು ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ. ಈ ಎಲ್ಲಾ ಹಗರಣಗಳನ್ನು ಜನ ಮರೆತಿಲ್ಲ. ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹಗರಣಗಳು ಮಗ್ಗಲಮುಳ್ಳಾಗಿ ಕಾಡುತ್ತಿವೆ. ಜನ 40% ಕಮೀಷನ್‌ ಸರಕಾರವನ್ನು ಕಿತ್ತೆಸೆಯಬೇಕು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *