ಭಾರತದ ಹಿತಾಸಕ್ತಿಗೆ ವಿರುದ್ಧವಾದ BECA ಒಪ್ಪಂದ ಬೇಡ : ಸಿಪಿಎಂ, ಸಿಪಿಐ

  • ರಾಷ್ಟ್ರೀಯತೆಗೆ ಹಿತಕರವಲ್ಲ, ಆತ್ಮನಿರ್ಭರ್‍ ವಿರುದ್ಧ ಎಂದ ಯೆಚೂರಿ ಮತ್ತು ಡಿ.ರಾಜ

ನವದೆಹಲಿ: ಭಾರತ ಮತ್ತು ಅಮೇರಿಕಾ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರ ನಡುವಿನ ಭೌಗೋಳಿಕ-ಅವಕಾಶಗಳ ಸಹಕಾರ ಒಪ್ಪಂದ ಭಾರತದ ಹಿತಾಸಕ್ತಿ ಪೂರಕವಾಗಿಲ್ಲ ಎಂದು ಸಿಪಿಎಂ, ಸಿಪಿಐ ಪ್ರತಿಕ್ರಿಯಿಸಿವೆ.

ಈ ಕುರಿತು ಜಂಟಿ ಹೇಳಿಕೆ ನೀಡಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಅಕ್ಟೋಬರ್‍ 27ರಂದು ದಿಲ್ಲಿಯಲ್ಲಿ ಭಾರತೀಯ ಮತ್ತು ಅಮೆರಿಕನ್ ರಕ್ಷಣಾ ಹಾಗೂ ವಿದೇಶಾಂಗ ವ್ಯವಹಾರಗಳ ಮಂತ್ರಿಗಳ ನಡುವಿನ 2+2 ಸಭೆಯ ಫಲಿತಾಂಶವಾಗಿ ‘ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ’ (Basic Exchange and Cooperation Agreement -BECA)ಕ್ಕೆ ಸಹಿ ಹಾಕಲಾಗಿದೆ. ಇದು ಭೌಗೋಳಿಕ-ಅವಕಾಶದ ಸಹಕಾರದ ಒಪ್ಪಂದ. ಇದು ಭಾರತದ ಸ್ವತಂತ್ರ ವಿದೇಶಾಂಗ ಧೋರಣೆಯ ಮೇಲೆ ಮತ್ತು ವ್ಯೂಹಾತ್ಮಕ ಸ್ವಾಯತ್ತತೆಯ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಬೀರಲಿರುವ ಇದು ನಮ್ಮ ರಾಷ್ಟ್ರೀಯ ಹಿತಗಳಿಗೆ ಅನುಗುಣವಾಗಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಜಂಟಿ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಚೀನಾದೊಂದಿಗೆ ಗಡಿ ಪ್ರಶ್ನೆಯನ್ನು ಬಗೆಹರಿಸಿಕೊಳ್ಳಲು  ಭಾರತ ಏಷ್ಯಾದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹದ ಅಡಿಯಾಳು ಮಿತ್ರನಾಗುವ  ಅಗತ್ಯವೇನೂ ಇಲ್ಲ  ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಒಪ್ಪಂದದೊಂದಿಗೆ ಅಮೆರಿಕಾದ ಜತೆಗೆ ಒಂದು ಮಿಲಿಟರಿ ಸಖ್ಯತೆಯ ಬುನಾದಿಪ್ರಾಯ ಎನ್ನಲಾದ ಎಲ್ಲ ಒಪ್ಪಂದಗಳೂ ಪೂರ್ಣಗೊಂಡಂತಾಗಿದೆ. ಅಲ್ಲದೆ ಇದು ‘ಕ್ವಾಡ್’(ಚತುರ್ರಾಷ್ಟ್ರ) ಕೂಟದ ನಾಲ್ಕು ಭಾಗೀದಾರರ ನಡುವೆ ‘ಮಲಬಾರ್‍ ಸಮರಾಭ್ಯಾಸ’ ಎಂದು ಹೆಸರಿಸಿರುವ ಜಂಟಿ ನಾವಿಕ ಸಮರಾಭ್ಯಾಸ ನವಂಬರ್‍ ತಿಂಗಳಲ್ಲಿ ನಡೆಯಲಿದೆ ಎಂಬ ಪ್ರಕಟಣೆಯ ಹಿನ್ನೆಲೆಯಲ್ಲಿ ಬಂದಿದೆ. ಈ ಕ್ರಮಗಳನ್ನು ಇತ್ತೀಚೆಗೆ ಲಡಾಖ್‍ನಲ್ಲಿ ಚೀನಾದೊಂದಿಗೆ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹೆಸರಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ಈ ಒಪ್ಪಂದಗಳಿಗೆ ಇತ್ತೀಚಿನ ಈ ವಿವಾದಕ್ಕಿಂತ ಎಷ್ಟೋ ಮೊದಲಿಂದಲೇ ಸಿದ್ಧತೆ ನಡೆಯುತ್ತ ಬಂದಿದೆ ಎಂಬ ಸಂಗತಿಯತ್ತ ಸೀತಾರಾಮ್‍ ಯೆಚುರಿ ಮತ್ತು ಡಿ.ರಾಜ ಅವರ ಈ ಜಂಟಿ ಹೇಳಿಕೆ ಗಮನ ಸೆಳೆದಿದೆ.

