ವಸಂತರಾಜ ಎನ್.ಕೆ.
ಈ ಅಧ್ಯಯನ ಹೊರ ತಂದಿರುವ ಒಂದು ದೊಡ್ಡ ಅಂಶವೆಂದರೆ (ಹಾಲಿ ಅಥವಾ ಮಾಜಿ) ಸಮಾಜವಾದಿ ದೇಶಗಳು ಬೇರೆ ಸಮಾನಾರ್ಥಕ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಮಟ್ಟ ಇರುವ ದೇಶಗಳಿಗಿಂತ ಪದಕ ಗಳಿಕೆಯಲ್ಲಿ ಮುಂದಿವೆ. ಇವೆಲ್ಲದಕ್ಕೂ ಸಮಾಜವಾದಿ ವ್ಯವಸ್ಥೆ ಸಾಮಾನ್ಯ ಅಂಶವಾಗಿದ್ದರೂ ಆ ವ್ಯವಸ್ಥೆಯ ಯಾವ ಅಂಶಗಳು ಪದಕ ಪಟ್ಟಿಯಲ್ಲಿ ಮೇಲಿರಲು ಸಹಾಯಕವಾಗಿವೆ ಎಂದು ತಿಳಿಯಲು ಈ ಅಧ್ಯಯನ ಪ್ರಯತ್ನಿಸಿದೆ. ಶಾಲಾ ಪೂರ್ವ ಹಂತದಿಂದ ವಿ.ವಿ. ವರೆಗೆ ಆಟೋಟಗಳು ಶಿಕ್ಷಣದ ಭಾಗವಾಗಿರುವುದು, ಪ್ರತಿ ಹಂತದಲ್ಲೂ (ಶಾಲಾ, ಅಂತರ–ಶಾಲಾ, ಜಿಲ್ಲಾ, ರಾಜ್ಯ, ರಾಷ್ಟ್ರೀಯ) ಕ್ರೀಡಾ ಸ್ಪರ್ಧೆಗಳು, ಆಟೋಟಗಳಲ್ಲಿ ಉತ್ತಮ ಪ್ರಗತಿ ತೋರಿಸಿದವರಿಗೆ ಉತ್ತೇಜನ, ಇಂತಹವರಿಗೆ ವಿಶೇಷ ಗೌರವ ಮತ್ತು ತರಬೇತಿ, ರಾಷ್ಟ್ರೀಯ ಆಟಗಳ ವಿಜೇತರಿಗೆ ಅಂತರ‍್ರಾಷ್ಟ್ರೀಯ ಸ್ಪರ್ಧೆಗೆ ಆಟೋಟಗಳಲ್ಲಿ ಸ್ಪರ್ಧಿಸಲು ವಿಶೇಷ ತರಬೇತಿ ಉತ್ತೇಜನ, ಕ್ರೀಡಾ ವೃತ್ತಿ ಜೀವನದಿಂದ ನಿವೃತ್ತಿಯ ನಂತರ ವಿಶೇಷ ಶಿಕ್ಷಣ–ಉದ್ಯೋಗ ಅವಕಾಶ – ಇವುಗಳು ಇರುವ ಒಂದು ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿ ಆ ಅಂಶ ಎಂದು ಅಧ್ಯಯನ ತಿಳಿಸುತ್ತದೆ.
ಪ್ರತಿ ಒಲಿಂಪಿಕ್ಸ್ ಮುಗಿಯುವ ಹೊತ್ತಿಗೆ ಭಾರತದ ಎದುರು ಹಲವು ಪ್ರಶ್ನೆಗಳು ಎದುರಾಗುತ್ತವೆ. ಒಲಿಂಪಿಕ್ಸ್ ನಲ್ಲಿ ಶತಕೋಟಿ+ ಜನಸಂಖ್ಯೆ ಇರುವ ನಮ್ಮ ದೇಶದ ಸಾಧನೆ ಇಷ್ಟು ಯಾಕೆ ಕಳಪೆಯಾಗಿರುತ್ತದೆ. ಎಲ್ಲದರಲ್ಲೂ ವಿಶ್ವಗುರು ಆಗುವ ಆಕಾಂಕ್ಷೆ ಇರುವ 5 ಟ್ರಿಲಿಯನ್ ಆರ್ಥಿಕತೆಯ ಕನಸು ಕಾಣುತ್ತಿರುವ ನಾವು ನಮ್ಮ ಒಲಿಂಪಿಕ್ಸ್ ಪದಕಗಳು ಎರಡಂಕಿ ತಲುಪಬೇಕು ಎಂಬ ಕನಸಾದರೂ ಕಾಣುವುದು ಬೇಡವೇ? ನಿಧಾನವಾಗಿಯಾದರೂ ಪದಕಗಳ ಸಂಖ್ಯೆ ಯಾಕೆ ಏರುತ್ತಿಲ್ಲ? ಇದಕ್ಕೆ ನಿರ್ದಿಷ್ಟ ಕಾರಣಗಳೇನು? ಇದಕ್ಕೆ ಪರಿಹಾರಗಳೇನು? ಈ ಬಗ್ಗೆ ನಾವು ಯೋಚಿಸುತ್ತಿದ್ದೆವಾ? ಕ್ರಮ ಕೈಗೊಳ್ಳುತ್ತಿದ್ದೆವಾ? ಇಲ್ಲ ಎನ್ನುತ್ತಾರೆ, ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು, ತರಬೇತಿದಾರರು ಮತ್ತು ಪ್ರಾಮಾಣಿಕ (ಈ ವಿಶೇಷಣ ಬೇಕು, ಈ ಕುರಿತು ವಿವರಗಳು ಅ ಮೇಲೆ) ಕ್ರೀಡಾ ಅಧಿಕಾರಿಗಳು ಆಡಳಿತಗಾರರು. ಒಲಿಂಪಿಕ್ಸ್ ಪಂದ್ಯಗಳು ನಡೆಯುತ್ತಿರುವಾಗ ಮಾಧ್ಯಮಗಳಲ್ಲಿ ಸಾರ್ವಜನಿಕರಲ್ಲಿ ಎಲ್ಲೆಡೆ ಚರ್ಚೆ ನಡೆಯುತ್ತದೆ. ಆ ಮೇಲೆ ಎಲ್ಲರೂ ಮರೆತು ಬಿಡುತ್ತಾರೆ, ಮುಂದಿನ ಒಲಿಂಪಿಕ್ಸ್ ಬರುವವರೆಗೆ.
