ಕುಣಿಗಲ್: ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಅಂಗವಾಗಿ ತಾಲ್ಲೂಕಿನಲ್ಲಿ ವಿವಿಧ ರೈತ-ಕಾರ್ಮಿಕ-ದಲಿತ ಸಂಘಟನೆಗಳು ಸೇರಿ ಭಾರತ್ ಬಂದ್ ಮಾಡಿದರು.
ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ರಾಜು ವೆಂಕಟಪ್ಪ ಮಾತನಾಡಿ ʻಸಬ್ಕಾ ಸಾತ್ ಸಬ್ಕಾ ವಿಕಾಸ್ ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ದೇಶದ ಜನರನ್ನು ಸರ್ವನಾಶ ಮಾಡಿದ್ದಾರೆ. ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿಗೆ ತಂದು ರೈತರ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ. ಹೊಸ ಶಿಕ್ಷಣ ನೀತಿ ತರಲು ಮುಂದಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆಯಲು ಮುಂದಾಗಿದ್ದಾರೆ. ಮಹಿಳೆಯರ ಅತ್ಯಾಚಾರವಾದಾಗ ಪ್ರಧಾನ ಮಂತ್ರಿಗಳು ತುಟಿ ಬಿಚ್ಚದೇ ಇರುವುದು ಅವರ ಮಹಿಳಾ ವಿರೋಧಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಲೆ ಏರಿಕೆಯಿಂದ ಇಂದು ದೇಶ ತತ್ತರಿಸುತ್ತಿದೆ. ಜನಗಳಿಗೆ ಕೊಳ್ಳುವ ಶಕ್ತಿಯೇ ಇಲ್ಲದಾಗಿದ್ದು, ಕಾರ್ಮಿಕರ ಬದುಕು ಉದ್ಯೋಗ ಭದ್ರತೆ ಇಲ್ಲದೆ ಸೊರಗುತ್ತಿದೆ. ಅಭದ್ರತೆ, ಅಪೌಷ್ಟಿಕತೆ, ನಿರುದ್ಯೋಗ, ಬಡತನ, ಅತ್ಯಾಚಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ಈ ಎಲ್ಲಾ ವಿದ್ಯಮಾನಗಳ ಆಧಾರದ ಮೇಲೆ ಭಾರತ್ ಬಂದ್ ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದರು.
ದಲಿತ ಹಕ್ಕುಗಳ ಸಮಿತಿಯ ಸಹ ಸಂಚಾಲಕರಾದ ಯಲಿಯೂರು ಶ್ರೀನಿವಾಸ್, ರಾಜು ತುವ್ವೇಕೆರೆ, ಶ್ರೀನಿವಾಸ್ ಕಗ್ಗೆರೆ, ಶ್ರೀನಿವಾಸ್ ಲಾಳಾಪುರ, ಗೌರಮ್ಮ, ದೇವರಾಜು ನಡೆಮಾವಿನಪುರ ಮತ್ತಿತರರು ಭಾಗವಹಿಸಿದ್ದರು.