ಬೆಂಗಳೂರು ಕಂಬಳದಲ್ಲಿ ಕೊರಗರ “ಪನಿಕುಲ್ಲುನ” ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ ?: ಮುನೀರ್ ಕಾಟಿಪಳ್ಳ ಪ್ರಶ್ನೆ

ಮಂಗಳೂರು: ತುಳುನಾಡಿನ ಜನಪ್ರಿಯ ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದೊಂದಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಹಮ್ಮಿಕೊಳ್ಳಲಾಗಿರುವುದು ಖುಷಿಯ ವಿಚಾರ. ಅದೇ ಸಂದರ್ಭ, ಈಗ ಅಜಲು ಪದ್ದತಿ ನಿಷೇಧದ ಕಾರಣಕ್ಕೆ ಕೈ ಬಿಡಲಾಗಿರುವ ತುಳುನಾಡಿನ ಅತ್ಯಂತ ತುಳಿತಕ್ಕೊಳಗಾದ ಮೂಲ ನಿವಾಸಿಗಳಾದ ಕೊರಗರನ್ನು ‘ಪನಿ ಕುಲ್ಲಾವುನ’ ಎಂಬ ಜಾತಿ, ಪಾಳೇಗಾರಿ ಶೋಷಣೆಯ ಕೆಟ್ಟ ಅಸ್ಪೃಶ್ಯ ಆಚರಣೆಯು ಕಂಬಳದ ಪ್ರಮುಖ ಭಾಗ ಆಗಿತ್ತು, ಕೊರಗ ಸಮುದಾಯವನ್ನು ಆ ಮೂಲಕ ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿತ್ತು ಎಂಬುದನ್ನು ನಾಡಿನ ಮುಂದೆ ವಿನೀತವಾಗಿ ಒಪ್ಪಿಕೊಳ್ಳುವ, ಆತ್ಮ ಶೋಧನೆ ನಡೆಸುವ ಕಾರ್ಯ ನಡೆಯಲಿದೆಯೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು. ಬೆಂಗಳೂರು 

ಇದನ್ನೂ ಓದಿ:ರಾಜ್ಯದಲ್ಲಿ ಅಲ್ಪಸಂಖ್ಯಾತರು ಆದಿವಾಸಿ ಬುಡಕಟ್ಟು ಸಮುದಾಯಗಳ ರಕ್ಷಣೆಗೆ ಸರ್ಕಾರ ಬದ್ಧ:ಸಿಎಂ

ಮಂಗಳೂರಿನ ವಾಮಂಜೂರಿನಲ್ಲಿ ನವೆಂಬರ್-05‌ ರಂದು “ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ” ಕೊರಗ ಸಮುದಾಯದ ಪ್ರಮುಖ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಳುನಾಡಿನ ಸಾಂಸ್ಕೃತಿಕ ಕ್ರೀಡಾ ವೈಭವವನ್ನು ರಾಜಧಾನಿಯಲ್ಲಿ ರಾಜಾಶ್ರಯದಲ್ಲಿ ಸಂಘಟಿಸುತ್ತಿರುವಾಗ ಕಂಬಳದ ಹೆಸರಿನಲ್ಲಿ ಅಜಲು ನಿಷೇಧ ಕಾನೂನು ಜಾರಿಗೆ ಬರುವವರೆಗೂ ಆಚರಿಸುತ್ತಿದ್ದ ‘ಪನಿ ಕುಲ್ಲಾವುನ’ ಎಂಬ ಅಮಾನುಷ ಜಾತಿ ದಮನ, ಶೋಷಣೆಯನ್ನು ಈ ಆಧುನಿಕ ಕಾಲಘಟ್ಟದಲ್ಲಿ ಮುಚ್ಚಿಡಬಾರದು. ಕಂಬಳದ ಹಿಂದಿನ ಸಾಯಂಕಾಲ ಸ್ಪರ್ಧೆಯ ಕೋಣಗಳು ಓಡುವ ಕಂಬಳದ ಕೆರೆಯಲ್ಲಿ ಗಾಜು, ಹರಿತ ಕಲ್ಲಿನ ಚೂರುಗಳನ್ನು ಪತ್ತೆ ಹಚ್ಚಲು ಕೊರಗ ಸಮುದಾಯದವರನ್ನು ಅದರಲ್ಲಿ ಓಡಿಸುತ್ತಿದ್ದದ್ದು, ರಾತ್ರಿಯಿಡೀ ಊರಿನ ಕೊರಗ ಬಂಧುಗಳು ಕರೆಯ ದಂಡೆಯಲ್ಲಿ ತಮ್ಮ ಸಾಂಪ್ರದಾಯಿಕ ಡೋಲು ಭಾರಿಸುತ್ತಾ ಕೆರೆಯನ್ನು ಕಾಯುತ್ತಾ ಕೂರುತ್ತಿದ್ದದ್ದು ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದದ್ದು ಮರೆ ಮಾಚಲಾಗದ ವಾಸ್ತವ. ಅಜಲು ಪದ್ದತಿ ನಿಷೇಧದ ಕಾರಣಕ್ಕೆ ಇಂದು ‘ಪನಿ ಕುಲ್ಲುನ’ ಎಂಬ ಅಸ್ಪೃಶ್ಯತೆ ಆಚರಣೆ ಕೈ ಬಿಡಲಾಗಿದೆ ಎಂದರು.