ಈ ಒಲಿಂಪಿಕ್ಸ್ ನಲ್ಲಿ ನಮ್ಮ ಸಾಧನೆ ಯಾವುದಾದರೂ ಆಯಾಮದಲ್ಲಿ ‘ಪ್ರಗತಿ’ ಕಂಡಿದೆಯೇ? ಭಾರತ ಒಲಿಂಪಿಕ್ಸ್ ನಲ್ಲಿ ಪ್ರತ್ಯೇಕ ದೇಶವಾಗಿ ಪಾಲುಗೊಳ್ಳಲು ಆರಂಭವಾಗಿನಿಂದ ಹೆಚ್ಚಾಗಿ 1 ಪದಕಕ್ಕೆ ಸೀಮಿತವಾಗಿದೆ. 3 ಬಾರಿ (1900, 1952, 2016) ಮಾತ್ರ 2 ಪದಕಗಳು, 1 ಬಾರಿ (2008) ಮಾತ್ರ 3 ಪದಕಗಳು ಬಂದಿವೆ. 2012ರಲ್ಲಿ ಪಡೆದ 6 ಪದಕಗಳು ಭಾರತ ಗಳಿಸಿದ ಅತ್ಯಧಿಕ ಪದಕಗಳು. ಈ ಬಾರಿ 1 ಚಿನ್ನ ಪದಕ ಸೇರಿದಂತೆ 7 ಪದಕಗಳೊಂದಿಗೆ ಪ್ರಗತಿಯಾಗಿದೆ ಎನ್ನಬಹುದು.
https://en.wikipedia.org/wiki/India_at_the_Olympics
ಈ ವರೆಗಿನ ಎಲ್ಲ ಒಲಿಂಪಿಕ್ಸ್ ಸೇರಿಸಿದರೆ ಒಟ್ಟು 10 ಬಾರಿ ಚಿನ್ನ ಪದಕ ಗೆದ್ದಿದೆ. ಇದರಲ್ಲಿ 8 ಬಾರಿ (1928ರಿಂದ 1956 ವರೆಗೆ ಸತತ 6 ಬಾರಿ, 1960, 1980) ಗೆದ್ದಿದ್ದು ಪುರುಷರ ಹಾಕಿ ತಂಡ. 2008ರಲ್ಲಿ ಅಭಿನವ ಬಿಂದ್ರಾ ಶೂಟಿಂಗ್ ನಲ್ಲಿ ಮತ್ತು ಈ ಬಾರಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ದಲ್ಲಿ ಚಿನ್ನ ಗೆದ್ದಿದ್ದಾರೆ. ಕ್ರೀಡೆ ಅಥವಾ ಆಟೋಟ ಎನ್ನುವಾಗ ಎರಡು ಭಾಗಗಳಿವೆ. ಆಟ (ಗೇಮ್ಸ್) ಮತ್ತು ಓಟ(ಸ್ಪೋರ್ಟ್ಸ್) – ಈ ಎರಡು ವಿಭಾಗಗಳಲ್ಲಿ ಆಟದಲ್ಲಿ (ಹಾಕಿ, ಬ್ಯಾಡ್ಮಿಂಟನ್, ಟೆನ್ನಿಸ್) ಮಾತ್ರ ಭಾರತ ಸ್ವಲ್ಪ ಮಟ್ಟಿಗಾದರೂ ಪೈಪೋಟಿಯಲ್ಲಿ ಇರುತ್ತಿತ್ತು. ಇತ್ತೀಚಿನ ವರೆಗೆ ಓಟದಲ್ಲಿ ಪೈಪೋಟಿಯಲ್ಲೇ ಇರುತ್ತಿರಲಿಲ್ಲ. ಆದರೆ 2000ದಿಂದ 2016 ವರೆಗೆ ಸಿಂಧು ಬ್ಯಾಡ್ಮಿಂಟನ್ ಪದಕ ಬಿಟ್ಟರೆ ಎಲ್ಲ ಪದಕಗಳು ಓಟಗಳಿಗೆ (ಕುಸ್ತಿ, ಓಟ, ಭಾರ ಎತ್ತುವಿಕೆ, ಶೂಟಿಂಗ್, ಇತ್ಯಾದಿ) ಬಂದಿವೆ. ಇತರ ಹಲವು ಓಟಗಳಲ್ಲಿ 4 ನೇ ಸ್ಥಾನದವರೆಗೆ ತಲುಪಿದ್ದರು ಎನ್ನುವುದು ಸ್ವಲ್ಪ ಮಟ್ಟಿನ ಪ್ರಗತಿ.
ಜಿಡಿಪಿ, ತಲಾ ಜಿಡಿಪಿ ಸಾಧನೆಯ ಮುಖ್ಯ ಅಂಶವಾ?
ಈಗ ಇತರ ದೇಶಗಳಿಗೆ ಹೋಲಿಸಿ ನೋಡಿದರೆ ಭಾರತದ ಸಾಧನೆ ಏನು? ಒಲಿಂಪಿಕ್ಸ್ ಪದಕಗಳ ಆಧಾರದ (ಚಿನ್ನ, ಬೆಳ್ಳಿ, ಕಂಚು – ಬೇರೆ ಭಾರ ಹೊಂದಿರುತ್ತವೆ) ಮೇಲೆ ರ‍್ಯಾಂಕ್ ಮಾಡಲಾಗುತ್ತದೆ. 2016ರಲ್ಲಿ ಭಾರತ 67ನೇ ರ‍್ಯಾಂಕ್ ನಲ್ಲಿತ್ತು. ಆದರೆ 2012ರಲ್ಲಿ 6 ಪದಕಗಳೊಂದಿಗೆ (2 ಬೆಳ್ಳಿ, 4 ಕಂಚು) ಭಾರತ 57ನೇ ರ‍್ಯಾಂಕ್ ಪಡೆದಿತ್ತು. ಈ ಬಾರಿ 48ನೇ ರ‍್ಯಾಂಕಿಗೆ ಏರಿದೆ. ಹಿಂದಿನದ್ದಕ್ಕೆ ಹೋಲಿಸಿದರೆ ಉತ್ತಮ ಪ್ರಗತಿಯೇ.
