ಬೆಂಗಳೂರು: ಬೇಸಿಗೆ ಇನ್ನೂ ಎರಡು ತಿಂಗಳ ಕಾಲ ಇರಲಿದೆ. ಹೀಗಾಗಿ ಬೆಂಗಳೂರು ಜನತೆಗೆ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುವ ವಿನೂತನ ಯೋಜನೆ ‘ಸಂಚಾರಿ ಕಾವೇರಿ-ಕಾವೇರಿ ಆನ್ ವ್ಹೀಲ್ಸ್’ ಅನುಷ್ಠಾನ ಮಾಡಲಾಗುತ್ತದೆ. ಈ ಸಂಬಂಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಜಲಮಂಡಳಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ಅಪ್ಡೇಟ್ ನೀಡಿದ್ದಾರೆ.
ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿದ ಜನರ ಮನೆ ಬಾಗಿಲಿಗೆ ಬಿಐಎಸ್ ಪ್ರಾಮಾಣೀಕೃತ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಒದಗಿಸುವ ವಿನೂತನ ಯೋಜನೆ ಇದಾಗಿದೆ. ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂಧರ್ಭದಲ್ಲಿ ಖಾಸಗಿ ಟ್ಯಾಂಕರ್‌ಗಳು ತಮ್ಮ ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಈ ತೊಂದರೆಯಿಂದ ತಪ್ಪಿಸುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ರೂಪಿಸಲಾಗಿದೆ. ಈ ಹಿನ್ನಲೆಯಲ್ಲಿ ಬಿಐಎಸ್ ಪ್ರಾಮಾಣೀಕೃತ ಶುದ್ಧ ಕುಡಿಯುವ ನೀರನ್ನು ಜನರ ಮನೆಬಾಗಿಲಿಗೆ ತಲುಪಿಸಲಾಗುವುದು. ಈ ಯೋಜನೆ ವಿಶಿಷ್ಟತೆ, ಪ್ರಮುಖ ಅಂಶಗಳು ಇಲ್ಲಿದೆ.
ಯಾವುದೇ ಸರ್‌ಚಾರ್ಜ್ ಆತಂಕ ಬೇಡ
* ಟ್ಯಾಂಕರ್ ಟ್ರಾಕಿಂಗ್, ಓಟಿಪಿ ಪ್ರೊಟೆಕ್ಟೆಡ್ ಸೇವೆ
* ಬಿಐಎಸ್ ಪ್ರಮಾಣಿತ ಶುದ್ದ ಹಾಗೂ ಸ್ವಚ್ಚ ಕುಡಿಯುವ ನೀರು ಲಭ್ಯ
* ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನೀಡುವ ವ್ಯವಸ್ಥೆ
* ಬೆಂಗಳೂರು ನಾಗರೀಕರು ಆನ್ ಡಿಮ್ಯಾಂಡ್ ಟ್ಯಾಂಕರ್ ನೀರು ಬುಕ್ಕಿಂಗ್ ಮಾಡಲು ಅವಕಾಶ
* ಯಾವುದೇ ಸರ್‌ಚಾರ್ಜ್, ಬೇಡಿಕೆ ಹೆಚ್ಚಾಗುವ ಛಾರ್ಜ್‌ಗಳ ಭಯವಿಲ್ಲ
* ದರ ಏರಿಕೆಯ ಭಯವಿಲ್ಲದೇ ಜನರು ನಿಗದಿತ ರಿಯಾಯತಿ ದರದಲ್ಲಿ ಟ್ಯಾಂಕರ್ ನೀರು ಬುಕ್ಕಿಂಗ್ ಗೆ ಅವಕಾಶ
ಅತ್ಯಂತ ಸುಲಭ ವಿಧಾನದಲ್ಲಿ ಜನರು ತಮಗೆ ಅಗ್ಯವಿರುವಷ್ಟು ನೀರನ್ನು ಬುಕ್ಕಿಂಗ್ ಇಲ್ಲಿ ಮಾಡಬಹುದು. ಕಾವೇರಿ ಕನೆಕ್ಟ್ ಸೆಂಟರ್‌ಗಳಿಂದ ಬಿಐಎಸ್ ಪ್ರಮಾಣೀಕೃತ ಶುದ್ಧ ನೀರನ್ನು ಮನೆಬಾಗಿಲಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರು ನೇರವಾಗಿ ನಮ್ಮ ಆನ್‌ಲೈನ್ ವೇದಿಕೆಗಳ ಮುಖಾಂತರ ಹಣ ಪಾವತಿಸಿ ಟ್ಯಾಂಕರ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಇದನ್ನೂ ಓದಿ : ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿ.ಕೆ.ಶಿವಕುಮಾರ್
