ಭಾರತ ಪ್ರಜಾಪ್ರಭುತ್ವದ ಆಸ್ತಿತ್ವ: ಉತ್ತರ ಸಿಗದ ನೂರಾರು ಪ್ರಶ್ನೆಗಳು

ಬಿ. ಶ್ರೀಪಾದ ಭಟ್

ಪ್ರಸ್ತುತ ಬಿಕ್ಕಟ್ಟು

ಕಳೆದ ಏಳು ವರ್ಷಗಳ ಮೋದಿ ಸರಕಾರದ ಆಡಳಿತದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳ ಮೇಲೆ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದೆ, ಮಾನವ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಮತ್ತು ಇದು ಮೋದಿಯವರಿಗೂ ಗೊತ್ತು. 2017ರಿಂದ ಇಲ್ಲಿಯವರೆಗೆ (ಜುಲೈ 2021) ಸುರೇಂದ್ರ ಗಾಡ್ಲಿಂಗ್, ಸುದೀರ್ ದಾವ್ಲೆ, ಮಹೇಶ್ ರಾವತ್, ರೋಮಾ ವಿಲ್ಸನ್, ಶೋಮಾ ಸೇನ್, ಸುಧಾ ಭಾರದ್ವಜ್, ವರವರ ರಾವ್, ಅರಣ್ ಫೆರೀರಾ, ವರ್ಣನ್ ಗನ್ಸಾಲ್ವಿಸ್, ಗೌತಮ್ ನವಲ್ಕ, ಆನಂದ ತೇಲ್ತುಂಬ್ಡೆ, ಹನಿ ಬಾಬು, ಸ್ಟಾನ್ ಸ್ವಾಮಿ, ಸಾಗರ ಗೋರ್ಖೆ, ರಮೇಶ್ ಗೈಚೋರ್, ಜ್ಯೋತಿ ಜಗ್ತಾಪ್ ಒಳಗೊಂಡಂತೆ 16 ಲೋಕ ಚಿಂತಕರು, ನ್ಯಾಯವಾದಿಗಳು, ಸಂಶೋದನ ವಿದ್ಯಾರ್ಥಿಗಳು, ಮಾನವ ಹಕ್ಕುಗಳ ಹೋರಾಟಗಾರರನ್ನು ನಗರ ನಕ್ಸಲರು ಎಂದು ಹಣೆಪಟ್ಟಿಯಡಿ ಯುಎಪಿಎ ಶಾಸನದ ಅಡಿಯಲ್ಲಿ ಬಂದಿಸಿದ್ದಾರೆ. ಆದಿವಾಸಿಗಳು ದಲಿತರ ಜೊತೆ ಕೆಲಸ ಮಾಡಿದ, ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಹೋರಾಡಿದ ಇವರು ‘ದೇಶದ ವಿರುದ್ದ ಯುದ್ದ’ಸಾರಿದ್ದಾರೆ ಎಂದು ಪ್ರಭುತ್ವ ಸೃಶ್ಟಿಸಿದ ಸುಳ್ಳುಗಳ ಕಾರಣಕ್ಕೆ ಇಂದಿಗೂ ಜೈಲಿನಲ್ಲಿದ್ದಾರೆ. ಇವರಲ್ಲಿ ಆರೋಗ್ಯದ ಆಧಾರದಲ್ಲಿ ವರವರ ರಾವ್ ಗೆ ಆರು ತಿಂಗಳು ಜಾಮೀನು ಸಿಕ್ಕಿದೆ. ಸ್ವಾಮಿಯವರು ತೀವ್ರ ಅನಾರೋಗ್ಯದ ಕಾರಣಕ್ಕೆ ಕಸ್ಟಡಿಯಲ್ಲಿ ನಿಧನರಾಗಿದ್ದಾರೆ. ವಿದೇಶ ದೇಶಗಳ ಸಂಸದರು, ಮಾದ್ಯಮಗಳು, ಸಂಘಟನೆಗಳು ಮೋದಿ ಸರಕಾರದ ಈ ದಮನಕಾರಿ ನೀತಿಯ ವಿರುದ್ದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಭಾರತವು ‘ಹಿಂದೂ ರಾಷ್ಟ್ರ’ವಾಗುವ ದಿನಗಳು ದೂರವಿಲ್ಲವೆಂದು ಎಚ್ಚರಿಸಿದ್ದಾರೆ.

ಯುಎಸ್‌ಎನ ಮಾನವ ಹಕ್ಕುಗಳ ವರದಿಯು ‘ಭಾರತದಲ್ಲಿ ಮಾನವ ಹಕ್ಕುಗಳ ಕುರಿತಾಗಿ ಅನೇಕ ವಿವಾದಂಶಗಳಿವೆ, ನಿರಂಕುಶವಾದ ಕಾನೂನುಬಾಹಿರ ಕೊಲೆಗಳು, ಮಾದ್ಯಮ, ಅಬಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿಯಂತ್ರಣ, ಹಿಂಸೆ, ಹಿಂಸೆಯ ಭಯ, ಪತ್ರಕರ್ತರ ಕಾನೂನುಬಾಹಿರ ಬಂದನಗಳು, ಸರಕಾರದ ಎಲ್ಲಾ ವಲಯಗಳಲ್ಲಿ ಹಬ್ಬಿದ ಭ್ರಷ್ಟಾಚಾರ, ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಹಿಂಸೆಗಳ ಕುರಿತು ಸಹಿಸಿಕೊಂಡಿರುವುದು’ ಎಂದು ಹೇಳಿದೆ.

