ಭಗವಾನ್ ಅವರನ್ನು “ಜಾತಿ”ಗೆ ಬಂಧಿಸಬೇಕೆ?

ತಮ್ಮ ಶಿಷ್ಯರಿಗೆ ಸದಾ “ಜಾತ್ಯಾತೀತ” ನಿಲುವನ್ನು ಬೋಧಿಸಿದವರು. ಬದುಕಲ್ಲಿ ಅದನ್ನು ಅಳವಡಿಸಿಕೊಂಡವರು. ಅವರೆಂದೂ “ಒಕ್ಕಲಿಗರಾಗಿ” ಬಿಂಬಿತರಾದವರಲ್ಲ. ಕುವೆಂಪು ಅವರ ನೆಚ್ಚಿನ ಶಿಷ್ಯ. ವಿಶ್ವಮಾನವ ತತ್ವದ ಪ್ರತಿಪಾದಕರಾಗಿಯೇ ಬೆಳೆದವರು. ನಾನು ಅವರ ಮನೆ, ಮನದಲ್ಲಿ ಸೇರಿದ ಕೆಲವೇ ಆಪ್ತ ಶಿಷ್ಯರಲ್ಲಿ ಒಬ್ಬ. ಅವರು ಗುರು ಅನ್ನುವುದಕ್ಕಿಂತ ಆಪ್ತ ಮಿತ್ರರಂತೆ ನಡೆದುಕೊಂಡಿದ್ದಾರೆ. ಮಾನಸಗಂಗೋತ್ರಿಯಲ್ಲಿ ಕುವೆಂಪು ಅವರ ಮಂತ್ರಮಾಂಗಲ್ಯ ರೀತಿ ನಾನು – ಪುಷ್ಪ ಮದುವೆಯಾದಾಗ ಈ ಶಿಷ್ಯನ ಜತೆ ಇದ್ದು ಬೆಂಬಲಿಸಿ, ಬೆನ್ನುತಟ್ಟಿ, ಮಂತ್ರ ಮಾಂಗಲ್ಯದ ತಿರುಳನ್ನು ಬೋಧಿಸಿ, ಹರಸಿದವರು ಅವರು. ನಮ್ಮನ್ನು ಮನೆಗೆ ಕರೆದು ಉಪಚರಿಸಿದವರು. ಅವರು ಅನೇಕ ಜಾತ್ಯತೀತ ಮದುವೆ ಮಾಡಿಸಿದ್ದು ನೆನಪಿದೆ.

– ಆರ್ ಜಿ ಹಳ್ಳಿ ನಾಗರಾಜ

 

ಪ್ರೊ. ಕೆ.ಎಸ್. ಭಗವಾನ್ ಅವರ ಜಾತಿ ಬಗ್ಗೆ ಹಾಗೂ ಈ ಸಂದರ್ಭ ಅವರ ಜಾತಿಯವರು ಬೆಂಬಲಕ್ಕೆ ನಿಲ್ಲಬೇಕು ಎಂಬ ಅಭಿಪ್ರಾಯಗಳು ಹರಿದಾಡುತ್ತಿವೆ. “ಅವರವರ ಭಾವಕ್ಕೆ, ಅವರವರ ಭಕುತಿಗೆ” ತಕ್ಕದಾಗಿವೆ ಈ ಮಾತು. ಇಲ್ಲಿ ಕೆಲವರ ಅಭಿಪ್ರಾಯ ಸರಿ ಇರಬಹುದು, ಕೆಲವರದ್ದು “ಜಾತಿ ಚೌಕಟ್ಟಿನಲ್ಲಿ” ಬಂಧಿಸಿಡುವ ಆಲೋಚನೆಯೂ ಇರಬಹುದು.

