ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯೂ – ಕೋಮುವಾದದ ವಿರುದ್ಧ ಹೋರಾಟವೂ

ಡಾ. ಕೆ ಪ್ರಕಾಶ್‌ 

ಸೆಪ್ಟೆಂಬರ್‌ 7 ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಕಾಂಗ್ರೆಸ್‌ನ ಭಾರತ್‌ ಜೋಡೋ ಪಾದಯಾತ್ರೆಯು 150 ದಿನಗಳ ಕಾಲ ದೇಶದ 12 ರಾಜ್ಯಗಳಲ್ಲಿ ಸುಮಾರು   3570ಕಿ.ಮೀ. ಕ್ರಮಿಸಲಿದೆ. ಕೇರಳದಲ್ಲಿ 18 ದಿನ, ಕರ್ನಾಟಕದಲ್ಲಿ 21 ದಿನ, ಉತ್ತರಪ್ರದೇಶದಲ್ಲಿ 2 ದಿನ, ಹೀಗೆ ವಿವಿಧ ರಾಜ್ಯಗಳಲ್ಲಿ ಇದು ಸಂಚರಿಸಲಿದೆ. ಇದರ ನೇತೃತ್ವವನ್ನು ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿಯವರು ವಹಿಸಿದ್ದಾರೆ.

ಭಾರತ್‌ ಜೋಡೋ ಯಾತ್ರೆಗೆ ಸಂಬಂಧಿಸಿ ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾತ್ರೆಯ ಉದ್ದೇಶದ ಕುರಿತು ಹೀಗೆ ಹೇಳಲಾಗಿದೆ;

“ಈ ಯಾತ್ರೆಯ ಉದ್ದೇಶ ಭಾರತವನ್ನು ಒಂದುಗೂಡಿಸುವುದು; ಒಂದಾಗಿ ಕೂಡುವುದು ಮತ್ತು ನಮ್ಮ ರಾಷ್ಟ್ರವನ್ನು ಬಲಿಷ್ಟಗೊಳಿಸುವುದು. . . ಯಾತ್ರೆಯು ಈಗಾಗಲೇ ಅಪಾರವಾದ ಪ್ರತಿಕ್ರಿಯೆಯನ್ನು ಪಡೆದಿದೆ; ಇಂದು ನಮ್ಮ ರಾಷ್ಟ್ರವನ್ನು ವಿಭಜಿಸುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳ ವಿರುದ್ಧ ತಮ್ಮ ಧ್ವನಿಯೆತ್ತಲು ಲಕ್ಷಾಂತರ ಜನರು ಕಾಂಗ್ರೆಸ್‌ ನಾಯಕರೊಂದಿಗೆ ಈ ಚಳುವಳಿಯಲ್ಲಿ ಜೊತೆಗೂಡಿದ್ದಾರೆ. ಅಪಾರ ನಿರುದ್ಯೋಗ ಮತ್ತು ಹಣದುಬ್ಬರ, ದ್ವೇಷ ಮತ್ತು ವಿಭಜನೆಯ ರಾಜಕಾರಣ ಮತ್ತು ರಾಜಕೀಯ ವ್ಯವಸ್ಥೆಯ ಅತಿಯಾದ ಕೇಂದ್ರೀಕರಣದ ವಿಚಾರಗಳನ್ನು ಈ ಯಾತ್ರೆಯು ಚರ್ಚಿಸುತ್ತದೆ. . .  ಈ ಯಾತ್ರೆಯು ಭಾರತದ ಐಕ್ಯತೆ, ಅದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಜನತೆಯ ನಂಬಲಸಾಧ್ಯ ಸ್ಥೈರ್ಯದ ಆಚರಣೆಯಾಗಿದೆ. . .”