ರಾಜ್ಯಸಭೆಯಲ್ಲಿ ಗೃಹ ಇಲಾಖೆ ನೀಡಿದ ಮಾಹಿತಿಯ ಅನುಸಾರ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಎನ್ನುವ ಕರಾಳ ಶಾಸನದ ಅಡಿಯಲ್ಲಿ 2015 ರಲ್ಲಿ 1,128 ವ್ಯಕ್ತಿಗಳನ್ನು ಬಂದಿಸಲಾಗಿದೆ. ಅವರಲ್ಲಿ 23 ಆರೋಪಿಗಳನ್ನು ಅಪರಾದಿಗಳೆಂದು ತೀರ್ಪು ನೀಡಲಾಗಿದೆ. 2016ರಲ್ಲಿ 999 ವ್ಯಕ್ತಿಗಳನ್ನು ಬಂದಿಸಲಾಗಿದೆ. ಅವರಲ್ಲಿ 24 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದೆ. 2017ರಲ್ಲಿ 1,154 ವ್ಯಕ್ತಿಗಳನ್ನು ಬಂದಿಸಲಾಗಿದೆ. ಅವರಲ್ಲಿ 39 ಆರೋಪಿಗಳನ್ನು ಅಪರಾದಿಗಳೆಂದು ತೀರ್ಪು ನೀಡಲಾಗಿದೆ. 2018ರಲ್ಲಿ 1,421 ವ್ಯಕ್ತಿಗಳನ್ನು ಬಂದಿಸಲಾಗಿದೆ. ಅವರಲ್ಲಿ 35 ಆರೋಪಿಗಳನ್ನು ಅಪರಾದಿಗಳೆಂದು ತೀರ್ಪು ನೀಡಲಾಗಿದೆ. 2019ರಲ್ಲಿ 1,948 ವ್ಯಕ್ತಿಗಳನ್ನು ಬಂದಿಸಲಾಗಿದೆ. ಅವರಲ್ಲಿ 34 ಆರೋಪಿಗಳನ್ನು ಅಪರಾದಿಗಳೆಂದು ತೀರ್ಪು ನೀಡಲಾಗಿದೆ. ಒಟ್ಟಾರೆ 2015-19ರ ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರವು ಯುಪಿಎ ಎನ್ನುವ ಕರಾಳ ಶಾಸನದ ಅಡಿಯಲ್ಲಿ 6,650 ವ್ಯಕ್ತಿಗಳನ್ನು ಬಂದಿಸಿದ್ದಾರೆ. ಅವರಲ್ಲಿ 155 ವ್ಯಕ್ತಿಗಳನ್ನು ಆರೋಪಿಗಳೆಂದು ತೀರ್ಪು ಕೊಡಲಾಗಿದೆ. ಇದಕ್ಕೆ ವಿವರಣೆ ಕೊಡುವುದೆಂದರೆ ನಮ್ಮನ್ನು ನಾವೇ ಹಿಂಸೆಗೆ ಒಳಪಡಿಸಿಕೊಂಡಂತೆ.

ಫಾದರ್ ಸ್ಟಾನ್ ಸ್ವಾಮಿಯವರ ಕಸ್ಟಡಿ ಸಾವು

84 ವರ್ಷದ ಫಾದರ್ ಸ್ಟಾನ್ ಸ್ವಾಮಿಯವರ ಕಸ್ಟಡಿ ಸಾವು ಭಾರತದಲ್ಲಿನ ಫ್ಯಾಸಿಸಂ ಆಡಳಿತಕ್ಕೆ ಸಾಕ್ಷಿಯಾಗಿದೆ. ಈ ನಿರಂಕುಶ ಪ್ರಭುತ್ವದ ದಾಳಿ ದೇಶದಾದ್ಯಂತ ನಿರಂತರವಾಗಿದೆ. ಇಲ್ಲಿನ ಲೋಕ ಚಿಂತಕರು, ಮಾನವ ಹಕ್ಕುಗಳ ಹೋರಾಟಗಾರರು, ವಿದ್ಯಾರ್ಥಿಗಳು, ನ್ಯಾಯವಾದಿಗಳನ್ನು ಬಿನ್ನಮತ ವ್ಯಕ್ತಪಡಿಸಿದ ಕಾರಣಕ್ಕಾಗಿ, ಅದಿಕಾರ ನಡೆಸುತ್ತಿರುವ ಪ್ರಬುತ್ವದ ನೀತಿಗಳನ್ನು ಪ್ರಶ್ನಿಸಿದಕ್ಕಾಗಿ ಯುಎಪಿಎ ಎನ್ನುವ ಕರಾಳ ಶಾಸನದ ಅಡಿಯಲ್ಲಿ ಬಂದಿಸಲಾಗುತ್ತಿದೆ. ಮತ್ತು ಈ ಪ್ರಕ್ರಿಯೆ ಇಲ್ಲಿಗೇ ಮುಗಿಯುವ ಲಕ್ಷಣಗಳಿಲ್ಲ. 8, ಅಕ್ಟೋಬರ್ 2020ರಂದು ತಮ್ಮನ್ನು ಬಂದಿಸುವ ಕೆಲ ದಿನಗಳಿಗೂ ಮುಂಚೆ ವಿಡಿಯೋವೊಂದರಲ್ಲಿ ‘ಇಲ್ಲಿನ ಬೆಳವಣಿಗೆಗಳನ್ನು ನಾನು ಗಮನಿಸುತ್ತಿದ್ದೇನೆ. ನಾನು ಮೂಕ ಪ್ರೇಕ್ಷಕನಲ್ಲ, ಈ ಆಟದ ಭಾಗವಾಗಿದ್ದೇನೆ ಮತ್ತು ಇದಕ್ಕಾಗಿ ಯಾವುದೇ ಬೆಲೆ ತೆರಬೇಕಾಗಿ ಬಂದರೂ ಸಿದ್ದನಿದ್ದೇನೆ’ ಎಂದು ಫಾದರ್ ಸ್ಟಾನ್ ಸ್ವಾಮಿಯವರು ಮಾತನಾಡಿದ್ದರು. ಪಾರ್ಕಿಸನ್ ಕಾಯಿಲೆ ಮತ್ತು ಇತರೇ ವಯೋಸಹಜ ದೈಹಿಕ ನ್ಯೂನತಗೆಳಿಂದ ಬಳಲುತ್ತಿದ್ದ ಸ್ಟಾನ್ ಸ್ವಾಮಿಯವರಿಗೆ ತಾವು ತೆರಬೇಕಾದ ಬೆಲೆ ಏನು ಅಂತ ಗೊತ್ತಾಗಿತ್ತು. ಜಾರ್ಖಂಡ್ ಆದಿವಾಸಿಗಳ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದ ಫಾದರ್ 5, ಜುಲೈ 2021ರಂದು ಮುಂಬೈನ ಆಸ್ಪತ್ರೆಯಲ್ಲಿ ವಿಚಾರಣದೀನ ಕೈದಿಯಾಗಿ ತೀರಿಕೊಂಡಿದ್ದಾರೆ. ದಲಿತ-ಮುಸ್ಲಿಂರ ಸಂಘಟನೆಗಾಗಿ ಶ್ರಮಿಸಿದ್ದಕ್ಕಾಗಿ ದೇಶದ್ರೋಹದ ಅಪಾದನೆ ಹೊರಬೇಕಾಗಿ ಬಂದಿದೆ. ವಂಚಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಹೇಳಿದ ಫಾದರ್ ಅವರ ಮೇಲೆ ಮಾವೋವಾದಿಗಳ ಜೊತೆ ಸಂಚು ನಡೆಸಿದ ಆರೋಪ ಹೊರೆಸಲಾಯಿತು. ಇಲ್ಲಿ ಪ್ರಜಾಪ್ರಭುತ್ವ ತನ್ನ ಆಸ್ತಿತ್ವವನ್ನೇ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ವಿಚಾರಣೆ ಸಂದರ್ಬದಲ್ಲಿ ನ್ಯಾಯಮೂರ್ತಿಗಳಿಗೆ ಸ್ಟಾನ್ ಸ್ವಾಮಿ ಹದಗೆಡುತ್ತಿರುವ ತಮ್ಮ ಆರೋಗ್ಯದ ಕುರಿತು ಹೇಳಿಕೆ ನೀಡಿದ್ದರು. ಆದರೂ ಈ ವಯೋವೃದ್ದರಿಗೆ ಜಾಮೀನು ಕೊಡಲು ನ್ಯಾಯಾಂಗ ನಿರಾಕರಿಸಿತು. ಆದರೆ ಅವರ ಈ ಕಸ್ಟಡಿ ಸಾವಿನ ನಂತರ ಮುಂಬೈ ಹೈಕೋರ್ಟ ದಿಗ್ಬೃಮೆ ವ್ಯಕ್ತಪಡಿಸಿದೆ. ಆದರೆ ಕಾಲ ಮಿಂಚಿ ಹೋಗಿತ್ತು. ಆದರೆ ನ್ಯಾಯಾಂಗವು ‘ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಸರಿಯೇ, ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ತನ್ನ ನೀತಿಗೆ ಸ್ವತಃ ತಾನೇ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ಪ್ರಬುತ್ವದ ಈ ಅದಿಕಾರಶಾಹಿ ದಬ್ಬಾಳಿಕೆಗೆ ಮಾನವೀಯ ದನಿಯೊಂದನ್ನು ಸಾಯಿಸಲಾಯಿತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯೂ ಸಹ ‘ಸ್ವಾಮಿಯವರ ಸಾವಿಗೆ ಶೋಕ ವ್ಯಕ್ತಪಡಿಸಿದೆ ಮತ್ತು ಯಾವುದೇ ಪುರಾವೆಗಳಿಲ್ಲದೆ ಬಂದಿಸಿದ ಇತರೇ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ ಎಂದು ವಿಶ್ವಸಂಸ್ಥೆ ಮತ್ತು ಭಾರತಕ್ಕೆ ಮನವಿ ಮಾಡಿದೆ.

