ಬೆಂಗಳೂರು: ಕೊರೊನಾ ಸೋಂಕಿನ ವೈರಸ್ ತಡೆಗಟ್ಟಲು ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ರಾಜ್ಯದಲ್ಲಿ ಉತ್ಪಾದನೆಯಾಗಲಿದ್ದು, ಅದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆ ನೀಡಿದೆ.
ಭಾರತ್ ಬಯೋಟೆಕ್ ಸಂಸ್ಥೆಯು ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಹಿಂದೆ ಅರ್ಜಿಯನ್ನು ಸಲ್ಲಿಸಿತ್ತು ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅರ್ಜಿ ಅನುಮೋದನೆ ಪಡೆದುಕೊಂಡಿರಲಿಲ್ಲ. ಹೀಗಾಗಿ ಭಾರತ್ ಬಯೋಟೆಕ್ ಸಂಸ್ಥೆ ಮತ್ತೊಂದು ಹೊಸ ಅರ್ಜಿ ಸಲ್ಲಿಸಿ ಈಗ ಅನುಮೋದನೆ ಪಡೆದುಕೊಂಡಿದೆ ಎನ್ನಲಾಗಿದೆ. ತುರ್ತು ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಶೀಘ್ರವಾಗಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಭಾರತ್ ಬಯೋಟೆಕ್ ಸಂಸ್ಥೆ ಮನವಿಗೆ ಸ್ಪಂದಿಸಿದೆ.
ಇದನ್ನು ಓದಿ: ರಿಯಲ್ ವಾರಿಯರ್ಸ್‌ಗಳಿಗೆ ಇಲ್ಲ ಭದ್ರೆತೆ : ಮೂರು ತಿಂಗಳಿಂದ ವೇತನವೂ ಇಲ್ಲ
ಈ ಮೊದಲು ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದನೆ ಮಾಡಲು ಪ್ರತ್ಯೇಕವಾದ ಜಾಗದಲ್ಲಿ ಕಾರ್ಯಾರಂಭ ಮಾಡಲು ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಹೊಸದಾದ ಘಟಕ ಕಾರ್ಯಾರಂಭಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ ಎಂಬ ಕಾರಣದಿಂದ ಭಾರತ್ ಬಯೋಟೆಕ್ ಸಂಸ್ಥೆ ತನ್ನ ಯೋಜನೆ ಬದಲಿಸಿ ಈಗಾಗಲೇ ಮಾಲೂರಿನಲ್ಲಿ ಅಸ್ಥಿತ್ವದಲ್ಲಿರುವ ಲಸಿಕೆ ತಯಾರಿಕಾ ಘಟಕದಲ್ಲೇ ಲಸಿಕೆ ತಯಾರಿಕೆಗೆ ಅನುಮತಿ ಕೇಳಿತ್ತು. ಆಗ ಮಾಲಿನ್ಯ ನಿಯಂತ್ರಣ ಮಂಡಳಿ ಇದು ಫಾರ್ಮಾ ಉದ್ಯಮವಾಗಿದ್ದು, ‘ಕೆಂಪು ವರ್ಗ’ (ಹೆಚ್ಚು ಮಾಲಿನ್ಯಕಾರಕ ವರ್ಗ)ದ ಅಡಿಯಲ್ಲಿ ಬರುತ್ತದೆ ಎಂದು ಹೇಳಿತ್ತು.
ರಾಜ್ಯದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಲಸಿಕಾ ತಯಾರಿಕಾ ಘಟಕವನ್ನು ಆರಂಭ ಮಾಡಲಿರುವ ಭಾರತ್ ಬಯೋಟೆಕ್ ಸಂಸ್ಥೆಯು ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ಅರ್ಜಿಯನ್ನು ಶ್ರೀಘ್ರಗತಿಯಲ್ಲಿ ವಿಲೇವಾರಿ ಮಾಡಿದೆ. ಪ್ರಸ್ತುತ ಸಂದರ್ಭದಲ್ಲಿ ಲಸಿಕೆ ಉತ್ಪಾದನೆ ಅತ್ಯಂತ ಪ್ರಮುಖವಾಗಿದ್ದು, ಇದೇ ಕಾರಣಕ್ಕೆ ಯೋಜನೆಯನ್ನು ಬದಲಿಸಿದ ಭಾರತ್ ಬಯೋಟೆಕ್ ಸಂಸ್ಥೆಯು ಕಾಲುಬಾಯಿ ರೋಗಕ್ಕೆ ಲಸಿಕೆ ನಿರ್ಮಾಣ ಮಾಡುತ್ತಿರುವ ಭಾರತ್ ಬಯೋವೆಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿಯೇ ಲಸಿಕೆ ತಯಾರಿಸಲು ನಿರ್ಧರಿಸಿದೆ.
ಇದನ್ನು ಓದಿ: ಕೋವಿಡ್-19: ಲಸಿಕೆಯೇ ಅಂತಿಮ ಅಸ್ತ್ರ
ಮಾಲೂರಿನಲ್ಲಿ ಪ್ರಸ್ತುತ ಪ್ರಾಣಿಗಳ ಕಾಲು-ಬಾಯಿ ರೋಗದ ಲಸಿಕೆ ತಯಾರಿಸಲಾಗುತ್ತಿದ್ದು, ಇದೀಗ ಇಲ್ಲಿ ಕ್ಯೋವ್ಯಾಕ್ಸಿನ್ ಲಸಿಕೆಯನ್ನು ತಯಾರಿಸಲಾಗುತ್ತದೆ.
ಅದೇ ರೀತಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಬೆಂಗಳೂರು ಹೊರ ವಲಯದ ಬೊಮ್ಮಸಂದ್ರದ ಜಿಗಣಿಯಲ್ಲಿ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗೂ ಸಹ ಅನುಮೋದನೆ ದೊರೆತಿದೆ. ಕೆಂಪು ವರ್ಗದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಈ ಅರ್ಜಿಯನ್ನು ವಿಲೇವಾರಿ ಮಾಡಿತ್ತು.