ನವಂಬರ್ 2022 ರಲ್ಲಿ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ 5 ಕೋಟಿ ದಾಟಿದೆ. ಈ ಮೊದಲು ಕೋವಿಡ್ ಕಾಲದಲ್ಲಿ ಲಾಕ್‌ಡೌನುಗಳು ಇತ್ಯಾದಿಗಳನ್ನು ಕಂಡ ಸಮಯದಲ್ಲಿ ಇದು 5.3 ಕೋಟಿಗೇರಿತ್ತು. ಆಮೇಲೆ ನಿಧಾನವಾಗಿ ಅರ್ಥವ್ಯವಸ್ಥೆ ಸುಧಾರಿಸುತ್ತಿದ್ದಂತೆ ಕೆಳಗಿಳಿದ ಅದು ನವಂಬರ್ 2022ರಲ್ಲಿ 5.1 ಕೋಟಿ ಆಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳು ತಿಳಿಸುತ್ತಿವೆ. ಅಂದರೆ ಕೊವಿಡ್ ಕಾಲದ ಸಂಖ್ಯೆಯನ್ನು ಸಮೀಪಿಸುತ್ತಿದೆ.
ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ದೇಶದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ ಇನ್ನೂ ಕೊವಿಡ್-ಪೂರ್ವ ಮಟ್ಟಕ್ಕೆ ಹಿಂದಿರುಗಿಲ್ಲ. (ಕೆಳಗಿರುವ ಕೋಷ್ಟಕ ನೋಡಿ).
ಇದು 2019ರಲ್ಲಿ 44.2 ಕೋಟಿ ಇತ್ತು. ಕೊವಿಡ್‌ನಿಂದಾಗಿ ಅದು 42.4 ಕೋಟಿಗೆ ಇಳಿಯಿತು. ನವಂಬರ್ 2022ರಲ್ಲಿ ಅದು 43.7 ಕೋಟಿ.
ನಿರುದ್ಯೋಗ ದರವೂ ಸತತವಾಗಿ ಮೇಲ್ಮಟ್ಟದಲ್ಲೇ ಇದೆ. ಐದು ವರ್ಷಗಳ ʻಅಚ್ಛೇ ದಿನ್ʼಗಳ ಕೊನೆಯಲ್ಲಿ 2019ರಲ್ಲಿ ಅದು ಸರಾಸರಿ 7.4% ಇತ್ತು. 2020ರ ಮೊದಲ ಕೊವಿಡ್ ಅಲೆಯ ಕಾಲದಲ್ಲಿ ಅದು 25% ದಾಟಿತು. ನಂತರ ಕ್ರಮೇಣ ಸುಧಾರಿಸಿ 2021ರಲ್ಲಿ 7.8% ಕ್ಕಿಳಿಯಿತು. 2022ರಲ್ಲಿ ನವಂಬರ್ ವರೆಗೆ ಅದು 7.5% ಇತ್ತು.
ಇದನ್ನು ಓದಿ: ನಿರುದ್ಯೋಗದಂತ ಗಂಭೀರ ಸಮಸ್ಯೆ ಪರಿಹಾರಕ್ಕೆ ಹೋರಾಟವೊಂದೇ ದಾರಿ: ಸಂತೋಷ್ ಹೆಗ್ಡೆ
ಆದರೆ ಡಿಸೆಂಬರ್ 1ರಂದು 30 ದಿನಗಳ ಸರಾಸರಿ ನಿರುದ್ಯೋಗ 8.2% ಇದ್ದದ್ದು, ಡಿಸೆಂಬರ್ 16 ರವೇಳೆಗೆ 9.3%ಕ್ಕೆ ಏರಿದೆ. ಅದರಲ್ಲೂ ನಗರದಲ್ಲಿನ ನಿರುದ್ಯೋಗ ದರ 9.7%. ಗ್ರಾಮೀಣ ಪ್ರದೇಶಗಳಲ್ಲಿ 9%.ಇದು ಕೊವಿಡ್ ನಂತರದ ಅತಿ ಹೆಚ್ಚು ಪ್ರಮಾಣ. ಡಿಸೆಂಬರ್ 2021ರಲ್ಲಿ ಇದು 7.9% ಇತ್ತು.