ಇದನ್ನು ಓದಿ: ಕಸ್ಟಡಿಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಸಾವು: ಅತ್ಯಂತ ಹೊಲಸು ಸಾಂಸ್ಥಿಕ ಕೊಲೆ

ಕ್ರಿಶ್ಚಿಯನ್ ಪಾದ್ರಿಯಾಗಿ ಬಿಹಾರ್, ಜಾರ್ಖಂಡ್ ರಾಜ್ಯಗಳಲ್ಲಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ ಫಾದರ್ ಸ್ವಾಮಿಯವರು ಆ ಭಾಗದ ಭೂಮಿ, ಅರಣ್ಯ, ಜೀವನೋಪಾಯ ಮತ್ತು ಮಾಣವ ಹಕ್ಕುಗಳ ಪರವಾಗಿ ಹೋರಾಟ ನಡೆಸಿದರು. ತಮ್ಮ ಈ ಕೆಲಸವು ಜನರಿಗಾಗಿ ಮಾತ್ರವೇ ಹೊರತು ಪ್ರಬುತ್ವದ ವಿರುದ್ದವಲ್ಲ ಎಂದು ಫಾದರ್ ಅನೇಕ ಬಾರಿ ಹೇಳುತ್ತಲೇ ಬಂದಿದ್ದರು. ಬದಲಿಗೆ ಪ್ರಬುತ್ವಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದವರನ್ನು ದೇಶದ್ರೋಹಿ ಎಂದು ಕರೆದು ಬಂದಿಸಲಾಯಿತು. ಫಾದರ್ ಅವರ ಈ ಸಾವಿನಿಂದ ಶಾಸಕಾಂಗದ ಸರ್ವಾದಿಕಾರದ ಎದುರು ಇಲ್ಲಿನ ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯವು ಬಹಿರಂಗವಾಯಿತು. 84 ವಯಸ್ಸಿನ ವೃದ್ದರಿಗೆ ವೈದ್ಯಕೀಯ ನೆರವು ನಿರಾಕರಿಸವಂತಹ ಅಮಾನವೀಯತೆಗೆ ನ್ಯಾಯಾಂಗ ಸಾಕ್ಷಿಯಾಗಬೇಕಾಯಿತು. ಮಹಾರಾಷ್ಟ್ರದ ಈಗಿನ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೌನವು ಸಹ ಈ ದುರಂತಕ್ಕೆ ಕಾರಣ.

ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಇತರೇ 15 ರಾಜಕೀಯ ಖೈದಿಗಳ ವಿರುದ್ದ ಯಾವುದೇ ಸಾಕ್ಷದಾರ ಸಾಬೀತುಪಡಿಸಲು ಪ್ರಬುತ್ವ ವಿಫವಾಗಿದ್ದರೂ ಸಹ ಅವರಿಗೆ ಜಾಮೀನು ಸಿಗುತ್ತಿಲ್ಲ. ಅವರಲ್ಲಿ ಸುಧಾ ಭಾರದ್ವಜ್, ಆನಂದ ತೇಲ್ತುಂಬ್ಡೆ ಒಳಗೊಂಡಂತೆ ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ನ್ಯಾಯ ವ್ಯವಸ್ಥೆ ಇದ್ಯಾವುದಕ್ಕೂ ಕಿವಿಗೊಡುತ್ತಿಲ್ಲ. ‘ಎನ್‌ಐಎ (ರಾಷ್ಟೀಯ ತನಿಖಾ ಸಂಸ್ಥೆ)ಯು ಆರೋಪಿತರಲ್ಲಿ ಒಬ್ಬರಾಗಿರುವ ನಾಗಪುರದ ದಲಿತ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್‌ರವರ ಕಂಪ್ಯೂಟರ್‌ನಲ್ಲಿ ದೋಷಾರೋಪಣೆ ಪುರಾವೆಗಳು ದೊರಕಿವೆ ಎಂದು ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಿತ್ತು. ಆದರೆ ಬೋಸ್ಟನ್‌ನಲ್ಲಿರುವ ‘ಆರ್ಸನೆಲ್ ಕೌನ್ಸಿಲಿಂಗ್’ ಎನ್ನುವ ಅಮೇರಿಕಾದ ವಿದಿ ವಿಜ್ಞಾನ ಏಜೆನ್ಸಿಯು ‘ಈ ಪುರಾವೆಗಳನ್ನು malware ಮೂಲಕ ಗಾಡ್ಲಿಂಗ್ ಅವರ ಕಂಪ್ಯೂಟರ್‌ನಲ್ಲಿ ನೆಡಲಾಗಿದೆ (planted) ಎಂದು ಹೇಳಿಕೆ ನೀಡಿದೆ. ಗಾಂಡ್ಲಿಂಗ್‌ರವರ ಬಂದನಕ್ಕೆ ಎರಡು ವರ್ಷಗಳ ಮುಂಚೆ ಅವರ ಮೇಲ್‌ಗೆ ಬಂದ ಈ ಮೇಲ್‌ಗಳನ್ನು ಸ್ಟಾನ್ ಸ್ವಾಮಿಯವರಿಗೂ ನಕಲಿಸಗಾಗಿದೆ ಎಂದು ಪೋಲಿಸರು ಹೇಳಿದ್ದರು. ಆದರೆ ಈಗ ಆ ಪುರಾವೆಯೆ ನಕಲು ಎಂದು ಆರ್ಸೆನಲ್ ಏಜೆನ್ಸಿ ಹೇಳಿದೆ. ಇದಕ್ಕೂ ಮುಂಚೆ ಈ ಆರ್ಸೆನಲ್ ಸಂಸ್ಥೆಯು ‘ಮತ್ತೊಬ್ಬ ಆರೋಪಿ ರೋನಾ ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿಯೂ ಸಹ ಇದೇ ಮಾದರಿಯಲ್ಲಿ ಪುರಾವೆಗಳನ್ನು ನೆಟ್ಟಿದ್ದಾರೆ ಮತ್ತು ಅವೆಲ್ಲವೂ ನಕಲಿ’ ಎಂದು ಹೇಳಿದೆ. ಆರ್ಸೆನಲ್ ಏಜೆನ್ಸಿಯು ಇದಕ್ಕೂ ಮುಂಚೆ ಬೋಸ್ಟನ್ ಮಾರಥಾನ್ ಬಾಂಬ್ ದಾಳಿಯಂತಹ ಗಂಭೀರ ಪ್ರಕರಣಗಳಲ್ಲಿಯೂ ತಾನು ತನಿಖೆ ನಡೆಸಿದ್ದೇನೆ ಎಂದು ಹೇಳುತ್ತಾ ತನ್ನ ಈ ಆರೋಪಗಳ ವಿಶ್ವಾಸರ್ಹತೆ ಕುರಿತು ಸಾಕ್ಷಿ ಒದಗಿಸಿದೆ.