ಈ ಘೋಷಿತ ಉದ್ದೇಶವು ಉದಾತ್ತವಾಗಿದೆ ಮತ್ತು ಸ್ಪಷ್ಟವಾಗಿದೆ. ಆದರೆ ಸ್ವತಃ ಕಾಂಗ್ರೆಸ್‌ ಈ ಉದ್ದೇಶಗಳಿಗೆ ಪೂರಕವಾಗಿದೆಯೇ ಎಂಬುದು ಪ್ರಶ್ನೆ. ದ್ವೇಷ ಮತ್ತು ವಿಭಜನೆಯ ರಾಜಕಾರಣವನ್ನು ವಿರೋಧಿಸುವುದು ಯಾತ್ರೆಯ ಉದ್ದೇಶಗಳಲ್ಲಿ ಒಂದು ಎಂದು ಹೇಳಿಕೊಳ್ಳಲಾಗಿದೆ. ಕೇರಳದಲ್ಲಿ ಬಿಜೆಪಿಗೆ ಒಂದು ಸ್ಥಾನವೂ ಬರದ ಹಾಗೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಸಿಪಿಐ(ಎಂ) ಪಕ್ಷವನ್ನು ಕಾಂಗ್ರೆಸ್‌ನವರು ಹೇಗೆ ಕಾಣುತ್ತಿದ್ದಾರೆ? ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕೆಂಬ ವಿಚಾರದಲ್ಲಿ ಆರ್‌ಎಸ್‌ಎಸ್‌ ಶಕ್ತಿಗಳಿಗೆ ಪೈಪೋಟಿ ನೀಡುವ ಹಾಗೆ ಎಲ್‌ಡಿಎಫ್‌ ಸರ್ಕಾರದ ವಿರುದ್ಧ ಹೋರಾಟಗಳನ್ನು ಸಂಘಟಿಸಿದ್ದು ಕಾಂಗ್ರೆಸ್‌ ಎಂಬುದನ್ನು ಮರೆಯಲಾದೀತೆ? ಕೇರಳದಲ್ಲಿ ಕಾಂಗ್ರೆಸ್‌ಗೆ ಹಿಂದುತ್ವ ಕೋಮುವಾದವನ್ನು ಮತ್ತು ಅಲ್ಪಸಂಖ್ಯಾತ ಮೂಲಭೂತವಾದವನ್ನು ಎದುರಿಸುವ ಆದ್ಯತೆಯೇನಾದರೂ ಇದೆಯೇ ಎಂಬ ಪ್ರಶ್ನೆಗೆ ಸರಳ ಉತ್ತರವಿಲ್ಲ. ಸಿಪಿಐ(ಎಂ) ಮತ್ತು ಎಡ ಪಕ್ಷಗಳನ್ನು ಎದುರಿಸುವ ಮತ್ತು ಅದಕ್ಕಾಗಿ ಸಂಘಪರಿವಾರದ ಜೊತೆಯಲ್ಲಿ ಕೈಜೋಡಿಸುವ ಪರಂಪರೆ ಕೇರಳದಲ್ಲಿ ಕಾಂಗ್ರೆಸ್‌ನ ಚರಿತ್ರೆಯಾಗಿದೆ (ಕಾಂಗ್ರೆಸ್‌ನ ಸೈದ್ಧಾಂತಿಕ ದೌರ್ಬಲ್ಯಕ್ಕೆ ಕಾಕತಾಳಿಯ ಘಟನೆಯೊಂದು ಕೇರಳದ ಆಲುವದಲ್ಲಿ ನಡೆದಿದೆ. ಪಾದಯಾತ್ರೆಯು ಎರ್ನಾಕುಲಂ ಬಳಿಯ ಆಲುವಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಹಾಕಿದ್ದ ಸ್ವಾತಂತ್ರ್ಯ ಹೋರಾಟಗಾರರ ಫೋಟೊಗಳಿರುವ ಬ್ಯಾನರ್‌ನಲ್ಲಿ ಹಿಂದುತ್ವ ಸಿದ್ಧಾಂತಿ ಸಾವರ್ಕರ್‌ ಅವರ ಫೋಟೋ ಕೂಡಾ ಹಾಕಿದ್ದರು ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು).

ಭಾರತ್‌ ಜೋಡೋ ಯಾತ್ರೆಯ ಸಂಘಟಕರು ಕೇರಳದಲ್ಲಿ ನಡೆಸಿದ ವಾಗ್ದಾಳಿಗಳಿಗೆ ಸಿಪಿಐ(ಎಂ) ಎತ್ತಿದ ಪ್ರಶ್ನೆ, “ಕೇರಳದಲ್ಲಿ 18 ದಿನ, ಉತ್ತರ ಪ್ರದೇಶದಲ್ಲಿ 2 ದಿನ” ಯಾಕೆ? ಜನರ ಐಕ್ಯತೆಯನ್ನು ಕ್ರೋಢೀಕರಿಸುವುದೋ ಅಥವಾ ಓಟುಗಳನ್ನು ಕ್ರೋಢೀಕರಿಸುವುದೋ?

ಈ ಪ್ರಶ್ನೆಗಳಿಗೆ ಕಾಂಗ್ರೆಸ್‌ ಉತ್ತರಿಸಿದ ಪರಿ ಅಥವಾ ದಾಳಿ ಹೇಗಿತ್ತು?… ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ ಅವರನ್ನು “ಮುಂಡು ಮೋದಿ” (ಧೋತಿಯನ್ನು ಧರಿಸಿದ ಮೋದಿ) ಎಂದು, ಸಿಪಿಐ(ಎಂ) ಪಕ್ಷವನ್ನು “ಬಿಜೆಪಿಯ ಎ ಟೀಮ್”‌ ಎಂದು ಕಾಂಗ್ರೆಸ್‌ ವಕ್ತಾರರಾದ ಜೈರಾಂ ರಮೇಶ್‌ ವಾಗ್ದಾಳಿಗಳನ್ನು ನಡೆಸಿದರು. ಇಂತಹುದೇ ಮಾತುಗಳನ್ನು ಬಹುತೇಕ ಕಾಂಗ್ರೆಸ್‌ ನಾಯಕರು ಆಡಿದರು. ಭಾರತವನ್ನು, ಅರ್ಥಾತ್‌, ಜನರನ್ನು ಒಗ್ಗೂಡಿಸುವ ಉದಾತ್ತ ನಡವಳಿಕೆ ಹೀಗೇ ಇರುತ್ತದೆ ಎಂದು ಭಾವಿಸಬೇಕೇ? ಪ್ರತಿನಿತ್ಯ ಹತ್ತಾರು ಕಾಂಗ್ರೆಸಿಗರು ಬಿಜೆಪಿ ಸೇರುತ್ತಿರುವ ಕೇರಳದ ಸಂದರ್ಭದಲ್ಲಿ, ಒಗ್ಗೂಡಿಸಬೇಕಾದುದು ಯಾರನ್ನು ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