ಈ ಹಿನ್ನೆಲೆಯಲ್ಲಿ ಭಗವಾನ್ ಬಗ್ಗೆ ಕೆಲವೊಂದು ವಿಚಾರ ಹೇಳಬೇಕು. ನಾನು ಮಹಾರಾಜ ಕಾಲೇಜಿನಲ್ಲಿ ಅವರ ಶಿಷ್ಯ. ಇಂಗ್ಲೀಷ್ ಪಾಠ ಮಾಡುತ್ತಲೇ ಕನ್ನಡ ಮೇಷ್ಟ್ರುಗಳಿಗಿಂತ ಹೆಚ್ಚು ಕನ್ನಡದ ವೈಚಾರಿಕ ಸಾಹಿತ್ಯದ ಹಿರಿಮೆಗರಿಮೆ ಬಗ್ಗೆ ಹೇಳುತ್ತಿದ್ದವರು ಅವರು. ಇಂಗ್ಲಿಷಲ್ಲಿ ಅವರಷ್ಟು ಪಾಂಡಿತ್ಯ ಪಡೆದವರು ಕಡಿಮೆ. ಶೇಕ್ಸ್‌ಪಿಯರ್ ನಾಟಕಗಳೆಲ್ಲವನ್ನೂ ಕನ್ನಡಕ್ಕೆ ಅನುವಾದಿಸಿ, “ಅತ್ಯುತ್ತಮ ಅನುವಾದಕ” ಎಂದು ಹೆಸರು ಗಳಿಸಿದವರು. ಶೇಕ್ಸ್‌ಪಿಯರ್ ನಾಟಕ “ಜೂಲಿಯಸ್ ಸೀಸರ್” ಪಠ್ಯವಾಗಿತ್ತು. ಅದನ್ನು ಕನ್ನಡಕ್ಕೆ ತಂದು ಆಗಲೆ ಹೆಸರಾಗಿದ್ದರು. ಅವರೇ ಮೂಲ ಇಂಗ್ಲೀಷ್ ನಾಟಕವನ್ನು ಕನ್ನಡದಲ್ಲೂ‌ ಹೇಳುತ್ತ ವಿದ್ಯಾರ್ಥಿಗಳಿಗೆ ಹತ್ತಿರವಾದವರು.

ಅವರು ಗಂಭೀರ ಸಾಹಿತ್ಯ ವಿದ್ಯಾರ್ಥಿ. ನಿರಂತರ ಓದು ಅವರ ಬದುಕಿನ ಭಾಗವಾಗಿದೆ. ಕೆಲವು ಕೃತಿಗಳ ಅನುವಾದಕ್ಕೆ ವರ್ಷಗಟ್ಟಲೆ ತಪಸ್ಸು ಮಾಡಿದ್ದಾರೆ. ವಿಶ್ವದ ಶ್ರೇಷ್ಠ ಚಿಂತಕರಾದ ವಿಲ್ ಡ್ಯುರಾಂಟ್ ಅವರ ಬೃಹತ್ ಕೃತಿಗಳ ಅಧ್ಯಯನ ಮಾಡಿ, “ಇತಿಹಾಸದ ಪಾಠಗಳು” ಎಂಬ ಕೈಪಿಡಿ ನೀಡಿದ್ದಾರೆ. ಸ್ವಾಮಿ ಧರ್ಮತೀರ್ಥರ “ಹಿಂದೂ ಸಾಮ್ರಾಜ್ಯಶಾಹಿ ಇತಿಹಾಸ” ಕನ್ನಡಕ್ಕೆ ತಂದಿದ್ದಾರೆ. ಅಂಬೇಡ್ಕರ್ ಅವರ ಕೃತಿಗಳಲ್ಲಿ ಕೆಲವನ್ನು ಕನ್ನಡೀಕರಿಸಿದ್ದಾರೆ. ಕನ್ನಡ ಭಾಷಾ ಬನಿಗೆ ಸ್ಪಂದಿಸಿದ್ದಾರೆ.