2018 ಮತ್ತು 2019ರಲ್ಲಿ ರಾಂಚಿಯಲ್ಲಿರುವ ಸ್ವಾನ್ ಸ್ವಾಮಿಯವರ ಮನೆಯಲ್ಲಿ ಮಹಾರಾಷ್ಟ್ರ ಪೋಲೀಸರು ಶೋದನೆ ನಡೆಸಿದ್ದರು. ಆದರೆ ಯಾವುದೇ ಪುರಾವೆಗಳು ದೊರಕಲಿಲ್ಲ. ನಂತರ ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಸ್ಟಾನ್ ಸ್ವಾಮಿಯವರನ್ನು ಬಂದಿಸಿ ತಲೋಜ ಜೈಲಿನಲ್ಲಿರಿಸಿದ್ದರು. ಫಾದರ್ ಅವರನ್ನು ರಾಂಚಿಯಲ್ಲಿ ವಿಚಾರಣೆ ನಡೆಸದೆ ಮುಂಬೈಗೆ ಕರದುಕೊಂಡು ಬಂದಿರುವುದೇ ಅವರನ್ನು ಬೆದರಿಸಲು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ದ್ರವಾಹಾರ ಸೇವಿಸಲು ಸಿಪ್ಪರ್‌ಗಾಗಿ ಫಾದರ್ ಕೋರ್ಟನಲ್ಲಿ ಮನವಿ ಸಲ್ಲಿಸಬೇಕಾಯಿತು ಎಂಬದೇ ಇದಕ್ಕೆ ಉದಾಹರಣೆ. ಜೈಲಿನಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಲು ಆರಂಭದಲ್ಲಿ ವೈದ್ಯರ ಸೇವೆ ಒದಗಿಸಲಿಲ್ಲ. ಎನ್‌ಐಎ ಯಾವುದೇ ಸಾಕ್ಷ್ಯಾದಾರಗಳನ್ನು ಒದಗಿಸಲು ವಿಪಲರಾದರು ಮತ್ತು 84 ವರ್ಷದ ಆರೋಗ್ಯವೂ ಹದಗೆಡುತ್ತಿರುವುದರ ಆದಾರದಲ್ಲಿ ಸ್ವಾಮಿಯವರಿಗೆ ಜಾಮೀನು ಕೋರಿದಾಗ ‘ಇವರನ್ನು ಬಿಡುಗಡೆ ಮಾಡಿದರೆ ಮತ್ತೆ ಮೋದಿ ಹತ್ಯೆಯ ಸಂಚು ನಡೆಸುತ್ತಾರೆ’ ಎಂದು ಎನ್‌ಐಎ ವಿರೋದಿಸಿತು. ಆದರೆ 85 ವರ್ಷಗಳ, ಪಾರ್ಕಿಸನ್ ಕಾಯಿಲೆಯುಳ್ಳ, ಲೋಟವನ್ನು ಹಿಡಿದುಕೊಳ್ಳಲು ಬಾರದ ಫಾದರ್ ಈ ದೇಶದ ಪ್ರದಾನಿಯವರ ಹತ್ಯೆ ಸಂಚು ನಡೆಸುತ್ತಾರೆ ಎನ್ನುವುದು ಶುದ್ದ ಹಾಸ್ಯಾಸ್ಪದ ಹಾಗೂ ಅರ್ಥಹೀನ. ನ್ಯಾಯವಾದಿ ಮಿಹಿರ್ ದೇಸಾಯಿ ‘ಪ್ರತಿ ಬಾರಿ ಫಾದರ್ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾಪಿಸಿದಾಗ ಎನ್‌ಐಎ ಇಲ್ಲ ಅವರ ಆರೋಗ್ಯ ಸ್ಥಿರವಾಗಿದೆಯೆಂದು ವಾದ ಮಂಡಿಸುತ್ತಿದ್ದರು’ ಎಂದು ಹೇಳಿತ್ತಾರೆ. ಮತ್ತು ನ್ಯಾಯಾಲಯವು ಸಹ ಎನ್‌ಐಎ ಯ ಈ ಎಲ್ಲಾ ವಂಚನೆಯ ಹೇಳಿಕೆಗಳನ್ನು ನಂಬಿತು ಎಂದರೆ ನಾವು ಎಂತಹ ಆಳವಾದ ಬಿಕ್ಕಟ್ಟಿನಲ್ಲಿದ್ದೇವೆ ಎನ್ನುವುದು ಅರಿವಾಗುತ್ತದೆ.

ರಾಜಕೀಯ ಶಾಸ್ತ್ರಜ್ಞ ಸುಹಾಸ್ ಪಲಿಶ್ಕರ್ ಅವರು ‘ಭೀಮಾ ಕೋರೆಗಾಂ ಪ್ರಕರಣ ಮತ್ತು ಇದನ್ನು ನಗರ ನಕ್ಸಲರು ಎಂಬುದಕ್ಕೆ ಸೀಮಿತಗೊಳಿಸಿರುವುದು ಕೇವಲ ಅರ್ದ ಸಂಗತಿ ಮಾತ್ರ, ಹಿಂದುತ್ವ ಆಡಳಿತದ ಈ ದೌರ್ಜನ್ಯವನ್ನು ಪ್ರಶ್ನಿಸುವವರಿಗೆ ಸ್ಟಾನ್ ಸ್ವಾಮಿಯವರ ಸಾವು ಒಂದು ಎಚ್ಚರಿಕೆಯಂತಿದೆ… ಈ ಪ್ರಕರಣದಲ್ಲಿ ನ್ಯಾಯಾಂಗವೂ ಸಹ ತನ್ನ ಕರ್ತವ್ಯ ನಿಬಾಯಿಸಲು ಸೋತಿದೆ… ಈ ಪ್ರಕರಣದ ಟೊಳ್ಳುತನವನ್ನು ಬಳಸಿಕೊಂಡು ಯುಎಪಿಎ ಬಳಕೆ ಕುರಿತು ಮರು ಪರಿಶೀಲಿಸಿ ಎಂದು ಸರಕಾರಕ್ಕೆ ಆದೇಶಿಸುವ ಅವಕಾಶ ಕಳೆದುಕೊಂಡಿದೆ’ ಎಂದು ಹೇಳಿದ್ದಾರೆ.