ಸೆ.30 ರಂದು ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಯು ಗುಂಡ್ಲುಪೇಟೆಯ ಮೂಲಕ ಕರ್ನಾಟಕವನ್ನು ಪ್ರವೇಶಿಸಿದೆ. ಅಲ್ಲೆಲ್ಲ ರಾರಾಜಿಸಿದ್ದು, ರಾಹುಲ್‌ ಗಾಂಧಿ ಬಾವುಟಗಳು, ಕಾಂಗ್ರೆಸ್‌ ಪಕ್ಷದ ಬಾವುಟಗಳು.  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಗಿದ ಘೋಷಣೆಗಳು; ʼಕಾಂಗ್ರೆಸ್‌ ಪಾರ್ಟಿ ಕಿ ಜೈ, ಸೋನಿಯಾ ಗಾಂಧಿ ಕಿ ಜೈ, ರಾಹುಲ್‌ ಗಾಂಧಿ ಕಿ ಜೈ, ಬೋಲೋ ಭಾರತ್‌ ಮಾತಾ ಕಿ ಜೈʼ ಮುಂತಾದವು. ಇದು ಸರಿಯಲ್ಲವೆಂದು ಹೇಳಬಹುದೇ? ಅದು ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ಹೀಗಾಗಿ ಈ ಘೋಷಣೆಗಳಲ್ಲಿ ತಪ್ಪೇನಿಲ್ಲ. ಸಿಪಿಐ(ಎಂ) ಪಕ್ಷವೂ ಇದರಲ್ಲಿ ತಪ್ಪನ್ನೇನೂ ಹುಡುಕುವುದಿಲ್ಲ. ಆದರೆ ಪ್ರಶ್ನೆಯಿರುವುದು, ಕಾಂಗ್ರೆಸ್‌ನ ಈ ಕಾರ್ಯಕ್ರಮವನ್ನು ಎಲ್ಲರೂ ಬೆಂಬಲಿಸುವುದೊಂದೇ ಭಾರತದ ಭವಿಷ್ಯಕ್ಕಿರುವ ದಾರಿ ಎಂದು ಹಲವಾರು ಪ್ರಗತಿಪರ, ಜಾತ್ಯಾತೀತ ವ್ಯಕ್ತಿಗಳು ಮತ್ತು ಶಕ್ತಿಗಳು ಮಾತನಾಡುತ್ತಿರುವುದಕ್ಕೆ. ಕೆಲವು ಎಡ ಸೋಗಿನ ಚಿಂತಕರಂತೂ, ಕಮ್ಯುನಿಸ್ಟ್‌ ಪಕ್ಷಗಳು ಕಾಂಗ್ರೆಸ್‌ನ ಭಾಗವಾಗಿಬಿಡಬೇಕು ಎಂಬಷ್ಟರ ಮಟ್ಟಿಗೆ ಸಲಹೆಗಳನ್ನು ನೀಡಿದ್ದಾರೆ ಮತ್ತು ಕಟು ಟೀಕೆಗಳನ್ನು ಮಾಡಿದ್ದಾರೆ.

ಎರಡು ಅಂಶಗಳನ್ನು ಇಲ್ಲಿ ಪರಿಗಣಿಸಬೇಕು. ಒಂದು, ಹಿಂದುತ್ವ ಕೋಮುವಾದಿ ಮತ್ತು ಕಾರ್ಪೊರೇಟ್‌ ನಂಟಿನ ಅಪಾಯಕಾರಿ ಸನ್ನಿವೇಶದಲ್ಲಿ ಭಾರತದ ಜನತೆಯಲ್ಲಿ ಭಾವೈಕ್ಯತೆಯನ್ನು ಬೆಸೆಯಲು ಮತ್ತು ವಿಶ್ವಾಸವನ್ನು ತುಂಬಲು ಭಾರತ್‌ ಜೋಡೋ ಯಾತ್ರೆ ಸಫಲವಾದರೆ ಅದು ಅತ್ಯಂತ ಸಕಾರಾತ್ಮಕವಾದ ಅಂಶ. ಕಾಂಗ್ರೆಸ್‌ ಒಂದು ರಾಜಕೀಯ ಪಕ್ಷವಾಗಿ ಎರಡೂ ವಿಚಾರಗಳಲ್ಲಿ ಇದುವರೆಗಿನ ತನ್ನ ವೈಫಲ್ಯವನ್ನು ಸರಿಪಡಿಸಿಕೊಳ್ಳಲು ಅವಕಾಶವೂ ಹೌದು. ಈ ಕಾರಣಕ್ಕಾಗಿ ಕಾಂಗ್ರೆಸ್‌ನ ಈ ಯಾತ್ರೆ ಸಫಲವಾಗಲಿ ಎಂದು ಸಿಪಿಐ(ಎಂ) ಆಶಿಸುತ್ತದೆ. ಸ್ವಾತಂತ್ರ್ಯಾ ನಂತರದಲ್ಲಿ ಕಾಂಗ್ರೆಸ್‌ನ ನಾಯಕತ್ವ ಇಂತಹದೊಂದು ಪಾದಯಾತ್ರೆಯನ್ನು ಸಂಘಟಿಸಿರುವುದು ಉತ್ತಮವಾದ ಬೆಳವಣಿಗೆಯೇ ಸರಿ. ಬಿಜೆಪಿಯ ಭೂತವನ್ನು ಮುಂದು ಮಾಡಿ ಚುನಾವಣಾ ರಾಜಕೀಯದ ಲಾಭಕ್ಕಾಗಿ ಈ ಯಾತ್ರೆಯನ್ನು ಕಾಂಗ್ರೆಸ್‌ ಸಂಘಟಿಸಿದೆ ಎನ್ನುವ ಮಾತಿದೆ. ಬಿಜೆಪಿಯೇತರ ಪ್ರಧಾನ ರಾಜಕೀಯ ಪಕ್ಷವಾಗಿ ಕಾಂಗ್ರೆಸ್‌ ಚುನಾವಣಾ ಲಾಭವನ್ನು ಬಯಸಿದರೆ ಅದನ್ನೂ ತಪ್ಪೆಂದು ಹೇಳಲು ಸಾಧ್ಯವಿಲ್ಲ. ಈ ಯಾತ್ರೆಯನ್ನು ಬೆಂಬಲಿಸುವವರು ಮತ್ತು ಹಿಂದುತ್ವ ಕೋಮುವಾದದ ವಿರುದ್ಧವಿರುವವರು ಈ ಅಂಶಗಳ ಬಗ್ಗೆ ಗೊಂದಲದಲ್ಲಿ ಇರಬೇಕಾಗಿಲ್ಲ.