ತಮ್ಮ ಶಿಷ್ಯರಿಗೆ ಸದಾ “ಜಾತ್ಯಾತೀತ” ನಿಲುವನ್ನು ಬೋಧಿಸಿದವರು. ಬದುಕಲ್ಲಿ ಅದನ್ನು ಅಳವಡಿಸಿಕೊಂಡವರು. ಅವರೆಂದೂ “ಒಕ್ಕಲಿಗರಾಗಿ” ಬಿಂಬಿತರಾದವರಲ್ಲ. ಕುವೆಂಪು ಅವರ ನೆಚ್ಚಿನ ಶಿಷ್ಯ. ವಿಶ್ವಮಾನವ ತತ್ವದ ಪ್ರತಿಪಾದಕರಾಗಿಯೇ ಬೆಳೆದವರು. ನಾನು ಅವರ ಮನೆ, ಮನದಲ್ಲಿ ಸೇರಿದ ಕೆಲವೇ ಆಪ್ತ ಶಿಷ್ಯರಲ್ಲಿ ಒಬ್ಬ. ಅವರು ಗುರು ಅನ್ನುವುದಕ್ಕಿಂತ ಆಪ್ತ ಮಿತ್ರರಂತೆ ನಡೆದುಕೊಂಡಿದ್ದಾರೆ. ಮಾನಸಗಂಗೋತ್ರಿಯಲ್ಲಿ ಕುವೆಂಪು ಅವರ ಮಂತ್ರಮಾಂಗಲ್ಯ ರೀತಿ ನಾನು – ಪುಷ್ಪ ಮದುವೆಯಾದಾಗ ಈ ಶಿಷ್ಯನ ಜತೆ ಇದ್ದು ಬೆಂಬಲಿಸಿ, ಬೆನ್ನುತಟ್ಟಿ, ಮಂತ್ರ ಮಾಂಗಲ್ಯದ ತಿರುಳನ್ನು ಬೋಧಿಸಿ, ಹರಸಿದವರು ಅವರು. ನಮ್ಮನ್ನು ಮನೆಗೆ ಕರೆದು ಉಪಚರಿಸಿದವರು. ಅವರು ಅನೇಕ ಜಾತ್ಯತೀತ ಮದುವೆ ಮಾಡಿಸಿದ್ದು ನೆನಪಿದೆ.

ನಮಗೆಲ್ಲ ಬರಹ ಹಾಗೂ ಬದುಕಿನಲ್ಲಿ ಬ್ರಾಹ್ಮಣ – ಬ್ರಾಹ್ಮಣ್ಯದ ತಂತ್ರ, ಕುತಂತ್ರಗಳ ಬಗ್ಗೆ ಸ್ಪಷ್ಟವಾಗಿ ಗೆರೆ ಎಳೆದು ತಿಳಿಹೇಳಿದವರು. ಓದಿಸಿದವರು. ಇದಕ್ಕೆ ಅವರ ಎಂಬತ್ತರ ದಶಕದ ಭಾರಿ ವಿವಾದಿತ ಲೇಖನ: “ಗೊಡ್ಡು ಬ್ರಾಹ್ಮಣ್ಯ ಮತ್ತು ದೂರ್ತ ಚಾರ್ವಾಕ ಮತ” ಓದಬೇಕು. (“ಸಂಕ್ರಮಣ” ಸಾಹಿತ್ಯ ಪತ್ರಿಕೆಯಲ್ಲಿ ಎರಡು ವರ್ಷ ಚರ್ಚೆ ಆದ ಬರಹ) ಇದು ಯು.ಆರ್. ಅನಂತಮೂರ್ತಿ ಅವರ “ಸಂಸ್ಕಾರ” ಕಾದಂಬರಿಯ ಪ್ರಾಣೇಶಚಾರ್ಯನ ಬದುಕು, ಸಾವಿನ ಸುತ್ತದ ಘಟನೆಗೆ ಸಂಬಂಧಿಸಿದ್ದು.  ಭಗವಾನ್ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ ವಿದ್ವಾಂಸರು. ವೇದ, ಉಪನಿಷತ್ತು, ಭಗವದ್ಗೀತೆ ಅಧ್ಯಯನ ಮಾಡಿದ್ದಾರೆ. ಹೀಗಾಗಿ “ಶಂಕರಾಚಾರ್ಯ ಮತ್ತು ಪ್ರತಿಗಮಿತನ” ಕೃತಿ ಓದಿದರೆ ಅವರೊಬ್ಬ ತತ್ವಜ್ಞಾನಿ ಎಂಬ ಅರಿವಾಗುತ್ತದೆ.