ಈ ಬಿಕ್ಕಟ್ಟು ದಿಡೀರನೆ ಉದ್ಭವಿಸಿರುವಂತದಲ್ಲ. ಇದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು.

ಮಾನವ ಹಕ್ಕುಗಳ ಉಲ್ಲಂಘನೆಯ ಇತ್ತೀಚಿನ ವಿದ್ಯಾಮಾನಗಳು

ಉತ್ತರ ಪ್ರದೇಶದಲ್ಲಿ ಜನವರಿ 2018 ರಿಂದ ಜನವರಿ 2020ರ ಎರಡು ವರ್ಶಗಳ ಅವದಿಯಲ್ಲಿ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಕಾಯ್ದೆ) ಅಡಿಯಲ್ಲಿ ಅಕ್ರಮವಾಗಿ ಬಂದಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ 120 ಹೇಬಿಯಸ್ ಕಾರ್ಪಸ್ ಅಪೀಲುಗಳ ವಿಚಾರಣೆ ನಡೆಸಿ ಅಲಹಾಬಾದ್ ಹೈಕೋರ್ಟ ತೀರ್ಪು ನೀಡಿದೆ. ಉ.ಪ್ರ.ದ 32 ಜಿಲ್ಲೆಗಳ ಜಿಲ್ಲಾ ಮಾಜಿಸ್ಟೀಟ್‌ರು ಆದೇಶದ ಹೊರಡಿಸಿದ 94 ಬಂದನಗಳನ್ನು ಅಸಿಂಧು ಎಂದು ಕೋರ್ಟ ತೀರ್ಪು ಕೊಟ್ಟಿದೆ. ಮತ್ತು ಬಂದಿತರನ್ನು ಕೂಡಲೆ ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದೆ. ಈ ಕುರಿತು ಇಂಡಿಯನ್ ಎಕ್ಸಪ್ರೆಸ್‌ನ 7.4.2021ರ ಆವೃತ್ತಿಯಲ್ಲಿ ವಿವರವಾದ ತನಿಖಾ ವರದಿ ಪ್ರಕಟವಾಗಿದೆ. ದನಗಳ ಹತ್ಯೆಯ ಆರೋಪದ ಮೇಲೆ ಎನ್‌ಎಸ್‌ಎ ಬಳಸಿಕೊಂಡು ಅಮಾಯಕರನ್ನು ಬಂದಿಸಿದ್ದರು. ಎಲ್ಲಾ ಬಂದಿತರು ಅಲ್ಪಸಂಖ್ಯಾತ ಸಮುದಾಯದವರಾಗಿರುವುದು ಕಾಕತಾಳೀಯವಲ್ಲ. ಇದರಲ್ಲಿನ 32 ಪ್ರಕರಣಗಳನ್ನು ಉಲ್ಲೇಖಿಸಿ ಹೈಕೋರ್ಟ ಉ.ಪ್ರ. ಸರಕಾರ ಮತ್ತು ಪೋಲಿಸರ ವಿರುದ್ದ ತೀವ್ರವಾಗಿ ತರಾಟೆ ತೆದುಕೊಂಡಿದೆ. ಇನ್ನು 11 ದನಗಳ ಹತ್ಯೆ ಪ್ರಕರಣಗಳಲ್ಲಿ ಬಂದವನ್ನು ಮಾನ್ಯ ಮಾಡಿದೆಯಾದರೂ ಸಹ ಒಂದನ್ನು ಹೊರತುಪಡಿಸಿ ಉಳಿದ 10 ಪ್ರಕರಣಗಳ ಆರೋಪಿಗಳಿಗೆ ಜಾಮೀನು ಕೊಟ್ಟು ಬಿಡುಗಡೆ ಮಾಡಲು ಸೂಚಿಸಿದೆ ಎಂದು ಎಕ್ಸಪ್ರೆಸ್ ವರದಿ ಮಾಡಿದೆ. ಉ.ಪ್ರ. ಪೋಲೀಸ್ ಇಲಾಖೆಯು ಮ್ಯಾಜಿಸ್ಟೇಟ್ ಸಹಿ ಮಾಡಿದ ಮೇಲಿನ ಎಲ್ಲಾ ಬಂದನಗಳಲ್ಲಿನ ಎಫ್‌ಐಆರ್‌ನಲ್ಲಿನ ಮಾಹಿತಿಯನ್ನು ಕತ್ತರಿಸಿ ಮತ್ತು ಅಂಟಿಸಿದೆ (cut and paste).

ಎನ್‌ಎಸ್‌ಎ ಅದೇಶವನ್ನು ರದ್ದು ಪಡಿಸಿದ ಅಲಹಬಾದ್ ಹೈಕೋರ್ಟ್‌ ಪಟ್ಟಿ ಮಾಡಿರುವ ಕೆಂಪು ನಿಶಾನೆಗಳನ್ನು ಎಕ್ಸ್‌ಪ್ರೆಸ್ ವರದಿ ಮಾಡಿದೆ. 5,6,7 ಎಪ್ರಿಲ್ 2021ರಲ್ಲಿನ ವರದಿಯ ಪ್ರಕಾರ