ಆದರೆ ಕಾಂಗ್ರೆಸೇತರ ಜಾತ್ಯಾತೀತ ಪಕ್ಷಗಳು ಕಾಂಗ್ರೆಸ್‌ನ ಈ ಯಾತ್ರೆಯನ್ನು ತಮ್ಮದೇ ಯಾತ್ರೆಯೆಂಬಂತೆ ತಿಳಿದು ಭಾಗವಹಿಸುವುದು ರಾಜಕೀಯವಾಗಿ ಕಷ್ಟದ ವಿಚಾರ. ಎಲ್ಲರನ್ನೂ ಜೋಡಿಸುವ ಉದ್ದೇಶದ ಯಾತ್ರೆ ಕೇರಳದಲ್ಲಿ, ಹಿಂದುತ್ವ ಕೋಮುವಾದಿ ಮತ್ತು ಅಲ್ಪಸಂಖ್ಯಾತ ಮೂಲಭೂತವಾದಿ ಶಕ್ತಿಗಳನ್ನು ಬಿಟ್ಟು, ಸಿಪಿಐ(ಎಂ)ನ್ನು ಯಾಕೆ ಟಾರ್ಗೆಟ್‌ ಮಾಡಿತು ಎಂಬುದನ್ನೂ ಎಚ್ಚರಿಕೆಯಿಂದ ಗಮನಿಸಬೇಕು. ಅಲ್ಲಿ ಅದು ಚುನಾವಣಾ ರಾಜಕಾರಣದ ಸ್ಪಷ್ಟ ಹಿನ್ನೆಲೆಯಲ್ಲಿ ಮಾಡಿದ ಟಾರ್ಗೆಟ್‌. ಸಿಪಿಐ(ಎಂ)ನ್ನು ಟಾರ್ಗೆಟ್‌ ಮಾಡಿದರೆ ಮಾತ್ರ ಕಾಂಗ್ರೆಸ್‌ ತನ್ನ ಸೀಟುಗಳನ್ನು ಹೆಚ್ಚು ಮಾಡಿಕೊಳ್ಳಬಹುದೆಂಬ ಇಂತಹ ಧೋರಣೆಯು, ಯಾತ್ರೆಗಿರುವ ಸಹಜವಾದ ಮಿತಿಯನ್ನು ಮುಂದು ಮಾಡುತ್ತದೆ. ಭಾರತದ ಇಂದಿನ ತುರ್ತು ಅಗತ್ಯವಾದ ಭಾರತೀಯರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಜೋಡೋ ಪಾದಯಾತ್ರೆ ನಡೆದಿದ್ದರೆ ಎಲ್ಲರೂ ಸ್ವಾಗತಿಸಬಹುದಾದ ಸಂಗತಿಯೇ ಆಗಿದೆ. ಇದರಿಂದ ಕಾಂಗ್ರೆಸ್‌ ಸಹಜವಾಗಿ ಚುನಾವಣಾ ಲಾಭವನ್ನು ಪಡೆದು ಒಂದಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿರೋಧ ಮಾಡಲು ಏನೂ ಇಲ್ಲ. ಪ್ರಶ್ನೆಯಿರುವುದು, ಅಂತಹ ಸೀಮಿತತೆ ಅದರ ಘೋಷಿತ ಉದ್ದೇಶಕ್ಕೆ ಬಂದರೆ ಸಾಧಿಸುವುದಾದರೂ ಏನನ್ನು? ಇದರಲ್ಲಿ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು ಎಂಬ ಉದ್ದೇಶವನ್ನು ಸಾಧಿಸಲು ಕಾಂಗ್ರೆಸ್‌ ಮಾಡಿರುವ ಪ್ರಯತ್ನವಾದರೂ ಏನು? ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಎದುರಿಸುವ ಪಕ್ಷಗಳು ಪ್ರಾದೇಶಿಕ ಪಕ್ಷಗಳು ಮತ್ತು ಶಕ್ತಿಗಳೇ ಆಗಿವೆ. ಹೀಗಿರುವಾಗ ಅಲ್ಲೆಲ್ಲಾ ಎಲ್ಲರನ್ನೂ ಜೋಡಿಸಲು ಕಾಂಗ್ರೆಸ್‌ಗೆ ಸಾಧ್ಯವಿದೆಯೇ? ಹೀಗಾಗಿಯೇ ಈ ಯಾತ್ರೆಯು ಉದಾತ್ತ ಉದ್ದೇಶಗಳನ್ನು ಘೋಷಿಸಿದರೂ, ಅದನ್ನು ಸಾಧಿಸಲು ಬೇಕಾದ ಕಣ್ಣೋಟ ಸಮಂಜಸವಾಗಿಲ್ಲ. ಈ ಯಾತ್ರೆಯು ಖಂಡಿತವಾಗಿ, ಕಾಂಗ್ರೆಸಿಗರಲ್ಲಿ, ಪ್ರಜಾಪ್ರಭುತ್ವವಾದಿಗಳಲ್ಲಿ ಮತ್ತು ಜಾತ್ಯಾತೀತರಲ್ಲಿ ಒಂದು ಆಶಾ ಭಾವನೆಯನ್ನು ಮೂಡಿಸಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸಿನ ಈ ಪ್ರಯತ್ನವನ್ನು ಅಭಿನಂದಿಸಬಹುದು.

