ಲಿಂಗರಾಜು ಮಳವಳ್ಳಿ
ಈ ಸಲ ಸುರಿದ ಬಾರಿ ಮಳೆ ಇಡೀ ಬೆಂಗಳೂರನ್ನು ಪ್ರವಾಹಕ್ಕೆ ಸಿಲುಕಿಸಿತ್ತು. ಅದರಲ್ಲೂ ಬೆಂಗಳೂರಿನ ಪೂರ್ವ ಭಾಗ ಸಂಪೂರ್ಣವಾಗಿ ಮಳುಗಡೆ ಆಗಿತ್ತು. ಮನೆಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿ ನಷ್ಟ. ಅನ್ನ, ನೀರಿಗೂ ಪರದಾಟ, ಮನೆಗಳ ಬಿರುಕು – ಕುಸಿತ. ಕೆಲವಡೆ ಇಡೀ ಪ್ರದೇಶ ನೀರಿನಿಂದ ದ್ವೀಪದಂತಾಗಿತ್ತು. 13 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ವಿಲ್ಲಾಗಳೂ ಪ್ರವಾಹಕ್ಕೆ ತುತ್ತಾದವು! ಮನೆಗಳ ನೀರಿನ ಸಂಪುಗಳಿಗೆ ಕೊಳಚೆ ನೀರು ನುಗ್ಗಿದ್ದರಿಂದ ರೋಗರುಜಿನಗಳು ಹರಡಿದವು. ಮನೆ, ಅಪಾರ್ಟ್‌ಮೆಂಟ್ ಸಮುಚ್ಚಯದೊಳಗೆ ನುಗ್ಗಿದ ನೀರನ್ನು ಹೊರಹಾಕಲು ನಿವಾಸಿಗಳ ಪಟ್ಟ ಪರಿಪಾಟಲು ಹೇಳತೀರದು. ಕಾವೇರಿ ನೀರು ನಿಂತು ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು.
ಹಲವರಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಕಾಳಿನದಿಯಲ್ಲಿ ಕಾಣಸಿಗುವ ಮೊಸಳೆಯೂ ಇಲ್ಲಿ ಕಾಣಿಸಿಕೊಂಡಿತ್ತು! ಯುವತಿಯೊಬ್ಬರು ವಿದ್ಯುತ್ ಪ್ರವಹಿಸಿ ಸಾವಿಗೀಡಾದರು. ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ವಾಸವಿರುವ ಜೋಪಡಿಗಳು, ಸ್ಲಂಗಳು ಸಂಪೂರ್ಣವಾಗಿ ನೆರೆಗೆ ಸಿಲುಕಿದವು. ಇವರದು ಅರಣ್ಯರೋದನವಾದರೆ, ಐಟಿಬಿಟಿ ಮಂದಿ ಮೀಡಿಯಾಗಳೆದುರು ಬೆಂಗಳೂರನ್ನು ತೆರೆಯುವ ಆಕ್ರೋಶದ ಮಾತನ್ನಾಡಿ, ಆ ಕ್ಷಣದ ಶಾಸ್ತ್ರ ಮುಗಿಸಿದರು.