ದೇಶದಲ್ಲೇ ಮೊದಲ ಯೋಜನೆ
ಮನೆ ಬಾಗಿಲಿಗೆ ಕುಡಿಯುವ ನೀರಿನ ವ್ಯವಸ್ಥೆ ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಯಾಗಲಿದೆ. ದೇಶದ ಯಾವುದೇ ಜಲಮಂಡಳಿಯೂ ಇದುವರೆಗೂ ಪ್ರಾರಂಭಿಸದೇ ಇರುವಂತಹ ಹೊಸ ಯೋಜನೆ ಇದಾಗಿದೆ. ನಮ್ಮಲ್ಲಿ ಲಭ್ಯವಿರುವಂತಹ ನೀರನ್ನು ಅಗತ್ಯವಿರುವ ಜನರಿಗೆ ಸರಬರಾಜು ಮಾಡುವ ವ್ಯವಸ್ಥೆ ಇದಾಗಿದೆ. ಖಾಸಗಿ ಟ್ಯಾಂಕರ್‌ಗಳು ಪೂರೈಸುವಂತಹ ನೀರಿನ ಗುಣಮಟ್ಟ, ಅವುಗಳ ಅಳತೆಯಲ್ಲಿ ವ್ಯತ್ಯಾಸ, ಬೇಡಿಕೆ ಹೆಚ್ಚಾದಾಗ ದರ ಹೆಚ್ಚಳ ಈ ಎಲ್ಲಾ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಬಹುದಾಗಿದೆ.
ನೀರಿನ ಬುಕ್ಕಿಂಗ್ ಸೇವೆಗೆ ಶೀಘ್ರವೇ ಚಾಲನೆ
ಸಾರ್ವಜನಿಕರು ಟ್ಯಾಂಕರ್ ಬುಕ್ಕಿಂಗ್ ಗೆ ಅವಕಾಶ ನೀಡುವ ಸೇವೆಗೆ ಸದ್ಯದಲ್ಲೇ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
110 ಹಳ್ಳಿಗಳಿಗೆ, ಕಾವೇರಿ ಸಂಪರ್ಕದ ಅರ್ಜಿದಾರರಿಗೆ ಆದ್ಯತೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಕಾವೇರಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿವೆ. ಸಂಪರ್ಕದ ಕಾಮಗಾರಿ ಪ್ರಗತಿಯಲ್ಲಿರುವಂತವರಿಗೆ ಹಾಗೂ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು ಜಲಮಂಡಳಿ ತಿಳಿಸಿದೆ.
ಟ್ಯಾಂಕರ್ ಮಾಲೀಕರ ನೊಂದಣಿಗೆ ಅವಕಾಶ
ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ಈಗಾಗಲೇ ಟ್ಯಾಂಕರ್‌ಗಳು ದರ ಏರಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಾಗಿವೆ. ಅಲ್ಲದೇ ಕೆಲವು ಕಡೆಗಳಲ್ಲಿ ಟ್ಯಾಂಕರ್‌ಗಳಿಗೆ ಬೇಡಿಕೆ ಇಲ್ಲದ ಬಗ್ಗೆಯೂ ಮಾಹಿತಿಗಳಿವೆ. ಬೆಂಗಳೂರು ಜಲಮಂಡಳಿಯ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆಯಿದೆ.
110 ಹಳ್ಳಿಗಳ ವ್ಯಾಪ್ತಿಯಲ್ಲಿ ಹಾಗೆಯೇ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿರುವ ಜನರಿಗೆ ಉತ್ತಮ ನೀರನ್ನು ಒದಗಿಸುವುದು ಜಲಮಂಡಳಿ ಗುರಿಯಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ನಮ್ಮ ಸಂಚಾರಿ ಕಾವೇರಿ ಪ್ಲಾಟ್‌ಫಾರಂನಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆಯನ್ನು ಒದಗಿಸಲು ಖಾಸಗಿ ಟ್ಯಾಂಕರ್‌ನವರು ಜಲಮಂಡಳಿಗೆ ತಮ್ಮ ಟ್ಯಾಂಕರ್ ಬಾಡಿಗೆ ಆಧಾರದಲ್ಲಿ ನೀಡಬಹುದಾಗಿದೆ.