ಎರಡನೆಯದಾಗಿ, ಕಾಂಗ್ರೆಸ್‌ನ ಪ್ರಸಕ್ತ ಸ್ವರೂಪ ಅಥವಾ ಗುಣವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಈ ಬಗ್ಗೆ ಸಿಪಿಐ(ಎಂ) ನಿಲುವೇನು? 2022 ಏಪ್ರಿಲ್‌ನಲ್ಲಿ ನಡೆದ ಸಿಪಿಐ(ಎಂ)ನ 23 ನೇ ಮಹಾಧಿವೇಶನದಲ್ಲಿ ಕಾಂಗ್ರೆಸ್‌ನ ಕುರಿತು ರಾಜಕೀಯ ನಿರ್ಣಯದಲ್ಲಿ ಹೀಗೆ ಹೇಳಲಾಗಿದೆ; “ಕಾಂಗ್ರೆಸ್‌ ಪಕ್ಷವು ಭಾರತದ ದೊಡ್ಡ ಬಂಡವಾಳದಾರರ ನೇತೃತ್ವದ ಬಂಡವಾಳದಾರರು ಮತ್ತು ಜಮೀನ್ದಾರಿ ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ. ಅದು ಸರ್ಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ನವ-ಉದಾರವಾದಿ ನೀತಿಗಳನ್ನು ಮುಂದುವರಿಸಿದೆ”.

ಇದನ್ನೂ ಓದಿ : ಕಾಂಗ್ರೆಸ್‌ನ ʻಭಾರತ್ ಜೋಡೋ ಯಾತ್ರೆʼ ಕೇರಳದಲ್ಲಿ 18 ದಿನ-ಯುಪಿಯಲ್ಲಿ 2 ದಿನ ಏಕೆ: ಸಿಪಿಐ(ಎಂ) ಪ್ರಶ್ನೆ

“ಇದರ ರಾಜಕೀಯ ಪ್ರಭಾವ ಮತ್ತು ಸಂಘಟನಾ ಸಾಮರ್ಥ್ಯ ಕುಸಿಯುತ್ತಿದೆ ಮತ್ತು ವಿವಿಧ ರಾಜ್ಯಗಳಲ್ಲಿ ಅದರ ಹಲವಾರು ನಾಯಕರು ಬಿಜೆಪಿಗೆ ಪಕ್ಷಾಂತರ ಮಾಡುವುದರೊಂದಿಗೆ ಸರಣಿ ಬಿಕ್ಕಟ್ಟುಗಳಲ್ಲಿ ಅದು ಮುಳುಗಿದೆ. ಅದು ಜಾತ್ಯಾತೀತತೆಯನ್ನು ಘೋಷಿಸಿದರೂ, ಹಿಂದುತ್ವ ಶಕ್ತಿಗಳಿಗೆ ಸೈದ್ಧಾಂತಿಕ ಸವಾಲನ್ನು ಪರಿಣಾಮಕಾರಿಯಾಗಿ ಒಡ್ಡಲು ಅಸಮರ್ಥವಾಗಿದೆ ಮತ್ತು ಆಗಾಗ ಹೊಂದಾಣಿಕೆಯ ಧೋರಣೆಯನ್ನು ಅಳವಡಿಸಿಕೊಳ್ಳುತ್ತದೆ. ದುರ್ಬಲಗೊಂಡಿರುವ ಕಾಂಗ್ರೆಸ್‌ ಪಕ್ಷವು ಎಲ್ಲಾ ಜಾತ್ಯಾತೀತ ಪಕ್ಷಗಳನ್ನು ಅಣಿನೆರೆಸಲು ಅಸಮರ್ಥವಾಗಿದೆ.  ಬಿಜೆಪಿ ಅಧಿಕಾರದಲ್ಲಿರುವುದರಿಂದ ಮತ್ತು ಆರ್‌ಎಸ್‌ಎಸ್‌ನೊಂದಿಗೆ ಅದರ ಮೂಲ ನಂಟಿನ ಹಿನ್ನೆಲೆಯಲ್ಲಿ, ಬಿಜೆಪಿ ಪ್ರಧಾನ ಅಪಾಯವಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಸಮಾನ ಅಪಾಯಗಳಲ್ಲ. ಆದರೆ ಕಾಂಗ್ರೆಸ್‌ ಪಕ್ಷದೊಂದಿಗೆ ರಾಜಕೀಯ ಹೊಂದಾಣಿಕೆಯಿಲ್ಲ”.

