ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ಗುಂಪು, ಸಿ.ಸಿ.ಜಿ.(ಕಾನ್ಸ್ಟಿಟ್ಯೂ಼ಷನಲ್ ಕಂಡಕ್ಟ್ ಗ್ರೂಪ್- ಸಂವಿಧಾನಿಕ ನಡವಳಿಕೆ ಗುಂಫು) ವಿವಿಧ ಅಂತರರಾಷ್ಟ್ರೀಯ ಸೂಚ್ಯಂಕಗಳಲ್ಲಿ ಭಾರತದ ಶ್ರೇಯಾಂಕವು ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ದೇಶ ಈ ಸೂಚ್ಯಂಕಗಳಲ್ಲಿ ಕುಸಿಯುತ್ತಿರುವ ಬಗ್ಗೆ ಕಳವಳ ಪಡುವ ಬದಲು ಸರ್ಕಾರವು ವರದಿಗಳು ಮತ್ತು ಸಮೀಕ್ಷೆಗಳ ಮೇಲೆಯೇ ದಾಳಿ ಮಾಡುತ್ತಿದೆ ಎಂದು ಸಿ.ಸಿ.ಜಿ. ಖೇದ ವ್ಯಕ್ತಪಡಿಸಿದೆ.
ಜಾಗತಿಕ ಹಸಿವಿನ ಸೂಚ್ಯಂಕ, 2021, ಇತರ ದೇಶಗಳಲ್ಲಿ ಭಾರತದ ಶ್ರೇಯಾಂಕದಲ್ಲಿ ಕುಸಿತವನ್ನು ತೋರಿಸುವ ಇತ್ತೀಚಿನ ವರದಿಯಾಗಿದೆ. ಜಾಗತಿಕ ಹಸಿವು ಸೂಚ್ಯಂಕವನ್ನು ಯುರೋಪಿಯನ್ ಸರಕಾರೇತರ ಸಂಘಟನೆ(ಎನ್‌ಜಿಒ)ಗಳವರು ವಿಶ್ವದ ವಿವಿಧ ದೇಶಗಳಲ್ಲಿನ ಹಸಿವನ್ನು ಹೋಲಿಸಿ ಸಿದ್ಧಪಡಿಸಿದ್ದಾರೆ. ವರದಿಯ ಪ್ರಕಾರ, ಭಾರತವು 2015 ರಲ್ಲಿ 55 ನೇ ಸ್ಥಾನದಿಂದ 2021 ರಲ್ಲಿ 101 ನೇ ಸ್ಥಾನಕ್ಕೆ ಕುಸಿದಿದೆ, ಕೇವಲ 15 ರಾಷ್ಟ್ರಗಳು ಮಾತ್ರ ಭಾರತಕ್ಕಿಂತ ಕೆಳಗಿವೆ ಎಂಬ ಸಂಗತಿಯತ್ತ ಸಿ.ಸಿ.ಜಿ. ಗಮನ ಸೆಳೆದಿದೆ. ಈ ಸೂಚ್ಯಂಕ ಕೆಲವು ಮಿತಿಗಳನ್ನು ಹೊಂದಿದ್ದರೂ ಸಹ, ತಳಮಟ್ಟದ ವಾಸ್ತವತೆಯಿಂದ ಹೊರತಾಗಿದೆ, “ಅವೈಜ್ಞಾನಿಕ ವಿಧಾನ” ವನ್ನು ಆಧರಿಸಿದೆ ಎಂಬ ಸರ್ಕಾರದ ವಾದವು “ತಪ್ಪಾಗಿದೆ” ಎಂದು ಸಿ.ಸಿ.ಜಿ. ಹೇಳಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಸರ್ಕಾರದ ಸ್ವಂತ ದತ್ತಾಂಶ, ಸಿ.ಎಂ.ಐ.ಇ.(ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ) ಮತ್ತು ಶೈಕ್ಷಣಿಕ ಅಧ್ಯಯನಗಳು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಸೂಚಿಸಲಾದ ಅಂಕಿಅಂಶಗಳನ್ನು ಬಹುಪಾಲು ದೃಢೀಕರಿಸುತ್ತವೆ ಎಂದು ಸಿ.ಸಿ.ಜಿ. ಹೇಳಿದೆ.
ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿಲ್ಲದ ಈ ಗುಂಪು ನವಂಬರ್ 15ರಂದು ನೀಡಿದ ಸಾರ್ವಜನಿಕ ಹೇಳಿಕೆ “… ಶ್ರೇಯಾಂಕಗಳನ್ನು ಸಂಚಿತವಾಗಿ ತೆಗೆದುಕೊಂಡಾಗ, ಭಾರತದಲ್ಲಿ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯು ಕ್ಷೀಣಿಸುತ್ತ ಬರುತ್ತಿದೆ, ಮಾತ್ರವಲ್ಲ ಭಾರತವನ್ನು ಪ್ರಮುಖ ಪ್ರಜಾಪ್ರಭುತ್ವವನ್ನಾಗಿ ಮಾಡುತ್ತಿರುವ ಅಂಶಗಳು ನಿಧಾನವಾಗಿ ನಶಿಸುತ್ತಿವೆ ಎಂದು ತೋರಿಸುತ್ತವೆ” ಎಂಧೂ ಅಭಿಪ್ರಾಯ ಪಟ್ಟಿದೆ.
ಭಾರತದ ಶ್ರೇಯಾಂಕ ತೀವ್ರವಾಗಿ ಕುಸಿದಿರುವ ಹಲವು ನಿದರ್ಶನಗಳನ್ನು ಸಿ.ಸಿ.ಜಿ. ಪ್ರಸ್ತಾಪಿಸಿದೆ. ಉದಾಹರಣೆಗೆ, ಶಿಕ್ಷಣ, ಜೀವಿತಾವಧಿ ಮತ್ತು ತಲಾ ಆದಾಯವನ್ನು ಅಳೆಯುವ ಯುಎನ್‌ಡಿಪಿಯ ‘ಮಾನವ ಅಭಿವೃದ್ಧಿ ವರದಿ’ಯು 2020 ರಲ್ಲಿ ಭಾರತವನ್ನು 189 ದೇಶಗಳಲ್ಲಿ 131 ನೇ ಸ್ಥಾನದಲ್ಲಿಟ್ಟಿದೆ, ಅಂದರೆ, 2018 ರಿಂದ ಎರಡು ಸ್ಥಾನಗಳಷ್ಟು ಕೆಳಗಿಳಿದಿದೆ. 2014 ರಿಂದ ಭಾರತದ ಸ್ಥಾನವು ಸುಧಾರಿಸಿಲ್ಲ.