ʻಅಚ್ಛೇದಿನ್ʼಗಳ ವರ್ಷಕ್ಕೆ 2 ಕೋಟಿ ಉದ್ಯೋಗಗಳ ನಿರ್ಮಾಣದ ಆಶ್ವಾಸನೆಯ ಬಗ್ಗೆ ದೀರ್ಘ ಮೌನದ ನಂತರ ಜೂನ್ 2022ರಲ್ಲಿ, ಪ್ರಧಾನ ಮಂತ್ರಿಗಳು ಕೇಂದ್ರ ಸರಕಾರದ ಇಲಾಖೆಗಳಲ್ಲಿ ಭರ್ತಿ ಮಾಡದೆ ಖಾಲಿ ಬಿಟ್ಟಿರುವ 10ಲಕ್ಷ ಹುದ್ದೆಗಳಿಗೆ ಮುಂದಿನ 18 ತಿಂಗಳಲ್ಲಿ( ಅಂದರೆ ಮುಂದಿನ ಲೋಕಸಭಾ ಚಉನಾವಣೆಯ ವೇಳೆಗೆ) ನೇಮಕಾತಿ ನಡೆಸುವುದಾಗಿ ಮತ್ತೊಂದು ಆಶ್ವಾಸನೆ ನೀಡಿದರು. ಅದರಲ್ಲಿ 75,000 ಹುದ್ದೆಗಳ ಆದೇಶಪತ್ರಗಳನ್ನು ಪ್ರಧಾನಿಗಳು ಹಿಮಾಚಲ ಮತ್ತು ಗುಜರಾತ್ ಚುನಾವಣಾ ಪ್ರಚಾರದ ತುಸು ಮೊದಲು ಅಕ್ಟೋಬರ್‌ನಲ್ಲಿ ಮತ್ತು ಇನ್ನು 75000ದ್ದು ಗುಜರಾತ್ ಮತದಾನದ ವೇಳೆಯಲ್ಲಿ ಟಿವಿಯಲ್ಲಿ ದೂರಹಂಚಿಕೆ ಮೂಲಕ ವಿತರಿಸಿದ್ದಾರೆ. 10 ಕೋಟಿ ಉದ್ಯೋಗ ನಿರ್ಮಾಣದ ಆಶ್ವಾಸನೆ 8ವರ್ಷಗಳಲ್ಲಿ ಈಗಾಗಲೇ ಇರುವ 10ಲಕ್ಷ ಉದ್ಯೋಗಾವಕಾಶಗಳ ಭರ್ತಿಯ ‘ರೋಜ್‌ಗಾರ್ ಮೇಲಾ’ದ ಮಟ್ಟಕ್ಕೆ ಇಳಿದಿದೆ.
ಇನ್ನೂ ಕೆಲವು ಅಂಕಿ-ಅಂಶಗಳನ್ನು ನೋಡಿ:
ಉದ್ಯೋಗ ದೊರೆಯದವರ ಪೂರ್ಣ ಮಾಹಿತಿ ನವಂಬರ್ 2022ರ ವರೆಗೆ ದೊರೆತಿದೆ. ಅದು ಹೀಗಿದೆ:
ಅಂದರೆ ಕಳೆದ 5 ವರ್ಷಗಳಲ್ಲಿ ಉದ್ಯೋಗ ಅರಸುತ್ತಿದ್ದ 2.33 ಕೋಟಿ ಜನಗಳಲ್ಲಿ ಉದ್ಯೋಗ ಪಡೆದವರು ಕೇವಲ 33 ಲಕ್ಷ ಅಥವ 14%.
- ಅಂದರೆ ಕಳೆದ 5 ವರ್ಷಗಳಲ್ಲಿ ಉದ್ಯೋಗ ಬೇಕಿದ್ದ 86% ಮಂದಿಗೆ ಉದ್ಯೋಗ ದೊರೆತಿಲ್ಲ!
- ಯುವಜನರ ನಡುವೆ ನಿರುದ್ಯೋಗದ ಪ್ರಮಾಣ ದ್ವಿಗುಣಗೊಂಡಿದೆ, ಸುಮಾರು ಅರ್ಧದಷ್ಟು ಯುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಕ್ಕಿಲ್ಲ.
- ಪದವೀಧರರ ನಡುವೆ ಒಂದೂವರೆ ಪಟ್ಟಾಗಿದೆ. ಪ್ರತಿ 5 ಪದವೀಧರರಲ್ಲಿ ಒಬ್ಬರಿಗೆ ಉದ್ಯೋಗ ಸಿಕ್ಕಿಲ್ಲ.
“ರಾಷ್ಟ್ರದ ಅರ್ಥವ್ಯವಸ್ಥೆಯ ಬಗ್ಗೆ ಆಡಿಕೊಳ್ಳುತ್ತಿದ್ದೀಯಾ?”
“ನಾನು ಬಡವ ಅಷ್ಟೇ!”