ಕಾಂಗ್ರೆಸ್‌ಗಿರುವ ನವ-ಉದಾರವಾದಿ ನೀತಿಗಳ ಮೇಲಿನ ಬದ್ಧತೆ ಮತ್ತು ಕೋಮುವಾದದ ವಿರುದ್ಧ ಸೈದ್ಧಾಂತಿಕ ದುರ್ಬಲತೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಕುರಿತು ಈ ಧೋರಣೆಯನ್ನು ರೂಪಿಸಲಾಗಿದೆ.  ಕಾಂಗ್ರೆಸ್‌ನ ಈ ಗುಣವನ್ನು ವಿಮರ್ಶಿಸುವಾಗಲೇ ಬಿಜೆಪಿಯ ಹಿಂದುತ್ವ ಕೋಮುವಾದದ ಜೊತೆಯಲ್ಲಿ ಕಾಂಗ್ರೆಸ್‌ನ್ನು ಸಮೀಕರಿಸುವುದಿಲ್ಲ. ಬಿಜೆಪಿಯೇ ಪ್ರಧಾನ ಅಪಾಯ ಎಂದು ಸಿಪಿಐ(ಎಂ) ಪರಿಗಣಿಸುತ್ತದೆ. ಆದರೆ ಕಾಂಗ್ರೆಸ್‌ ಪಕ್ಷದೊಂದಿಗೆ ರಾಷ್ಟ್ರ ಮಟ್ಟದಲ್ಲಿ ನೇರ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲವೆಂದು ಸಿಪಿಐ(ಎಂ) ಹೇಳುವುದಕ್ಕೆ ಇವು ಕಾರಣಗಳಾಗಿವೆ. ಈ ಹಿನ್ನೆಲೆಯಲ್ಲೇ, ವಿವಿಧ ರಾಜ್ಯಗಳ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿರೋಧಿ ಮತಗಳು ಹಂಚಿಹೋಗದಂತೆ ಒಟ್ಟುಗೂಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಸಿಪಿಐ(ಎಂ) ತೀರ್ಮಾನಿಸಿದೆ.

ಕಾಂಗ್ರೆಸ್‌ ಕುರಿತಂತೆ ಸದಾಭಿಪ್ರಾಯ ಹೊಂದಿರುವ ಹಲವರು, ಭಾರತ್‌ ಜೋಡೋ ಪಾದಯಾತ್ರೆಯ ಕುರಿತು ಅತ್ಯಂತ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ಕಾಣಬಹುದು. ಕಮ್ಯುನಿಸ್ಟ್‌ ಪಕ್ಷಗಳೂ ಸೇರಿದಂತೆ ಕಾಂಗ್ರೆಸ್‌ ಜೊತೆ ಕೈಜೋಡಿಸವುದೊಂದೇ ನಮ್ಮ ಮುಂದಿರುವ ದಾರಿ ಎಂಬಂತೆ ಕೆಲವರು ಮಾತನಾಡುತ್ತಾರೆ. ಹಿಂದುತ್ವ ಕೋಮುವಾದವನ್ನು ಮತ್ತು ಕೋಮುವಾದಿ ಕಾರ್ಪೊರೇಟ್‌ ನಂಟನ್ನು ಎದುರಿಸಲು ಕಾಂಗ್ರೆಸ್‌ ಸಮರ್ಥವಾಗಿದೆ ಎಂದು ಇವರು ಭಾವಿಸಿದ್ದಾರೆ. ಕಾಂಗ್ರೆಸ್‌ನ ನವ-ಉದಾರವಾದಿ ಆರ್ಥಿಕ ಧೋರಣೆ ಮತ್ತು ಕೋಮುವಾದದ ಕುರಿತು ಮೃದು ಧೋರಣೆಯನ್ನು ಅದರ ವರ್ಗ ನೆಲೆಯ ಭಾಗವಾಗಿ ಇವರು ನೋಡುವುದಿಲ್ಲ. ವರ್ಗ ನೆಲೆ ಮತ್ತು ಸಾಮಾಜಿಕ ನೆಲೆ ಎರಡು ದೃಷ್ಟಿಯಿಂದಲೂ ಕಾಂಗ್ರೆಸ್‌ ಈಗಿನ ಪರಿಸ್ಥಿತಿಗೆ ಪರ್ಯಾಯವೇ ಅಲ್ಲ. ಹೀಗಿದ್ದಾಗಲೂ, ಸಿಪಿಐ(ಎಂ) ಪಕ್ಷವು ಕಾಂಗ್ರೆಸ್‌ನ್ನು ಬಿಜೆಪಿ ಜೊತೆ ಸಮೀಕರಣ ಮಾಡುವುದಿಲ್ಲ ಎಂಬುದನ್ನು ಕಾಂಗ್ರೆಸ್‌ ಕುರಿತು ಭಾವನಾತ್ಮಕವಾಗಿ ಮಾತನಾಡುವವರು ಗಮನಿಸಬೇಕು. ಈ ಸದ್ಯ ಅಖಿಲ ಭಾರತ ಮಟ್ಟದಲ್ಲಿ ಎಲ್ಲಾ ಜಾತ್ಯಾತೀತ ಪಕ್ಷಗಳನ್ನು ಅಣಿನೆರೆಸಿ ಮುನ್ನಡೆಸುವ ಸಾಮರ್ಥ್ಯವಾಗಲೀ, ಬದ್ಧತೆಯಾಗಲೀ ಕಾಂಗ್ರೆಸ್‌ ಹೊಂದಿಲ್ಲ ಎಂಬುದನ್ನು ಗಮನಿಸಬೇಕು.