2021 ರ ಜಾಗತಿಕ ಲಿಂಗ ಅಂತರ ವರದಿಯು ಭಾರತವನ್ನು 140 ರಲ್ಲಿ ಇರಿಸಿದೆ, ಅಂದರೆ ಅದು 28 ಸ್ಥಾನಗಳಷ್ಟು ಕೆಳಕ್ಕೆ ಜಾರಿದೆ. ಆದರೆ ನೆರೆಯ ಬಾಂಗ್ಲಾದೇಶ 65 ನೇ ಸ್ಥಾನದಲ್ಲಿದೆ. ಇದಲ್ಲದೆ, ‘ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ’ ಪ್ರಕಟಿಸಿರುವ ವೈಯಕ್ತಿಕ ಯೋಗಕ್ಷೇಮವನ್ನು ಅಳೆಯುವ ‘ವಿಶ್ವ ಸಂತೋಷ ವರದಿ’ಯು ಭಾರತವನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದೆ. ಭಾರತ 149 ದೇಶಗಳಲ್ಲಿ 139 ನೇ ಸ್ಥಾನದಲ್ಲಿದೆ, ಇದರಲ್ಲಿ ಪಾಕಿಸ್ತಾನ (105 ನೇ ಶ್ರೇಯಾಂಕ) ಕೂಡ ಭಾರತಕ್ಕಿಂತ ಹೆಚ್ಚು ಸಂತೋಷದ ದೇಶವೆಂದು ಕಂಡುಬಂದಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ, ಸ್ವೀಡನ್‌ನ ಪ್ರಸಿದ್ಧ ವಿ-ಡೆಮ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ‘ಪ್ರಜಾಪ್ರಭುತ್ವ ವರದಿ’ ಪ್ರಸ್ತುತ ಆಡಳಿತದಲ್ಲಿ ಮಾಧ್ಯಮ, ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಹೆಚ್ಚೆಚ್ಚು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಗಮನಿಸಿದೆ ಮತ್ತು “ಭಾರತವು ಒಂದು ತೀವ್ರ ಅವನತಿಯ ಹಾದಿಯಲ್ಲಿ, ಮುಂದುವರೆದಿದೆ, ಎಷ್ಟರ ಮಟ್ಟಿಗೆ ಎಂದರೆ, ಅದು ಒಂದು ಪ್ರಜಾಪ್ರಭುತ್ವ ಎಂಬ ಸ್ಥಾನಮಾನವನ್ನು ಸುಮಾರಾಗಿ ಕಳೆದುಕೊಂಡೇ ಬಿಟ್ಟಿದೆ” ಎಂದು ಹೇಳಿದೆ. ಹಂಗೇರಿ, ಪೋಲೆಂಡ್ ಮತ್ತು ಬ್ರೆಜಿಲ್‌ನೊಂದಿಗೆ ಒಂದು ಹೊಗಳಲಾರದ ಗುಂಪಿನಲ್ಲಿ ಭಾರತವನ್ನು ಇಟ್ಟು ಈ ವರದಿ “ನಿರಂಕುಶೀಕರಣದ ಮೊದಲ ಹಂತಗಳು ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಮೂಲ ಮಾಢುವುದು ಮತ್ತು ನಾಗರಿಕ ಸಮಾಜವನ್ನು ಮೊಟಕುಗೊಳಿಸುವುದನ್ನು ಒಳಗೊಂಡಿರುತ್ತವೆ” ಎಂದು ವಾದಿಸುತ್ತದೆ. “..ಪತ್ರಿಕಾ ಸ್ವಾತಂತ್ರ್ಯದಲ್ಲಿ ತೀವ್ರ ಕುಸಿತದೊಂದಿಗೆ ಹೆಚ್ಚುತ್ತಿರುವ ನಾಗರಿಕ ಸಮಾಜದ ದಮನ ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತುತ ಹಿಂದೂ-ರಾಷ್ಟ್ರೀಯವಾದಿ ಆಳ್ವಿಕೆಯೊಂದಿಗೆ ತಳುಕು ಹಾಕಿಕೊಂಡಿದೆ” ಎಂದು ವರದಿ ಸ್ಪಷ್ಟವಾಗಿಯೇ ಹೇಳಿದೆ.
‘ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್’ ನ ‘ಪ್ರಜಾಪ್ರಭುತ್ವ ಸೂಚ್ಯಂಕ’ದಲ್ಲಿ ಕೂಡ ಭಾರತದ ಸ್ಥಾನದಲ್ಲಿ ತೀವ್ರ ಕುಸಿತ ಉಂಟಾಗಿದೆ. ಇದು 2014 ರಲ್ಲಿ 167 ದೇಶಗಳಲ್ಲಿ 27 ನೇ ಸ್ಥಾನದಿಂದ 2020 ರಲ್ಲಿ 53 ನೇ ಸ್ಥಾನಕ್ಕೆ, 26 ಸ್ಥಾನಳಷ್ಟು ಕೆಳಕ್ಕೆ ಕುಸಿದಿದೆ. ಆದಾಗ್ಯೂ, ಮೋದಿ ಸರ್ಕಾರವು ಸಂಸತ್ತಿನಲ್ಲಿ, ಇದು ತೀರಾ ಕ್ಷುಲ್ಲಕ ಮತ್ತು ತುಂಬಾ ಸೂಕ್ಷ್ಮ ಎನ್ನುತ್ತ ಈ ಕುರಿತ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಎಂದು ಸಿ.ಸಿ.ಜಿ. ಖೇದ ವ್ಯಕ್ತಪಡಿಸಿದೆ.