ಭಗವಾನ್ ಸ್ವಂತ ಪ್ರಕಾಶಕರು ಹೌದು. ಅಪಾರ ಬೇಡಿಕೆ ಇರುವ ಅವರ ವೈಚಾರಿಕ ಹಾಗೂ ವಿವಾದಿತ ಕೃತಿಗಳನ್ನು ತಲೆಮೇಲೆ ಹೊತ್ತು ಮಾರಾಟಮಾಡಿದ್ದಾರೆ. ಪಾರ್ಸಲ್ ಮೂಲಕ‌ ರಾಜ್ಯದ ಮೂಲೆಮೂಲೆಗೆ ಖುದ್ದು ತಲುಪಿಸಿದ್ದಾರೆ. ಕೆಲವು ಕೃತಿಗಳು ಇಪ್ಪತ್ತಕ್ಕೂ ಹೆಚ್ವು ಮುದ್ರಣ ಕಂಡಿವೆ. ಕೃತಿಗಳಿಂದ ಹಣವನ್ನೂ ಸಂಪಾದಿಸಿದ್ದಾರೆ. ಅವರಿಗೆ ವ್ಯಾವಹಾರಿಕ ಜ್ಞಾನವೂ ಇದೆ.

ಇದನ್ನೂ ಓದಿ : ಕೋರ್ಟ್ ಆವರಣದಲ್ಲಿ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಕ್ಷಮಿಸಿ ಮಿತ್ರರೆ, ಭಗವಾನ್ ನನ್ನ ಜಾತಿಯವರಲ್ಲ. ಅವರೆಂದು ನನ್ನ ಜಾತಿ ಕೇಳಲಿಲ್ಲ. ಇವತ್ತೂ “ಒಕ್ಕಲಿಗ” ಅನ್ನಿಸುತ್ತಲೇ ಇಲ್ಲ. ಅವರೊಬ್ಬ ಮಾನವತಾವಾದಿ. ಈಗ ಜಾತಿ ಪ್ರಶ್ನೆ ಇಟ್ಟುಕೊಂಡು ಹೋಗುವುದು ಸರಿಯೇ ಎಂಬ ಆಲೋಚನೆ ಬಂದದ್ದೂ ಇದೆ. ಆದರೆ ಈ ದೇಶವೇ ಜಾತಿಯಿಂದ ಕೊಳೆತು ನಾರುತ್ತಿದೆ. ಅವರು ವಚನಸಾಹಿತ್ಯದ ವೈಚಾರಿಕತೆ ಬಗ್ಗೆ, ಬಸವಣ್ಣನ ಕ್ರಾಂತಿಕಾರಕ ವಿಚಾರಗಳ ಬಗ್ಗೆ ಬರೆದು, ಭಾಷಣ ಮಾಡಿದ್ದಾರೆ. ಲಿಂಗಣ್ಣ ಸತ್ಯಂಪೇಟೆ ಅವರ “ಬಸವಮಾರ್ಗ” ಪತ್ರಿಕೆಯ ಬೆಂಬಲಿಗರಾಗಿ, ಬಸವತತ್ವದ ಹಿನ್ನೆಲೆಯಲ್ಲಿ ಲೇಖನಗಳನ್ನು ಬರೆಯುತ್ತ, ನನಗೆ ಪತ್ರಿಕೆ ನೀಡಿ ಓದಿಸಿದವರು ಅವರು. ರಾಜ್ಯದ ಅನೇಕ ಲಿಂಗಾಯತ ಮಠಗಳು ಇವರನ್ನು ಗೌರವಿಸಿವೆ.

