ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆದ ಹಿನ್ನೆಲೆಯಲ್ಲಿ ನಗರದಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆಯುತ್ತಿದ್ದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಐವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಭದ್ರತೆ ನಿರ್ವಹಣೆ ವೈಫಲ್ಯ ಹಿನ್ನೆಲೆಯಲ್ಲಿ ಐವರು ಅಧಿಕಾರಿಗಳ ತಲೆದಂಡವಾಗಿದೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಸಿಪಿಐ ಗಿರೀಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದುಃಖಕರವಾಗಿದ್ದು, ಮೃತಪಟ್ಟವರಿಗೆ ಸಂತಾಪ ಕೋರಲಾಯಿತು. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.
ಆರ್ಸಿಬಿ ಸಂಸ್ಥೆ, ಕಾರ್ಯಕ್ರಮ ಆಯೋಜಕರಾದ ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣವನ್ನು ತನಿಖೆ ನಡೆಸಲು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ನೂತನ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್ ನೇಮಕ
ಅಮಾನತುಗೊಂಡ ದಯಾನಂದ್ ಅವರ ಜಾಗಕ್ಕೆ ನಗರ ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಮೆಟ್ರೊಪಾಲಿಟಿಕನ್ ಟಾಸ್ಕ್ (ಬಿಎಂಟಿಎಫ್) ಎಡಿಜಿಪಿಯಾಗಿದ್ದ ಬಿಹಾರ ಮೂಲದ ಸೀಮಂತ್ ಕುಮಾರ್ ಅವರನ್ನು ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಶುಕ್ರವಾರ(ಇಂದು) ಪದಗ್ರಹಣ ಮಾಡುವ ಸಾಧ್ಯತೆಯಿದೆ.
ಸರ್ಕಾರದ ನಡೆಗೆ ಆಕ್ರೋಶ : ಕಮೀಷನರ್ ದಯಾನಂದ ಅಮಾನತು ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ದಯನಾಂದ ಸೇರಿದಂತೆ ಹಲವು ಪೊಲೀಸರು ಪ್ರಾಣ ಲೆಕ್ಕಿಸದೆ ಜನರನ್ನು ಕಾಪಾಡಿದ್ದಾರೆ. ಪೊಲೀಸರು ಇರದಿದ್ದರೆ ಇನ್ನಷ್ಟು ಸಾವು – ನೋವುಗಳು ಹೆಚ್ಚುತ್ತಿದ್ದವು ಎಂದು ಆರೋಪಿಸಿದ್ದಾರೆ.
ಗ್ರಹ ಸಚಿವರು ಹಾಗೂ ಬೆಂಗಳೂರು ಉಸ್ತುವಾರಿಗಳು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.