https://en.wikipedia.org/wiki/2020_Summer_Olympics_medal_table#Medal_table
ಇನ್ನೂ ಪದಕ-ಜನಸಂಖ್ಯೆ(ಜನಸಂಖ್ಯೆಯನ್ನು ಪದಕಗಳ ಸಂಖ್ಯೆಯಿಂದ ಭಾಗಿಸಿದರೆ ಬರುವ ಸಂಖ್ಯೆ) ಯಲ್ಲಿ ಈ ಬಾರಿಯೂ ಸೇರಿದಂತೆ (93ನೇ ಸ್ಥಾನ) ಯಾವತ್ತೂ ಕೊನೆ ಸ್ಥಾನದಲ್ಲಿರುತ್ತದೆ. ಇದು ದೊಡ್ಡ ಮಾನದಂಡವಲ್ಲ. ಈ ಸೂಚಕವು, ಪದಕಗಳ ಸಂಖ್ಯೆ ಸೀಮಿತವಿರುವುದರಿಂದ ದೊಡ್ಡ ಜನಸಂಖ್ಯೆ ಇರುವ ದೇಶಗಳಿಗೆ ಪ್ರತಿಕೂಲವಾಗಿರುತ್ತದೆ. ಆದರೂ ಸತತವಾಗಿ ಕೊನೆಯ ಸ್ಥಾನ ಸ್ವೀಕಾರಾರ್ಹವೂ ಅಲ್ಲ, ಅನಿವಾರ್ಯವೂ ಅಲ್ಲ. ಉದಾಹರಣೆಗೆ ಭಾರತಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಚೀನಾ 78 ನೇ ಸ್ಥಾನದಲ್ಲಿದೆ. ಸಾಕಷ್ಟು ಜನಸಂಖ್ಯೆ ಇರುವ ಅಮೆರಿಕ 59ನೇ, ಬ್ರೆಜಿಲ್ 72ನೇ ಸ್ಥಾನದಲ್ಲಿದೆ.
https://www.medalspercapita.com/
ಪದಕಗಳ ಗೆಲುವಿನಲ್ಲಿ ಯಾವುದು ಎಷ್ಟು ಪಾತ್ರ ವಹಿಸುತ್ತದೆ ಎಂದು ಹಲವು ಅಧ್ಯಯನ ಸಂಸ್ಥೆಗಳು ಈ ವರೆಗಿನ ಎಲ್ಲ ದೇಶಗಳು ಗೆದ್ದ ಪದಕಗಳು, ಹಲವು ಆಯಾಮಗಳಲ್ಲಿ ಆಯಾ ದೇಶಗಳ ವಿಶಿಷ್ಟತೆಗಳ ಜತೆ ಇಟ್ಟುಕೊಂಡು ವಿಶ್ಲೇಷಣೆ ನಡೆಸಿದ್ದಾರೆ. ಜಿಡಿಪಿ, ತಲಾ ಜಿಡಿಪಿ ಒಂದು ಅಂಶವೇ ಎಂದು ಈ ಅಧ್ಯಯನಗಳು ವಿಶ್ಲೇಷಿಸಿವೆ.
2020 ಅಂತಿಮ ಪದಕ ಪಟ್ಟಿಯೊಂದಿಗೆ ಅತಿ ಹೆಚ್ಚು ಜಿಡಿಪಿಯ 10 ದೇಶಗಳನ್ನು ಹೋಲಿಸಿದರೆ 7 ದೇಶಗಳು ಮಾತ್ರ ಎರಡೂ ಪಟ್ಟಿಯಲ್ಲಿವೆ. ಆದರೆ ಟಾಪ್ 10 ಜಿಡಿಪಿ ಪಟ್ಟಿಯಲ್ಲಿರುವ 3 ದೇಶಗಳು – ಭಾರತ, ಬ್ರೆಜಿಲ್, ಕೆನಡಾ, ಟಾಪ್ 10 ಪದಕ ಪಟ್ಟಿಯಲ್ಲಿಲ್ಲ. ಟಾಪ್ 10 ಜಿಡಿಪಿ ಪಟ್ಟಿಯಲ್ಲಿ ಇಲ್ಲದ 3 ದೇಶಗಳು – ಆಸ್ಟ್ರೇಲಿಯಾ, ಹಾಲಂಡ್ ಮತ್ತು ರಶ್ಯಾ – ಟಾಪ್ 10 ಪದಕ ಪಟ್ಟಿಯಲ್ಲಿವೆ. ತಲಾ ಜಿಡಿಪಿಯ ಟಾಪ್ 10 ಪಟ್ಟಿಯಲ್ಲಿರುವ ಎರಡು ದೇಶಗಳು ಮಾತ್ರ (ಅಮೆರಿಕ ಮತ್ತು ಆಸ್ಟ್ರೇಲಿಯಾ) ಟಾಪ್ 10 ಪದಕದ ಪಟ್ಟಿಯಲ್ಲಿವೆ. ಇನ್ನೂ ಕೆಳಗಿನ ಸ್ಥಾನಗಳಿಗೆ ಹೋದರೆ ಇದು ಇನ್ನಷ್ಟು ಗೋಜಲಾಗುತ್ತದೆ. ಮುಂದಿನ 10 (2020ರ 11ರಿಂದ 21) ಸ್ಥಾನಗಳಿಗೆ ಹೋದರೆ ಕೆನ್ಯಾ(19), ಜಮೈಕಾ (21), ದಂತಹ ಜಿಡಿಪಿ ತಲಾ ಜಿಡಿಪಿ, ಜೀನವಮಟ್ಟ, ಅಭಿವೃದ್ಧಿಯ ಹಂತದಲ್ಲೂ ಬಲು ದೂರ ಇರುವ ದೇಶಗಳು ಕಾಣಸಿಗುತ್ತವೆ. ಟಾಪ್ 10 ಜಿಡಿಪಿ ಪಟ್ಟಿಯಲ್ಲಿದ್ದು ಟಾಪ್ 10 ಪದಕ ಪಟ್ಟಿಯಲ್ಲಿ ಇಲ್ಲದ 3 ರಲ್ಲಿ 2 ದೇಶಗಳು ಬ್ರೆಜಿಲ್(12), ಕೆನಡಾ(11) ಇಲ್ಲಿ ಕಾಣಸಿಗುತ್ತವೆ. ಒಂದೇ ಅಪವಾದವೆಂದರೆ ಭಾರತ! ಇವೆಲ್ಲದರಿಂದ ವ್ಯಕ್ತವಾಗುವುದು ಎಂದರೆ ಭಾರತ ಕನಿಷ್ಟ 11ರಿಂದ 20 ಪಟ್ಟಿ ಯಲ್ಲಿರಬೇಕಾಗಿತ್ತು. ಒಟ್ಟಿಗೆ ಜಿಡಿಪಿ ಒಂದು ಅಂಶ ನಿಜ. ಆದರೆ ಹೆಚ್ಚಾಗಿ ದೇಶ ಕ್ರೀಡೆಗೆ ಹೂಡಿಕೆ ಮಾಡುವ ಸಾಮರ್ಥ್ಯದ ದೃಷ್ಟಿಯಿಂದ ಮಾತ್ರ ಎಂದು ಅಧ್ಯಯನ ಹೇಳುತ್ತದೆ.
ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿ
ಇನ್ನೊಂದು ಈ ಅಧ್ಯಯನ ಹೊರ ತಂದಿರುವ ಒಂದು ದೊಡ್ಡ ಅಂಶವೆಂದರೆ (ಹಾಲಿ ಅಥವಾ ಮಾಜಿ) ಸಮಾಜವಾದಿ ದೇಶಗಳು ಬೇರೆ ಸಮಾನಾರ್ಥಕ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಮಟ್ಟ ಇರುವ ದೇಶಗಳಿಗಿಂತ ಪದಕ ಗಳಿಕೆಯಲ್ಲಿ ಮುಂದಿವೆ. ಚೀನಾ(2), ರಶ್ಯಾ (5) ಟಾಪ್ 10 ನಲ್ಲಿವೆ. ಮುಂದಿನ ಹಂತಗಳಲ್ಲಿ ಕ್ಯೂಬಾ(14), ಹಂಗರಿ (15), ಪೋಲೆಂಡ್ (17), ಚೆಕ್ ಗಣತಂತ್ರ(18), ಕ್ರೋಶಿಯಾ(26), ಸರ್ಬಿಯ (28), ಬಲ್ಗೇರಿಯ(30), ಉಜ್ಬೆಕಿಸ್ತಾನ (32), ಜಾರ್ಜಿಯ(33), ಕೊಸೊವೊ(42), ಉಕ್ರೇನ್ (44), ಬೆಲರಸ್ (45), ರೊಮಾನಿಯಾ(46), ಸ್ಲೊವಾಕಿಯಾ(50) ಇವೆ. ಇವುಗಳಲ್ಲಿ ಕೆಲವು ಬಾಹ್ಯ ದಾಳಿ, ದಿಗ್ಬಂಧನಗಳು, ಆಂತರಿಕ ಯುದ್ಧಗಳನ್ನೂ ಕಂಡಿವೆ. ಬೆರಳೆಣಿಕೆಯ ಕೆಲವು ಹಾಲಿ-ಮಾಜಿ ಸಮಾಜವಾದಿ ದೇಶಗಳನ್ನು ಬಿಟ್ಟರೆ ಎಲ್ಲ ದೇಶಗಳು ಟಾಪ್ 50ರೊಳಗಿವೆ. ಹೆಚ್ಚಿನ ಈ ದೇಶಗಳು ಇನ್ನೂ ಮೇಲಿನ (ಸಕ್ರಿಯ ಸಮಾಜವಾದಿ ದೇಶವಾಗಿದ್ದಾಗ ಹೆಚ್ಚಾಗಿ ಟಾಪ್-30ರೊಳಗಿನ) ಸ್ಥಾನದಲ್ಲಿದ್ದವು. ಆ ಮೇಲೆ ಸಮಸ್ಯೆ/ಸವಾಲುಗಳಿಂದ ಸ್ವಲ್ಪ ಕೆಳಕ್ಕೆ ಬಂದಿವೆ.
ಇವೆಲ್ಲದಕ್ಕೂ ಸಮಾಜವಾದಿ ವ್ಯವಸ್ಥೆ ಸಾಮಾನ್ಯ ಅಂಶವಾಗಿದ್ದರೂ ಆ ವ್ಯವಸ್ಥೆಯ ಯಾವ ಅಂಶಗಳು ಪದಕ ಪಟ್ಟಿಯಲ್ಲಿ ಮೇಲಿರಲು ಸಹಾಯಕವಾಗಿವೆ ಎಂದು ತಿಳಿಯಲು ಈ ಅಧ್ಯಯನ ಪ್ರಯತ್ನಿಸಿದೆ. ಶಾಲಾ ಪೂರ್ವ ಹಂತದಿಂದ ವಿ.ವಿ. ವರೆಗೆ ಆಟೋಟಗಳು ಶಿಕ್ಷಣದ ಭಾಗವಾಗಿರುವುದು, ಪ್ರತಿ ಹಂತದಲ್ಲೂ (ಶಾಲಾ, ಅಂತರ-ಶಾಲಾ, ಜಿಲ್ಲಾ, ರಾಜ್ಯ, ರಾಷ್ಟ್ರೀಯ) ಕ್ರೀಡಾ ಸ್ಪರ್ಧೆಗಳು, ಆಟೋಟಗಳಲ್ಲಿ ಉತ್ತಮ ಪ್ರಗತಿ ತೋರಿಸಿದವರಿಗೆ ಉತ್ತೇಜನ, ಇಂತಹವರಿಗೆ ವಿಶೇಷ ಗೌರವ ಮತ್ತು ತರಬೇತಿ, ರಾಷ್ಟ್ರೀಯ ಆಟಗಳ ವಿಜೇತರಿಗೆ ಅಂತರ‍್ರಾಷ್ಟ್ರೀಯ ಸ್ಪರ್ಧೆಗೆ ಆಟೋಟಗಳಲ್ಲಿ ಸ್ಪರ್ಧಿಸಲು ವಿಶೇಷ ತರಬೇತಿ ಉತ್ತೇಜನ, ಕ್ರೀಡಾ ವೃತ್ತಿ ಜೀವನದಿಂದ ನಿವೃತ್ತಿಯ ನಂತರ ವಿಶೇಷ ಶಿಕ್ಷಣ-ಉದ್ಯೋಗ ಅವಕಾಶ – ಇವುಗಳು ಇರುವ ಒಂದು ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿ ಆ ಅಂಶ ಎಂದು ಅಧ್ಯಯನ ತಿಳಿಸುತ್ತದೆ.