ಬಿಜೆಪಿಯ ಕಳೆದ 8 ವರ್ಷಗಳ ಆಡಳಿತವು ನಿರಂಕುಶ ದಾಳಿಗಳನ್ನು ತೀವ್ರಗೊಳಿಸಿರುವ ಕೋಮುವಾದಿ ಕಾರ್ಪೊರೇಟ್‌ ನಂಟಿನ ಕ್ರೋಢೀಕರಣವಾಗಿದೆ. ಎರಡನೇ ಬಾರಿಗೆ 2019 ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಫ್ಯಾಸಿಸ್ಟ್‌ವಾದಿ ಆರ್‌ಎಸ್‌ಎಸ್‌ನ ಹಿಂದುತ್ವ ರಾಷ್ಟ್ರದ ಅಜೆಂಡಾವನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಇಷ್ಟೇ ಆಕ್ರಮಣಕಾರಿಯಾಗಿ ನವ-ಉದಾರವಾದಿ ಆರ್ಥಿಕ ನೀತಿಗಳನ್ನು ಮತ್ತು ನಿರಂಕುಶ ಆಡಳಿತವನ್ನು ಜಾರಿಗೊಳಿಸುತ್ತಿದೆ. ಆರ್‌ಎಸ್‌ಎಸ್‌ ಪ್ರೇರಿತ ಹಿಂದುತ್ವ ರಾಷ್ಟ್ರ ಅಜೆಂಡಾವು ಸಂವಿಧಾನಿಕ ಚೌಕಟ್ಟನ್ನು ವಿನಶಾಕಾರಿಯಾಗಿ ತಿಂದು ಹಾಕುತ್ತಿದೆ ಮತ್ತು ಭಾರತ ಗಣರಾಜ್ಯದ ಜಾತ್ಯಾತೀತ ಪ್ರಜಾಪ್ರಭುತ್ವದ ಲಕ್ಷಣವನ್ನು ನಾಶ ಮಾಡುತ್ತಿದೆ.

ಆದ್ದರಿಂದ ನಮ್ಮ ಮುಂದಿನ ಪ್ರಧಾನ ಕರ್ತವ್ಯವೆಂದರೆ ಬಿಜೆಪಿಯನ್ನು ಮೂಲೆಗುಂಪು ಮಾಡುವುದು ಮತ್ತು ಸೋಲಿಸುವುದು. ಇದನ್ನು ಕೇವಲ ಚುನಾವಣಾ ಹೊಂದಾಣಿಕೆಗಳಿಗೆ ಸೀಮಿತವಾಗಿ ನೋಡಬಾರದು. ಶಕ್ತಿಶಾಲಿಯಾದ, ಸಮರಧೀರ ಸಮೂಹ ಚಳುವಳಿಗಳು ಮತ್ತು ವರ್ಗ ಹೋರಾಟಗಳ ಮೂಲಕ ಜನರನ್ನು ಅಣಿನೆರೆಸುವ ಕೆಲಸ ಇದಕ್ಕೆ ಅತ್ಯಗತ್ಯ. ಇಂತಹ ಅಣಿನೆರೆಸುವಿಕೆ ಆರ್‌ಎಸ್‌ಎಸ್‌ನ ಹಿಂದುತ್ವ ಕೋಮುವಾದದ ವಿರುದ್ಧವೂ ಮತ್ತು ನವ-ಉದಾರವಾದಿ ನೀತಿಗಳ ವಿರುದ್ಧವೂ ನಡೆಯಬೇಕು. ಕೋಮುವಾದದ ವಿರುದ್ಧ ಅತ್ಯಂತ ವಿಶಾಲವಾದ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಯನ್ನು ಸಾಧಿಸಬೇಕು.