ವ್ಯಂಗ್ಯಚಿತ್ರ: ಸತೀಶ ಆಚಾರ್ಯ
“ಮಾನ್ಯ ಪ್ರಧಾನ ಮಂತ್ರಿ ಮೋದಿಯವರ ಅಡಿಯಲ್ಲಿ ಭಾರತ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿದೆ. ಆದರೂ ವಿರೋಧ ಪಕ್ಷಗಳವರು ದೇಶದ ಪ್ರಗತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತ ಇರುವುದು ಕೇವಲ ಮತ್ಸರದಿಂದ” ಎಂದು ಮಾನ್ಯ ಹಣಕಾಸು ಮಂತ್ರಿಗಳು ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗಿದೆ.
ಇದನ್ನು ಓದಿ: 2021ರಲ್ಲಿ ಆತ್ಮಹತ್ಯೆಗೀಡಾದವರ ಒಟ್ಟು ಸಂಖ್ಯೆ 164033-ಕಾರ್ಮಿಕರು, ನಿರುದ್ಯೋಗಿಗಳು, ರೈತರೇ ಹೆಚ್ಚು
ವಾಸ್ತವವಾಗಿ, ವಿರೋಧ ಪಕ್ಷಗಳವರು ಮಾತ್ರವಲ್ಲ, ರಿಝರ್ವ್ ಬ್ಯಾಂಕ್ ಸರ್ವೇ ಪ್ರಕಾರವೇ ಬಹಳಷ್ಟು ಮಂದಿ ಪ್ರಸಕ್ತ ಆರ್ಥಿಕ ಸನ್ನಿವೇಶದ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದಾರೆ. ಎರಡು ತಿಂಗಳಿಗೊಮ್ಮೆ ಅದು ನಡೆಸುವ ‘ಬಳಕೆದಾರ ವಿಶ್ವಾಸ ಸರ್ವೆ’ಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ವಿಶ್ವಾಸ ಸೂಚ್ಯಂಕ 83.5.
ಸೂಚ್ಯಂಕ 100 ಕ್ಕಿಂತ ಕಡಿಮೆ ಇದ್ದರೆ ಅದರರ್ಥ ಜನಗಳಲ್ಲಿ ನಕಾರಾತ್ಮಕ ಭಾವನೆ ಇದೆ ಎಂದು. ಅದು ಮತ್ತೊಮ್ಮೆ ಈ ಅಂಕಿ-ಅಂಶಗಳಲ್ಲಿ ಪ್ರಕಟಗೊಂಡಿದೆ.
- 55.7%ಮಂದಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದಿದ್ದಾರೆ, ಅದು ಉತ್ತಮಗೊಂಡಿದೆ ಎಂದವರ ಪ್ರಮಾಣ ಕೇವಲ 28%.
- ಆದಾಯ ಇಳಿದಿದೆ ಎಂದವರ ಪ್ರಮಾಣ 32.9% ಮತ್ತು ಹೆಚ್ಚಿದೆ ಎಂದವರ ಪ್ರಮಾಣ 20.9%
- ಅಗತ್ಯ ವಸ್ತುಗಳ ಖರ್ಚುಗಳು ಹೆಚ್ಚಿವೆ ಎಂದವರ ಪ್ರಮಾಣ 84.7% ವಾದರೆ, ಅಗತ್ಯವಲ್ಲದ ಖರ್ಚುಗಳಾದರೂ ಇಳಿದಿವೆ ಎಂದವರ ಪ್ರಮಾಣ ಕೂಡ ಅರ್ಧಕ್ಕಿಂತ ಕಡಿಮೆ, 44%!
ಇಷ್ಟೇ ಅಲ್ಲ, ಈ ವರ್ಷ ವಿದೇಶಿ ಹೂಡಿಕೆದಾರರು (ಎಫ್‌ಪಿಐ) 16.58 ಶತಕೋಟಿ ಡಾಲರುಗಳಷ್ಟು, ಅಂದರೆ 1.22ಲಕ್ಷ ಕೋಟಿ ರೂ.ಗಳಷ್ಟು ತಮ್ಮ ಹೂಡಿಕೆಗಳನ್ನು ಭಾರತದ ಶೇರು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿದ್ದಾರೆ, ಕಳೆದ ಮೂರು ವರ್ಷಗಳಲ್ಲಿ ಈ ವಿದೇಶಿ ಹೂಡಿಕೆದಾರರು ಖರೀದಿಸಿದ್ದಕ್ಕಿಂತ ಮಾರಿದ್ದೇ ಹೆಚ್ಚು ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