ಇದಕ್ಕೆ ಬೇಕಾದ ಎಲ್ಲ ಸಂಪನ್ಮೂಲಗಳನ್ನು ಸರಕಾರವೇ ಒದಗಿಸಿ ಅದರ ಜಾರಿಯ ಮೇಲೆ ನಿಗಾ ಇಡುತ್ತಿತ್ತು. ರಶ್ಯಾ, ಚೀನಾ ಹಂತ ಹಂತವಾಗಿ ಎಲ್ಲ ಅಟೋಟಗಳನ್ನು ಆಯ್ದುಕೊಂಡರೆ ಸಣ್ಣ, ಮಧ್ಯಮ ದೇಶಗಳು ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ಕೆಲವನ್ನು ಆಯ್ಕೆ ಮಾಡಿಕೊಂಡು ಅವುಗಳ ಮೇಲೆ ಹೆಚ್ಚಿನ ಒತ್ತು ಕೊಟ್ಟವು. ಆಯ್ದುಕೊಂಡ ಆಟೋಟಗಳನ್ನು ರಾಷ್ಟ್ರೀಯವಾಗಿ ವ್ಯಾಪಕವಾಗಿ ಜನಪ್ರಿಯವಾಗಿಸುವುದು ಆಡುವುದು ಮುಖ್ಯ. ಈ ಆಧಾರ (ಅಂದರೆ ಕ್ಯಾಚ್ ಮೆಂಟ್ ಏರಿಯಾ) ವ್ಯಾಪಕವಾದಷ್ಟು ಅತ್ಯುತ್ತಮ ರಾಷ್ಟ್ರೀಯ ಹಂತದ ಆಟಗಾರರು ಹೊಮ್ಮುವುದು ಸಾಧ್ಯ. ಇದರ ಜೊತೆಗೆ ಎರಡನೆಯ ಮಹಾಯುದ್ಧದ ನಂತರದ ಸ್ಥಿತಿಯಲ್ಲಿ ಸಮಾಜವಾದಿ ದೇಶಗಳ ಜನತೆಯಲ್ಲಿ ಬಂಡವಾಳಶಾಹಿ ದೇಶಗಳನ್ನು ಮೀರಿಸಬೇಕು ಎನ್ನುವ ರಾಷ್ಟ್ರೀಯ ಪ್ರಜ್ಞೆ ಮತ್ತು ಛಲದ ರಾಜಕೀಯ ನಾಯಕತ್ವ ಸಹ ಸಹಾಯಕವಾಗಿರಬೇಕು.
ದೇಶದ ಪರಿಸ್ಥಿತಿಗೆ ಅನುಗುಣವಾಗಿ ಈ ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಆಟೋಟಗಳ ಅಯ್ಕೆ ಬಹಳ ಮುಖ್ಯ ಎಂದು ಅಧ್ಯಯನ ತಿಳಿಸುತ್ತದೆ. ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿ ಸಮಾಜವಾದಿ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ ಎಂದು ತಿಳಿಯಬೇಕಾಗಿಲ್ಲ, ಎಂದು ಅಧ್ಯಯನ ಹೇಳುತ್ತದೆ. ಸುಮಾರಾಗಿ ಇದೇ ನೀತಿಯನ್ನು ಹೆಚ್ಚಿನ ಅಭಿವೃದ್ಧ ಬಂಡವಾಳಶಾಹಿ ದೇಶಗಳಲ್ಲೂ ಅಂಗೀಕರಿಸಿದ್ದು (ಸ್ವಲ್ಪ ಮಟ್ಟಿಗೆ ಅದು 50-80 ರ ದಶಕದ ವರೆಗೆ ಸಮಾಜವಾದಿ ದೇಶಗಳಿಂದ ತೀವ್ರ ಪೈಪೋಟಿಯಿಂದಾಗಿ ಎಂಬುದೂ ನಿಜ) ಅಂತಹುದೇ ವ್ಯವಸ್ಥೆ ಇದೆ. ಹೈಸ್ಕೂಲ್ ವರೆಗೆ ಶಾಲಾ ಶಿಕ್ಷಣದಲ್ಲಿ ಸಾರ್ವತ್ರಿಕವಾಗಿ ಮತ್ತು ಸರಕಾರಿ ಕಾಲೇಜು ವಿವಿಗಳಲ್ಲಿ ಈ ನೀತಿಗೆ ಬೇಕಾದ ಸಂಪನ್ಮೂಲಗಳನ್ನು ಸರಕಾರವೇ ಒದಗಿಸುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಸಹ ಆ ಸಂಸ್ಥೆಗಳು ಅಥವಾ ಖಾಸಗಿ ಪ್ರಾಯೋಜಕರು ಬೇಕಾದ ಸಂಪನ್ಮೂಲಗಳನ್ನು ಒದಗಿಸುತ್ತಾರೆ. 50ರ ದಶಕದಿಂದ ಒಲಿಂಪಿಕ್ಸ್ ನಲ್ಲಿ ಸಮಾಜವಾದಿ ಬಣದ ಸವಾಲಿನಿಂದಾಗಿ, 90ರ ದಶಕದಿಂದ ಚೀನಾದ ಸವಾಲಿನಿಂದಾಗಿ ಈ ದೇಶಗಳಲ್ಲೂ ರಾಷ್ಟ್ರೀಯ ಪ್ರಜ್ಞೆ ಮತ್ತು ಛಲದ ಅಂಶ ಸಹ ಇದೆ ಎನ್ನಬಹುದು.
ಒಟ್ಟಾರೆ ಇದರರ್ಥ ಸಮಾಜವಾದಿ ದೇಶವಾಗದೆ ಒಲಿಂಪಿಕ್ಸ್ ಪದಕಗಳಲ್ಲಿ ಕಳಪೆ ಸಾಧನೆ ಮುಂದುವರೆಯುವುದು ಅನಿವಾರ್ಯ ಅಂದುಕೊಳ್ಳಬೇಕಾಗಿಲ್ಲ. ಬಹಳಷ್ಟು ಪ್ರಗತಿ ಸಾಧಿಸಬಹುದು ಎಂಬುದನ್ನು ಇತರ ದೇಶಗಳ ಅನುಭವದಿಂದ ತಿಳಿಯಬಹುದು. ಪ್ರಮುಖವಾಗಿ ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿ ರೂಪಿಸಿ ಜಾರಿಗೆ ತರಬೇಕು. ಇದಕ್ಕೆ ಏನು ತೊಡಕುಗಳಿವೆ?