ಉದ್ಯಮಿ ಮೋಹನ್ ದಾಸ್ ಪೈ ಸರ್ಕಾರಕ್ಕೆ ಛೀಮಾರಿ ಹಾಕಿದರು. ‘ಛೀಮಾರಿ ಹಾಕಿದ ಉದ್ಯಮಿಯ ಬಂಗಲೆಯ ಕೆಳಗೆ ರಾಜಕಾಲುವೆ ಹಾದುಹೋಗಿದೆ’ ಎಂದು ಮುಖ್ಯಮಂತ್ರಿಯೇ ಮುಂದೆನಿಂತು ಬಾಯಿಮುಚ್ಚಿಸಲೆತ್ನಿಸಿದರು! ಐಟಿ-ಬಿಟಿ ಕಂಪನಿಗಳೇ ಹೆಚ್ಚಿರುವ ಪೂರ್ವಭಾಗದ ಬೆಳ್ಳಂಡೂರು, ಕಾಡಬಿಸನಹಳ್ಳಿ, ವೈಟ್ ಫೀಲ್ಡ್, ರಿಂಗ್ ರಸ್ತೆ ಪೂರ್ತಿಯಾಗಿ ಮುಳುಗಡೆ ಆಗಿದ್ದವು. ಇಲ್ಲಿನ ಶಾಸಕ ಅರವಿಂದ ಲಿಂಬಾವಳಿ ‘ಹೆಚ್ಚಿಗೆ ಮಳೆ ಬಂದ್ರೆ ನಾನೇನು ಮಾಡೋಕೆ ಆಗುತ್ತೆ’ ಎಂದು ಬೇಜವಾಬ್ದಾರಿ ಉತ್ತರ ಕೊಟ್ಟರು. ಜನ ಪ್ರವಾಹದಲ್ಲಿ ಮುಳುಗಿರುವಾಗ ಮಸಾಲೆ ದೋಸೆ ಸವಿಯಲು ಎಳಸು ಸಂಸದ ತೇಜಸ್ವಿಸೂರ್ಯ ಕರೆಕೊಟ್ಟಿದ್ದು ವೈರಲ್ ಆಗಿತ್ತು. ಬೆಂಗಳೂರಿನ ಉಸ್ತುವಾರಿಗಿರಿಗೆ ಕಚ್ಚಾಡಿಕೊಂಡು ಸದಾ ಸುದ್ದಿಯಲ್ಲಿರುತ್ತಿದ್ದ ಪ್ರಭಾವಿ ಮಂತ್ರಿಗಳಿಬ್ಬರು ದಿವ್ಯ ಮೌನಕ್ಕೆ ಶರಣಾಗಿದ್ದರು.
ಬೆಂಗಳೂರು ನಗರದ ನೈಸರ್ಗಿಕ ರಚನೆ
ಬೆಂಗಳೂರು ನಗರ ಸಮುದ್ರಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿರುವ ನಗರ. ಇದರ ರಕ್ಷಣೆಗೆ ಬನ್ನೇರುಘಟ್ಟ ದಟ್ಟ ಅರಣ್ಯವೂ ಇದೆ. ಪ್ರವಾಹಕ್ಕೆ ಸಿಲುಕಲು ಅಕ್ಕಪಕ್ಕದಲ್ಲಿ ಯಾವ ನದಿಯೂ ಇಲ್ಲ. ಹೀಗಿದ್ದೂ ಬೆಂಗಳೂರು ಪ್ರವಾಹಕ್ಕೆ ಸಿಲುಕಿದ್ದು ಯಾಕೆ? ಎನ್ನುವ ಪ್ರಶ್ನೆಗೆ ದಂಡಿ ಉತ್ತರ ಇವೆಯಾದರೂ, ಕಾರ್ಯಗತಗೊಳಿಸಲು ಯಾರಿಗೂ ಇಚ್ಚಾಸಕ್ತಿ ಇಲ್ಲ.
ಬೆಂಗಳೂರು ಎತ್ತರದ ಪ್ರದೇಶವಾದ್ದರಿಂದ ಇಲ್ಲಿ ಮಳೆಯೂ ಹೆಚ್ಚಾಗಿ ಬೀಳುತ್ತದೆ. ಆದರೆ ಬಿದ್ದ ನೀರು ಬಹುಬೇಗನೆ ಇಳಿದು ಹೋಗುತ್ತಿತ್ತು. ಈ ಮಳೆ ನೀರು ಹೆಚ್.ಎನ್.ವ್ಯಾಲಿ (ಹೆಬ್ಬಾಳ-ನಾಗವಾರ ಕಣಿವೆ) ಮತ್ತು ಕೆ.ಸಿ.ವ್ಯಾಲಿ (ಕೋರಮಂಗಲ-ಚಲ್ಲಘಟ್ಟ ಕಣಿವೆ) ಮೂಲಕ ಹಾದು ಹೋಗಿ ಮುಂದೆ ದಕ್ಷಿಣ ಪಿನಾಕಿನಿ ನದಿಯಾಗಿ ರೂಪ ತಳೆದು, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಮುಟ್ಟಿ ಕೊನೆಗೆ ಅರಬ್ಬೀ ಸಮುದ್ರವನ್ನು ಸೇರುತ್ತಿತ್ತು.