‘ಸಮರ ಸಾಗಾಣಿಕೆ ವಿನಿಮಯ ಒಪ್ಪಂದ’(Logistics Exchange Agreement), ‘ಸಂವಹನ ಭದ್ರತಾ ಒಪ್ಪಂದ’(Communications Security Agreement) ಮತ್ತು ಚತುರ್ರಾಷ್ಟ್ರ ವೇದಿಕೆಯನ್ನು ಮೇಲ್ದರ್ಜೆಗೆ ಏರಿಸುವುದು ಇವೆಲ್ಲ ಕಳೆದ ಎರಡು ವರ್ಷಗಳಲ್ಲಿ, ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಎಷ್ಟೋ ಮೊದಲಿಗೆ ನಡೆದಿವೆ ಎಂಬುದನ್ನು ಗಮನಿಸಬೇಕಾಗಿದೆ.ಈ ಒಪ್ಪಂದಗಳು ಭಾರತೀಯ ಸಶಸ್ತ್ರ ಪಡೆಗಳನ್ನು ಅಮೆರಿಕನ್‍ ಮಿಲಿಟರಿ ಮತ್ತು ಸಾಮರಿಕ ವ್ಯೂಹದೊಂದಿಗೆ ಬಿಗಿದಿವೆ ಸಂವಹನ ಮತ್ತು ಇಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಒಂದಕ್ಕೊಂದು ಕೂಡಿಸುವುದು ಭಾರತೀಯ ರಕ್ಷಣಾ ಸಂರಚನೆಯ ಸಮಗ್ರತೆಯನ್ನು ಮತ್ತು ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವ ಅವಕಾಶದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಒಪ್ಪಂದಗಳು ನಮ್ಮನ್ನು ಅಮೆರಿಕನ್‍ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿಸುವಂತೆ ಮಾಡಲಿದೆ, ಇವುಗಳ ತಂತ್ರಜ್ಞಾನ ಮತ್ತು ವ್ಯವಸ್ಥೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಹತೋಟಿಯಲ್ಲಿರುತ್ತವೆ ಎಂದು ಜಂಟಿ ಹೇಳಿಕೆ ಎಚ್ಚರಿಸಿದೆ.

ಆ ದೇಶದೊಂದಿಗೆ ಮೂಡಿ ಬರುತ್ತಿರುವ ಮಿಲಿಟರಿ ಸಖ್ಯತೆ ಭಾರತದ ಸ್ವತಂತ್ರ ವಿದೇಶಾಂಗ ಧೋರಣೆಯ ಮೇಲೆ ಮತ್ತು ವ್ಯೂಹಾತ್ಮಕ ಸ್ವಾಯತ್ತತೆಯ ಮೇಲೆ ದೀರ್ಘಾವಧಿಯ ದುಷ್ಪರಿಣಾಮಗಳನ್ನು ಬೀರಲಿದೆ. ಇದು ನಮ್ಮ ರಾಷ್ಟ್ರೀಯ ಹಿತಗಳಿಗೆ ಅನುಗುಣವಾಗಿಲ್ಲ.ಕೇಂದ್ರ ಸರಕಾರ ಚೀನಾದೊಂದಿಗೆ ಗಡಿ ಪ್ರಶ್ನೆಯನ್ನು ಬಗೆಹರಿಸಿಕೊಳ್ಳಲು ಅತ್ಯುನ್ನತ ರಾಜಕೀಯ ಮತ್ತು ರಾಜತಾಂತ್ರಿಕ ಮಟ್ಟಗಳಲ್ಲಿ ಮಾತುಕತೆಗಳನ್ನು ಮುಂದುವರೆಸಬೇಕು. ಇದಕ್ಕಾಗಿ ಭಾರತಕ್ಕೆ ಏಷ್ಯಾದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹದ ಅಡಿಯಾಳು ಸಖ್ಯತೆಯ  ಅಗತ್ಯವೇನೂ ಇಲ್ಲ ಎಂದು ಸಿಪಿಐ(ಎಂ) ಮತ್ತು ಸಿಪಿಐ  ಹೇಳಿವೆ.

 

 

 

Donate Janashakthi Media

Leave a Reply

Your email address will not be published. Required fields are marked *