ಕ್ಯಾಚ್ ಮೆಂಟ್ ಏರಿಯಾ ವಿಸ್ತಾರ
ಈಗ ಸರಕಾರ, ಕ್ರೀಡಾ ಇಲಾಖೆ, ಮಾಧ್ಯಮಗಳು, ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಜನತೆಯ– ಇವರೆಲ್ಲ ಕ್ರಿಕೆಟ್ ಗೆ ತೋರುವ ವಿಶೇಷ ಮಮತೆ ಇತರ ಎಲ್ಲ ಆಟೋಟಗಳಿಗೆ ಮಲತಾಯಿ ಧೋರಣೆಯಾಗಿ ಪರಿಣಮಿಸಿದೆ. (ಸಂಪನ್ಮೂಲಗಳ ಸಿಂಹಪಾಲು ನುಂಗುವ ಕ್ರಿಕೆಟ್ ಒಲಿಂಪಿಕ್ಸ್ ನಲ್ಲಿ ಇಲ್ಲ!) ಇತರ ಆಟೋಟಗಳಿಗೆ ಮಾಡಬೇಕಾದ ಸಂಪನ್ಮೂಲ ಹೂಡಿಕೆ, ಉತ್ತೇಜನ ಸಿಗುತ್ತಿಲ್ಲ. ಹಿಂದಿನಿಂದಲೂ ಒಲಿಂಪಿಕ್ಸ್ ಪದಕಕ್ಕೆ (ಮಾತ್ರವಲ್ಲ ಏಶ್ಯನ್ ಕ್ರೀಡೆ, ಜಾಗತಿಕ ಹಾಕಿ ಸ್ಪರ್ಧೆಗಳಲ್ಲಿ) ಸಹಜ ಸೋಪಾನವಾಗಿದ್ದ ಹಾಕಿಯ ರಾಷ್ಟ್ರೀಯ ತಂಡದ ಖರ್ಚನ್ನು ರಾಷ್ಟ್ರೀಯ ಸರಕಾರ ವಹಿಸಿಕೊಳ್ಳುವುದಿಲ್ಲ. ಒಂದು ರಾಜ್ಯದ ತಲೆಗೆ ಕಟ್ಟಿದೆ. ಪದಕ ಗೆದ್ದಾಗ ಮಾತ್ರ ಅದರ ಕುರಿತು ಒಂದು ಪೈಸಾ ಖರ್ಚು ಮಾಡದ ಪ್ರಧಾನಿ ಫೋನ್ ಮಾಡುವ ಉತ್ತೇಜನ ಸಾಕೆ? ಎಲ್ಲ ಸಂಪನ್ಮೂಲಗಳನ್ನು ಕೇಂದ್ರೀಕರಿಸಿಕೊಂಡಿರುವ ಕೇಂದ್ರ ಸರಕಾರವು, ಅಂತರ‍್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಯಾದ ರಾಷ್ಟ್ರೀಯ ಕ್ರೀಡಾಪಟುಗಳ ಮತ್ತು ತಂಡಗಳ ತರಬೇತಿ, ನಿರ್ವಹಣೆ ಮತ್ತು ಎಲ್ಲ ವೆಚ್ಚಗಳನ್ನು ವಹಿಸಿಕೊಳ್ಳಬೇಕು. ಇದು ಹೆಚ್ಚಿನ ಆಟ (ಫುಟ್‌ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ವಾಲಿಬಾಲ್) ಗಳು ಮತ್ತು ಓಟಗಳಿಗೆ ಅನ್ವಯ ಆಗಬೇಕು. ಈಗ ಇರುವ ಕ್ರೀಡಾ ಆಡಳಿತ ವ್ಯವಸ್ಥೆಯಲ್ಲಿ ಅತಿ ರಾಜಕೀಯಕರಣ, ಅತಿ ಕೇಂದ್ರೀಕರಣ, ಅಧಿಕಾರಶಾಹಿ, ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅವು ಈ ಆಟೋಟಗಳ ಉತ್ತೇಜನ, ಬೆಳವಣಿಗೆಯಲ್ಲಿ ಯಾವುದೇ ಮುಖ್ಯ ಪಾತ್ರ ವಹಿಸುತ್ತಿಲ್ಲ. ಪ್ರಮುಖವಾಗಿ ಈ ಹಾಕಿ ಫೆಡರೇಶನ್, ಫುಟ್‌ಬಾಲ್ ಫೆಡರೇಶನ್ ಮುಂತಾದವು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಇವೆ. ಇವು ರಾಜ್ಯ, ಜಿಲ್ಲೆ, ತಾಲೂಕು, ಸ್ಥಳೀಯ ಮಟ್ಟಗಳಲ್ಲಿ ಈ ಆಟೋಟಗಳನ್ನು ಉತ್ತೇಜನ, ಬೆಳವಣಿಗೆ ಮಾಡದೆ, ಕ್ಯಾಚ್ ಮೆಂಟ್ ಏರಿಯಾ ವಿಸ್ತಾರ ಮಾಡದೆ, ಎಲ್ಲ ಹಂತಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸದೆ, ಅಂತರ‍್ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಆಟಗಾರರನ್ನು ಪಡೆಯುವುದು ಸಾಧ್ಯವಿಲ್ಲ. ಈ ಎಲ್ಲಾ ಕ್ರೀಡಾ ಸಂಸ್ಥೆಗಳಲ್ಲಿ ಪ್ರಾಮಾಣಿಕ ಮಾಜಿ ಕ್ರೀಡಾಪಟುಗಳು, ಕೋಚ್ ಗಳು, ದಕ್ಷ ಆಡಳಿತಗಾರರನ್ನು ತರುವುದು ಮತ್ತು ಕೆಳ ಹಂತಗಳಿಗೆ ವಿಸ್ತರಿಸುವುದು ಅಗತ್ಯ.