ಶಾಸನ ಸಭೆಯ ಪ್ರತಿನಿಧಿಗಳು, ಸಮಾಜದ ಗಣ್ಯರು ಆಯೋಜಿಸುತ್ತಿರುವ, ಸರಕಾರದ ಮುಖ್ಯಮಂತ್ರಿಗಳು, ಸಚಿವರು ಭಾಗಿಯಾಗುತ್ತಿರುವ, ಸರಕಾರದಿಂದ ಕೋಟಿ ರೂಪಾಯಿ ಅನುದಾನ ಪಡೆದಿರುವ ಬೆಂಗಳೂರು ಕಂಬಳದಲ್ಲಿ, ಕಂಬಳದ ಹೆಸರಿನಲ್ಲಿ ನಡೆದಿರುವ ಜಾತಿ ಶೋಷಣೆ, ಅಸ್ಪ್ರೃಶ್ಯತೆ ಆಚರಣೆಯೂ ಚರ್ಚೆಯಾಗುವುದು, ಪಾಪಪ್ರಜ್ಞೆಯಿಂದ ಒಪ್ಪಿಕೊಳ್ಳುವುದು ಬಹಳ ಮುಖ್ಯ‌. ಸಿನೆಮಾ, ಕ್ರೀಡಾ, ಉದ್ಯಮ, ರಾಜಕೀಯ ಕ್ಷೇತ್ರದ ರಾಷ್ಟ್ರ ಮಟ್ಟದ ಸೆಲೆಬ್ರಿಟಿಗಳು, ತಾರೆಗಳ ಜೊತೆ ತುಳುನಾಡಿನ ಕೊರಗ, ದಲಿತ ಸಮುದಾಯದ ಮುಖಂಡರಿಗೂ ವೇದಿಕೆಯಲ್ಲಿ ಅವಕಾಶ ಒದಗಿಸುವುದು, ಅವರ ಸಮ್ಮುಖದಲ್ಲೇ ಇತಿಹಾಸದಲ್ಲಿ ಆಗಿಹೋಗಿರುವ, ಶೋಷಣೆ, ಅನ್ಯಾಯಕ್ಕೆ ವಿಷಾದ ವ್ಯಕ್ತಪಡಿಸುವುದಕ್ಕೆ ಬಹಳ ಮಹತ್ವವಿದೆ. ಈ ಕುರಿತು ಕೊರಗ ಸಮುದಾಯದ ಯುವ ತಲೆಮಾರು ಧ್ವನಿ ಎತ್ತಬೇಕು, ಪ್ರಶ್ನಿಸಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು. ಬೆಂಗಳೂರು 