ಬೆಂಗಳೂರು ನಗರದಲ್ಲಿ ಬೀಳುವ ಮಳೆ ನೀರನ್ನು ಹಿಡಿದಿಡಲು ಸುಮಾರು 1700ಕ್ಕೂ ಹೆಚ್ಚು ಕೆರೆಗಳು ಇದ್ದವು. ಈಗಿನ ಮೆಜೆಸ್ಟಿಕ್ ಬಸ್ ನಿಲ್ದಾಣವೂ ಹಿಂದೆ ಕೆರೆಯೇ ಆಗಿತ್ತು! ಕೆರೆಗಳಿಂದಾಗಿ ತೋಟ ಕೃಷಿಗೆ (ಸೊಪ್ಪು, ತರಕಾರಿ, ಹಣ್ಣು ಇತ್ಯಾದಿ) ಹೆಸರುವಾಸಿಯಾಗಿತ್ತು. ಮಾತ್ರವಲ್ಲದೇ ನಗರವನ್ನು ಸದಾ ತಂಪಾಗಿಡುತ್ತಿತ್ತು. ಹೀಗಾಗಿ ಬೆಂಗಳೂರು ಏರ್ ಕಂಡೀಷನ್ಡ್ ಸಿಟಿ ಅಂತಲೂ ಕರೆಸಿಕೊಂಡು ಪೆನ್ಷನರ‍್ಸ್ ಪ್ಯಾರಡೈಸ್ ಆಗಿತ್ತು ಎಂಬುದೀಗ ಇತಿಹಾಸ.
ಕೆರೆ ತುಂಬಿ ಹೆಚ್ಚಾದ ನೀರು ಕೋಡಿ ಬಿದ್ದು ರಾಜಕಾಲುವೆಗಳ ಮೂಲಕ ಮತ್ತೊಂದು ಕೆರೆಯನ್ನು ಸೇರುತ್ತಿತ್ತು. ಕಂದಾಯ ದಾಖಲೆಗಳ ಪ್ರಕಾರ ಈ ರಾಜಕಾಲುವೆಗಳು 30 ಮೀಟರ್ ಅಗಲ ಇದ್ದವು. ಇವು ಗ್ರ್ಯಾವಿಟಿ ಆಧರಿಸಿ ತಮ್ಮ ದಿಕ್ಕನ್ನು ಕಂಡುಕೊಂಡು ಮತ್ತೊಂದು ಕರೆಯನ್ನು ಸೇರುತ್ತಿದ್ದವು. ಕೆರೆಯಿಂದ ಕೆರೆಗೆ ನೀರು ಹರಿದು, ಹೆಚ್ಚಾದ ನೀರು ದಕ್ಷಿಣ ಪಿನಾಕಿನಿ ಸೇರುತ್ತಿತ್ತು. ಇದರಿಂದ ಬೆಂಗಳೂರು ನೆರೆ-ಪ್ರವಾಹಕ್ಕೆ ಸಿಲುಕಲು ಸಾಧ್ಯವೇ ಇರಲಿಲ್ಲ.
ಆದರೂ ಪ್ರವಾಹ ಯಾಕಾಯ್ತು?
ಕೆರೆಗಳ ನಗರ ಬೆಂಗಳೂರಿನಲ್ಲೀಗ ಕೆಲವೇ ಕೆಲವು ಕೆರೆ ಉಳಿದಿವೆ. ಕೆರೆಗಳು ಲೇಔಟ್, ಐಷಾರಾಮಿ ವಿಲ್ಲಾಗಳು, ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಕೆರೆ ಕಬಳಿಸಿದ್ದು ಸಾಕಾಗದೇ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ; ಕೆಲವೆಡೆ ಪೂರ್ತಿಯಾಗಿ ಮುಚ್ಚಲಾಗಿದೆ. ಮತ್ತೆ ಕೆಲವೆಡೆ ಗ್ರ್ಯಾವಿಟಿಗೆ ವಿರುದ್ಧವಾಗಿ ಕಾಲುವೆಯ ದಿಕ್ಕನ್ನೇ ಬದಲಾಗಿಸಲಾಗಿದೆ. ಮಳೆನೀರು ಕಾಲುವೆ ಎಂದು ದಾಖಲೆಗಳಲ್ಲಿದೆ. ಆದರೆ ಇವು ಎಲ್ಲಿಯೂ ಕಾಣುವುದಿಲ್ಲ! ಕೆರೆ, ರಾಜಕಾಲುವೆ ಮತ್ತು ಇವುಗಳ ಭಪೋರ್ ಜೋನ್ (ಸುರಕ್ಷಿತ ವಲಯ), ರಸ್ತೆ, ಗೋಮಾಳ ಹೀಗೆ ಎಲ್ಲವನ್ನೂ ಒಂದಿಂಚೂ ಬಿಡದೇ ನುಂಗಿದ ಮೇಲೆ ಮಳೆ ನೀರು ಹರಿದು ಹೋಗುವುದಾದರೂ ಎಲ್ಲಿಗೆ?