1950-80ರ ದಶಕದ ವರೆಗೆ ಸಾರ್ವಜನಿಕ ಉದ್ಯಮಗಳು, ರೈಲ್ವೇ, ಕೆಲವು ದೊಡ್ಡ ಖಾಸಗಿ (ಟಾಟಾ ಇತ್ಯಾದಿ) ಉದ್ಯಮಗಳು ಆಟೋಟಗಳಿಗೆ ಪೂರ್ಣ ಉತ್ತೇಜನ ಕೊಟ್ಟವು. ಶಿಕ್ಷಣದಲ್ಲಿ ಅಥವಾ ಉದ್ಯಮದ ಒಳಗಿನ ಸ್ಪರ್ಧೆಗಳಲ್ಲಿ ಉತ್ತಮ ಪ್ರತಿಭೆ ತೋರಿದವರನ್ನು ಆಯ್ಕೆ ಮಾಡಿ ಉದ್ಯೋಗ ಭದ್ರತೆ ಕೊಟ್ಟು ಉತ್ತೇಜನ ಕೊಟ್ಟರು. ರಾಷ್ಟ್ರೀಯ ಕ್ರೀಡಾಪಟುಗಳು, ತಂಡದ ಸದಸ್ಯರು ಇಂತಹ ಉದ್ಯಮಗಳಿಂದ ಬಂದವರೇ ಹೆಚ್ಚಿಗಿದ್ದರು. ಈ ಉದ್ಯಮಗಳೇ ಸಂಪನ್ಮೂಲ ಕೊರತೆ, ಉದ್ಯೋಗ ನಷ್ಟಗಳಿಂದಾಗಿ ಇದು ಸಹ ಕುಂಠಿತವಾಗುತ್ತಾ ಬಂದಿದೆ. ಆದರೆ ಇದು ಚೆನ್ನಾಗಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಸಹ ನಮ್ಮ ಆಟೋಟಗಳ ಕ್ಯಾಚ್ ಮೆಂಟ್ ಏರಿಯಾ ಸೀಮಿತವಾಗೇ ಇತ್ತು. ಉಳಿದ ಇತ್ತೀಚಿನ ವೈಯಕ್ತಿಕ ಪದಕ ವಿಜೇತರು ತಮ್ಮದೇ ಆಸಕ್ತಿ, ಹೂಡಿಕೆ ಮಾಡಿ (ಉದಾ: ಬಿಂದ್ರಾ, ಸಿಂಧು) ಅಥವಾ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಸ್ವಂತ ಆಸಕ್ತಿಯಿಂದ ತರಬೇತಿ ಪಡೆದು ಸಾಧನೆ ಮಾಡಿದವರು ಎಂದು ಗಮನಿಸಬೇಕು.
ಕ್ರೀಡೆ ಒಳಗೊಂಡ ಸಮಾನ ಉಚಿತ ಸಾರ್ವತ್ರಿಕ ಶಾಲಾ ಶಿಕ್ಷಣ
ಸರಕಾರದ, ಸಮಾಜದ ಪಾತ್ರ ಹೆಚ್ಚೇನಿಲ್ಲ. ಪದಕ ಗೆದ್ದಾಗ ದೊಡ್ಡ ಮೊತ್ತದ ಬಹುಮಾನ ಘೋಷಿಸುವುದು ಮಾತ್ರ ತಮ್ಮ ಜವಾಬ್ದಾರಿ ಎಂದು ಕೇಂದ್ರ/ರಾಜ್ಯ ಸರಕಾರಗಳು ತಿಳಿದಂತಿವೆ. ಇದು ಮೂರ್ಖತನದ ಪರಮಾವಧಿ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಕ್ರೀಡಾ ಬಜೆಟ್ ತೀರಾ ಅಲ್ಪ. ಅದರಲ್ಲೂ ಒಲಿಂಪಿಕ್ಸ್ ವರ್ಷದಲ್ಲಿ ಸರಕಾರ ಶೇ.10ರಷ್ಟು ಕಡಿತ ಮಾಡಿತ್ತು. ನವ-ಉದಾರವಾದಿ ಧೋರಣೆ/ನೀತಿಯ ಪ್ರಕಾರ ಉತ್ತಮ ಪ್ರತಿಭೆ ಇರುವವರಿಗೆ ಖಾಸಗಿ ಪ್ರಾಯೋಜಕರು ಉತ್ತೇಜನ ಕೊಡುತ್ತಾರೆ ಎಂದು ಅವರು ಅಂದುಕೊಂಡಿದ್ದಾರೆ. ಆ ನೀತಿ ಮುಂದುವರೆದರೆ ಭಾರತ ಎರಡಂಕಿ ಪದಕಗಳನ್ನು ಮುಟ್ಟುವುದು ಕನಸಿನ ಮಾತೇ ಆದೀತು.
ಇದನ್ನು ವ್ಯಾಪಕಗೊಳಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಮೇಲೆ ಹೇಳಿದ ಸಮಗ್ರ ಕ್ರೀಡಾ ನೀತಿಯನ್ನು ಜಾರಿಗೆ ತರದೆ ಬೇರೆ ದಾರಿಯಿಲ್ಲ.ಇಲ್ಲೂ ಈಗ ನಮ್ಮ ಶಿಕ್ಷಣ ಸಂಸ್ಥೆಗಳ ಕ್ರೀಡಾ (ಏಕೆ ಯಾವುದೇ) ಮೂಲ ಸೌಕರ್ಯದ – ಆಟೋಟ ಉಪಕರಣಗಳು, ಮೈದಾನ, ತರಬೇತಿದಾರರು ಇತ್ಯಾದಿ – ದುಸ್ಥಿತಿಯು, ಶಾಲೆಯಲ್ಲಿರುವ ನಮ್ಮ ವಿದ್ಯಾರ್ಥಿಗಳ ದೊಡ್ಡ ವಿಭಾಗವನ್ನು ಕ್ರೀಡಾರಂಗದಿಂದ ವ್ಯವಸ್ಥಿತವಾಗಿ ಹೊರಗಿಡುತ್ತಿದೆ. ಬಡತನ, ಹಸಿವು, ಅಪೌಷ್ಟಿಕತೆಯಿಂದ ಇನ್ನೂ ದೊಡ್ಡ ವಿಭಾಗ ಹೊರಗುಳಿದಿದೆ. ಈ ಹೊರಗುಳಿಯುವಿಕೆಯನ್ನು ಹೋಗಲಾಡಿಸಲು ಕ್ರೀಡೆಯನ್ನು ಒಳಗೊಂಡ ಸಮಾನ ಉಚಿತ ಸಾರ್ವತ್ರಿಕ ಶಾಲಾ ಶಿಕ್ಷಣ ಇದಕ್ಕೆ ಅಗತ್ಯ. ಅದೇ ರೀತಿ ಅಂಗನವಾಡಿ, ಬಿಸಿಯೂಟ ಕಾರ್ಯಕ್ರಮ ಮುಂದಾವುಗಳ ಮೂಲಕ ಪೌಷ್ಟಿಕ ಆಹಾರ ದೊರಕಿಸುವ ಮೂಲಕ ಅವರ ಆರೋಗ್ಯಕಾರಿ ಬೆಳವಣಿಗೆ ಸಹ ಅತ್ಯಗತ್ಯ. ದೇಶದ ಅರ್ಧದಷ್ಟು ಮಕ್ಕಳು, ಯುವಜನ ಹಸಿವು, ಅಪೌಷ್ಟಿಕತೆಯಿಂದ ನರಳುತ್ತಿರುವವವರೆಗೆ ಭಾರತ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ‘ವಿಶ್ವಗುರು’ ಆಗುವುದು ಅಸಾಧ್ಯ ಎಂಬುದು ಸರ್ವವದಿತ.