ಸದರಿ ಯೋಜನೆಯಲ್ಲಿ ಜಲಮಂಡಳಿಗೆ ಬಾಡಿಗೆ ಆಧಾರದಲ್ಲಿ ಟ್ಯಾಂಕರ್ ನೀಡಲು ಇಚ್ಚಿಸಿರುವ ಟ್ಯಾಂಕರ್ ಮಾಲೀಕರು, ನೇರವಾಗಿ ಈ ಪ್ಲಾಟ್‌ಫಾರಂ ಗಳಲ್ಲಿ ನೊಂದಣಿ ಮಾಡಿಕೊಂಡು ಸೇವೆಯನ್ನು ಒದಗಿಸಬಹುದಾಗಿದೆ. ಏಪ್ರಿಲ್ 10 ರ ವರೆಗೆ ಟ್ಯಾಂಕರ್‌ಗಳು ನೊಂದಣಿ ಮಾಡಿಕೊಳ್ಳಬಹುದು ಎಂದು ಡಾ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಟ್ಯಾಂಕರ್ ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ
ಟ್ಯಾಂಕರ್ ನೊಂದಣಿಗೆ https://bwssb.karnataka.gov.in/ ಜಾಲತಾಣದಲ್ಲಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಅಭಿಯಂತರರು (ಗುಣ & ವಿನ್ಯಾಸ ಆಶ್ವಾಸನೆ) ಸನತ್ ಕುಮಾರ್ ವಿ ಮೊ: 990188838 ಅವರನ್ನು ಸಂಪರ್ಕಿಸಬಹುದಾಗಿದೆ..
ಜಲಮಂಡಳಿಗೆ ವರ್ಲ್ಡ್ ವಾಟರ್ 2025 ಪ್ರಶಸ್ತಿ
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನಗರ ನೀರು ಸರಬರಾಜು ಹಾಗೂ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವಂತಹ “ಅತ್ಯುತ್ತಮ ಸುಸ್ಥಿರ ಯೋಜನೆಗಳ ಅನುಷ್ಠಾನಕ್ಕೆ, ಯುನೆಸ್ಕೋ ಸಹಭಾಗಿತ್ವದ ಪ್ರತಿಷ್ಠಿತ ವರ್ಲ್ಡ್ ವಾಟರ್ 2025 ಪ್ರಶಸ್ತಿ” ಗೆ ಭಾಜನವಾಗಿದೆ.
ನೀರಿನ ಸಂಸ್ಕರಣೆ, ಮರುಬಳಕೆ ಮತ್ತು ಸಂರಕ್ಷಣೆಗಾಗಿ ವಿವಿಧ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳ ಅಥವಾ ವ್ಯಕ್ತಿಗಳು ಕೈಗೊಂಡ ವಿಶಿಷ್ಟ ಕಾರ್ಯಗಳನ್ನು ಗೌರವಿಸಲು ಯುನೆಸ್ಕೋ ಸಹಯೋಗದಲ್ಲಿ “ವಾಟರ್ ಡೈಜೆಸ್ಟ್ ವಾಟರ್ ಅವಾರ್ಡ್” ಗಳನ್ನು ನೀಡಿ ಗೌರವಿಸಲಾಗುತ್ತದೆ.
ನಗರದಲ್ಲಿ ಬಿರು ಬೇಸಿಗೆಯಲ್ಲಿ ನಗರದ ಜನತೆಗೆ ನೀರಿನ ಕೊರತೆ ಆಗದಂತೆ ಕ್ರಮ. ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಶೇಕಡಾ 28 ರಿಂದ 20 ಕ್ಕೆ ಇಳಿಸಿರುವುದು, ಗ್ರೀನ್ ಸ್ಟಾರ್ ಛಾಲೆಂಜ್ ಮೂಲಕ ನೀರು ಉಳಿತಾಯ ಹಾಗೂ ಸಮರ್ಪಕ ಬಳಕೆಗೆ ಒತ್ತು ನೀಡುವಂತೆ ಮಾಡಿರುವುದು, ಏರಿಯೇಟರ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಿರುವುದು, 23 ಕೆರೆಗಳಲ್ಲಿ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿರುವುದು, 1700 ಮಿನಿ ಟ್ಯಾಂಕರ್‌ಗಳ ಮೂಲಕ ಕೊಳಚೆ ಪ್ರದೇಶಗಳಿಗೆ ಉಚಿತ ನೀರು. ಐಟಿ ಕಾರಿಡಾರ್‌ಗಳಿಗೆ ಝೀರೋ ಬ್ಯಾಕ್ಟಿರಿಯಾ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಲಮಂಡಳಿ ತಿಳಿಸಿದೆ.