ಬೆಂಗಳೂರಿನಲ್ಲಿ 28 ಶಾಸಕರಿದ್ದಾರೆ. ಇವರಲ್ಲಿ ಬಹುತೇಕರು ಪಕ್ಷಬೇಧವಿಲ್ಲದೇ ರಿಯಲ್ ಎಸ್ಟೇಟ್ ಉದ್ದಿಮೆ ನಡೆಸುವವರೇ ಆಗಿದ್ದಾರೆ. ಕೆಲವರು ಘೋಷಿಸಿಕೊಂಡಿದ್ದರೆ, ಮತ್ತೆ ಕೆಲವರು ಬೇನಾಮಿ ಪಾಲುದಾರರು. ಪಾಲಿಕೆ ಸದಸ್ಯರೂ ಇದಕ್ಕೆ ಹೊರತಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಒತ್ತುವರಿ, ಕಬಳಿಕೆಯ ಹಿಂದೆ ಇವರೇ ಇರುವಾಗ, ಕೇಳುವವರು ಯಾರು? ಕಾನೂನು ನಿಯಮಾವಳಿಗಳು ಇವೆಯಾದರೂ ಅವು ಬಡವರು, ಅಸಹಾಯಕರ ಮೇಲೆ ಪ್ರಯೋಗಿಸಲಷ್ಟೇ!
ನೆರೆಗೆ ಭ್ರಷ್ಟಾಚಾರವೂ ಕಾರಣ!
ನಗರಕ್ಕೆ ಮೂಲ ಸೌಕರ್ಯದ ಬಹಳ ದೊಡ್ಡ ದೊಡ್ಡ ಪ್ರಾಜೆಕ್ಟುಗಳು ಜಾರಿ ಆಗುತ್ತಲೇ ಇವೆ. ಇದಕ್ಕಾಗಿ ಬಜೆಟ್ ಇಲ್ಲದಿದ್ದರೂ ಸಾಲ ತಂದು ಸುರಿಯಲಾಗುತ್ತಿದೆ. ಆದರೆ ಇವುಗಳಿಂದ ನಗರದ ನೆರೆ ತಪ್ಪಿಸಲು ಸಾಧ್ಯವಾಗಿಲ್ಲ. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಗಳು, ಇದರ ಹಿಂದಿರುವ 40% ಕಮೀಷನ್ ದಂಧೆಯೂ ಇದಕ್ಕೆ ಕಾರಣ ಎಂಬುದನ್ನು ಬೇರೆಯಾಗಿ ಹೇಳಬೇಕಿಲ್ಲ. ಕಿಲೋ ಮೀಟರ್ ಗೆ 10 ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ವೈಟ್ ಟಾಪಿಂಗ್ ರಸ್ತೆಗಳಲ್ಲೂ ನಾಲ್ಕು ಅಡಿ ನೀರು ನಿಂತಿರುವುದು ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬೆತ್ತಲು ಮಾಡಿದೆ. ನಗರ ಯೋಜನೆಯಲ್ಲಿ ತಜ್ಞರು ಹಾಗು ಸ್ಥಳೀಯರ ಅಭಿಪ್ರಾಯ ಪಡೆಯದೇ ಅಥವಾ ಪರಿಗಣಿಸದೇ, ತಮ್ಮ ಮೂಗಿನ ನೇರಕ್ಕೆ ಅಥವಾ ದೊಡ್ಡವರ ಹಿತಾಸಕ್ತಿಗೆ ಅನುಗಣವಾಗಿ ಯೋಜನೆ ರೂಪಿಸುವುದೂ ಪ್ರವಾಹಕ್ಕೆ ಕಾರಣ.