ಇಷ್ಟಾಗ್ಯೂ ಅವರಲ್ಲೊಂದು ದೌರ್ಬಲ್ಯ ಕಂಡಿದ್ದೇನೆ! ಮನುಷ್ಯ ಎಂದಮೇಲೆ ಅದಿರಲೇಬೇಕು. ಅದು ಯಾರಲ್ಲಿಲ್ಲ? ಅದು ನನ್ನಲ್ಲೂ ಇದೆ. ಇನ್ನೊಬ್ಬರಲ್ಲೂ ಇದೆ! ಮೇಷ್ಟ್ರಿಗೆ ತಮ್ಮ ವೈಚಾರಿಕ ನಿಲುವು ಹಾಗೂ ವಿಮರ್ಶೆಯ ವಿಚಾರಗಳ ಬಗ್ಗೆ ಅಪಾರ ಆತ್ಮವಿಶ್ವಾಸ. ಯಾರಾದರೂ ಇವರ ಒಂದೆರಡು ವಿಚಾರಗಳಿಗೆ ಸನಿಹ ಅಥವಾ ಅವರಂತೆಯೇ ಬರೆದರೆ, “ನೋಡಿ, ನಾನು ಇಂಥ ಕೃತಿಯಲ್ಲಿ, ಇಂಥ ಲೇಖನದಲ್ಲಿ ಮೊದಲೇ ಇದನ್ನು ಬರೆದಿದ್ದೇನೆ! ಯಾರೂ ಹೇಳದ ಹೊಸ ವಿಚಾರ ಹೇಳಿದ್ದೇನೆ!” ಎಂದು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ನಾನು ಅವರ ಮಾತು ಆಲಿಸುತ್ತ ಹ್ಞೂಂಗುಟ್ಟಿದ್ದೇನೆ. ಕೆಲವೊಮ್ಮೆ “ಅವರೂ ನಿಮ್ಮಂತೆ ಏಕೆ ಆಲೋಚಿಸಿರಬಾರದು?” ಎಂದದ್ದು ಇದೆ.

ನಾನು ಕವಿ ಕಾವ್ಯಾನಂದರ ಏನಾದರು ಆಗು ಮೊದಲು ಮಾನವನಾಗು ಎಂಬ ಉದಾತ್ತ ಆಲೋಚನೆಗೆ ಹತ್ತಿರದವನು. ಒಕ್ಕಲಿಗ ಸಮುದಾಯದ ಮಿತ್ರರಲ್ಲಿ ಒಂದು ಮನವಿ: ಕುವೆಂಪು ಅವರ “ವಿಶ್ವಮಾನವ” ತತ್ವವನ್ನು ಕೊಂಚವಾದರೂ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ. ಅವರ ಸಂದೇಶ ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿ ಉಚಿತ ಹಂಚಿಕೆ ಮಾಡಿ. ಕುವೆಂಪು ಬದುಕಿದ್ದಾಗ ನನಗೂ (೧೫.೦೭.೧೯೮೪) ಒಂದು ಪ್ರತಿ ನೀಡಿ, ಸಾಧ್ಯವಾದಾಗ ಇದನ್ನು ಮುದ್ರಿಸಿ ಹಂಚಿಕೆಮಾಡಿ ಎಂದು ಹೇಳಿದ್ದರು. ಆಗ ನಾನು ಅವರ ಹಲವು ಭಾವಚಿತ್ರ ಸೆರೆ ಹಿಡಿದಿದ್ದೆ.

ಮುಗಿಸುವ ಮುನ್ನ,  ಕುವೆಂಪು ಅವರ ಮಂತ್ರಮಾಂಗಲ್ಯದ ಸರಳ ಮದುವೆಗೆ ನಿಮ್ಮ‌ ಮಕ್ಕಳನ್ನು, ಬಂಧುಗಳನ್ನು ಮಾನಸಿಕವಾಗಿ ಸಿದ್ದಪಡಿಸಿ. ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸೋಣ.

Donate Janashakthi Media

Leave a Reply

Your email address will not be published. Required fields are marked *