  • 11 ಬಂದನಗಳಲ್ಲಿ ಆದೇಶ ಹೊರಡಿಸುವಾಗ ಜಿಲ್ಲಾ ಮ್ಯಾಜಿಸ್ಟೇಟ್ ಅದರ ಕುರಿತು ಯಾವುದೇ ಆಸಕ್ತಿ, ಕೂಲಂಕುಶವಾಗಿ ಅದ್ಯಯನ (non-application of mind) ಮಾಡಿಲ್ಲ.
  • 13 ಬಂದನಗಳಲ್ಲಿ ಬಂದಿತ ವ್ಯಕ್ತಿಯು ಎನ್‌ಎಸ್‌ಎ ಬಳಸುವುದನ್ನು ಪ್ರಶ್ನಿಸಿ ತನ್ನನ್ನು ಪ್ರತಿನಿದಿಸುವ ಅವಕಾಶವನ್ನು ನಿರಾಕರಿಸಲಾಗಿದೆ.
  • 7 ಬಂಧನಗಳಲ್ಲಿನ ಪ್ರಕರಣಗಳು ‘ಕಾನೂನು ಮತ್ತು ವ್ಯವಸ್ಥೆ’ಯ ಅಡಿಯಲ್ಲಿ ಬರುತ್ತವೆ ಮತ್ತು ಈ ಪ್ರಕರಣಗಳಿಗೆ ಎನ್‌ಎಸ್‌ಎ ಬಳಸುವ ಅಗತ್ಯವಿಲ್ಲ
  • 6 ಬಂಧನಗಳಲ್ಲಿ ಆರೋಪಿಗಳಿಗೆ ಯಾವುದೇ ಅಪರಾದದ ಹಿನ್ನಲೆ ಇಲ್ಲ. ಕೇವಲ ಒಂದು ಪ್ರಕರಣ ಪ್ರಸ್ತಾಪಿಸಿ ಎನ್‌ಎಸ್‌ಎ ಬಳಸಿದ್ದಾರೆ.
  • 9 ಬಂಧನಗಳಲ್ಲಿ ಅನಾಮಿಕನೊಬ್ಬ ನೀಡಿದ ‘ದನಗಳ ಹತ್ಯೆ ನಡೆದಿದೆ’ ಎನ್ನುವ ಮಾಹಿತಿ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ ಮತ್ತು ಈ ಅನುಮಾನಾಸ್ಪದ ಎಫ್‌ಐಆರ್ ಆದರಿಸಿ ಎನ್‌ಎಸ್‌ಎ ಬಳಸಿಕೊಂಡು ಬಂದಿಸಿದ್ದಾರೆ.
  • 13 ಬಂದನಗಳಲ್ಲಿ ‘ಕೃಶಿ ಪ್ರದೇಶದಲ್ಲಿ’ ಅಥವಾ ‘ಅರಣ್ಯ ಪ್ರದೇಶದಲ್ಲಿ’ ದನಗಳ ಹತ್ಯೆ ನಡೆದಿದೆ ಎಂದು ಎಫ್‌ಐಆರ್ ದಾಖಲಿಸಿದ್ದಾರೆ.
  • ಮನೆಯ ನಾಲ್ಕು ಗೋಡೆಗಳ ನಡುವೆ ‘ದನಗಳ ಹತ್ಯೆ’ ಮಾಡಿದ್ದಾರೆ ಎನ್ನುವ ಎಫ್‌ಐಆರ್ ಆದರಿಸಿ ಜಿಲ್ಲಾ ಮ್ಯಾಜಿಸ್ಟೇಟ್ ಬಂಧನದ ಆದೇಶ ಹೊರಡಿಸಿದ್ದಾರೆ.
  • 5 ಬಂಧನಗಳಲ್ಲಿ ಅಂಗಡಿಯ ಮುಂದೆ ‘ದನಗಳ ಹತ್ಯೆ’ ಮಾಡಿದ್ದಾರೆ ಎನ್ನುವ ಎಫ್‌ಐಆರ್ ಆದರಿಸಿ ಜಿಲ್ಲಾ ಮ್ಯಾಜಿಸ್ಟೇಟ್ ಬಂದನಧ ಆದೇಶ ಹೊರಡಿಸಿದ್ದಾರೆ.
  • 7 ಬಂಧನಗಳಲ್ಲಿನ ಎನ್‌ಎಸ್‌ಎ ಆದೇಶದಲ್ಲಿ ದನದ ಹತ್ಯೆಗಳು ನಡೆದಿವೆ ಎಂದು ಆರೋಪಿಸುತ್ತಾ ‘ಇಡೀ ಪ್ರದೇಶದಲ್ಲಿ ಭಯದ ವಾತಾವರಣವಿತ್ತು’ ಎಂದು ದಾಖಲಿಸಿದೆ.
  • 6 ಬಂಧನಗಳಲ್ಲಿನ ಎನ್‌ಎಸ್‌ಎ ಆದೇಶದಲ್ಲಿ ‘ಘಟನೆಯ ನಂತರ ಅನಾಮಿಕರು ಸ್ಥಳದಿಂದ ಪರಾರಿಯಾದರು, ಪೋಲೀಸರ ಮೇಲೆ ಹಲ್ಲೆ ಮಾಡಲಾಯಿತು, ಮತ್ತು ಈ ಕಾರಣಕ್ಕೆ ಜನರು ದಿಕ್ಕಾಪಾಲಾಗಿ ಓಡತೊಡಗಿದರು, ಇಡೀ ವಾತಾವರಣದಲ್ಲಿ ಉದ್ರಿಕ್ತವಾಗಿತ್ತು’ ಎಂದು ಒಂದೇ ರೀತಿ ಬರೆದಿದ್ದಾರೆ.
  • ಜನವರಿ 2018 ರಿಂದ ಡಿಸೆಂಬರ್ 2020ರ ವರೆಗೆ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಿದ 120 ಬಂಧನಗಳ ಪೈಕಿ 12 ಪ್ರಕರಣಗಳಲ್ಲಿ ಕ್ರಿಮಿನಲ್ ಕೋರ್ಟ ಜಾಮೀನು ಕೊಟ್ಟ ನಂತರವೂ ವ್ಯಕ್ತಿಯು 200 ದಿನಗಳ ಕಾಲ ಜೈಲಿನಲ್ಲಿದ್ದಾನೆ.
  • 3 ಬಂಧನಗಳಲ್ಲಿ ವ್ಯಕ್ತಿಯು 300 ದಿನಗಳ ಕಾಲ, ಒಂದು ಪ್ರಕರಣದಲ್ಲಿ 325 ದಿನಗಳ ಕಾಲ, ಮತ್ತೊಂದು ಪ್ರಕರಣದಲ್ಲಿ 308 ದಿನಗಳ ಕಾಲ ಜೈಲಿನಲ್ಲಿದ್ದಾನೆ

ಅನುಚ್ಚೇದ 22(5) ಅಡಿಯಲ್ಲಿ ಎನ್‌ಎಸ್‌ಎ ಆದರಿಸಿದ ಬಂಧನಗಳಲ್ಲಿ ಆರೋಪಿಗೆ 3 ಸದಸ್ಯರ ಸಲಹಾ ಸಮಿತಿಯ ಮುಂದೆ ತನ್ನನ್ನು ಪ್ರತಿನಿದಿಸಿಕೊಳ್ಳುವ ಸಂಪೂರ್ಣ ಹಕ್ಕು ಕೊಡಲಾಗಿದೆ. ಮತ್ತು ಹೈಕೋರ್ಟ ನ್ಯಾಯಮೂರ್ತಿಗಳು ಇದರ ಸದಸ್ಯರಲ್ಲೊಬ್ಬರಾಗಿರುತ್ತಾರೆ. ಕುತೂಹಲವೆಂದರೆ ಈ ಎಲ್ಲಾ 120 ಪ್ರಕರಣಗಳ ಬಂದವನ್ನು ಈ ಸಮಿತಿಯು ಮಾನ್ಯ ಮಾಡಿದೆ. ಮೋದಿ ನೇತೃತ್ವದ ಆಡಳಿತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಇದು ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಎಲ್ಲಾ ಪ್ರಜಾಪ್ರಭುತ್ವದ ಆಶಯಗಳನ್ನು ದ್ವಂಸ ಮಾಡಿದೆ.