ಇದನ್ನೂ ಓದಿ:ಮೀಸಲಾತಿ ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಆದಿವಾಸಿಗಳೇ ಹೆಚ್ಚು

ಬೆಂಗಳೂರು ಕಂಬಳಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ, ಬಲಾಢ್ಯ ಸಮುದಾಯಗಳ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸುವ ಮುಖ್ಯಮಂತ್ರಿಗಳು ಕೊರಗರಂತಹ ಸರಾಸರಿ 45 ವರ್ಷಗಳ ಆಯಸ್ಸು ಮಾತ್ರ ಹೊಂದಿರುವ ತುಳುನಾಡಿನ ಮೂಲ ನಿವಾಸಿಗಳು, ಅಮಾನುಷ ಜಾತಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯದ ಬಳಿಗೆ ಬರುವುದು ಯಾವಾಗ, ಅವರ ಕನಿಷ್ಟ ಬೇಡಿಕೆಗಳಿಗೆ ಅನುದಾನ ಬಿಡುಗಡೆ ಮಾಡುವುದು ಯಾವಾಗ, ಡಾ. ಮಹಮ್ಮದ್ ಪೀರ್ ವರದಿಯಂತೆ ಕೊರಗ ಕುಟುಂಬಗಳಿಗೆ ಎರಡೂವರೆ ಎಕರೆ ಕೃಷಿ ಭೂಮಿ ನೀಡುವುದು ಯಾವಾಗ ?ಮುಖ್ಯಮಂತ್ರಿ, ಸಚಿವರುಗಳು ಬಿಡಿ ಪಂಚಾಯತ್ ಸದಸ್ಯರುಗಳಾದರೂ ಕೊರಗರಂತಹ ಆದಿವಾಸಿಗಳ ಕಾಲೋನಿ ಕಡೆಗೆ ತಲೆ ಹಾಕುತ್ತಾರೆಯೆ ಎಂದು ಮುನೀರ್ ಕಾಟಿಪಳ್ಳ ವಿಷಾದ ವ್ಯಕ್ತಪಡಿಸಿದರು. ದಮನಿತ ಸಮುದಾಯಗಳು ಒಂದಾಗದೆ, ಸೈದ್ದಾಂತಿಕ ತಿಳುವಳಿಕೆ, ಬದ್ದತೆಯೊಂದಿಗೆ ಸಂಘರ್ಷಕ್ಕಿಳಿಯದೆ ವ್ಯವಸ್ಥೆ ತಮ್ಮ ಕಡೆಗೆ ತಿರುಗಿ ನೋಡುವುದಿಲ್ಲ ಎಂದು ಹೇಳಿದರು.

ಉದ್ಘಾಟನಾ ಘೋಷ್ಠಿಯ ಆದ್ಯಕ್ಷತೆಯನ್ನು ಕರಿಯ ಕೊರಗ ವಹಿಸಿದ್ದರು. ಡಾ. ಕೃಷ್ಣಪ್ಪ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು, ಜಿಲ್ಲಾ ಮುಂದಾಳು ರಶ್ಮಿ ವಾಮಂಜೂರು, ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ಶೇಖರ್ ಮಂಗಳಜ್ಯೋತಿ, ನೌಕರರರ ಉಪ ಸಮಿತಿ ಸಂಚಾಲಕ ಜಯ ಸುರತ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುನೀತ್ ವಾಮಂಜೂರು ಸ್ವಾಗತಿಸಿದರು.

ವಿಡಿಯೋ ನೋಡಿ:ಹಿಂದುತ್ವ ರಾಜಕಾರಣ : ಸಿದ್ದಾಂತದ ವ್ಯವಹಾರಕ್ಕೆ ಹಿಂದುಳಿದ ವರ್ಗವೇ ಟಾರ್ಗೆಟ್ ! Janashakthi Media

Donate Janashakthi Media

Leave a Reply

Your email address will not be published. Required fields are marked *