ರಾಷ್ಟ್ರೀಯ ಸಂಪತ್ತನ್ನು ನೇರಾನೇರಾ ಲೂಟಿ ಮಾಡುವುದರ ವಿರುದ್ಧ, ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಸೇವೆಗಳು, ಖನಿಜ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ಬೃಹತ್‌ ಪ್ರಮಾಣದ ಖಾಸಗೀಕರಣ ಮತ್ತು ಲೂಟಿಯ ವಿರುದ್ಧ ಎಲ್ಲರನ್ನೂ ಅಣಿನೆರೆಸುವ ಕೆಲಸಕ್ಕೆ ಮುಂದಾಗಬೇಕಿದೆ. ದೆಹಲಿ ರೈತರ ಹೋರಾಟದಲ್ಲಿ ಮೂಡಿಬಂದ ಅತ್ಯಂತ ವಿಶಾಲ ತಳಹದಿಯ ಐಕ್ಯತೆಯ ಮಾದರಿಯಲ್ಲಿ ಜನಸಮುದಾಯಗಳ ಅಣಿನೆರೆಸುವಿಕೆ ಅಗತ್ಯವಾಗಿದೆ. ಕೋಮುವಾದಿ ಕಾರ್ಪೋರೇಟ್‌ ನಂಟನ್ನು ಇಂತಹ ಒಗ್ಗೂಡುವಿಕೆಯಿಂದ ಮಾತ್ರ ಎದುರಿಸಲು ಸಾಧ್ಯ. ಈ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವೇನು? ನವ-ಉದಾರವಾದಿ ನೀತಿಗಳ ವಿರುದ್ಧ ಕಾಂಗ್ರೆಸ್‌ ವಿಶಾಲ ತಳಹದಿಯ ಅಣಿನೆರೆಸುವಿಕೆ ಮಾಡಬಲ್ಲದೇ? ಕಾಂಗ್ರೆಸ್‌ನ ವರ್ಗ ಧೋರಣೆ ಅದಕ್ಕೆ ಅವಕಾಶ ಕೊಡುತ್ತದೆಯೇ? 1990ರ ದಶಕದಲ್ಲಿ ಕಾಂಗ್ರೆಸ್‌ ಆರಂಭಿಸಿದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ನೀತಿಗಳನ್ನೇ ಅಲ್ಲವೇ ಇಂದು ಮೋದಿ ಅತ್ಯುಗ್ರವಾಗಿ ಜಾರಿ ಮಾಡುತ್ತಿರುವುದು. ಇದೇ ನೀತಿಗಳೇ ಅಲ್ಲವೇ ಕಾಂಗ್ರೆಸ್‌ನ್ನು ಜನ ನಿರಂತರವಾಗಿ ತಿರಸ್ಕರಿಸುತ್ತಾ ಬರಲು ಕಾರಣವಾಗಿದ್ದು? ಮೋದಿಯ ಈ ನೀತಿಗಳಿಂದಲೇ ಅಲ್ಲವೇ ನಿರುದ್ಯೋಗ, ಬಡತನ, ಅಸಮಾನತೆ ಹೆಚ್ಚುತ್ತಿರುವುದು, ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುತ್ತಿರುವುದು?

ಕಾಂಗ್ರೆಸ್‌ನ ಜೊತೆ ಹಾಗೇ ಕೈಜೋಡಿಸಿ ಬಂದುಬಿಡಬೇಕು ಎನ್ನುವವರು ಈ ಅಂಶವನ್ನು ಗಣನೆಗೇ ತೆಗೆದುಕೊಳ್ಳದ ಹಾಗೆ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಸಿಪಿಐ(ಎಂ) ಈ ವಿಚಾರವನ್ನು ಕಣ್ಣುಮುಚ್ಚಿ ನೋಡಲು ಬಯಸುವುದಿಲ್ಲ. ಹೀಗಾಗಿ ಹಿಂದುತ್ವ ಕಾರ್ಪೊರೇಟ್‌ ಹೆಜಮನಿ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಬೇಕಾದರೆ, ಒಟ್ಟೊಟ್ಟಿಗೆ ಹಿಂದುತ್ವ ಕೋಮುವಾದಿ ಶಕ್ತಿಗಳು ಮತ್ತು ನವ-ಉದಾರವಾದಿ ನೀತಿಗಳ ವಿರುದ್ಧದ ಹೋರಾಟದ ಅಗತ್ಯವಿದೆ. ಇದರ ಆಧಾರದಲ್ಲೇ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯ ಯಶಸ್ಸು ಮತ್ತು ದೌರ್ಬಲ್ಯ ಎರಡೂ ಅಡಗಿದೆ.

ಈ ರಾಜಕೀಯ ಧೋರಣೆಯನ್ನು ಅನುಸರಿಸಿ ಸಿಪಿಐ(ಎಂ) ಮತ್ತು ಎಡ ಪಕ್ಷಗಳು ತಮ್ಮೆಲ್ಲಾ ಶಕ್ತಿಯನ್ನು ಉಪಯೋಗಿಸಿ ಜನರನ್ನು ಅಣಿನೆರೆಸಲು ಶ್ರಮಿಸುತ್ತವೆ. ಯಾವಾಗೆಲ್ಲಾ ಚುನಾವಣೆಗಳು ನಡೆಯುತ್ತವೆಯೋ ಆಗ ಬಿಜೆಪಿ-ವಿರೋಧಿ ಮತಗಳನ್ನು ಅತ್ಯಂತ ಹೆಚ್ಚಿಗೆ ಒಟ್ಟುಗೂಡಿಸಲು ಬೇಕಾದ ತಂತ್ರಗಾರಿಕೆಗಳನ್ನು ರೂಪಿಸುತ್ತವೆ. ಕಾರ್ಪೊರೇಟ್‌-ಕೋಮುವಾದದ ಜೋಡಿಯನ್ನು ಸ್ಪಷ್ಟವಾಗಿ ಮತ್ತು ದೃಢವಾಗಿ ಎದುರಿಸಲು ಬಲಿಷ್ಟವಾದ ಸಿಪಿಐ(ಎಂ) ಮತ್ತು ಎಡಪಕ್ಷಗಳ ತಳಹದಿ ಅಗತ್ಯವಿದೆ.

ಇಷ್ಟೆಲ್ಲಾ ಹೇಳಿದ ಮೇಲೂ, ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆ ತನ್ನ ಘೋಷಿತ ಉದ್ದೇಶಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ಸು ಕಾಣಲಿ.

 

Donate Janashakthi Media

Leave a Reply

Your email address will not be published. Required fields are marked *