ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರವು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಲು ಚಿಂತಿಸಿದೆ ಮತ್ತು ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ಮರಳಿ ತರುವುದರ ಕುರಿತು ಮಾತುಗಳು ನಡೆದಿದೆ. ನೈತಿಕ ಶಿಕ್ಷಣದ ಹೆಸರಿನಲ್ಲಿ ಭಗವದ್ಗೀತೆ ಬೋಧನೆ ಎಂಬುದು ಎಲ್ಲರಿಗೂ ಸಮಾನ ಶಿಕ್ಷಣ ಎಂಬುದು ಮರೆ ಮಾಚಲಿದೆ ಅಲ್ಲದೆ, ಇದರಿಂದ ಬಹುಸಂಖ್ಯಾತ ಜನರನ್ನು ಶಿಕ್ಷಣದಿಂದ ದೂರ ಸರಿಸುವ ತಂತ್ರವಾಗಿದೆ ಎಂದು ಎಐಡಿಎಸ್‌ಒ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿರುವ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್ ಪ್ರಾಚೀನ ಶಿಕ್ಷಣ ವ್ಯವಸ್ಥೆಯು ನಮ್ಮ ದೇಶದ ಬಡವರು, ದಲಿತರು, ಶೋಷಿತರು ಮತ್ತು ಮಹಿಳೆಯರನ್ನೊಳಗೊಂಡು ಬಹುಸಂಖ್ಯಾತ ಜನತೆಯನ್ನು ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು. ಕೇವಲ ಕೆಲವು ಜನ ಶ್ರೀಮಂತರು ಮತ್ತು ಮೇಲ್ಜಾತಿಯ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ ವ್ಯವಸ್ಥೆ ಅದಾಗಿತ್ತು ಎಂದಿದ್ದಾರೆ.
ಕೆಲವೇ ಮಂದಿಗೆ ಮಾತ್ರ ಸೀಮಿತವಾಗಿದ್ದ ಅಂದಿನ ಶಿಕ್ಷಣ ವ್ಯವಸ್ಥೆಯ ವಿರುದ್ಧ ಜ್ಯೋತಿ ಬಾಪುಲೆ ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ ಮತ್ತು ಕುದ್ಮಲ ರಂಗರಾಯರಂತಹ ಹಲವು ಮಹಾನ್ ವ್ಯಕ್ತಿಗಳು ಹೋರಾಡಿ ಎಲ್ಲರಿಗೂ ಶಿಕ್ಷಣವನ್ನು ಒದಗಿಸಲು ಶ್ರಮಿಸಿದರು. ಸ್ವತಂತ್ರ್ಯ ಭಾರತದಲ್ಲಿ ಶಿಕ್ಷಣವು ವೈಜ್ಞಾನಿಕ- ಧರ್ಮನಿರಪೇಕ್ಷ ಮತ್ತು ಪ್ರಜಾತಾಂತ್ರಿಕವಾಗಿರಬೇಕೆಂಬುದು ನವೋದಯ ಹಾಗೂ ಸ್ವಾತಂತ್ರ್ಯ ಚಳುವಳಿಯ ಎಲ್ಲ ಮಹಾನ್ ವ್ಯಕ್ತಿಗಳ ಬಯಕೆಯಾಗಿತ್ತು. ಶಿಕ್ಷಣದಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿರಬಾರದೆಂದು ನೇತಾಜಿಯವರು ಪ್ರತಿಪಾದಿಸಿದ್ದಾರೆ ಮತ್ತು ಸಾಮಾಜಿಕ ನಿಯಮಗಳನ್ನು ರೂಪಿಸುವಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿಲ್ಲ ಎಂಬುದಾಗಿ ವಿವೇಕಾನಂದರು ಸಾರಿ ಹೇಳಿದ್ದಾರೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ, ನೈತಿಕ ಶಿಕ್ಷಣದ ಹೆಸರಿನಲ್ಲಿ ಭಗವದ್ಗೀತೆ ಬೋಧನೆಯು ಧಾರ್ಮಿಕ ವಿಚಾರಗಳನ್ನು ಶಿಕ್ಷಣದಲ್ಲಿ ತೂರಿಸಲು ಹೊರಟಿರುವ ಸರ್ಕಾರವು ಈ ಎಲ್ಲ ಮಹಾನ್ ವ್ಯಕ್ತಿಗಳ ಆಶಯಗಳಿಗೆ ಕೊಳ್ಳಿಯಿಡುತ್ತಿದೆ. ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಎಂಬ ಕುವೆಂಪು ಅವರ ಆಶಯವನ್ನು ಗಾಳಿಗೆ ತೂರಲಾಗಿದೆ. ಹಿಜಾಬ್ ವಿಷಯದಲ್ಲಿ ಧರ್ಮವು ಶಿಕ್ಷಣದಲ್ಲಿ ಬರಬಾರದು ಎಂಬ ನಿಲುವು ತೋರಿದ್ದ ಸರ್ಕಾರ ಈಗ ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ತರಲು ಮುಂದಾಗಿರುವುದು, ಸರ್ಕಾರದ ಇಬ್ಬಗೆಯ ನೀತಿಯಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ, ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಸರ್ಕಾರದ ನಡೆಯನ್ನು ಖಂಡಿಸಿದ್ದು, ಕೂಡಲೇ ಇದನ್ನು ಕೈಬಿಡುವಂತೆ ಆಗ್ರಹಿಸಿದೆ. ನಾಡಿನ ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತ ಜನತೆಯು ವೈಜ್ಞಾನಿಕ-ಪ್ರಜಾತಾಂತ್ರಿಕ-ಧರ್ಮನಿರಪೇಕ್ಷ ಮೌಲ್ಯಗಳನ್ನು ಕಾಪಾಡಲು ಸರ್ಕಾರದ ಇಂತಹ ನೀತಿಗಳ ವಿರುದ್ಧ ಧ್ವನಿ ಎತ್ತಬೇಕೆಂದು ಕರೆ ನೀಡಿದೆ.