ಮಳೆಗಾಲವನ್ನು ಎದುರಿಸಲು ಬಿಬಿಎಂಪಿ ಸರಿಯಾದ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನವೇ ಚರಂಡಿ, ರಾಜಕಾಲುವೆ ಮತ್ತು ಮಳೆ ನೀರು ಕಾಲುವೆಗಳ ಹೂಳು ಎತ್ತದಿರುವುದು ನೆರೆಯನ್ನು ಪ್ರವಾಹವಾಗಿಸಿತು. ನೆರೆಗೆ ಸಿಲುಕಬಹುದಾದ ತಗ್ಗು ಪ್ರದೇಶಗಳಲ್ಲಿಯಾದರೂ ಆದ್ಯತೆ ಮೇರೆಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬಹುದಿತ್ತು. ಅದೂ ಆಗಲಿಲ್ಲ. ಕಾರಣ, ಅಧಿಕಾರಿಗಳಲ್ಲಿ ಪ್ರಾಮಾಣಿಕತೆಯಿಂದ, ಕಾಳಜಿ, ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡುವವರ ಸಂಖ್ಯೆ ವಿರಳಾತಿ ವಿರಳ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬ ಹುಲ್ಲುಗಾವಲಿನಲ್ಲಿ ಹೆಚ್ಚಿನವರು ಮೇಯಲು ಬಂದವರೇ ಆಗಿದ್ದಾರೆ. ಬಹುಪಾಲು ಮಂದಿ ಅಧಿಕಾರಿಗಳು ಮಂತ್ರಿ-ಶಾಸಕರ ಕೈಕಾಲು ಹಿಡಿದು ಅಥವಾ ಲಕ್ಷ ಲಕ್ಷ ಲಂಚ ನೀಡಿ ನಿಯೋಜನೆ ಮೇಲೆ ಪೋಸ್ಟಿಂಗ್ ಪಡೆದವರೇ. ಹೀಗಿರುವಾಗ ಹೂಡಿದ ಬಂಡವಾಳಕ್ಕೆ ಲಾಭ ತೆಗೆಯಬೇಡವೇ?
ಮಳೆ ನಿಂತ ಮೇಲೆ?
ಸರ್ಕಾರ ನೆರೆ ತಡೆಯುವಲ್ಲಿ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಮಾತಿಗೆ, ‘ಪ್ರತಿಪಕ್ಷಗಳ ಇಂತಹ ಹೇಳಿಕೆಗಳಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗಿದೆ’ ಎಂಬ ಸರ್ಕಾರದ ನಾಚಿಕೆಗೆಟ್ಟ ಹೇಳಿಕೆ ಹೊರಬಂತು. ಎಷ್ಟೇ ಪ್ರಭಾವಿ ಆಗಿದ್ದರೂ ಒತ್ತುವರಿ ತೆರವುಗೊಳಿಸಿ ಎಂದು ಯಥಾಪ್ರಕಾರ ಕೋರ್ಟ್ ಹೇಳಿತು. ಪೊಲೀಸರ ರಕ್ಷಣೆಯೊಂದಿಗೆ ಘರ್ಜಿಸಿದ ಜೆಸಿಬಿಗಳು, ಬಡವರ ಮನೆಗಳ ನೆಲಸಮ ಮಾಡಿದವೇ ಹೊರತು, ಬಂಗಲೆ, ಕಮರ್ಷಿಯಲ್ ಕಾಂಪ್ಲೆಕ್ಸ್, ವಿಲ್ಲಾಗಳ ಹತ್ತಿರವೂ ಸುಳಿಯಲಿಲ್ಲ! ಪ್ರತಿ ನೆರೆ ಬಂದಾಗಲೂ ನಡೆಯುವ ಬೃಹನ್ನಣೆ ನಾಟಕ ಈಗಲೂ ನಡೆಯುತ್ತಿದೆ.