ಜಾತಿ, ಅಸ್ಪೃಶ್ಯತೆ, ವರ್ಗ, ಬುಡಕಟ್ಟು, ಧರ್ಮ ಮುಂತಾದ ಕಾರಣಗಳಿಗೆ ಕ್ರೀಡಾರಂಗದಿಂದ ಹೊರಗುಳಿದಿರುವವರನ್ನು ತರಲು ವಿಶೇಷ ಪ್ರಯತ್ನ ಮಾಡಬೇಕು. ತಲೆತಲಾಂತರಗಳಿಂದ ಬಂದಿರುವ ಸಮಾಜದಲ್ಲಿ ಉಳಿದು ಬೆಳೆದಿರುವ ಈ ಹೊರಗುಳಿಯುವಿಕೆ ಹೋಗುವ ವರೆಗೆ ಕಾಯುವ ಅಗತ್ಯವಿಲ್ಲ. ಈಗಾಗಲೇ ಹಾಕಿ ತಂಡದ ಮತ್ತು ಓಟ ಸ್ಪರ್ಧೆಗಳಲ್ಲಿ ನಮ್ಮ ಆಟಗಾರರ ಸಾಮಾಜಿಕ ಸಂಯೋಜನೆ ನೋಡಿದರೆ, ಸರಕಾರ ಈ ವಿಶೇಷ ಪ್ರಯತ್ನ ಮಾಡದೆ ಸಹ ಹೊಟ್ಟೆ ಬಟ್ಟೆ ಕಟ್ಟಿ ಛಲದಿಂದ ತಳಮಟ್ಟದ ಸಮುದಾಯಗಳ ಯುವಜನರು ಮುನ್ನುಗ್ಗಿ ಬಂದಿದ್ದಾರೆ. ಇನ್ನು ಸರಕಾರ ವಿಶೇ಼ಷ ಪ್ರಯತ್ನ ಮಾಡಿದರೆ ಪರಿಸ್ಥಿತಿ ಹೇಗಾದೀತು?
ಅಮೆರಿಕ, ಪಶ್ಚಿಮ ಯುರೋಪಿನ ಅಭಿವೃದ್ಧ ಬಂಡವಾಳಶಾಹಿ ದೇಶಗಳಲ್ಲಿ ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಸಾಂಸ್ಥಿಕವಾಗಿ ಹೊರಗುಳಿದಿರುವ ಕರಿಯರು ಮತ್ತು ವಲಸೆಗಾರರನ್ನು ಕ್ರೀಡಾಪುಟಗಳ ಆಯ್ಕೆಯಲ್ಲಿ, ತರಬೇತಿಯಲ್ಲಿ ವಿಶೇಷ ಪ್ರಯತ್ನ ಮಾಡಿ ಸೇರಿಸಲಾಗಿದೆ. (ಈ ಕೆಲವು ಟೀಂಗಳು ಆಫ್ರಿಕನ್ ಟೀಂ ನಂತೆ ಕಾಣುವಷ್ಟು ಕರಿಯರನ್ನು ವಲಸಿಗರನ್ನು ಸೇರಿಸಿಕೊಳ್ಳಲಾಗಿದೆ) ಇದು ಅವರಿಗೆ ಒಲಿಂಪಿಕ್ಸ್ ಮತ್ತು ಅಂತರ‍್ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಅವರ ಸ್ಥಾನವನ್ನು ಉಳಿಸಿ, ಪೈಪೋಟಿಯನ್ನು ತೀವ್ರ ಗೊಳಿಸುವುದನ್ನು ಸಾಧ್ಯ ಮಾಡಿದೆ.
ಶಿಕ್ಷಣ ಪಡೆದ ಅಥವಾ ಅರೆಬರೆ ಪಡೆದ ಅಥವಾ ವಂಚಿತರಾದ, ಆದರೆ ಸದೃಢ ಕಾಯದ ಸಮರ್ಥ ಯುವಜನರನ್ನು ಕ್ರೀಡೆಯಲ್ಲಿ ತೊಡಗಿಸುವುದು ಸಾಧ್ಯವಾಗಬೇಕು. ಯುವಜನ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆಗಳಿಗೆ ಈ ಉದ್ದೇಶವಿದ್ದರೂ ಅವು ವಿಫಲವಾಗಿವೆ. ಅವನ್ನು ಸಕ್ರಿಯಗೊಳಿಸಬೇಕು. ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿಯ ಜಾರಿಗೆ ಒತ್ತಡ ತರಬೇಕು.
ಇದರರ್ಥ ಒಲಿಂಪಿಕ್ಸ್ ಪದಕ ಗೆಲ್ಲುವುದು ಅದರಷ್ಟಕ್ಕೆ ಮಹಾನ್ ಉದ್ದೇಶವೆಂದಲ್ಲ. ಆದರೆ ರಾಷ್ಟ್ರೀಯ ಕ್ರೀಡಾ ನೀತಿಯ ಜಾರಿಯ ಪ್ರಕ್ರಿಯೆಯೇ, ಆರೋಗ್ಯಕರ ಸದೃಢ ಸ್ವಾಭಿಮಾನಿ ಜನತೆಯ ಮತ್ತು ರಾಷ್ಟ್ರದ ನಿರ್ಮಾಣಕ್ಕೆ ನಾಂದಿಯಾದೀತು.