ಮನಸ್ಸು ಮತ್ತು ಬುದ್ದಿಯನ್ನು ವಿವೇಚನೆಯಿಂದ ಬಳಸದೆ ಅವಿವೇಕತನದಿಂದ ಬಳಸುವುದರ ಮೂಲಕ ಸ್ವಾತಂತ್ರವನ್ನು ಕಸಿದುಕೊಳ್ಳಲು ಸಾದ್ಯವಿಲ್ಲ ಎಂದು ಈ ಪ್ರಕರಣಗಳ ವಿಚಾರಣೆಯ ಸಂದರ್ಬದಲ್ಲಿ ಅಲಹಾಬಾದ್ ಹೈಕೋರ್ಟ ಮಹತ್ವದ ತೀರ್ಪು ನೀಡಿದೆ.

ತಸ್ನಮುಲ್ ಹಸನ್ ಅವರು ‘27, ಫೆಬ್ರವರಿ 2021ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಸ್‌ಎ ಬೋಬ್ಡೆ ಅವರು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕಾನೂನಿನ ಉದ್ದೇಶದ ಕುರಿತು ಆಳವಾದ ಒಳನೋಟವಿದೆ ಎಂದು ಪ್ರಶಂಸಿಸಿದ್ದರು. ವೈರುದ್ಯವೆಂದರೆ 23 ಮಾರ್ಚ 2021ರಂದು ಬಿಹಾರ್ ವಿದಾನಸಬೆಯಲ್ಲಿ ‘ಬಿಹಾರ್ ವಿಶೇಷ ಸಶಸ್ತ್ರ ಪೋಲೀಸ್ ಮಸೂದೆ 2021’ನ್ನು ಭಾರೀ ವಿರೋದದ ನಡುವೆ ಮಂಡಿಸಲಾಯಿತು. ರಾಜ್ಯಪಾಲರು ಇದಕ್ಕೆ ಅಂಕಿತ ಮುದ್ರೆಯೊತ್ತಿದರು’ ಎಂದು ಬರೆಯುತ್ತಾರೆ. ಈ ಮಸೂದೆಯಲ್ಲಿ ವಿವಾದದ ಅಂಶವೇನಿದೆ?

ಆ ಕಾಯಿದೆಯ ಕಲಮು 7ರ ಪ್ರಕಾರ ಯಾವುದೇ ವಿಶೇಷ ಸಶಸ್ತç ಪೋಲೀಸ್ ಅಧಿಕಾರಿಯು ಸಂಸ್ಥೆಯೊಂದಕ್ಕೆ ಹಾನಿ ಮಾಡುತ್ತಾನೆ ಎಂದು ಊಹಿಸುವ, ಅದರ ಅಪಾಯವಿರುವ, ಹಾನಿ ಮಾಡಲು ಪ್ರಯತ್ನಿಸುವ ವ್ಯಕ್ತಿಯನ್ನು ಮಾಜಿಸ್ಟೇಟರ ವಾರೆಂಟ್, ಆದೇಶವಿಲ್ಲದೆ ಬಂಧಿಸಬಹುದು. ಆ ವ್ಯಕ್ತಿ ‘ಅನುಮಾನಸ್ಪದ ಎಂದು ಊಹಿಸಿದರೂ’ ಸಹ ಬಂಧಿಸಬಹುದು.

ಆ ಕಾಯಿದೆಯ ಕಲಮು 8ರ ಪ್ರಕಾರ ಅಪರಾದವೊಂದು ಜರುಗಲಿದೆ ಅಥವಾ ಜರುಗಿದೆ ಎಂದು ಅನುಮಾನಸ್ಪದವಾಗಿ ನಂಬಿದರೆ ಸಹ ಅ ವ್ಯಕ್ತಿಯನ್ನು ಬಂಧಿಸಬಹುದು. ಪೋಲೀಸ್ ಅಧಿಕಾರಿಗೆ ಆ ವ್ಯಕ್ತಿಯ ಮನೆಯನ್ನು, ವಸ್ತುಗಳನ್ನು ಶೋದಿಸುವ, ಬಂಧಿಸುವ ಅದಿಕಾರವಿದೆ.

ಪರಿಹಾರದ ಹಕ್ಕುಗಳು

ಆದರೆ ಕಾನೂನುಬಾಹಿರವಾಗಿ ಬಂದಿಸಲ್ಪಟ್ಟ, ಜೈಲಿನಲ್ಲಿ ಹಿಂಸೆಗೆ ಒಳಗಾಗಿ ದೈಹಿಕವಾಗಿ ದುರ್ಬಲಗೊಂಡ, ಅನೇಕ ಸಂದರ್ಬಗಳಲ್ಲಿ ಲಾಕಪ್‌ನಲ್ಲಿ ಕೊಲೆಯಾದ ನಿರಪರಾದಿ ಭಾರತೀಯ ನಾಗರಿಕರಿಗೆ ಪರಿಹಾರದ ಹಕ್ಕುಗಳು ಇಂದಿಗೂ ಖಾತರಿಯಾಗಿಲ್ಲ. ಪ್ರಬುತ್ವದಿಂದ ಪ್ರಾಯೋಜಿಸಲ್ಪಟ್ಟ ಈ ನಾಗರಿಕ ಹಕ್ಕುಗಳ ಉಲ್ಲಂಘನೆಗಳಿಗೆ ಪರಿಹಾರ ದೊರಕಿದ ಉದಾಹರಣೆಗಳು ತುಂಬಾ ಕಡಿಮೆ. ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣಗಳ ಪೈಕಿ ಸಂಬಂದಿಸಿದ ನ್ಯಾಯಮೂರ್ತಿಗಳ ವಿವೇಚನೆಯ ಮೇಲೆ ಈ ಪರಿಹಾರ ದೊರಕುವುದು ಅವಲಂಬಿಸಿದೆ. ‘ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರಾಷ್ಟ್ರೀಯ ಸಮಾವೇಶ’(ಐಸಿಸಿಪಿಆರ್)ದಲ್ಲಿ ಭಾಗವಹಿಸಿದ ಭಾರತವು ‘ಪರಿಹಾರದ ಹಕ್ಕುಗಳ’ ಪರವಾಗಿ ಘೋಶಣೆಗೆ ಸಹಿ ಮಾಡಿದೆ. ಆದರೆ ಭಾರತದಲ್ಲಿ ಈ ದಮನದ ವಿರುದ್ದದ ಪರಿಹಾರವು ಒಂದು ಹಕ್ಕಾಗಿ ಜಾರಿಗೊಂಡಿಲ್ಲ. ಈ ‘ಪರಿಹಾರದ ಹಕ್ಕು’ ಪರಿಣಾಮಕಾರಿಯಾಗಿ ಜಾರಿಗೊಂಡಿದ್ದರೆ ಅದಿಕಾರಿಗಳು, ಪೋಲೀಸರು ಮತ್ತು ಪ್ರಬುತ್ವವು ತನ್ನದೇ ನಾಗರಿಕರ ವಿರುದ್ದ ದಮನಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುವ ಸಾದ್ಯತೆಗಳಿದ್ದವು. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. ದಕ್ಷಿಣ ಏಶ್ಯಾ ಮಾನವ ಹಕ್ಕುಗಳ ದಾಖಲೆ ಕೇಂದ್ರದ (ಎಸ್‌ಎಎಚ್‌ಆರ್‌ಡಿಸಿ) ರವಿ ನಾಯರ್ ಅವರು ‘ಪರಿಹಾರದ ಹಕ್ಕುಗಳಿಲ್ಲದೆ ಪ್ರಜಾಪ್ರಭುತ್ವದ ಆಸ್ತಿತ್ವವೇ ಅಪಾಯದಲ್ಲಿರುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಗೆ ಸೂಕ್ತ ಪರಿಹಾರ ಕೊಡಬೇಕೆನ್ನುವ ಕಾನೂನಿಂದ ಪ್ರಬುತ್ವವನ್ನು ರಕ್ಷಿಸುವುದು ಸರಕಾರದ ನ್ಯಾಯಸಮ್ಮತೆಯನ್ನು ಗೌಣಗೊಳಿಸುತ್ತದೆ’ ಎಂದು ಹೇಳುತ್ತಾರೆ.