ನೆರೆ – ಪ್ರವಾಹ ತಡೆಯಲು ಮಾಡಬೇಕಾದ ಕಾರ್ಯಗಳು
- ಕೆರೆ, ರಾಜಕಾಲುವೆ, ಚರಂಡಿ, ರಸ್ತೆ ಹಾಗೂ ಸರ್ಕಾರಿ ಜಮೀನು ಕಬಳಿಕೆ ಹಾಗೂ ಒತ್ತುವರಿ ಮಾಡಿರುವುದನ್ನು ನಿರ್ದಾಕ್ಷೀಣ್ಯವಾಗಿ ತೆರವುಗೊಳಿಸಬೇಕು
- ಚರಂಡಿ, ರಾಜಕಾಲುವೆ ಮತ್ತು ಮಳೆನೀರು ಕಾಲುವೆಗಳ ಹೂಳು ಎತ್ತಬೇಕು, ನಿರ್ವಹಣೆ ಮೇಲೆ ನಿಗಾ ಇಡಬೇಕು.
- ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು
- ಅಪಾರ್ಟ್‌ಮೆಂಟ್ ಸಮುಚ್ಛಯ, ವಾಣಿಜ್ಯ ಸಂಕೀರ್ಣ ನಿರ್ಮಾಣದಲ್ಲಿ ಆಗುತ್ತಿರುವ ನಿಯಮಾವಳಿಗಳ ಉಲ್ಲಂಘನೆಯನ್ನು ತಡೆಗಟ್ಟಬೇಕು. ಓ.ಸಿ ಮತ್ತು ಸಿ.ಸಿ ನೀಡಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.
- ಖಾಸಗಿ ಬಡಾವಣೆಗಳ ನಿರ್ಮಾಣದಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- ನೆರೆಗೆ ತುತ್ತಾಗುವುದನ್ನು ಶಾಶ್ವತವಾಗಿ ತಪ್ಪಿಸಲು ನಗರ ಯೋಜನೆ ತಜ್ಞರ ಸಲಹೆ ಪಡೆದು ಸಮಗ್ರ ಯೋಜನೆ ರೂಪಿಸಬೇಕು. ಯೋಜನೆ ರೂಪಿಸುವ ಮತ್ತು ಯೋಜನೆ ಜಾರಿ ಹಂತದಲ್ಲಿ ಸ್ಥಳೀಯ ನಿವಾಸಿಗಳನ್ನು ಒಳಗೊಳ್ಳಬೇಕು
- ವಾರ್ಡ್ ಸಮಿತಿಗಳನ್ನು ಪುನರ್ ರಚಿಸಬೇಕು. ಸಮಿತಿಗಳಲ್ಲಿ ನೈಜ ನಿವಾಸಿಗಳಿಗೆ ಪ್ರಾತಿನಿದ್ಯ ನೀಡಬೇಕು ಹಾಗು ಮಾಸಿಕ ಸಭೆ ಕಡ್ಡಾಯವಾಗಿ ನಡೆಯುವಂತೆ ಕ್ರಮವಹಿಸಬೇಕು
- ನಗರ ಯೋಜನೆಯಲ್ಲಿ ಬೆಸ್ಕಾಂ, ಜಲಮಂಡಳಿ ಜತೆಗೆ ಸಮನ್ವಯತೆ ಸಾಧಿಸಿ ಕಾಮಗಾರಿಗಳನ್ನು ನಡೆಸಬೇಕು
- ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿಯುವಂತೆ ಕ್ರಮವಹಿಸಬೇಕು.
ಇಂತಹ ಸಾವಿರ ಸಲಹೆಗಳನ್ನು ನಗರ ಯೋಜನೆ ತಜ್ಞರು, ಸಂಸ್ಥೆಗಳು ಸರ್ಕಾರಕ್ಕೆ ನೀಡಿವೆ ಮತ್ತು ಜಾರಿಗೆ ಒತ್ತಾಯವೂ ನಡೆದಿದೆ. ರಿಯಲ್ ಎಸ್ಟೇಟ್ ಕುಳಗಳು, ದಲ್ಲಾಳಿಗಳು, ಭೂಮಾಫಿಯಾ ಶಕ್ತಿಸೌಧ ಹೊಕ್ಕು ನೀತಿ-ನಿಯಮ ರೂಪಿಸುತ್ತಿರುವಾಗ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ಪ್ರಶ್ನೆ? ಮತ್ತೊಮ್ಮೆ ನೆರೆ ಬಂದಾಗ ದಿನಾಂಕ ಬದಲಾಯಿಸಿ ಇದೇ ಲೇಖನ ಮರುಪ್ರಕಟಿಸಬಹುದು ಅಷ್ಟೇ!