ಬೆಂಗಳೂರು :ಧಾರ್ಮಿಕ ಅಸಹಿಷ್ಣುತೆಯ ಹೆಸರಿನಲ್ಲಿ ಹೆಚ್ಚಾಗುತ್ತಿರುವ ಹಿಂಸೆ, ಅದರ ನಿರರ್ಥಕತೆ, ಮತ್ತು ಮೂಲಭೂತವಾದಿ ಸಂಘಟನೆಗಳು ದಲಿತ–ಹಿಂದುಳಿದ ವರ್ಗದ ಅಮಾಯಕ ಯುವಕರನ್ನು ಹೇಗೆ ತಮ್ಮ ರಾಜಕೀಯ–ಧಾರ್ಮಿಕ ಅಜೆಂಡಾಗಳಿಗಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂಬುದನ್ನು “ಭಗವಂತನ ಮರಣ” ನಾಟಕ ತೆರೆದಿಡುತ್ತಿದೆ.
ಹಿಂದುತ್ವ ಸಂಘಟನೆಯ ಕಾರ್ಯಕರ್ತನೊಬ್ಬ, ತನ್ನ ಸಂಘಟನೆಯ ಆದೇಶದಂತೆ ಒಬ್ಬ ಪ್ರೊಫೆಸರ್‌ರನ್ನು ಕೊಲ್ಲಲು ಬರುತ್ತಾನೆ. ಆದರೆ ಆ ಕ್ಷಣದಲ್ಲಿ ಗುಂಡು ಹೊಡೆಯುವ ಕ್ರಿಯೆಗಿಂತ ಸಂವಾದವೇ ಮುಖ್ಯವಾಗುತ್ತದೆ. ಯುವಕ ಮತ್ತು ಪ್ರೊಫೆಸರ್ ನಡುವಿನ ವಾದ–ಪ್ರತಿವಾದ, ಪ್ರಶ್ನೆ–ಪ್ರಶ್ನೆಗಳ ನಡುವೆ, ಇಬ್ಬರ ಆಲೋಚನೆಗಳು, ನಿಲುವುಗಳು, ಅಂತರಂಗದ ಸಂಘರ್ಷಗಳು ಕ್ರಮೇಣ ಹೊರಬೀಳುತ್ತವೆ. ಹಿಂಸೆಯಿಂದ ಅಹಿಂಸೆಯ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವ ಮನಃಪ್ರವಾಹವನ್ನು ಈ ನಾಟಕ ಗಟ್ಟಿಯಾಗಿ ಕಟ್ಟಿಕೊಟ್ಟಿದೆ.
ಒಬ್ಬ ಪ್ರೊ ತನ್ನ ವಿದ್ಯಾರ್ಥಿಗಳಿಗೆ ಸೌಹಾರ್ದತೆ, ಸಂಸ್ಕೃತಿ, ಪ್ರೀತಿ, ಮಾನವೀಯ ಮೌಲ್ಯಗಳನ್ನು ಕಲಿಸಿದಾಗ ಆಗುವ ಬದಲಾವಣೆ ಏನು ಎಂಬುದನ್ನು ಪ್ರೊ ಗಳು ಈ ನಾಟಕ ನೋಡಿಯೋ ತಿಳಿಯಬೇಕು.
ಬಸವಣ್ಣನ ವಚನ್ನಕ್ಕೆ ಎಂತಹ ತಾಕತ್ತು ಇದೆ. ಕೊಲ್ಲಲು ಬಂದವನನ್ನೆ ಮನುಷ್ಯನನ್ನಾಗಿ ಬದಲಾಯಿಸುವ, ಬದಲಾವಣೆಗೊಂಡ ಅವುನು ಹಿಂದುತ್ವ ನಾಯಕನನ್ನು ಬದಲಾಯಿಸಲು ಮತ್ತೆ ಅಣಿಯಾಗುವುದು ಇವತ್ತಿನ ಸಂದರ್ಭಕ್ಕೆ ತಕ್ಕ ಔಷಧವನ್ನೆ ನೀಡಿದೆ.
ಫೆಬ್ರವರಿ 22 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಹಾಗೂ ಫೆ 26 ರಂದು ರಂಗಶಂಕರದಲ್ಲಿ ನಾಟಕ ಪ್ರದರ್ಶನವಿದೆ. ಬುಕ್ ಮೈ ಶೋ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
ಕೆ.ಆರ್ ಮೀರಾ ಅವರ ಮೂಲ ಮಲಯಾಳಂ ಭಾಷೆಯ “ಭಗವಂತೆ ಮರಣಂ” ಕಥೆಯನ್ನು ನಿರ್ದೇಶಕ ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿಯವರು ನಾಟಕ ರೂಪಾಂತರ ಮಾಡಿದ್ದಾರೆ .ಇದರ ಕನ್ನಡ ಅನುವಾದ ಕೆ.ಪ್ರಭಾಕರನ್ ಅವರದ್ದು .