ಸಂವಿದಾನದ ಅನುಚ್ಚೇದ 32 (1)ರ ಅನುಸಾರ ‘Remedies for Enforcement of Rights Conferred ಭಾಗವು ಕೊಟ್ಟಿರುವ ಹಕ್ಕುಗಳ ಜಾರಿಗಾಗಿ ಸೂಕ್ತ ನಡಾವಳಿಗಳ ಮೂಲಕ ಸುಪ್ರೀಂ ಕೋರ್ಟಗೆ ಹೋಗುವ ಹಕ್ಕನ್ನು ಖಾತ್ರಿಗೊಳಿಸಲಾಗಿದೆ

ಸಂವಿದಾನದ ಅನುಚ್ಚೇದ 32 (2)ರ ಅನುಸಾರ ‘ಹೇಬಿಯಸ್ ಕಾರ್ಪಸ್ ರೂಪದಲ್ಲಿ, ನೀಶೇದದ, ಆಜ್ಞಾಪತ್ರ ಮುಂತಾದ ರೂಪದ ರಿಟ್‌ಗಳನ್ನು, ಆದೇಶಗಳನ್ನು, ನಿರ್ದೇಶನಗಳನ್ನು ಕೊಡಲು ಸುಪ್ರೀಂಕೋರ್ಟಗೆ ಅದಿಕಾರವಿದೆ’

ಆದರೆ ಬಹುತೇಕ ಸಂದರ್ಬಗಳಲ್ಲಿ ನ್ಯಾಯಾಂಗವೂ ಸಹ ಸು ಮೋಟೋ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಪ್ರಭುತ್ವದ ಈ ದಮನಕಾರಿ ಆಡಳಿತದ ವಿರುದ್ದ ಹೋರಾಟ ನಡೆಸಲು ಶಕ್ತನಲ್ಲದ ಪ್ರಜೆಯು ಅಸಹಾಯಕನಾಗಿ ಮೂಲೆಗುಂಪಾಗುತ್ತಾನೆ, ಅನಾಥನಾಗುತ್ತಾನೆ ಮತ್ತು ತನ್ನದೇ ದೇಶದಲ್ಲಿ ನಿರಾಶ್ರಿತನಾಗುತ್ತಾನೆ.

ರುದುಲ್ ಶಾ ವರ್ಸಸ್ ಬಿಹಾರ್ ಸ್ಟೇಟ್ (1983), ಸೆಬಾಸ್ಟಿನ್ ಎಂ. ಹೊಂಗರಿ ವರ್ಸಸ್ ಕೇಂದ್ರ ಸರಕಾರ (1984), ಭೀಮ್‌ಸಿಂಗ್, ಎಂಎಲ್‌ಎ ವರ್ಸಸ್ ಜಮ್ಮು ಮತ್ತು ಕಾಶ್ಮೀರ ಸ್ಟೇಟ್ (1986), ರಾಜಸ್ತಾನ ಕಿಸಾನ್ ಸಂಘಟನೆ ವರ್ಸಸ್ ಸ್ಟೇಟ್ (1989), ನೀಲಾವತಿ ಬೆಹರಾ ವರ್ಸಸ್ ಒಡಿಸ್ಸಾ ಸ್ಟೇಟ್ (1993), ಮುಂತಾದ ಪ್ರಕರಣಗಳಲ್ಲಿ ನ್ಯಾಯಾಲಯವು ಸಂತ್ರಸ್ಥರಿಗೆ ಪರಿಹಾರ ಕೊಡಿಸಿದೆ.

1993ರಲ್ಲಿ ಮಾನವ ಹಕ್ಕುಗಳ ಕಾಯ್ದೆ ಅಡಿಯಲ್ಲಿ 13, ಅಕ್ಟೋಬರ್ 1993 ರಂದು ‘ಮಾನವ ಹಕ್ಕುಗಳ ಆಯೋಗ’ವನ್ನು ಸ್ಥಾಪಿಸಲಾಯಿತು. ಅಂದಿನಿಂದಲೂ ಆಯೋಗವು ತನ್ನ ಸೀಮಿತ ಅದಿಕಾರದ ಮಿತಿಯೊಳಗೆ ಗಮನಾರ್ಹ ಕೆಲಸ ಮಾಡಿದೆ. ಅದರಲ್ಲಿ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭಗಳಲ್ಲಿ ಪೋಲೀಸರನ್ನು ಹೊಣೆಗಾರರನ್ನಾಗಿಸುವುದು ಇದರ ಆರಂಭದ ಸಾದನೆಗಳಲ್ಲೊಂದು. ಆದರೆ ಅದರ ಆಡಳಿತದಲ್ಲಿನ ಕಾನೂನುಗಳಲ್ಲಿನ ಕೊರತೆ ಮತ್ತು ದೌರ್ಬಲ್ಯಗಳ ಕಾರಣದಿಂದ ಅದರ ಕಾರ್ಯನಿರ್ವಹಣೆಯಲ್ಲಿ ಹಿನ್ನಡೆಯುಂಟಾಗಿದೆಯೆಂದು ಆರ್.ಎನ್. ಮಂಗೋಲಿ ಮತ್ತು ಗಣಪತಿ ತಾರಾಸೆ ಹೇಳುತ್ತಾರೆ.

(ಮುಂದುವರೆಯುವುದು…)

Donate Janashakthi Media

Leave a Reply

Your email address will not be published. Required fields are marked *