“ಭಾರತವು ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಲು ಮತ್ತು ಆಡಳಿತದ ವಿರುದ್ಧ ನಿಲ್ಲುವ ಕಾರ್ಯಕರ್ತರು, ಮಾಧ್ಯಮ ವ್ಯಕ್ತಿಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧ ದೇಶದ್ರೋಹ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಕಾನೂನುಗಳನ್ನು ಬಳಸುವುದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಮಾನವ ಹಕ್ಕುಗಳ ಉಲ್ಲಂಘನೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿವೆ ಮತ್ತು ಚುನಾವಣಾ ಆಯೋಗ ಮತ್ತು ನ್ಯಾಯಾಂಗದಂತಹ ಸಾಂವಿಧಾನಿಕ ಸಂಸ್ಥೆಗಳು ನಿವೃತ್ತಿಯ ನಂತರದ ಆಮಿಷಗಳು, ಮತ್ತು ಬೆದರಿಕೆಗಳು ಸೇರಿದಂತೆ ಎಲ್ಲಾ ರೀತಿಯ ವಿಧಾನಗಳಿಂದ ದುರ್ಬಲಗೊಳಿಸಲ್ಪಟ್ಟಿವೆ ಮತ್ತು ಸತ್ವಹೀನಗೊಳಿಸಲ್ಪಟ್ಟಿವೆ, ”ಎಂದು ಸಿ.ಸಿ.ಜೆ. ತನ್ನ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಘೋರ ಅಪಾಯವನ್ನು ಸೂಚಿಸುವ ಈ ಸನ್ನಿವೇಶಗಳನ್ನು ಸರ್ವಶಕ್ತಿಯಿಂದ ಹಿಂದೊತ್ತಬೇಕಾಗಿದೆ ಎಂದು ಹೇಳಿರುವ ಸಿ.ಸಿ.ಜಿ, ಈ ಸವಾಲುಗಳನ್ನು ಜಾಗರೂಕ ನಾಗರಿಕ ಸಮಾಜ, ಮಾಧ್ಯಮಗಳು, ರಾಜಕೀಯ ಪ್ರತಿಪಕ್ಷಗಳು, ಜನಾಂದೋಲನಗಳು ಮತ್ತು ಚುನಾವಣಾ ಆಯೋಗ ಮತ್ತು ನ್ಯಾಯಾಂಗದಂತಹ ಸಾಂವಿಧಾನಿಕ ಸಂಸ್ಥೆಗಳು ಪುನಶ್ಚೇತನ ಪಡೆದು ಎದುರಿಸಬೇಕು ಎಂದು ಹೇಳಿದೆ. “ಅಪಾಯಕ್ಕೆ ಒಡ್ಡಲ್ಪಟ್ಟಿರುವುದು ಬಡವರು ಮತ್ತು ಸೌಲಭ್ಯವಂಚಿತ ಜನವಿಭಾಗಗಳು ಮತ್ತು ಜೀವನ ಮತ್ತು ಸ್ವಾತಂತ್ರ್ಯ ಹಾಗೂ ಸಂವಿಧಾನದ ಅಡಿಯಲ್ಲಿ ಭಾರತದ ಜನರು ಕಷ್ಟಪಟ್ಟು ಗೆದ್ದ ಹಕ್ಕಗಳೇ” ಎಂದು ಈ ನಿವೃತ್ತ ಉನ್ನತಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.