- 50 ಜೋಡಿ ರೈಲುಗಳನ್ನು ಓಡಿಸುವ ಗುರಿಯನ್ನುಹೊಂದಿರುವ ರೈಲ್ವೆ ಇಲಾಖೆ
- ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿತವಾಗಿರುವ ರೈಲ್ವೇ ಟರ್ಮಿನಲ್
ಬೆಂಗಳೂರು: ನಿರ್ಮಾಣವಾದ ಒಂದು ವರ್ಷದ ನಂತರ ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸೋಮವಾರದಿಂದ ಕಾರ್ಯಾರಂಭ ಮಾಡಿದೆ. ಎರ್ನಾಕುಲಂ ಎಕ್ಸ್‌ಪ್ರೆಸ್ ಈ ನಿಲ್ದಾಣದಿಂದ ಸಂಜೆ ಸಂಚಾರ ಆರಂಭಿಸುವ ಮೂಲಕ ಕಾರ್ಯಾರಂಭಿಸಿತು. ಹೊಸದಾಗಿ ಆರಂಭಗೊಂಡ ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ರೈಲ್ವೆ ಹೋರಾಟಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
‘ರೈಲು ನಿಲ್ದಾಣವೇ ವಿಮಾನ ನಿಲ್ದಾಣದಂತಿದೆ. ನಿಲ್ದಾಣದ ವಿನ್ಯಾಸ ಮತ್ತು ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳು ಅಂತರರಾಷ್ಟ್ರೀಯ ಮಟ್ಟದಲ್ಲಿವೆ. ಈ ನಿಲ್ದಾಣ ನೋಡಿ ಸಂತಸವಾಯಿತು’ ಎಂದು ರಮೇಶ್ ಬಾಬು ಮತ್ತು ಕಾರ್ತಿಕಾ ರಮೇಶ್ ದಂಪತಿ ಹರ್ಷ ವ್ಯಕ್ತಪಡಿಸಿದರು.
‘ನಿಲ್ದಾಣ ಕಾರ್ಯಾರಂಭ ಆಗಿದ್ದ ರಿಂದ ಸದ್ಯಕ್ಕೆ ನಿರಾಳವಾಗಿದ್ದೇವೆ. ಗಣ್ಯ ರಿಗೆ ಕಾಯುವುದನ್ನು ರೈಲ್ವೆ ಇಲಾಖೆ ನಿಲ್ಲಿಸಬೇಕು. ಈ ಸಂದರ್ಭವನ್ನು ಬಳಸಿಕೊಂಡು ರೈಲುಗಳ ಕಾರ್ಯಾಚರಣೆಯನ್ನು ಹೆಚ್ಚಿಸಬೇಕು’ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಹೇಳಿದರು. ಈ ರೈಲು ನಿಲ್ದಾಣಕ್ಕೆ ಸಂಪರ್ಕ ರಸ್ತೆ ಇಲ್ಲದಿದ್ದರಿಂದ ಕಾರ್ಯಾ ರಂಭ ವಿಳಂಬವಾಯಿತೇ ಹೊರತು ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ ಮಾಡಿಸಲು ಕಾದಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದರು. ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿ ಈ ನಿಲ್ದಾಣವನ್ನು ನಿರ್ಮಿಸಲಾಗಿದೆ. ಅಂದಾಜು 314 ಕೋಟಿ ರೂ, ವೆಚ್ಚವಾಗಿರುವ ಸಾಧ್ಯತೆ ಇದೆ.
ಹೀಗಿದೆ ವೇಳಾಪಟ್ಟಿ:
ಜೂ.6 ಸಂಜೆ 7ಕ್ಕೆ ಬಾಣಸವಾಡಿ-ಎರ್ನಾಕುಲಂ ಎಕ್ಸ್‌ಪ್ರೆಸ್ (ನಿರ್ಗಮನ)
ಜೂನ್ 8 ಬೆಳಗ್ಗೆ 3.55ಕ್ಕೆ ಎರ್ನಾಕುಲಂ-ಬಾಣಸವಾಡಿ ಎಕ್ಸ್‌ಪ್ರೆಸ್ (ಆಗಮನ)
ಜೂನ್ 10 ಸಂಜೆ 7ಕ್ಕೆ ಕೊಚ್ಚಿವೆಲ್ಲಿ ಎಕ್ಸ್‌ಪ್ರೆಸ್ (ನಿರ್ಗಮನ)
ಜೂನ್ 12 ಮಧ್ಯಾಹ್ನ 1.50ಕ್ಕೆ ಪಾಟ್ನಾ ಎಕ್ಸ್‌ಪ್ರೆಸ್ (ನಿರ್ಗಮನ)
ನಿಲ್ದಾಣದ ಪ್ರಮುಖ ವೈಶಿಷ್ಟ್ಯಗಳು:
ರೂ.300 ಕೋಟಿ ವೆಚ್ಚ. 4,200 ಚ.ಮೀ ವಿಸ್ತೀರ್ಣ
ಪ್ರತಿನಿತ್ಯ 50,000 ಪ್ರಯಾಣಿಕರು ಓಡಾಟ ನಡೆಸುವ ಸಾಮರ್ಥ್ಯ
7 ಫ್ಲಾಟ್ ಫಾರಂ ರಚನೆ, ದಿನಕ್ಕೆ 50 ರೈಲುಗಳು ಓಡಾಟ ನಡೆಸಬಹುದು
ಭಾರತದಲ್ಲಿನ ಮೊದಲ ಕೇಂದ್ರಿಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ…, ಅತ್ಯಾಧುನಿಕ ಸೌಲಭ್ಯ
ಕೆಂಪೇಗೌಡ ವಿಮಾನ ನಿಲ್ದಾಣ ಮಾದರಿಯ ಹೊರವಿನ್ಯಾಸ
250 ನಾಲ್ಕು ಚಕ್ರಗಳ ವಾಹನ ಮತ್ತು 900 ದ್ವಿಚಕ್ರ ವಾಹನಗಳು ನಿಲುಗಡೆ ಸಾಮರ್ಥ್ಯ
ದೇಶದ ಮೂರನೇ ವಿಶ್ವ ದರ್ಜೆಯ ಟರ್ಮಿನಲ್ ಎಂಬ ಹೆಗ್ಗಳಿಕೆ
ಸಂಗೊಳ್ಳಿ ರಾಯಣ್ಣ, ಯಶವಂತಪುರ ಟರ್ಮಿನಲ್ ಬಳಿಕ ನಗರದ ಮೂರನೇ ರೈಲ್ವೆ ಟರ್ಮಿನಲ್
ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕ ಅಳವಡಿಕೆ